An unconventional News Portal.

#ದಕ್ಷಿಣಾಯಣ ಚರ್ಚೆ: ಕೊಂಡಿಗಳ ಬೆಸೆಯುವ ಕೆಲಸಕ್ಕಿಂತ ಆತ್ಮಶೋಧನೆ ಕಾಲದ ಅಗತ್ಯ!

#ದಕ್ಷಿಣಾಯಣ ಚರ್ಚೆ: ಕೊಂಡಿಗಳ ಬೆಸೆಯುವ ಕೆಲಸಕ್ಕಿಂತ ಆತ್ಮಶೋಧನೆ ಕಾಲದ ಅಗತ್ಯ!

  • ರಮೇಶ್ ಎಚ್‌. ಕೆ ಶಿವಮೊಗ್ಗ

ಬಹಳಷ್ಟು ಗೆಳೆಯರು ನಮ್ಮೂರಿನಲ್ಲಿ ನಡೆಯುವ ‘ದಕ್ಷಿಣಾಯಣ’ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರಿಂದ, ಆಸಕ್ತಿ ಮೂಡಿತು. ಕೆಲಸಕ್ಕೆ ಒಂದು ದಿನ ರಜೆ ಹಾಕಿ ನಾನೂ ಕೂಡ ಹೋದೆ. ಅಭಿವ್ಯಕ್ತಿ ಎಂಬ ವಿಷಯವನ್ನು ಪ್ರಧಾನವಾಗಿಸಿಕೊಂಡು, ನಿರೂಪಿಸಿದ ಈ ಕಾರ್ಯಕ್ರಮ ಪ್ರಸ್ತುತ ಸಂದರ್ಭದ ಕೋಮು ಸಮಸ್ಯೆಗಳನ್ನು ಎದುರಿಸಲು ಚರ್ಚೆ ನಡೆಸುವ ವೇದಿಕೆಯಾಗುತ್ತೆ ಎಂಬ ಭರವಸೆ ಇತ್ತು. ಕತ್ತಲಿನ ಕೊನೆಯಲ್ಲಿ ಬೆಳಕು ಇರುತ್ತದೆ, ಅದನ್ನು ಹುಡುಕುವ ಸಲುವಾಗಿ ಈ ಕಾರ್ಯಕ್ರಮ ಎಂಬ ಭರವಸೆ ನನಗಿತ್ತು.

ಇತ್ತೀಚಿನ ದಿನಗಳಲ್ಲಿ ನಡೆದ ಇಂತಹ ಹತ್ತು ಹಲವು ಸಾಮರಸ್ಯ ಕಾರ್ಯಕ್ರಮಗಳನ್ನು ಒಂದು ಚಳವಳಿ ಎಂದು ಪರಿಗಣಿಸಲಾಗಿರುವುದರಿಂದ ಈ ಕಾರ್ಯಕ್ರಮವೂ ಸಹ ಅಂತಹ ಚಳವಳಿ ಎಂಬುದು ನನ್ನ ಅಭಿಪ್ರಾಯ. ಆಯೋಜಕರು ಇದೊಂದು ಸಂಘಟನೆ ಅಲ್ಲ; ಹೊಸ ಮಾದರಿಯ ಚಳವಳಿಗೆ ಮುನ್ನಡಿ ಎಂದು ಹೇಳಿದ್ದರು. ನನ್ನ ಪಾಲಿಗೆ ‘ದಕ್ಷಿಣಾಯಣ’ ಅಂತರಂಗದ ಚಳವಳಿಯನ್ನು ಹುಟ್ಟುಹಾಕಲು ಮುನ್ನುಡಿ ಬರೆಯಲಿದೆ ಎಂದು ನಂಬಿದ್ದೆ.

ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇನ್ನಷ್ಟು ವಿಷಯಗಳು ನನ್ನ ಅರಿವಿಗೆ ಬಂದವು. ನನಗೆ ಅನಿಸುವಂತೆ ಕೆಲ ಬರಹಗಾರರು ಈಗಾಗಲೇ ತಾವು ಹತ್ತಾರು ಕಡೆ ತಿಳಿದ ಸಂಗತಿಗಳನ್ನು ಮತ್ತೆ ಮತ್ತೆ ಇಂತಹ ವೇದಿಕೆಯಲ್ಲಿ ಪುನರಾವರ್ತನೆ ಮಾಡಿದರು. ಮೂಲಭೂತವಾದಿಗಳು, ವೈದಿಕಶಾಹಿಗಳು ಇವರ ಬಹುತೇಕ ಭಾಷಣದ ಕೇಂದ್ರ ಬಿಂದುಗಳಾಗಿದ್ದಾರೆ. ಆದರೆ ಕಳೆದ ಇಷ್ಟು ವರ್ಷಗಳ ಬೆಳವಣಿಗೆಯನ್ನು ಗಮನಿಸಿದರೆ, ಏನೇ ಭಾಷಣಗಳು ನಡೆದರೂ, ಮೂಲಭೂತವಾದಿ ಮನಸ್ಥಿತಿ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನೊಂದು ಅರ್ಥದಲ್ಲಿ ಅವರು ಇವರ ಭಾಷಣಗಳಿಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಇದರ ಜತೆಗೆ ಇನ್ನೊಂದು ಗಮನಿಸಿದ ಅಂಶ ಏನೆಂದರೆ, ವೈಚಾರಿಕತೆ ಹೆಸರಿನ ಭಾ‍ಣಗಳಲ್ಲಿ ಜನ ಸಾಮಾನ್ಯರು ಬಂದು ಹೋಗುತ್ತಾರೆ. ಅವರ ಕಷ್ಟಗಳನ್ನು ಪ್ರಸ್ತಾಪಿಸಲಾಗುತ್ತದೆ. ಆದರೆ ಇವು ಭಾಷಣಕ್ಕೆ ಮಾತ್ರವೇ ಸೀಮಿತವಾಗಿದೆಯಾ ಎಂಬ ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಜನ ಸಾಮಾನ್ಯರನ್ನು ಭಾಷಣಕಾರರು ತಲುಪುವಲ್ಲಿ, ಪ್ರಭಾವಿಸುವಲ್ಲಿ ಎಡವಿದ್ದಾರೆ. ಜನ ಸಾಮಾನ್ಯರಿಗೂ, ಇವರಿಗೂ ಸಂಬಂಧವೇ ಇಲ್ಲವೇನೋ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಮೊನ್ನೆ ‘ದಕ್ಷಿಣಾಯಣ’ದ ಭಾಷಣಗಳನ್ನು ಕೇಳುತ್ತಿದ್ದಾಗ ನನ್ನ ತಲೆಯಲ್ಲಿ ಓಡುತ್ತಿದ್ದ ವಿಚಾರ ಇದೇ ಆಗಿತ್ತು.


Related: #ದಕ್ಷಿಣಾಯಣ; ಚರ್ವಿತ ಚರ್ವಣ ಮತ್ತು ವಿಚಾರ ಕ್ರಾಂತಿಗೆ ‘ನೀಡದ’ ಅಹ್ವಾನ!


ಜನ ಮತ್ತು ಅವರ ಕಷ್ಟಗಳ ವಿಚಾರವನ್ನು ಪಕ್ಕಕ್ಕಿಟ್ಟು, ಬದ್ಧತೆ ಮತ್ತು ತ್ಯಾಗದ ವಿಚಾರದಲ್ಲಿ ಕೆಲ ಹಿಂದೂ ಸಂಘಟನೆಗಳು ಕಳೆದ 80 ವರ್ಷಗಳಿಂದ ತಮ್ಮ ಕೆಲಸವನ್ನು ಮಾಡಿಕೊಂಡು ಬರುತ್ತಿವೆ. ಇದರಲ್ಲಿ ಅರಣ್ಯ ವಾಸಿಗಳಿಗೆ ಶಾಲೆ ನಿರ್ಮಿಸಿಕೊಡುವುದು ಇದ್ದಿರಬಹುದು, ಶಾಲೆಗಳ ನಿರ್ಮಾಣ, ವೃದ್ದಾಶ್ರಮ, ಅನಾಥಾಶ್ರಮದಂತಹ ಹಲವು ಸೇವೆಗಳನ್ನು ಅವರು ಮಾಡುತ್ತಿದ್ದಾರೆ. ಒಳಿತಲ್ಲದ, ಅನಾರೋಗ್ಯಕರ ದಾರಿಯಲ್ಲಿದ್ದರೂ ಸಹ, ಅವರ ಈ ಸುದೀರ್ಘ ಸೇವೆಯನ್ನು ತೆಗೆದು ಹಾಕಲು ಬರುವುದಿಲ್ಲ. ಅದೇ ಸಮಯದಲ್ಲಿ ಅವರನ್ನು ವಿರೋಧಿಸುತ್ತಿರುವವರು ಇಂತಹ ವಿಚಾರಗಳಲ್ಲಿ ಮಾಡಿದ ವೈಯಕ್ತಿಕ ಮಟ್ಟದ ತ್ಯಾಗ ಮತ್ತು ಕೊಡುಗೆಗಳನ್ನು ದುರ್ಬೀನು ಹಾಕಿ ಹುಡುಕಬೇಕು. ಮಾಡಿದ ಚಿಕ್ಕ ಪುಟ್ಟ ಕೆಲಸಗಳಿಗೆ ಪ್ರಶಸ್ತಿ, ಸನ್ಮಾನಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದಾರೆ. ಸಿಕ್ಕ ಮನ್ನಣೆಗೆ ಕುತ್ತಿಗೆಯ ಮೇಲೆ ತಲೆ ನಿಲ್ಲದಿರುವುದು ಬಹುತೇಕ (ಎಲ್ಲರೂ ಅಲ್ಲ) ಪ್ರಗತಿಪರರ ಗುಣಲಕ್ಷಣಗಳಾಗಿವೆ ಎಂಬುದನ್ನು ನೋವಿನಿಂದಲೇ ಹೇಳಬೇಕಿದೆ. ನೈತಿಕತೆ ವಿಚಾರಗಳು ಬಂದಾಗ, ಅವರಿಗೆ ಸರಿ ಎನ್ನಿಸುವ ವಾದಗಳನ್ನು ಮುಂದಿಡುವ, ತಮ್ಮ ದಿನನಿತ್ಯದ ಬದುಕಿಗೂ, ಆಡುವ ಮಾತುಗಳಿಗೂ ಸಂಬಂಧವೇ ಇಲ್ಲವೇನೋ ಎಂದು ಬದುಕುವ ಇಂತಹವರಿಂದ ಸಮಾಜ ಪಾಠ ಕಲಿಯಲು ಸಹಜವಾಗಿಯೇ ನಿರಾಕರಿಸುತ್ತಿರಬಹುದು.

ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಭ್ರಷ್ಟತೆಯ, ಕ್ರೌರ್ಯದ ಮತ್ತು ಕೆಡುಕಿನ ಬಣ್ಣ ಬಳಿದು, ತಮ್ಮದೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವಿನಾಕಾರಣ ವಿಷ ಕಾರುವ ಜನರೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ಮಹಾನ್ ಜನಪರರಂತೆ ಪೋಷಾಕು ತೊಡುತ್ತಾರೆ. ಹೀಗಾಗಿ ಇಂತವರು ನಮ್ಮೊಳಗೆ ಆರೋಗ್ಯ ಪೂರ್ಣ ಚಳುವಳಿಯ ನಂಬಿಕೆಯನ್ನು ಹೇಗೆ ಮೂಡಿಸಬಲ್ಲರು? ಮತ್ತೆ ಮತ್ತೆ ಇವರ ಬಾಯಲ್ಲೇ ‘ಫ್ಯಾಸಿಸಂ’ ಬಗ್ಗೆ ಕೇಳುವುದು ಮತ್ತೆ ಗೊಂದಲಕ್ಕೆ ನಮ್ಮನ್ನು ದೂಡುತ್ತದೆ.

ಇನ್ನು ಇಂತಹ ಕಾರ್ಯಕ್ರಮಗಳಲ್ಲಿ ಯಾರೋ ಒಂದಿಬ್ಬರು ನಾಯಕರಾಗುವ ಅಥವಾ ಅವರನ್ನು ನಾಯಕರನ್ನಾಗಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಬಹುಶಃ ನನ್ನ ಪ್ರಕಾರ ಇಂದಿನ ಸಂದರ್ಭದಲ್ಲಿ ನಾಯಕ ಎಂಬ ಕಲ್ಪನೆಯೇ ತೀರಾ ಅವಾಸ್ತವ ಮತ್ತು ಬೇಡದ ಕಲ್ಪನೆ. ಎಲ್ಲರೂ ಗುಂಪಿನ ಭಾಗವಾಗಿರುವ ಸದಸ್ಯರಾಗಿಯೇ ಕೆಲಸ ಮಾಡುವಂತಹ ಸಮಾನತೆಯ ಕಾಲವಿದು.
ಹೀಗಿರುವಾಗ ವೈಯಕ್ತಿಕ ಲಾಭಗಳಿಗಾಗಿ ನಾಯಕರಾಗ ಹೊರಡುವುದು ಸಂವೇದನಾಶೀಲರಿಗೆ ಅಷ್ಟು ಉಚಿತವಲ್ಲ ಎನಿಸುತ್ತದೆ.


More: ಕಳಚಿದ ಕೊಂಡಿಗೆ ಕಾರಣ ಹುಡುಕಿ; ಅದನ್ನು ಮತ್ತೆ ಜೊಡಿಸುವುದೇ ‘ದಕ್ಷಿಣಾಯಣ’!


ಅಲ್ಲದೇ ಇಂದಿನ ಇಂತಹ ಚಳುವಳಿಯನ್ನು ಮುನ್ನಡೆಸುವವರಲ್ಲಿ ಬಹುತೇಕರು ಜನ ಸಾಮಾನ್ಯರನ್ನು ಕರೆತರುವಷ್ಟು ಆತ್ಮೀಯತೆಯನ್ನು ಮೈಗೂಡಿಸಿಕೊಂಡಿಲ್ಲ. ಅವರನ್ನು ತಲುಪಿಲ್ಲ ಮತ್ತು ಅವರ ಕಷ್ಟಗಳಿಗೆ ಪ್ರಾಮಾಣಿಕವಾದ ಮಿಡಿತಗಳಿಲ್ಲ. ಎಲ್ಲವೂ ಲೆಕ್ಕಾಚಾರಗಳಲ್ಲಿಯೇ ನಡೆದು ಹೋಗುತ್ತಿರುವುದರಿಂದ ಬಹುಸಂಖ್ಯಾತ ಸಾಮಾನ್ಯ ಜನ ಇಂತಹ ಚಳವಳಿಗಳಿಂದ ದೂರವೇ ಉಳಿದಿದ್ದಾರೆ. ಅಥವಾ ಅವರಿಗೆ ಇವರ ಭಾ‍ಷಣಗಳ ಬಗ್ಗೆ ಮಾಹಿತಿಯೇ ಇಲ್ಲ.

ಇವು ನನ್ನೊಳಗೆ ಕರ್ನಾಟಕದ ಪ್ರಗತಿಪರ ಚಳವಳಿ ಮತ್ತು ಅದನ್ನು ಮುನ್ನಡೆಸುತ್ತಿರುವವರ ಬಗ್ಗೆ ಇದ್ದ ಪ್ರಶ್ನೆಗಳಾಗಿದ್ದವು, ಗೊಂದಲಗಳಾಗಿದ್ದವು. ಇದಕ್ಕೆಲ್ಲಾ ಉತ್ತರ ‘ದಕ್ಷಿಣಾಯಣ’ದಲ್ಲಿ ಸಿಗಬಹುದು ಎಂಬ ನಂಬಿಕೆ ನನಗಿತ್ತು. ಆತ್ಮವಿಮರ್ಶೆಗಳ ಜತೆಗೆ, ವೈಯಕ್ತಿಕ ನೆಲೆಯಲ್ಲಿ ನೈತಿಕತೆಯನ್ನು ಬೆಳೆಸಿಕೊಂಡು, ಜನರ ಬಳಿ ತಲುಪಲು ದಾರಿಗಳನ್ನು ಇದು ಶೋಧಿಸುವ ವೇದಿಕೆ ಆಗಲಿದೆ ಎಂದು ಭಾವಿಸಿದ್ದೆ. ಆದರೆ ಅದೇ ಹಳೆಯ ಮಾದರಿಯ ಭಾಷಣಗಳ ಸೆಮಿನಾರ್ ವೇದಿಕೆ ಆಗಿ ಬದಲಾಯಿತು.

ಆಯೋಜಕರಲ್ಲಿ ಹಲವರಿಗೆ ಹೊಸ ಮಾದರಿಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ತುಡಿತ ಇದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.  ಮುಂದಿನ ದಿನಗಳಲ್ಲಾದರೂ ಪ್ರಗತಿಪರ ಚಳುವಳಿಯನ್ನು ಕಟ್ಟುಲು ಹೊರಡುತ್ತಿರುವವರು ಮೊದಲು ‘ತಾನು’ ಎಂಬುದನ್ನು ಮೊದಲು ಕೊಂದುಕೊಳ್ಳಬೇಕಿದೆ. ಆತ್ಮರತಿಗಿಂತ ಆತ್ಮಶ್ರೀ ಪರಿಕಲ್ಪನೆ ಈ ಕಾಲದ ಅಗತ್ಯವಾಗಿದೆ. ನಮಗೆ ವ್ಯಕ್ತಿಗಳು ಬೇಕಾಗಿಲ್ಲ; ವಿಚಾರಗಳು ಬೇಕು. ಅದನ್ನು ಕೊಡಮಾಡುವ ನಿಟ್ಟಿನಲ್ಲಿ ಇನ್ನೊಂದು ಸಾವಿರ ‘ದಕ್ಷಿಣಾಯಣ’ಗಳು ನಡೆಯಲಿ. ನಾನು ಮತ್ತದೇ ನಿರೀಕ್ಷೆಗಳಿಂದ ಬರುತ್ತೇನೆ.


  •  ಲೇಖಕರು ಕರ್ನಾಟಕದ ಉಚ್ಚನ್ಯಾಯಾಲಯದಲ್ಲಿ ಅನುವಾದಕರು.

Leave a comment

Top