An unconventional News Portal.

‘ಅವರಿಗೊಂದು ನ್ಯಾಯ; ನಮಗೊಂದು ನ್ಯಾಯನಾ…?’: ಪುರಭವನದಲ್ಲಿ ಪುರಜನರ ಆಕ್ರೋಶ!

‘ಅವರಿಗೊಂದು ನ್ಯಾಯ; ನಮಗೊಂದು ನ್ಯಾಯನಾ…?’: ಪುರಭವನದಲ್ಲಿ ಪುರಜನರ ಆಕ್ರೋಶ!

ಬೆಂಗಳೂರಿನ ಪುರಭವನದಲ್ಲಿ ‘ನಮ್ಮ ಬೆಂಗಳೂರು ಫೌಂಡೇಶನ್’ ವತಿಯಿಂದ ಶನಿವಾರ ನಡೆದ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು’ ಕಾರ್ಯಕ್ರಮ ಮನೆ ಕಳೆದುಕೊಂಡವರ ಮತ್ತು ಕಳೆದುಕೊಳ್ಳಲಿರುವವರ ಆಕ್ರೋಶಕ್ಕೆ ಸಾಕ್ಷಿಯಾಯಿತು.

ಬೆಳಿಗ್ಗೆ 10:30ಕ್ಕೆ ‘ನಮ್ಮ ಬೆಂಗಳೂರು ಫೌಂಡೇಷನ್’ ಇತರ ಸರಕಾರೇತರ ಸಂಸ್ಥೆಗಳಾದ ‘ಸಿವಿಕ್’, ‘ಸಿಟಿಜನ್ ಆಕ್ಷನ್ ಫೋರಂ’, ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು: ಸರಕಾರದಿಂದ ನ್ಯಾಯ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುವ ಹೋರಾಟದಲ್ಲಿ ಜೊತೆಗೂಡಿ,’ ಎನ್ನುವ ಹೆಸರಿನಲ್ಲಿ ನಾಗರಿಕ ಸಭೆ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಪುರಭವನದಲ್ಲಿ ಶನಿವಾರ ನಡೆದ 'ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು ಕಾರ್ಯಕ್ರಮ' ಉದ್ದೇಶಿಸಿ ಎ.ಟಿ ರಾಮಸ್ವಾಮಿ ಮಾತನಾಡಿದರು.

ಬೆಂಗಳೂರಿನ ಪುರಭವನದಲ್ಲಿ ಶನಿವಾರ ನಡೆದ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು ಕಾರ್ಯಕ್ರಮ’ ಉದ್ದೇಶಿಸಿ ಎ.ಟಿ ರಾಮಸ್ವಾಮಿ ಮಾತನಾಡಿದರು.

ಸಭೆಯಲ್ಲಿ, ಅಮಾಯಕರಿಗೆ ಪರಿಹಾರ ನೀಡಬೇಕು. ವೈಜ್ಞಾನಿಕ ರೀತಿಯಲ್ಲಿ ರಾಜಕಾಲುವೆ ಸೇರಿದಂತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು. ನಕಲಿ ದಾಖಲೆ ಸೃಷ್ಟಿಸಿದ ವಂಚಕರ ಮೇಲೆ ಕ್ರಮ ಕೈಗೊಳ್ಳಬೇಕು. ವಂಚನೆಗೆ ಒಳಗಾದವರಿಗೆ ಅವರ ಹಕ್ಕಿನ ಪರಿಹಾರ ನೀಡಬೇಕು. ಇದಕ್ಕೆ ಸರಕಾರವೇ ನೇರ ಹೊಣೆ, ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಬೆಂಗಳೂರಿನ ವಿವಿಧ ಭಾಗಗಳಿಂದ ಮನೆ ಕಳೆದುಕೊಂಡ, ಕಳೆದುಕೊಳ್ಳಲಿರುವ ಸುಮಾರು 300 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ಒತ್ತುವರಿ ಜಂಟಿ ಸಮಿತಿ ಅಧ್ಯಕ್ಷ ಎ. ಟಿ. ರಾಮಸ್ವಾಮಿ, “ಒತ್ತುವರಿ ಮಾಡಿಕೊಂಡವರೆಲ್ಲರೂ ದುರುದ್ಧೇಶಕ್ಕೆ ಒತ್ತುವರಿ ಮಾಡಿಕೊಂಡಿಲ್ಲ. ಕೆಲವರು ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿಕೊಂಡವರೂ ಇದ್ದಾರೆ. ಇವರ ಬಗ್ಗೆ ಸರಕಾರ ತನ್ನ ಕಾಳಜಿ ತೋರಿಸಬೇಕು. ಅಕ್ರಮ, ಸುಳ್ಳು ದಾಖಲೆ ಮತ್ತು ಪೋರ್ಜರಿ ದಾಖಲೆ ಸೃಷ್ಟಿಸಿದವರ ಮೇಲೆ ಸರಕಾರ ಯಾವುದೇ ಕೈಗೊಂಡಿಲ್ಲ. ಇವರಿಂದಾಗಿ ಸರಕಾರಿ ದಾಖಲೆಗಳನ್ನು ನಂಬಿ ಮನೆ ಕಳೆದುಕೊಂಡವರು ಇವತ್ತು ಬೀದಿ ಪಾಲಾಗುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇವತ್ತು ಚಿಕ್ಕಲಸಂದ್ರ ಕೆರೆ ಲೇಔಟ್ ಆಗಿದೆ. ಇದಕ್ಕೆ ಅಧಿಕಾರಿಗಳು ಸಹಕರಿಸಿದ್ದಾರೆ. ಅವರ ವಿರುದ್ಧ ಸರಕಾರ ಯಾಕೆ ಕ್ರಮ ಕೈಗೊಂಡಿಲ್ಲ? ಸರಕಾರ ಯಾಕೆ ದ್ವಂದ್ವ ನೀತಿ ಅನುಸರಿಸುತ್ತಿದೆ? ಸರಕಾರದ ನಡೆ ಯಾವತ್ತೂ ಶ್ರೀಮಂತರಿಂದ ಬಡವರಿಗೆ ಇರಬೇಕು. ಆದರೆ ಇಲ್ಲಿ ಬಡವರ ಬುಡಕ್ಕೆ ಕೈ ಇಡುತ್ತಿದ್ದಾರೆ. ಶ್ರೀಮಂತರಿಗೆ ಮಾತ್ರ ನೋಟಿಸ್ ಜಾರಿ ಮಾಡುತ್ತಿದ್ದೀರಿ, ಏಕೆ? ಎಲ್ಲರಿಗೂ ಒಂದೇ ರೀತಿ ನ್ಯಾಯ ಇರಬೇಕಲ್ವಾ?,” ಎಂದು ಅವರು ಪ್ರಶ್ನಿಸಿದರು.

ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ಮಾತನಾಡಿ,”ಬೆಂಗಳೂರು ಕೆರೆಯನ್ನೇ ಅವಲಂಬಿಸಿರುವ ನಗರ. ಇಲ್ಲಿ ಹಿಂದಿನಿಂದಲೂ 930 ಕೆರೆಗಳಿದ್ದವು. ಆದರೆ ಇಂದು ಅಲ್ಲೆಲ್ಲಾ ಬಡಾವಣೆಗಳು ನಿರ್ಮಾಣವಾಗಿವೆ. ಇಂದು ಶೇಕಡಾ 90 ಕೆರೆಗಳು ಒತ್ತುವರಿಯಾಗಿವೆ. ನಿನ್ನೆ (ಶುಕ್ರವಾರ) ಬಿಬಿಎಂಪಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಜಕಾಲುವೆಯನ್ನು ಡ್ರೈ ಮತ್ತು ವೆಟ್ ರಾಜಕಾಲುವೆ ಎಂದು ವಿಭಾಗಿಸುವ ಬಗ್ಗೆ ಮಾತುಕತೆ ನಡೆದಿದೆ. ಇದು ಯಾಕೆ ಎಂದು ನಿಮಗೆಲ್ಲಾ ಗೊತ್ತಿದೆ. ಎಸ್. ಎಸ್. ಹಾಸ್ಪಿಟಲ್, ದರ್ಶನ್ ಮನೆ ಒತ್ತುವರಿ ಮಾಡಿಕೊಂಡ ರಾಜಕಾಲುವೆ ಜಾಗದಲ್ಲಿ ಇದೆ ಎಂಬ ದೂರುಗಳಿಗಳಿವೆ. ಆದರೆ, ಅವರಿಗೆ ಯಾಕೆ ಇದೇ ಕಾನೂನು ಅನ್ವಯಿಸುತ್ತಿಲ್ಲ?” ಎಂಬ ಪ್ರಶ್ನೆಯನ್ನು ಸಭಿಕರ ಮುಂದೆ ಇಟ್ಟರು.

“ಬಿಲ್ಡರ್ಗಳು ಪ್ರಪಂಚವನ್ನೇ ನುಂಗುವವರು. ಅವರ ಬಳಿ ಗೂಂಡಾಗಳಿದ್ದಾರೆ, ಜನರಿದ್ದಾರೆ, ಹಣವಿದೆ. ಅವರಿಗೇ ಸರಕಾರ ಬೇಕಾಗಿದ್ದನ್ನೆಲ್ಲಾ ಮಾಡುತ್ತದೆ. ಶ್ರೀಮಂತರಿಗಾದರೆ ಸರ್ವೆ, ಅದು- ಇದು ಎಂದು ಯೋಚಿಸುತ್ತೀರಿ. ಅದೇ ಬಡವನಿಗೆ ಏನು ಮಾಡಿದ್ದೀರಿ? ಮಾನದಂಡದ ಪ್ರಕಾರವಾದರೆ ಎಲ್ಲವನ್ನೂ ಒಡೆಯುವ ಕೆಲಸ ಯಾಕಾಗಿಲ್ಲ? ಜನರು ಕುಂಭಕರ್ಣ ನಿದ್ರೆಯಲ್ಲಿದ್ದಾರೆ. ಇದರಿಂದ ಎಚ್ಚೆತ್ತುಕೊಂಡು ಹೋರಾಟ ಮಾಡಬೇಕಾಗಿದೆ,” ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.

ಕಾರ್ಯಕ್ರಮದ ಆಯೋಜನೆ ಮಾಡಿದ್ದ ‘ನಮ್ಮ ಬೆಂಗಳೂರು ಫೌಂಡೇಷನ್’ ಪರವಾಗಿ ಮಾತನಾಡಿದ ಸಂಸದ ರಾಜೀವ ಚಂದ್ರಶೇಖರ್, “ನಾನು ಇಲ್ಲಿಗೇ ನಿಲ್ಲುವುದಿಲ್ಲ. ತಪ್ಪಿತಸ್ಥರು ಜೈಲಿಗೆ ಹೋಗುವವೆಗೆ ಹೋರಾಟ ಮಾಡುತ್ತೇನೆ. ಭ್ರಷ್ಟಾಚಾರ ನಡೆದಿರುವುದಕ್ಕೆ ಬೇಕಾದಷ್ಟು ಸಾಕ್ಷ್ಯಗಳಿವೆ. ನಾವು ಜತೆಯಾಗಿ (ಹೋರಾಟಕ್ಕೆ) ಹೋಗೋಣ, ” ಎಂದರು.

ಈ ವೇಳೆ ರಾಜೀವ್ ಚಂದ್ರಶೇಖರ್ ಬೀದಿ ಹೋರಾಟಕ್ಕೆ ಧುಮುಕಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇದಕ್ಕೆ ಉತ್ತರಿಸಿದ ಅವರು, “ನಾನು ಉಳಿದ ಡ್ರಾಮಾಟಿಕ್ ರಾಜಕಾರಣಿಗಳಂತಲ್ಲ. ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇನೆ. ಕಾನೂನು ಹೋರಾಟ ಮಾಡುವುದು ನನ್ನ ಉದ್ದೇಶ. ನೀವು ಬಯಸಿದರೆ ಮಾತ್ರ ನಾನು ವಿಧಾನಸೌಧಕ್ಕೂ ಬರಲೂ ಸಿದ್ದ, ಬಿಬಿಎಂಪಿಯಲ್ಲಿ ಮಲಗಲೂ ಸಿದ್ಧ,” ಎಂದು ಘೋಷಿಸಿದರು.

ಬೆಂಗಳೂರಿನಲ್ಲಿ ಮನೆ ಕಳೆದುಕೊಂಡ ಮತ್ತು ಕಳೆದುಕೊಳ್ಳಲಿರುವ ಹಲವರು ಈ ಸಂದರ್ಭ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಲ್ಲದೆ, ಪ್ರಶ್ನೆಗಳನ್ನೂ ಕೇಳಿದರು. ಅವನಿ ಶೃಂಗೇರಿ ನಗರದ ನಿವಾಸಿ ಶ್ರೀಕಾಂತ್ ಮಾತನಾಡಿ, “ನಾನು 2008ರಲ್ಲಿ ಬಿಬಿಎಂಪಿಯಿಂದ ಪರವವಾನಿಗೆ ಪಡೆದು ಮನೆ ನಿರ್ಮಿಸಿದ್ದೆ. ಆದರೆ ಒಂದು ಮುಂಜಾನೆ ಮನೆ ಮುಂದೆ ಜೆಸಿಬಿಗಳು ಪ್ರತ್ಯಕ್ಷವಾದವು. ನನ್ನ ಮನೆ ಅರ್ಧ ಭಾಗ ಒಡೆದು ಹಾಕಿದರು. ಅರ್ಧ ಮನೆ ಮಾತ್ರ ಉಳಿದಿದೆ. ಕಾನೂನು ಹೋರಾಟಕ್ಕೆ ಹೋದರೆ ಉಳಿದ ಮನೆಯನ್ನೂ ತೆಗೆಯುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಏನು ಮಾಡಬೇಕು,” ಎಂದು ಪ್ರಶ್ನೆ ಎತ್ತಿದರು. “ನಮ್ಮ ಫೌಂಡೇಷನ್ ನಿಮ್ಮ ಜೊತೆಗಿದೆ, ನ್ಯಾವು ನಿಮ್ಮ ಪರವಾಗಿ ಕೋರ್ಟನಲ್ಲಿ ಹೋರಾಡುತ್ತೇವೆ,” ಎಂದು ರಾಜೀವ್ ಚಂದ್ರಶೇಖರ್ ಭರವಸೆ ನೀಡಿದರು.

ಪರಿಹಾರಕ್ಕೆ ಚಿಂತನೆ

ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮುಖ್ಯಂತ್ರಿ ಸಿದ್ಧರಾಮಯ್ಯ ಒತ್ತುವರಿ ತೆರವು ವಿಚಾರವಾಗಿ ಸಭೆ ನಡೆಸಿದರು. ಈ ಸಂದರ್ಭ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಮನೆ ಕಳೆದುಕೊಂಡ ಬಡವರ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರ ಕಚೇರಿ ಮೂಲಗಳ ಪ್ರಕಟಣೆ ತಿಳಿಸಿದೆ.

Leave a comment

Top