An unconventional News Portal.

BTV ವಿರುದ್ಧ ಮಾನನಷ್ಟ ಪ್ರಕರಣ: ನಡೆದರೆ ಸಂಧಾನ; ಮಿಸ್ಸಾದ್ರೆ ಕದನ!

BTV ವಿರುದ್ಧ ಮಾನನಷ್ಟ ಪ್ರಕರಣ: ನಡೆದರೆ ಸಂಧಾನ; ಮಿಸ್ಸಾದ್ರೆ ಕದನ!

ಬಿಟಿವಿ ಸುದ್ದಿ ವಾಹಿನಿಯ ಮೇಲೆ ಶಾಸಕ ಪ್ರಿಯಾಕೃಷ್ಣ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಏ. 30ರಂದು (ಇಂದು) ನಿರ್ಣಾಯಕ ತಿರುವು ತೆಗೆದುಕೊಳ್ಳಲಿದೆ.

ಕನ್ನಡ ಪತ್ರಿಕೋದ್ಯಮದ ಅಪರೂಪದ ಮಾನನಷ್ಟ ಪ್ರಕರಣವಿದು. ನ್ಯೂಸ್ ಚಾನಲ್ ಒಂದು ಭಿತ್ತರಿಸಿದ ಸುದ್ದಿಯಿಂದ ಮಾನಹಾನಿಗೆ ಒಳಗಾಗಿದ್ದೇನೆ ಎಂದು ಆರೋಪಿಸಿ ಶಾಸಕರೊಬ್ಬರು ಬರೋಬ್ಬರಿ 100 ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ. ಇದರ ನ್ಯಾಯಾಲಯದ ಶುಲ್ಕ ಸುಮಾರು 52 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಾವತಿಸಿದ್ದಾರೆ. ಹೀಗಾಗಿ, ಮಾಧ್ಯಮಗಳ ಮೇಲೆ ಹೂಡುವ ಇತರೆ ಮಾನಹಾನಿ ಪ್ರಕರಣಗಳಿಗಿಂತ ಇದು ಗಂಭೀರವಾಗಿದ್ದು ಮತ್ತು ಅಚ್ಚರಿ ಮೂಡಿಸುವಂತಿದೆ.

ಪ್ರಕರಣದಲ್ಲಿ, ನ್ಯಾಯಾಲಯದ ಹೊಸ ಕಾನೂನಿನ ಅನ್ವಯ ಎರಡೂ ಕಡೆಯವರಿಗೆ ಸಂಧಾನ ಸಾಧ್ಯತೆಯನ್ನು ಕಂಡುಕೊಳ್ಳಲು ತಿಳಿಸಿ ಶನಿವಾರ ದಿನಾಂಕ ನೀಡಿದೆ. ಒಂದು ವೇಳೆ, ಸಂಧಾನ ಮಾತುಕತೆ ಫಲಪ್ರದವಾದರೆ ಪ್ರಕರಣ ಇಲ್ಲಿಗೇ ಅಂತ್ಯವಾಗಲಿದೆ. ಇಲ್ಲವಾದರೆ, ರಾಜ್ಯದ ಶ್ರೀಮಂತ ಶಾಸಕ ಪ್ರಿಯ ಕೃಷ್ಣ ಹಾಗೂ ಸುದ್ದಿ ವಾಹಿನಿಯೊಂದರ ನಡುವೆ ನಡೆಯುವ ನ್ಯಾಯಾಂಗ ಕದನಕ್ಕೆ ರಾಜ್ಯದ ಜನತೆ ಸಾಕ್ಷಿಯಾಗಲಿದ್ದಾರೆ.

ಏನಿದು ಪ್ರಕರಣ?:

gm-kumar-btvದಿನಾಂಕ 9-12-2014 ಮತ್ತು 10-12-2014 ರಂದು ಕನ್ನಡದ ಸ್ಯಾಟಲೈಟ್ ಸುದ್ದಿ ವಾಹಿನಿ ಬಿಟಿವಿಯಲ್ಲಿ ಬೆಂಗಳೂರಿನ ಗೋವಿಂದರಾಜ ನಗರದ ಶಾಸಕ ಪ್ರಿಯಾಕೃಷ್ಣ ಮತ್ತು ಅವರ ತಂದೆ ವಿಜಯನಗರ ಶಾಸಕ ಎಂ ಕೃಷ್ಣಪ್ಪ ವಿರುದ್ಧ ವರದಿಯೊಂದು ಪ್ರಸರವಾಗಿತ್ತು. ‘ಮೈಸೂರಿನಲ್ಲಿ ಬಡಾವಣೆ ನಿರ್ಮಿಸಲು ಭೂಕಬಳಿಕೆ ಯತ್ನ ನಡೆಸಿದ್ದಾರೆ. ಸದರಿ ಜಾಗ ಅರಣ್ಯ ಇಲಾಖೆ ಮತ್ತು ಸ್ಮಶಾನಕ್ಕೆ ಸೇರಿದ್ದು, ಅಪ್ಪ-ಮಗ (ಪ್ರಿಯ ಕೃಷ್ಣ, ಶಾಸಕ ಕೃಷ್ಣಪ್ಪ ಅವರ ಪುತ್ರ) ಭೂ ಒತ್ತುವರಿಗೆ ಹೊರಟಿದ್ದರು. ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿ ಶಾಸಕರ ವಿರುದ್ದ ದೂರು ದಾಖಲಿಸಿಕೊಂಡಿದ್ದು, ಎರಡು ಜೆಸಿಬಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೈಸೂರು ಕುವೆಂಪು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,’ ಎಂಬುದು ವರದಿಯ ತಿರುಳಾಗಿತ್ತು.

ಆದರೆ, ಈ ಆರೋಪವನ್ನು ನಿರಾಕರಿಸಿದ್ದ ಪ್ರಿಯಾಕೃಷ್ಣ ‘ಇದು ಆಧಾರರಹಿತ ಹಾಗೂ ಮಾನಹಾನಿಕರ’ ಎಂದು ಆರೋಪಿಸಿ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಬಿಟಿವಿಯ ಮಾತೃ ಸಂಸ್ಥೆ ‘ಈಗಲ್ ಸೈಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್’ನ ಸಂಪಾದಕೀಯ ವಿಭಾಗ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಪಾದಕ ಜಿ. ಎಂ. ಕುಮಾರ್, ಮತ್ತು ನಿರ್ದೇಶಕರಾದ ಮಹೇಂದ್ರ ಅಶ್ವಿನ್ ಹಾಗೂ ಬೈಚನಹಳ್ಳಿ ಮಹೇಂದ್ರ, ವರದಿ ಮಾಡಿದ ವರದಿಗಾರ ರಾಘವೇಂದ್ರ ಅವರಿಂದ ನೂರು ಕೋಟಿ ರೂಪಾಯಿ ಪರಿಹಾರ ಕೋರಿ ದಾವೆ ಹೂಡಿದ್ದಾರೆ. “ಈವರೆಗೆ ಸುಮಾರು 7-8 ವಿಚಾರಣೆಗಳು ನಡೆದಿವೆ,” ಎಂದು ಪ್ರಿಯ ಕೃಷ್ಣ ಪರ ವಕೀಲ ಕೆ. ವಿ. ಧನಂಜಯ್ ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?: 

priyakrishna-siddaramayyaಕರ್ನಾಟಕ ವಿಧಾನ ಸಭಾ ಸದಸ್ಯರಾದ ಪ್ರಿಯಾಕೃಷ್ಣ ಅವರ ಗೌರವಕ್ಕೆ ಚ್ಯುತಿ ತರಲೆಂದು, ಬೇಕೆಂದೇ ತಪ್ಪು ಮಾಹಿತಿಗಳಿರುವ ಸುದ್ದಿ ಪ್ರಸಾರ ಮಾಡಲಾಗಿದೆ. ಪ್ರಿಯಾಕೃಷ್ಣ ಅವರ ಗೌರವಕ್ಕೆ ಧಕ್ಕೆಯಾಗಲಿದೆ ಎಂದೂ ಗೊತ್ತಿದ್ದೂ ಚಾನಲ್ ಸುದ್ದಿ ಪ್ರಸಾರ ಮಾಡಿದೆ ಎಂದು 36 ಪುಟಗಳ ಕೋರಿಕೆಯಲ್ಲಿ ವಿವರಿಸಲಾಗಿದೆ. ಇದರಲ್ಲಿ ಪ್ರಿಯಾಕೃಷ್ಣ ವಿರುದ್ಧ ಚಾನಲ್ ಬಳಸಿದ ಭಾಷೆ, ಪದಗಳು ಹಾಗೂ ವಾಕ್ಯಗಳನ್ನು ಕೋಟ್ ಮಾಡಲಾಗಿದೆ. ಹಾಗೆಯೇ, ಎರಡೂ ದಿನ ಚಾನಲ್ ಪ್ರಸಾರ ಮಾಡಿದ ಕಾರ್ಯಕ್ರಮದ ಇಂಗ್ಲಿಷ್ ತರ್ಜುಮೆ ಕೂಡ ಅರ್ಜಿಯಯಲ್ಲಿ ಒಳಗೊಂಡಿದೆ.

ನ್ಯಾಯಾಲಯದ ನಿಮಯಗಳ ಅನ್ವಯ 100 ಕೋಟಿ ಪರಿಹಾರ ಕೇಳಿರುವ ಅರ್ಜಿದಾರರು ಈಗಾಗಲೇ ಶುಲ್ಕ ರೂಪದಲ್ಲಿ 52,07,125 ಪಾವತಿಸಿದ್ದಾರೆ.

“ಕನ್ನಡದ ಮಟ್ಟಿಗೆ ಮಾಧ್ಯಮ ಸಂಸ್ಥೆಯೊಂದರ ಮೇಲೆ ಹೂಡಿದ ಅತೀ ದೊಡ್ಡ ಮಾನನಷ್ಟ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ನ್ಯಾಯಾಲಯದ ಸಂಧಾನಕ್ಕೆ ಅವಕಾಶ ನೀಡಿದೆ,” ಎಂದು ಪ್ರಿಯ ಕೃಷ್ಣ ಪರ ವಕೀಲ ಕೆ. ವಿ. ಧನಂಜಯ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗಾಗಿ ‘ಸಮಾಚಾರ’ ಬಿಟಿವಿಯ ಕಾನೂನು ಸಲಹೆಗಾರರನ್ನು ಸಂಪರ್ಕಿಸಿದಾರೂ, ಸೂಕ್ತ ಮಾಹಿತಿ ಲಭ್ಯವಾಗಲಿಲ್ಲ. “ನ್ಯಾಯಾಯಲದಲ್ಲಿ ಮೌಖಿಕವಾಗಿ ಎಲ್ಲವೂ ನಡೆದಿದೆ. ಶನಿವಾರ ಏನು ನಡೆಯುತ್ತೆ ಎಂಬುದನ್ನು ನೋಡಿಕೊಂಡು ಸುದ್ದಿ ಮಾಡಿ. ಸದ್ಯ ದಕ್ಷಿಣ ಭಾರತದಲ್ಲಿ ಮಾಧ್ಯಮವೊಂದರ ಮೇಲೆ ಹೂಡಿರುವ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ಇದು ಎಂದು ವರದಿ ಮಾಡಿ,” ಎಂದರು.

ಬಿಟಿವಿ ಪ್ರತಿಕ್ರಿಯೆ:

‘ಸಮಾಚಾರ’ದ ಈ ವರದಿ ಪ್ರಕಟವಾದ ಬೆನ್ನಲ್ಲೇ, ಬಿಟಿವಿ ಸುದ್ದಿವಾಹಿನಿ ತನ್ನ ಪ್ರತಿಕ್ರಿಯೆ ನೀಡಿದೆ. ಶಾಸಕ ಪ್ರಿಯ ಕೃಷ್ಣ ಅವರು ಸಲ್ಲಿಸಿರುವ ಮಾನಹಾನಿ ಪ್ರಕರಣದಲ್ಲಿ ಕಾನೂನು ಸಮರ ಮುಂದುವರಿಸುವ ಮುನ್ಸೂಚನೆಯನ್ನು ನೀಡಿದೆ. ಚಾನಲ್ ಪರವಾಗಿ, ಅದರ ಕಾನೂನು ಸಲಹೆಗಾರರು ನೀಡಿದ ಪ್ರತಿಕ್ರಿಯೆಯ ಪೂರ್ಣ ಪಾಠ ಇಲ್ಲಿದೆ:

ಮೈಸೂರಿನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ದಲಿತರ ಭೂಮಿಯನ್ನು ಶಾಸಕರಾದ ಲೇಔಟ್ ಕೃಷ್ಣಪ್ಪ ಹಾಗೂ ಪ್ರಿಯ ಕೃಷ್ಣ ಕುಟುಂಬದವರು ಕಬಳಿಸಲು ಯತ್ನಿಸಿದಾಗ, ‘ಬಿಟಿವಿ’ ನೈಜ ವರದಿಯನ್ನು ಪ್ರಸಾರ ಮಾಡಿತ್ತು. ಈ ಭೂಮಿಯನ್ನು ದಲಿತ ಕುಟುಂಬಗಳಿಗೆ ಮರಳಿಸುವಲ್ಲಿ ‘ಬಿಟಿವಿ’ ಮಾಡಿದ ಪ್ರಯತ್ನವನ್ನು ವಿರೋಧಿಸುವ ಸಲುವಾಗಿ, ನ್ಯಾಯಾಲಯದಲ್ಲಿ 100 ಕೋಟಿ ರೂಪಾಯಿಗಳ ಸುಳ್ಳು ಮಾನನಷ್ಟ ಮೊಕದ್ದಮೆಯನ್ನು ಹೂಡಲಾಯಿತು. 

‘ಬಿಟಿವಿ, ಬಡವರ- ದಲಿತರ- ರೈತಪರ ನಿಲುವಿನಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸ ಇದೆ. ಯಾವುದೇ ಕಾರಣಕ್ಕೂ, ಹಣಬಲ, ತೋಳ್ಬಲಗಳಿಗೆ ಜಗ್ಗುವುದಿಲ್ಲ. ಸತ್ಯ ಮತ್ತು ನ್ಯಾಯದ ಪರ ನಮ್ಮ ನಿಲುವು ಮುಂದುವರಿಯುತ್ತದೆ. ದಲಿತರಿಗೆ ಭೂಮಿ ಮರಳಿಸುವ ನಮ್ಮ ಸಾಧನೆ ಬಗ್ಗೆ ಹೆಮ್ಮೆ ಇದೆ.

(photo courtesy: google)

 

1 Comment

Leave a comment

Top