An unconventional News Portal.

ದಿಲ್ಲಿ ರಾಜಕಾರಣದಲ್ಲಿ ‘ಸೆಕ್ಸ್ ಸೀಡಿ’ ಮೇಲಾಟ: ಮುಸುಕಿನ ಗುದ್ದಾಟಕ್ಕೆ ಬಳಕೆಯಾಯಿತಾ ‘ಹನಿ ಟ್ರ್ಯಾಪ್’?

ದಿಲ್ಲಿ ರಾಜಕಾರಣದಲ್ಲಿ ‘ಸೆಕ್ಸ್ ಸೀಡಿ’ ಮೇಲಾಟ: ಮುಸುಕಿನ ಗುದ್ದಾಟಕ್ಕೆ ಬಳಕೆಯಾಯಿತಾ ‘ಹನಿ ಟ್ರ್ಯಾಪ್’?

ರಾಜಕೀಯದ ರಾಢಿ ದೇಶದ ರಾಜಧಾನಿ ದಿಲ್ಲಿಯನ್ನು ಆವರಿಸಿದೆ.

ಕಳೆದ ವಾರ ಬಿದ್ದ ಮಳೆಯ ನೀರು, ರಸ್ತೆಗಳನ್ನು ಸಮುದ್ರವನ್ನಾಗಿಸಿ ಕೊನೆಗೆ ಯಮುನಾ ನದಿಯನ್ನು ಸೇರಿಕೊಂಡಿತು. ಅದೇ ವೇಳೆಗೆ ಬಯಲಾದ ಆಮ್ ಆದ್ಮಿ ಪಕ್ಷ (ಎಎಪಿ)ಯ ವಿಧಾನಸಭಾ ಸದಸ್ಯ ಸಂದೀಪ್ ಕುಮಾರ್ ‘ಲೈಂಗಿಕ ಹಗರಣ’ ಇಲ್ಲೀಗ ಭಾರಿ ಸದ್ದು ಮಾಡುತ್ತಿದೆ. ಒಂದು ಕಡೆ ಇದೊಂದು ‘ಹನಿ ಟ್ರ್ಯಾಪ್’ ಎಂದು ಎಎಪಿ ಮೂಲಗಳು ಹೇಳುತ್ತಿವೆಯಾದರೂ, ಬಹಿರಂಗವಾಗಿ ತಮ್ಮ ಪಕ್ಷದ ಚುನಾಯಿತ ಪ್ರತಿನಿಧಿಯೊಬ್ಬರ ಮೇಲೆ ಬಂದಿರುವ ಆರೋಪವನ್ನು ಸಮರ್ಥಿಸುವ ಪರಿಸ್ಥಿತಿ ಇಲ್ಲದಂತಾಗಿದೆ.

ಶನಿವಾರ ಸಂಜೆ ವೇಳೆಗೆ, ಆರೋಪವನ್ನು ಹೊತ್ತುಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಂದೀಪ್ ಕುಮಾರ್ ದಿಲ್ಲಿಯ ರೋಹಿಣಿ ಠಾಣೆಯಲ್ಲಿ ಶರಣಾಗಿದ್ದಾರೆ. ದಿಲ್ಲಿ ಸರಕಾರದ ಸಂಪುಟದಿಂದ ಕಿತ್ತುಹಾಕಿದ ಮೂರು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಶನಿವಾರ ಬೆಳಿಗ್ಗೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಹೊರ ಹಾಕಲಾಗಿತ್ತು. ವಿಡಿಯೋದಲ್ಲಿ ಇದ್ದಾರೆ ಎನ್ನಲಾದ ಮಹಿಳೆ, ಶನಿವಾರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ‘ನನಗೆ ಡ್ರಗ್ಸ್ ಬೆರೆಸಿದ ಪಾನೀಯ ನೀಡಿ ರೇಪ್ ಮಾಡಲಾಗಿದೆ’ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾರೆ. ಹೀಗಾಗಿ, ಕುಮಾರ್ ವಿರುದ್ಧ ಅತ್ಯಾಚಾರ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಹೊರ ಬರುತ್ತಿದ್ದಂತೆ ಶುಕ್ರವಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಮಹಿಳೆಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬ ಆರೋಪ ಹೊಂದಿರುವ ಸಂದೀಪ್ ಕುಮಾರ್ ವಿರುದ್ಧ ಬಿಜೆಪಿ ಪ್ರಕರಣ ದಾಖಲಿಸಿತ್ತು. ಎಫ್ಐಆರ್ ದಾಖಲಿಸಿಕೊಂಡ, ಕೇಂದ್ರ ಸರಕಾರದ ಅಡಿಯಲ್ಲಿ ಬರುವ ದೆಹಲಿ ಪೊಲೀಸ್ ಇಲಾಖೆ, ತನಿಖೆಯನ್ನು ಕ್ರೈಂ ಬ್ರಾಂಚಿಗೆ ವರ್ಗಾಯಿಸಿತ್ತು. ಅದೇ ದಿನ ದೆಹಲಿಯ ಕ್ರೈಂ ಬ್ರಾಂಚ್ ವಿವಾದಾತ್ಮಕ ಸಿಡಿ ಸಂಬಂಧ ಪಟ್ಟಂತೆ ತನಿಖೆಗಾಗಿ ಡಿಸಿಪಿ ಭೀಷ್ಮ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನೂ ರಚಿಸಿತ್ತು. ಇದೀಗ ಪೊಲೀಸರು ಸಿಡಿಯ ಸತ್ಯಾಸತ್ಯತೆ ಪರೀಕ್ಷಿಸಲು ಫೊರೆನ್ಸಿಕ್ ಲ್ಯಾಬಿಗೆ ಕಳುಹಿಸಿದ್ದಾರೆ. ಇದರ ಜೊತೆಗೆ ಪೊಲೀಸರು ಸಿಡಿಯ ಮೂಲದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ತನಿಖೆ ಸಂಬಂಧಪಟ್ಟಂತೆ, ದೂರು ದಾಖಲಿಸಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ತಾನು ರೇಷನ್ ಕಾರ್ಡ್ ಪಡೆಯುವ ಸಂಬಂಧ ಕುಮಾರ್ ಭೇಟಿಯಾಗಲು ಹೋಗಿದ್ದೆ. ತನ್ನನ್ನು ಮಂತ್ರಿಗಳ ಕಚೇರಿಯಲ್ಲಿ ಕಾಯಲು ಹೇಳಲಾಯಿತು. ನಂತರ ತಂಪು ಪಾನೀಯ ನೀಡಿದರು. ಇದು ಮತ್ತು ಬರುವ ಅಂಶ ಒಳಗೊಂಡಿತ್ತು. ಒಮ್ಮೆ ಅಮಲೇರದ ನಂತರ ತನ್ನ ಮೇಲೆ ಕುಮಾರ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ತನಗೆ ‘ಸಿಡಿ’ ಮಾಡಿದ ಬಗ್ಗೆ ಗೊತ್ತಿರಲಿಲ್ಲ ಎಂದು ಆಕೆ ದೂರಿನಲ್ಲಿ ಹೇಳಿದ್ದಾರೆ.

ಸದ್ಯ ತನ್ನ ಮೇಲಿರುವ ಆರೋಪಗಳನ್ನು 36 ವರ್ಷದ ಸಂದೀಪ್ ನಿರಾಕರಿಸಿದ್ದು, “ನಾನು ದಲಿತ ಸಮುದಾಯದಲ್ಲಿ ಜನಪ್ರಿಯನಾಗಿದ್ದೆ. ನನ್ನನ್ನು ದಲಿತ ಎನ್ನುವ ಕಾರಣಕ್ಕೆ ಟಾರ್ಗೆಟ್ ಮಾಡಲಾಗುತ್ತಿದೆ,” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಂತರ ಪಕ್ಷದ ಕಾರ್ಯಕರ್ತರಿಗೆ ನೀಡಿದ ಸಂದೇಶದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “ನಾವು ಯಾವತ್ತೂ, ಎಂದೆಂದಿಗೂ ನಮ್ಮ ಗಟ್ಟಿ ಮೌಲ್ಯಗಳೊಂದಿಗೆ ರಾಜಿಯಾಗುವುದಿಲ್ಲ. ತಪ್ಪುಗಳೊಂದಿಗೆ ಹೊಂದಿಕೊಳ್ಳುವುದಕ್ಕಿಂತ ಸಾಯುವುದನ್ನೇ ಇಚ್ಚಿಸುತ್ತೇವೆ,” ಎಂದು ಹೇಳಿದ್ದಾರೆ.

ಪ್ರಕರಣ ಗಮನಕ್ಕೆ ಬಂದ 30 ನಿಮಿಷಗಳಲ್ಲಿ ಸಂದೀಪ್ ಕುಮಾರ್ ಅವರನ್ನು ಸಂಪುಟದಿಂದ ಕಿತ್ತು ಹಾಕಲಾಗಿದೆ ಎಂದು ಎಎಪಿ ಹೇಳಿಕೊಂಡಿದೆ. ಆದರೆ ಕೇಜ್ರಿವಾಲ್ಗೆ ಸೆಕ್ಸ್ ವಿಚಾರ ಮೊದಲೇ ಗೊತ್ತಿತ್ತು. ಆದರೆ ಸಿಡಿ ಬಹಿರಂಗವಾದ ಬಳಿಕ ಮಾತ್ರ ಕ್ರಮ ಕೈಗೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ಎಎಪಿ ಮೇಲೆ ದಾಳಿ ನಡೆಸಿವೆ. ಆದರೆ ಇದನ್ನು ಕೇಜ್ರಿವಾಲ್ ತಳ್ಳಿ ಹಾಕಿದ್ದಾರೆ.

ಎಎಪಿ ಸರಕಾರದಿಂದ ಹೊರ ಹಾಕುತ್ತಿರುವ ಮೂರನೇ ಮಂತ್ರಿ ಸಂದೀಪ್ ಕುಮಾರ್ ಆಗಿದ್ದಾರೆ. ಈ ಹಿಂದೆ ತಮ್ಮ ಪ್ರಮಾಣ ಪತ್ರವನ್ನು ನಕಲಿ ಮಾಡಿದ್ದಾರೆ ಎಂಬ ಆರೋಪದಲ್ಲಿ ಕಾನೂನು ಮಂತ್ರಿ ಜಿತೇಂದ್ರ ತೋಮರ್ ಹಾಗೂ ಬಿಲ್ಡರ್ ಒಬ್ಬರಿಂದ ಲಂಚ ಪಡೆದಿದ್ದಾರೆ ಎಂಬ ಆರೋಪದಲ್ಲಿ ಆಹಾರ ಮತ್ತು ಪರಿಸರ ಸಚಿವ ಅಸೀಮ್ ಅಹ್ಮದ್ ಖಾನ್ರನ್ನು ಸಂಪುಟದಿಂದ ತೆಗೆದು ಹಾಕಲಾಗಿತ್ತು.

ದಿಲ್ಲಿಯ 70 ಸ್ಥಾನಗಳ ಪೈಕಿ, 67 ಸ್ಥಾನಗಳನ್ನು ಗಳಿಸುವ ಮೂಲಕ 2014ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ದಿಲ್ಲಿ ಗದ್ದುಗೆಯನ್ನು ಏರಿತ್ತು. ಪ್ರಾಮಾಣಿಕ ರಾಜಕಾರಣದ ಹೆಸರಿನಲ್ಲಿ ದಿಲ್ಲಿವಾಲಾಗಳ ಮನಸ್ಸನ್ನು ಗೆದ್ದಿತ್ತು. ಇದಾದ ನಂತರ ಕೇಂದ್ರ ಸರಕಾರ, ಮೋದಿ ಮತ್ತು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಜತೆಗೆ ಮುಸುಕಿನ ಗುದ್ದಾಟ ಶುರುವಾಗಿತ್ತು. ಇದರ ಮುಂದುವರಿದ ಭಾಗದಂತೆ ಇದೀಗ ‘ಲೈಂಗಿಕ ಹಗರಣ’ ಹೊರಬಿದ್ದಿದೆ.

ಮುಂದಿನ ದಿನಗಳಲ್ಲಿ, ಕೇಂದ್ರದ ವಿರುದ್ಧ ಎಎಪಿ ನಿರ್ಣಾಯಕ ಹೋರಾಟ ರೂಪಿಸಲು ಈ ಪ್ರಕರಣ ನಾಂದಿ ಹಾಡಿದೆ ಎಂದು ದಿಲ್ಲಿ ಮೂಲಗಳು ತಿಳಿಸಿವೆ. ಹೀಗೇನಾದರೂ ಆದರೆ, ದಿಲ್ಲಿ ಸರಕಾರ ಮತ್ತು ಕೇಂದ್ರದ ನಡುವಿನ ರಾಜಕೀಯ ಕದನ ಹೊಸ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಚಿತ್ರ: ಇಂಡಿಯಾ ಟುಡೆ.

Leave a comment

Top