An unconventional News Portal.

ಹೆಸರಲ್ಲೇನಿದೆ ಎಂದುಕೊಂಡಿದ್ದ ಝುಕರ್ ಬರ್ಗ್ ತೆತ್ತ ದಂಡ ಹಾಗೂ ಅದರಾಚೆಯ ಸತ್ಯಗಳು!

ಹೆಸರಲ್ಲೇನಿದೆ ಎಂದುಕೊಂಡಿದ್ದ ಝುಕರ್ ಬರ್ಗ್ ತೆತ್ತ ದಂಡ ಹಾಗೂ ಅದರಾಚೆಯ ಸತ್ಯಗಳು!

ಅಂತರ್ಜಾಲ ಬೆಳೆದಂತೆ ಹೊಸ ಹೊಸ ಉದ್ಯಮಗಳು ಸೃಷ್ಟಿಯಾಗುತ್ತಿವೆ. ಆನ್ಲೈನ್ ಯುಗದಲ್ಲಿ ಪುಸ್ತಕಗಳಿಂದ ಶುರುಮಾಡಿ, ಸೊಪ್ಪು ತರಕಾರಿ, ಆಹಾರವನ್ನೂ ನಿಮ್ಮ ಮನೆ ಬಾಗಿಲಿಗೆ ತಂದು ಕೊಡುವ ಸಾಧ್ಯತೆಗಳೇ ಇಂದು ದೊಡ್ಡ ಮಟ್ಟದ ವಹಿವಾಟು ನಡೆಸು ಕ್ಷೇತ್ರಗಳಾಗಿ ಪರಿವರ್ತನೆಗೊಂಡಿವೆ. ಈ ಸಾಲಿನಲ್ಲಿ ‘ಡೊಮೈನ್’ ಮಾರಾಟ ಕೂಡ ಸೇರ್ಪಡೆಗೊಂಡಿದೆ.

ಸಾಮಾನ್ಯವಾಗಿ ಈ ‘ಡೊಮೈನ್’ ಎಂದರೆ ಹೆಚ್ಚಿನ ಜನರಿಗೆ ಗೊತ್ತಾಗುವುದಿಲ್ಲ. ಅದನ್ನೇ ವೆಬ್ಸೈಟ್ ಹೆಸರು ಎಂದರೆ ನಿಮಗೆ ಸುಲಭವಾಗಿ ಗೊತ್ತಾಗುತ್ತದೆ. ನೀವು ವೆಬ್ಸೈಟ್ ಶುರು ಮಾಡಬೇಕು ಎಂದರೆ ಮೊದಲು ಇರುವ ಸವಾಲು ನಿಮ್ಮ ಬಯಕೆಯ ಹೆಸರನ್ನು ನೋಂದಣಿ ಮಾಡಿಸುವುದು. ಆದರೆ, ನೀವು ಹೆಸರೊಂದನ್ನು ಆಲೋಚನೆ ಮಾಡಿಕೊಂಡು, ವೆಬ್ಸೈಟ್ ನೋಂದಣಿ ಮಾಡಿಸಿಕೊಡುವ ತಾಣಗಳಿಗೆ ಹೋದರೆ, ಅದಾಗಲೇ ಬೇರೆಯವರು ಅದನ್ನು ನೋಂದಣಿ ಮಾಡಿಕೊಂಡಿರುತ್ತಾರೆ. ಆಗ ನಿಮಗಿರುವ ಆಯ್ಕೆ ಒಂದೋ, ಬೇರೆ ಹೆಸರಿಗೆ ಮೊರೆ ಹೋಗುವುದು ಅಥವಾ ಈಗಾಗಲೇ ಖರೀದಿಸಿದವರಿಂದ ನೀರು ಮರು ಖರೀದಿ ಮಾಡುವುದು. ಆಗ ಅವರು ಕೇಳುವ ಬೆಲೆಯನ್ನು ನೀವು ತೆರಬೇಕಾಗುತ್ತದೆ. ಅದೇ ಇವತ್ತಿನ ‘ವೆಬ್ ಡೆವಲಪ್ಮೆಂಟ್’ ಕ್ಷೇತ್ರದಲ್ಲಿ ದೊಡ್ಡ ಉದ್ಯಮವಾಗಿ, ಹವ್ಯಾಸವಾಗಿ ಬೆಳೆದಿದೆ.

ತಾಜಾ ಉದಾಹರಣೆ:

‘maxchanzuckerberg.com’ ಎಂಬ ಡೊಮೈನ್ ಒಂದನ್ನು ಪಡೆಯಲು ಫೇಸ್ಬುಕ್ ಸ್ಥಾಪಕ ಮಾರ್ಕ್ ಝುಕರ್ಬರ್ಗ್ ಬರೋಬ್ಬರಿ 47 ಸಾವಿರ ರೂಪಾಯಿ ಪಾವತಿಸಿದ್ದಾರೆ ಎಂಬ ಸುದ್ದಿ ಈಗಷ್ಟೆ ಹೊರಬಿದ್ದಿದೆ. ಸಾಮಾನ್ಯವಾಗಿ 99 ರೂಪಾಯಿಂದ ಆರಂಭವಾಗುವ ಈ ಡೊಮೈನ್ ಬೆಲೆ ಈ ಪಾಟಿ ಏರಿಸಲು ಕಾರಣವಾಗಿದ್ದು, ಅದರ ಹೆಸರು. ಮ್ಯಾಕ್ಸ್ಚಾನ್, ಝುಕರ್ಬರ್ಗ್ ಮಗಳು. ಆಕೆಗೆ ಹೆಸರಿಡುತ್ತಿದ್ದಂತೆ, ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಆಕೆಯ ಹೆಸರಿನಲ್ಲಿ ಡೊಮೈನ್ ನೋಂದಣಿ ಮಾಡಿಸಿ ಬಿಟ್ಟಿದ್ದ. ಇತ್ತೀಚೆಗೆ, ಆ ಡೊಮೈನ್ ಕೇಳಿಕೊಂಡು ಐಕಾನಿಕ್ಯು ಎಂಬ ಅಮೆರಿಕಾ ಮೂಲದ ಕಂಪನಿ ಬಂದಾಗ 700 ಡಾಲರ್ ಕೊಟ್ಟರೆ ಕೊಡುತ್ತೇನೆ ಎಂದಿದ್ದ. ಮರು ಮಾತಿಲ್ಲದೆ ಕಂಪನಿ ಹಣ ತೆತ್ತು ಡೊಮೈನ್ ಖರೀದಿಸಿತ್ತು. ನಂತರ ಬಹಿರಂಗವಾದ ಸುದ್ದಿ ಏನೆಂದರೆ, ಆ ಕಂಪನಿ ಮಾರ್ಕ್ ಝುಕರ್ಬರ್ಗ್ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಸಂಸ್ಥೆ ಎಂದು. ಬಹುಶಃ ಇದು ಮುಂಚೆ ಗೊತ್ತಾಗಿದ್ದರೆ ಮ್ಯಾಕ್ಸ್ಚಾನ್ ಹೆಸರಿನ ಡೊಮೈನ್ ಬೆಲೆಯಲ್ಲಿ ಇನ್ನೊಂದಿಷ್ಟು ಚೌಕಾಸಿ ನಡೆಯುವ ಸಾಧ್ಯತೆಗಳಿದ್ದವು.

ಲಾಟರಿ ಇದ್ದಂತೆ:

ಈ ಡೊಮೈನ್ ವ್ಯವಹಾರ ಎಂಬುದು ಲಾಟರಿ ವ್ಯವಹಾರದಂತೆ. ಇದರಲ್ಲಿ ತೊಡಗಿಸಿಕೊಂಡವರನ್ನು ಇಂಗ್ಲಿಷ್ನಲ್ಲಿ ‘ಸೈಬರ್ಸ್ಕಾಟರ್’ ಎಂದು ಕರೆಯುತ್ತಾರೆ. ಡೊಮೈನ್ ಬುಕ್ ಮಾಡಿಟ್ಟುಕೊಂಡರೆ ಮುಂದೊಂದು ದಿನ ಲಾಟರಿ ಹೊಡೆಯಬಹುದು ಎಂದು ಕಾಯುತ್ತ ಕುಳಿತ ಟೆಕ್ಕಿಗಳ ಸಂಖ್ಯೆಯೇ ಕೋಟಿಗಳ ಲೆಕ್ಕದಲ್ಲಿದೆ. ಜನಪ್ರಿಯ ಕಂಪೆನಿಗಳು ಮತ್ತು ವ್ಯಕ್ತಿಗಳ ಹೆಸರು, ಅವರಿಗಿರುವ ಬೇಡಿಕೆ ಅಂದಾಜಿಸಿ ಡೊಮೈನ್ ಬುಕ್ ಮಾಡುತ್ತಾರೆ. ಮುಂದೊಂದು ದಿನ ಅವರಿಗೆ ತಮ್ಮ ಹೆಸರಿನಲ್ಲಿ ಒಂದು ವೆಬ್ಸೈಟ್ ಇರಬೇಕು ಅಂತ ಅನ್ನಿಸಿದರೆ, ಅಷ್ಟೊತ್ತಿಗಾಗಲೇ ಅದನ್ನು ಇನ್ನೊಬ್ಬರು ಬುಕ್ ಮಾಡಿಟ್ಟುಕೊಂಡಾಗಿರುತ್ತದೆ.

hammocks.com ಎಂಬ ಡೊಮೇನ್ 2010ರಲ್ಲಿ 47 ಕೋಟಿ ರೂಪಾಯಿಗೆ ಬಿಕರಿಯಾಗಿತ್ತು. ಹೀಗೆ ಕೋಟಿ ಕೋಟಿ ಗಳಿಸುವ ಅವಕಾಶಗಳಿರುವ ವಿಚಿತ್ರ ಉದ್ಯಮ ಇದು.

ನೀವೂ ಒಮ್ಮೆ ಪರೀಕ್ಷಿಸಿಕೊಳ್ಳಿ, ನಿಮ್ಮ ಹೆಸರಿನ ಡೊಮೈನ್ ಇದೆಯಾ? ಇಲ್ಲಾ ಸೈಬರ್ಸ್ಕಾಟರ್ ಬಲೆಗೆ ಬಿದ್ದಿದೆಯಾ ಅಂತ.

Top