An unconventional News Portal.

ದಲಿತ ಯುವಕನ ಅನುಮಾನಾಸ್ಪದ ಸಾವು: ಹೊನ್ನಾವರದ ಒಳಗುದಿಗೆ ಧರ್ಮದ ಬಣ್ಣ ಬಳಿದವರು ಯಾರು?

ದಲಿತ ಯುವಕನ ಅನುಮಾನಾಸ್ಪದ ಸಾವು: ಹೊನ್ನಾವರದ ಒಳಗುದಿಗೆ ಧರ್ಮದ ಬಣ್ಣ ಬಳಿದವರು ಯಾರು?

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪರೇಶ್ ಮೇಸ್ತ(19) ಎಂಬ ಯುವಕನ ಅನುಮಾನಾಸ್ಪದ ಸಾವು ಈಗ ಕೋಮು ಬೆಂಕಿಗೆ ತುಪ್ಪವಾಗಿ ಪರಿಣಮಿಸಿದೆ.

ಮೇಸ್ತನ ಕೊಲೆಗಾರರನ್ನು ಬಂಧಿಸಬೇಕೆಂದು ಒತ್ತಾಯಿಸಿ ಸೋಮುವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಹಿಂದುತ್ವದ ಸಂಘಟನೆಗಳಿಂದ ಕರೆ ನೀಡಿದ್ದ ಬಂದ್ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಜಮಾಯಿಸಿದ್ದ ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ವಾಹನಗಳ‌ ಮೇಲೆ ಕಲ್ಲು ತೂರಾಟ ನಡೆಸಿದರು. ಐಜಿಪಿ ಹೇಮಂತ್ ನಿಂಬಾಳ್ಕರ್ ವಾಹನಕ್ಕೆ ಬೆಂಕಿ ಹಚ್ಚಿದರು. ಕಾರಿನ ಚಾಲಕ ಗಾಯಗೊಂಡಿದ್ದು, ಕಲ್ಲು ತೂರಾಟ ವೇಳೆ ಪಿಎಸ್ಐ ಇ.ಸಿ.ಸಂಪತ್ ಕುಮಾರ್ ಅವರಿಗೂ ಪೆಟ್ಟಾಗಿದೆ ಎನ್ನುತ್ತಿವೆ ವರದಿಗಳು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 25 ಮಂದಿಯನ್ನು ಹಾಗೂ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಕೊನೆಗೆ ಅಶ್ರುವಾಯು ಪ್ರಯೋಗವೂ ನಡೆಯಿತು. ಅಂಗಡಿ ಮುಂಗಟ್ಟುಗಳು ಬಂದ್ ಆಗದ್ದು, ಪಟ್ಟಣದ ಗಿಬ್ಸ್ ವೃತ್ತದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕುಮಟ ಪಟ್ಟಣದಾದ್ಯಂತ ನಿಷೇಧಾಜ್ಞೆ ಜಾರಿಯಾಗಿದೆ.

ಕೋಮು ಬಣ್ಣ:

ಡಿಸೆಂಬರ್ 2 ರಂದು ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಮಿಲಾದುನ್ನಬೀ ಮತ್ತು ಹನುಮ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಎರಡು ಕೋಮುಗಳ ಮದ್ಯೆ ವೈಮನಸ್ಸು ಉಂಟಾಗಿತ್ತು. ಅದಾಗಿ ನಾಲ್ಕು ದಿನಗಳ ನಂತರ ಡಿ. 6ರ ರಾತ್ರಿ ಹೊನ್ನಾವರ ವೃತ್ತದಲ್ಲಿ ಆಟೋ ರಿಕ್ಷಾವೊಂದಕ್ಕೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಕಾರಣವನ್ನೇ ಮುಂದಿಟ್ಟುಕೊಂಡು ಎರಡೂ ಕೋಮಿನವರೂ ಘರ್ಷಣೆಗೆ ಮುಂದಾಗಿದ್ದರು. ಕಲ್ಲು ತೂರಾಟ ನಡೆಸಿ, ಟೆಂಪೋ ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸಿದ್ದರು. ಇದೇ ದಿನ ಪರೇಶ್ ಮೇಸ್ತ ಕಾಣೆಯಾಗಿದ್ದ. ಎರಡು ದಿನಗಳ ನಂತರ ಆತನ ಶವ ಪತ್ತೆಯಾಗಿತ್ತು.

ಹೊನ್ನಾವರದ ಶನೇಶ್ವರ ದೇವಸ್ಥಾನದ ಎದುರಿನಲ್ಲಿ ಈ ಮೊದಲು ಹಿಂದೂ ಮತ್ತು ಮುಸ್ಲಿಂರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಇಲ್ಲಿ ಮುಸ್ಲಿಂರು ಯಾವುದೇ ಕಾರ್ಯಗಳನ್ನೂ ಮಾಡಬಾರದು ಎಂಬುದು ಹಿಂದೂಪರ ಸಂಘಟನೆಗಳ ಇತ್ತೀಚಿನ ತಕರಾರು. ಹಾಗಾಗಿ ಈ ಸ್ಥಳ ವಿವಾದಕ್ಕೀಡಾಗಿತ್ತು. ಆದರೆ ತಾಲೂಕಾಡಳಿತದ ದಾಖಲೆಗಳ ಪ್ರಕಾರ, ಈ ಜಾಗದಲ್ಲಿ ಮುಸ್ಲಿಂರಿಗೆ ಮೊಹರಂ ಆಚರಿಸುವುದಕ್ಕೆ ಅವಕಾಶವಿತ್ತು. ಹಾಗೇ ಹಿಂದೂ ಧಾರ್ಮಿಕ ಹಬ್ಬಗಳನ್ನೂ ಆಚರಿಸಲು ಅವಕಾಶವಿತ್ತು.

“ಈ ಸ್ಥಳದಲ್ಲಿ ಮುಸ್ಲಿಂರು ಧಾರ್ಮಿಕ ಕಾರ್ಯಗಳನ್ನು ಆಚರಿಸಲು ಹಿಂದೂ ಸಂಘಟನೆಗಳು ತಕರಾರು ಎತ್ತಿದ್ದು ಎರಡೂ ಕೋಮಿನ ಮದ್ಯ ವೈಮನಸ್ಸು ಉಂಟಾಗಲು ಕಾರಣಾಗಿತ್ತು.  ಇದೇ ವೈಮನಸ್ಸು ಪರೇಶ್ ಮೇಸ್ತ ಹತ್ಯೆಗೆ ತಳುಕು ಹಾಕಿಕೊಂಡಿತು,” ಎನ್ನುತ್ತಾರೆ ಅಲ್ಲಿನ ಸ್ಥಳೀಯರೊಬ್ಬರು.

ಅನುಮಾನಸ್ಪದ ಸಾವು:

ಬುಧವಾರ ರಾತ್ರಿ ವೇಳೆ ಶನಿ ದೇವಸ್ತಾನದ ಹತ್ತಿರ ಹೋಗಿದ್ದ ಪರೇಶ್ ಮೇಸ್ತ (19) ಎಂಬ ಖಾರ್ವಿ ಸಮುದಾಯದ ಯುವಕ ನಾಪತ್ತೆಯಾಗಿದ್ದ. ಇದಾದ 2 ದಿನಗಳ ನಂತರದಲ್ಲಿ ಆತನ ಮೃತದೇಹ ಶನಿದೇವಸ್ಥಾನದ ಹಿಂಭಾಗದಲ್ಲಿರುವ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿತ್ತು. ಪರೇಶ್ ಮೇಸ್ತನನ್ನು ಅಪಹರಣ ಮಾಡಿ, ಮುಖಕ್ಕೆ ಎಣ್ಣೆ ಸುರಿದು, ಜನನಾಂಗವನ್ನು ಕತ್ತರಿಸಲಾಗಿದೆ. ಇದು ಮುಸ್ಲಿಂರೇ ಎಸಗಿರುವ ಕೃತ್ಯ’ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಸ್ಥಳೀಯ ಮಟ್ಟದಲ್ಲಿ ಎರಡೂ ಕೋಮುಗಳ ಮಧ್ಯೆ ದ್ವೇಷ ಬೆಳೆಯಲು ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿ ಬಳಕೆಯಾದವು. 

“ಪರೇಶ್ ಮೇಸ್ತ ಮೃತದೇಹದ ಮರಣೋತ್ತರ ಪರೀಕ್ಷೆಗೆ ಕೆಲವರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರಿಂದ ಪರೀಕ್ಷೆ ನಡೆಸದೇ, ಮಣಿಪಾಲದ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ,” ಎಂದು ಜಿಲ್ಲಾಡಳಿತ ಹೇಳಿದೆ. “ಮರಣೋತ್ತರ ಪರೀಕ್ಷೆ ವರದಿ ನಂತರವೇ ನಿಜಾಂಶ ಬೆಳಕಿಗೆ ಬರುತ್ತದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ನಂತರವೇ ಸಂಪೂರ್ಣ ಮಾಹಿತಿ ನೀಡುವುದಾಗಿ,” ಪೊಲೀಸ್ ವರಿಷ್ಠಾಧಿಕಾರಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಪರೇಶ್ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಆತ ಮೀನುಗಾರರ ಲೆಕ್ಕ ಬರೆದಿಟ್ಟುಕೊಳ್ಳುತ್ತಿದ್ದ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ. ಆದರೆ, ಆತ ಹಿಂದೂ ಸಂಘಟನೆಯೊಂದರ ಸದಸ್ಯನಾಗಿದ್ದ. ಇದೊಂದು ಪೂರ್ವನಿಯೋಜಿತ ಕೊಲೆಯೆಂದು ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ. ಪರೇಶ್ ಮೇಸ್ತ ಸಾವು ಕೊಲೆ ಎಂದು ಆತನ ಕುಟುಂಬವೂ ಆರೋಪಿಸಿದೆ.

ಉತ್ತರ ಕನ್ನಡ ಜಿಲ್ಲೆ ಬಂದ್:

ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ  ವಿಧಿಸಬೇಕೆಂದು ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದ್ದವು. ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ಸ್ಥಗಿತ ಮಾಡಲಾಗಿತ್ತು.  ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆಯನ್ನು ಉದ್ವಿಗ್ನ ಪರಿಸ್ಥಿತಿಗೆ ಕೊಂಡೊಯ್ಯಲಾಯಿತು. ಅಷ್ಟೇ ಅಲ್ಲದೇ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು.

ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿ ಚಾರ್ಜ್‌ಗೆ ಸಂಬಂಧಪಟ್ಟಂತೆ ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. “ಸರ್ಕಾರ ಬಿಜೆಪಿಯವರ ಮೇಲೆ ಗುಂಡಾಗಿರಿ ಮಾಡುತ್ತಿದೆ. ಹೋರಾಟಗಳನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಶಾಂತಿಯುತ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸರು ಲಾಠಿ ಚಾಜ್೯ ಮಾಡುವಂತದ್ದು ಏನಿತ್ತು?” ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಲಾಠಿ ಚಾಜ್೯ ಖಂಡಿಸಿ ನಾಳೆ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕುಮಟಾದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದವರು ಹೇಳಿದ್ದಾರೆ.

“ಯುವಕ ಕಾಣೆಯಾದ ವಿಷಯ ಪೊಲೀಸರಿಗೆ ಗೊತ್ತಿತ್ತು. ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಮುಚ್ಚಿಡಲಾಗಿತ್ತು. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನೊಬ್ಬ ಕೊಲೆಯಾಗಿರುವ ಮಾಹಿತಿ ತಿಳಿದಿದ್ದರೂ ಪ್ರಕರಣವನ್ನು ಮುಚ್ಚಿ ಹಾಕಿ, ಆತನ ಹೆಣದ ಮೇಲೆ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಲಾನ್ಯಾಸ ಮಾಡಿದ್ದಾರೆ,” ಎಂದು ಸಂಸದೆ ಶೋಭಾ ಕರದ್ಲಾಂಜೆ ಆರೋಪಿಸಿದ್ದಾರೆ. ಹೀಗೆ ಈ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದು, ಬಿಜೆಪಿ ಇದರ ರಾಜಕೀಯ ಲಾಭಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಮತ್ತೊಬ್ಬ ಯುವಕ ನಾಪತ್ತೆ:

ಹೀಗಿರುವಾಗಲೇ ಶಿರಸಿಯ ಮುಸ್ಲಿಂ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಅಬ್ದುಲ್ ಗಫರ್ ಶುಂಠಿ(24) ಎಂಬಾತ ಕಾಣೆಯಾಗಿದ್ದು, ಈತ ಶಿರಸಿ ತಾಲೂಕಿನ ಗಡಿಹಳ್ಳಿ ಗ್ರಾಮದ ಬಿಳಿಗಿರಿಕೊಪ್ಪದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ನಾಲ್ಕು ದಿನಗಳ ಹಿಂದೆಯೇ ಈ ಯುವಕ ನಾಪತ್ತೆಯಾಗಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಿನಿ ಲಾರಿ ಡ್ರೈವರ್ ಆಗಿದ್ದ ಅಬ್ದುಲ್, ಹೊನ್ನಾವರಕ್ಕೆ ಬಂದಾಗ ನಾಪತ್ತೆಯಾಗಿದ್ದಾನೆ ಎನ್ನುತ್ತವೆ ಮೂಲಗಳು. ಪತಿಯ ನಾಪತ್ತೆಯ ಕುರಿತು ಶನಿವಾರವೇ ಪತ್ನಿ ಜುಯೇರಿಯಾ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ತನಿಖೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಬ್ದುಲ್ ಗೆ ಒಬ್ಬ ಸಹೋದರ ಮತ್ತು ನಾಲ್ಕು ಜನ ಮಕ್ಕಳಿದ್ದಾರೆ.

ಪರೇಶ್ ಮೇಸ್ತ ನಾಪತ್ತೆಗೂ, ಈಗ ಅಬ್ದುಲ್ ನಾಪತ್ತೆಯಾಗಿರುವುದಕ್ಕೂ ಸಂಬಂದ ಇದೆಯಾ? ಪೊಲೀಸರ ತನಿಖೆ ಉತ್ತರ ನೀಡಬೇಕಿದೆ. ಅದಕ್ಕಿಂತ ಹೆಚ್ಚಾಗಿ ‘ಹಿಂದೂ ಫೈರ್‌ ಬ್ರಾಂಡ್‌’ ಖ್ಯಾತಿಯ, ಕೇಂದ್ರ ಸಚಿವ ಅನಂತ್ ಕುಮಾರ್ ಕ್ಷೇತ್ರದ ಸಮೀಪದಲ್ಲಿ ನಡೆಯುತ್ತಿರುವ ಕೋಮು ದೃವೀಕರಣಕ್ಕೆ ಪರೇಶ್ ನಾಪತ್ತೆ, ಸಾವುಗಳು ಬಳಕೆಯಾಗದಂತೆಯೂ ನೋಡಿಕೊಳ್ಳಬೇಕಿದೆ. ರಾಜಕೀಯದ ಆಚೆಗೆ, ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ಸಂಬಂಧಪಟ್ಟಬರು ಮಾಡಬೇಕಿದೆ.

Leave a comment

Top