An unconventional News Portal.

‘ಜಾಗತೀಕರಣಕ್ಕೆ 25 ವರ್ಷ’: ಕಂಪ್ಯೂಟರ್ ಕೊಳ್ಳಲು ಪರದಾಡಿದ್ದ ಇನ್ಫಿ ನಾರಾಯಣ ಮೂರ್ತಿ ಕತೆ!

‘ಜಾಗತೀಕರಣಕ್ಕೆ 25 ವರ್ಷ’: ಕಂಪ್ಯೂಟರ್ ಕೊಳ್ಳಲು ಪರದಾಡಿದ್ದ ಇನ್ಫಿ ನಾರಾಯಣ ಮೂರ್ತಿ ಕತೆ!

ನಮ್ಮ ದೇಶ ಜಾಗತೀಕರಣ ನೀತಿಗಳನ್ನು ಅಳವಡಿಸಿಕೊಂಡು 25 ವರ್ಷ ತುಂಬಿತು. ಈ ಸಮಯದಲ್ಲಿ ಜಾಗತೀಕರಣದ ಕುರಿತು ಸಾಕಷ್ಟು ಪರ ಮತ್ತು ವಿರೋಧಗಳನ್ನು ಕೇಳಿಕೊಂಡು ದೊಡ್ಡವರಾದ ತಲೆಮಾರು ನಮ್ಮದು. ಈ ಸಮಯದಲ್ಲಿ ಜಾಗತೀಕರಣ ಒಂದು ತಲೆಮಾರಿನ, ಬೆರಳೆಣಿಕೆ ಜನರಿಗೆ ಮಾತ್ರವೇ ಉಪಯೋಗವಾಯಿತು; ಶ್ರೀಮಂತರು ಇನ್ನಷ್ಟು ಶ್ರೀಮಂತರಾದರು, ಬಡವರು ಇನ್ನಷ್ಟು ಬಡವರಾದರು ಎಂದು ವಿಮರ್ಶೆಗಳು ಕೇಳಿಬಂದಿವೆ ಕೂಡ. ಇಷ್ಟಕ್ಕೂ ಈ ಜಾಗತೀಕರಣದಲ್ಲಿ ಶ್ರೀಮಂತರಾದವರು ಹೇಗೆ ಸಿರವಂತಿಕೆಯನ್ನು ಹೊಂದಿದರು ಎಂಬುದರ ಬಗ್ಗೆ ಸಾಕಷ್ಟು ಕತೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಅಂತಹ ಪ್ರೇರಣೆ ನೀಡುವಂತಹ ಕತೆಗಳನ್ನು ಚಲಾವಣೆಗೆ ಬಿಡುವುದು ಕೂಡ ಜಾಗತೀಕರಣದ ನೀತಿಯ ಭಾಗವೇ ಇರಬಹುದಾ? ಅನುಮಾನಗಳಷ್ಟೆ.

ಇದು ಅದರ ಮುಂದುವರಿದ ಭಾಗವಿರಬಹುದು; ಅಥವಾ ಬೇರೆಯದೇ ನೆಲೆಯಲ್ಲಿ ಜಾಗತೀಕರಣದ ಕಾಲಘಟ್ಟದಲ್ಲಿ ಬೆಳೆದು ಬಂದವರ ಬದುಕನ್ನು ಕಟ್ಟಿಕೊಡುವ ಪ್ರಯತ್ನವಿರಬಹುದು. 25 ವರ್ಷಗಳ ಹಿಂದೆ ಇದ್ದ ‘ಲೈಸೆನ್ಸ್ ರಾಜ್’ ಕಾಲದಲ್ಲಿ ಸ್ವಂತಕ್ಕೊಂದು ಕಂಪನಿ ಕಟ್ಟಲು ಶುರುಮಾಡಿ, ಅದಕ್ಕೊಂದು ಬಿಕನಾಸಿ ಕಂಪ್ಯೂಟರ್ ಖರೀದಿಸಲು  50 ಬಾರಿ ಬೆಂಗಳೂರಿನಿಂದ ದಿಲ್ಲಿಗೆ ಓಡಾಡಿದ ವ್ಯಕ್ತಿಯ ಕತೆ ಇದು. ಅಂದಹಾಗೆ ಅವರು ನಾರಾಯಣ ಮೂರ್ತಿ ಕೇರ್ ಆಫ್ ಇನ್ಫೋಸಿಸ್. ಇವತ್ತು ಅವರೇನಾಗಿದ್ದಾರೆ ಎಂಬುದರ ಬಗ್ಗೆ ಪೀಠಿಕೆಯ ಅಗತ್ಯ ಕೂಡ ಇಲ್ಲ. ಆದರೆ, ಅವತ್ತು ಅವರದ್ದೇ ಕಂಪನಿಗೆ ಕಂಪ್ಯೂಟರ್ ಕೊಂಡುಕೊಳ್ಳಲು ಪಟ್ಟ ಕಷ್ಟಗಳ ಹಿಂದಿನ ಕತೆಯನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ …? ಅವರ ಮಾತುಗಳಲ್ಲೇ ಕೇಳಿ.

‘ಎಕಾನಾಮಿಕ್ ಟೈಮ್ಸ್’  ಪ್ರಕಟಿಸಿದ್ದ ಅವರ ಬರಹದ ಕನ್ನಡಾನುವಾದ ಇದು.


“ಅವತ್ತು ನಿಯಮಗಳು ಈಗಿನಂತೆ ಸರಳವಾಗಿರಲಿಲ್ಲ. ಒಮ್ಮೆ ವಿದೇಶಕ್ಕೆ ಹೋಗಬೇಕೆಂದರೆ ರಿಸರ್ವ್ ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಅನುಮತಿ ಗಿಟ್ಟಿಸಲು ಮತ್ತೆ 10-12 ದಿನ ಕಾಯಬೇಕಾಗಿತ್ತು. ಇವತ್ತಿಗೆ ಇದೆಲ್ಲ ಬಾಲಿಶ ಅನಿಸಬಹುದಾದರೂ ಅವತ್ತಿಗೆ ಇದೆಲ್ಲಾ ಇದ್ದಿದ್ದು ನಿಜ. ಇಂತಹ ಕಠಿಣ ನಿಯಮಗಳಿಂದಾಗಿ ವಿದೇಶಗಳಲ್ಲಿ ವ್ಯವಹಾರ ಮಾಡುವುದಾಗಲೀ, ಸಲಹೆಗಾರರನ್ನು ಪಡೆಯುವುದು, ಕಚೇರಿ ತೆರೆಯುವುದು, ಮಾರುಕಟ್ಟೆ ಮ್ಯಾನೇಜರುಗಳನ್ನು ನೇಮಿಸುವುದು.. ಇವು ಯಾವುದೂ 1991ಕ್ಕೆ ಮೊದಲು ಸಾಧ್ಯವಿರಲಿಲ್ಲ.

mms-kW9H--621x414@LiveMint

1991ರ ಐತಿಹಾಸಿಕ ಬಜೆಟ್ಟಿಗೆ ಅಂದಿನ ಅರ್ಥಸಚಿವ ಮನಮೋಹನ್ ಸಿಂಗ್ ಸಹಿ ಹಾಕುತ್ತಿರುವುದು. (ಕೃಪೆ: ಲೈವ್ ಮಿಂಟ್)

ಅವತ್ತಿಗೆ ನಮಗೊಬ್ಬ ಸರಕಾರಿ ಅಧಿಕಾರಿ ಇದ್ದ; ಆತನ ಹುದ್ದೆ ‘ಕಂಟ್ರೋಲರ್ ಆಫ್ ಕ್ಯಾಪಿಟಲ್ ಇಶ್ಯೂಸ್’. ಆತ ಇರುತ್ತಿದ್ದದ್ದು ದೆಹಲಿಯಲ್ಲಿ. ಆತ ನಾಗರಿಕ ಸೇವೆಯಲ್ಲಿದ್ದ, ಬಂಡವಾಳ ಹೂಡಿಕೆಯ ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತದೆ ಎಂಬ ಪರಿಜ್ಞಾನವೂ ಇರದಿದ್ದ ಅಧಿಕಾರಿ ಅವನಾಗಿರುತ್ತಿದ್ದ. ಬಂಡವಾಳ ಹೂಡುವ ಮಾರುಕಟ್ಟೆಗಳೆಲ್ಲಾ ಮುಂಬೈನಲ್ಲಿದ್ದರೂ ಆತ ಯಾಕೆ ದೆಹಲಿಯಲ್ಲಿ ಕೂತಿದ್ದಾನೆ, ಎಂದು ಯಾರೂ ಕೇಳಿಯೂ ಇರಲಿಲ್ಲ. ಅವತ್ತಿನ ಆಡಳಿತಶಾಹಿಯ ಪರಿಸ್ಥಿತಿಗಳಿವು. 1990ರಲ್ಲಿ ಆತ 10 ರೂಪಾಯಿಯ ಷೇರಿಗೆ 11 ರೂ. ನೀಡಲಷ್ಟೇ ಅನುವು ಮಾಡಿಕೊಡುತ್ತಿದ್ದ. 1993ರ ಹೊತ್ತಿಗೆ ನಮ್ಮ ಪ್ರತಿ ಷೇರಿನ ಮುಖಬೆಲೆ 95 ರೂಪಾಯಿಗೆ ಬಂದು ಮುಟ್ಟಿತ್ತು. ಅದೃಷ್ಟಾವಶಾತ್ ಅವತ್ತಿಗೆ ಈ ನಿಯಮಗಳೆನ್ನೆಲ್ಲಾ ಮನಮೋಹನ್ ಸಿಂಗ್ ಕಿತ್ತು ಹಾಕಿದ್ದರು.

ಅವತ್ತಿಗೆ ವಿದೇಶದಿಂದ ಕಂಪ್ಯೂಟರ್ ಖರೀದಿಸಲು ಸರಕಾರದಿಂದ ಪರವಾನಿಗೆ ಪಡೆಯಬೇಕಾಗಿತ್ತು; ಇದಕ್ಕೆ ಕಠಿಣ ನಿಯಮಗಳಿದ್ದವು. ಇವೆಲ್ಲ ಎಷ್ಟು ಅತಿರೇಕದಿಂದ ಇರುತ್ತಿದ್ದವೆಂದರೆ, ನನಗೆ ಒಂದು ಕಂಪ್ಯೂಟರ್ ವಿದೇಶದಿಂದ ಆಮದು ಮಾಡಿಕೊಳ್ಳಲು ಮೂರು ವರ್ಷ ಹಿಡಿಯಿತು. ಇದಕ್ಕಾಗಿ ನಾನು 50 ಬಾರಿ ದೆಹಲಿಗೆ ಹೋಗಿ ಬಂದಿದ್ದೆ. ಆ ದಿನಗಳಲ್ಲಿ ವಿಮಾನಕ್ಕೆ ಕೊಡುವುದಕ್ಕೂ ನನ್ನಲ್ಲಿ ಹಣವಿರಲಿಲ್ಲ. ಹಾಗಾಗಿ ರೈಲಿನಲ್ಲೇ ಹೋಗಿ ಬರುತ್ತಿದ್ದೆ. (ದೆಹಲಿಗೆ ರೈಲಿನಲ್ಲಿ ಹೋಗಿ ಬರಲು ಇವತ್ತಿಗೂ 6 ದಿನ ಬೇಕು). ಹಳೆ ದೆಹಲಿಯ ರೈಲ್ವೇ ಸ್ಟೇಷನ್ ಪಕ್ಕದಲ್ಲಿರುವ ಗಲ್ಲಿಯಂತ ಜನಜಂಗುಳಿಯ ಪ್ರದೇಶದಲ್ಲಿ ಉಳಿದುಕೊಳ್ಳುತ್ತಿದ್ದೆ. ಆ ಜುಜುಬಿ ಹಣವನ್ನೂ ಭರಿಸುವ ಶಕ್ತಿ ಬೆಳೆಯುತ್ತಿರುವ ನಮ್ಮ ಕಂಪೆನಿಗೆ ಇರಲಿಲ್ಲ; ಪರಿಸ್ಥಿತಿ ಕಷ್ಟವಿತ್ತು.

ಈಗಷ್ಟೇ ಮೊಳಕೆಯೊಡೆಯುತ್ತಿರುವ ಕಂಪೆನಿ ಒಂದು ಲೈಸೆನ್ಸ್ ಪಡೆಯಲು ದೊಡ್ಡ ಬೆಲೆ ತೆರಬೇಕಾಗಿತ್ತು. ಸ್ವಲ್ಪ ಕಲ್ಪಿಸಿಕೊಳ್ಳಿ… ಒಮ್ಮೆ ರೈಲಿನಲ್ಲಿ ಹೋಗಿ ಬರಬೇಕಾದರೆ 3000 ಸಾವಿರ ರೂಪಾಯಿ ತೆರಬೇಕಾಗಿತ್ತು. ಹೀಗೆಯೇ 6 ಲಕ್ಷ ಬೆಲೆಯ ಕಂಪ್ಯೂಟರ್ ಖರೀದಿಸಲು ನಾವು ಒಂದೂವರೆ ಲಕ್ಷ ದೆಹಲಿಗೆ ಹೋಗಿ ಬರುವುದಕ್ಕೇ ಖರ್ಚು ಮಾಡಬೇಕಾಗಿತ್ತು.

ಅಧಿಕಾರಿಗಳು ಹೇಗಿದ್ದರೆಂದರೆ, ಅವರಿಗೆ ಕಂಪ್ಯೂಟರ್ ಅಂದರೆ ಏನೆಂದೇ ತಿಳಿದಿರಲಿಲ್ಲ. ನೀವ್ಯಾಕೆ 64MB ಮೆಮೊರಿ ಕಂಪ್ಯೂಟರ್ ತೆಗೆದುಕೊಳ್ಳುತ್ತೀರಿ, 48MB ಸಾಕಾಗುವುದಿಲ್ಲವಾ ಎಂಬ ಪ್ರಶ್ನೆ ಇಡುತ್ತಿದ್ದರು (ಇವತ್ತು 500ಜಿಬಿ ಇರುವ ಕಂಪ್ಯೂಟರ್ ಮೆಮೊರಿ ಅವತ್ತು 64ಎಂಬಿ ಇತ್ತು!). ಹಾಗೂ ಹೀಗೂ ನಾವು ಅರ್ಜಿ ಸಲ್ಲಿಸಿ ಎರಡು ವರ್ಷಗಳ ನಂತರ ಕಂಪ್ಯೂಟರ್ ಪಡೆದುಕೊಳ್ಳುವಷ್ಟರಲ್ಲಿ ನಾವು ಲೈಸೆನ್ಸ್ ಪಡೆದಿದ್ದ ಕಂಪ್ಯೂಟರುಗಳನ್ನು ಖರೀದಿಸಲು ಅಮೆರಿಕಾಗೆ ಹೋದರೆ ಅಲ್ಲಿ ಅವೆಲ್ಲಾ ಗುಜರಿ ಅಂಗಡಿಯಲ್ಲಿರುತ್ತಿದ್ದವು. ಅದಕ್ಕಿಂತ ಹೆಚ್ಚಿನ ಗುಣಮಟ್ಟದ ಕಂಪ್ಯೂಡರುಗಳು ಅಲ್ಲಿ ಅದಾಗಲೇ ಮಾರುಕಟ್ಟೆಗೆ ದಾಗುಂಡಿ ಇಟ್ಟಾಗಿರುತ್ತಿತ್ತು.

ಅವತ್ತಿಗೆ ಭಾರತ ಮೂರು ತಲೆಮಾರುಗಳಷ್ಟು ಹಿಂದಿರುತ್ತಿತ್ತು. ಒಮ್ಮೆ ಈ ಲೈಸೆನ್ಸ್ ರಾಜ್ ಪದ್ದತಿಗಳೆಲ್ಲಾ ಹೋದ ನಂತರ ಎಲ್ಲಾ ಸರಿಯಾಯಿತು. ಇದಾದ ನಂತರ ಅಧಿಕಾರಿಗಳ ಕಚೇರಿ ಅಲೆಯುವುದು ತಪ್ಪಿತು. ನಮಗೆ ಏನು ಬೇಕು, ಏನು ಖರೀದಿಸಬೇಕು ಎಂಬುದನ್ನು ನಮ್ಮ ಬೋರ್ಡ್ ಮೀಟಿಂಗುಗಳಲ್ಲೇ ನಿರ್ಧರಿಸುವ ದಿನಗಳು ಬಂದು ಬಿಟ್ಟವು. ಅದು ಜಾಗತೀಕರಣದ ನಂತರ ದಿನಗಳು…

Leave a comment

Top