An unconventional News Portal.

ನ್ಯಾ. ಕರ್ಣನ್‌ಗೆ ಶಿಕ್ಷೆಯ ತಾಪ: ಮರೆಗೆ ಸರಿದ ನ್ಯಾಯಾಧೀಶರ ಮೇಲಿನ ಭ್ರಷ್ಟಾಚಾರ ಆರೋಪ

ನ್ಯಾ. ಕರ್ಣನ್‌ಗೆ ಶಿಕ್ಷೆಯ ತಾಪ: ಮರೆಗೆ ಸರಿದ ನ್ಯಾಯಾಧೀಶರ ಮೇಲಿನ ಭ್ರಷ್ಟಾಚಾರ ಆರೋಪ

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಕರ್ಣನ್ ಅವರಿಗೆ ಸುಪ್ರಿಂ ಕೋರ್ಟ್‌ ಮಂಗಳವಾರ ಆರು ತಿಂಗಳ ಶಿಕ್ಷೆ ವಿಧಿಸಿದೆ. ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ತವ್ಯದಲ್ಲಿದ್ದ ನ್ಯಾಯಾಧೀಶರೊಬ್ಬರಿಗೆ ಶಿಕ್ಷೆ ವಿಧಿಸಿದ ಪ್ರಕರಣ ಇದಾಗಿದೆ.

ಕಳೆದ ಕೆಲವು ತಿಂಗಳುಗಳ ಕಾಲ ನಡೆದ ನ್ಯಾಯಾಂಗದ ಈ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಎಂಬಂತೆ ಸುಪ್ರಿಂ ಕೋರ್ಟ್‌ ನ್ಯಾ. ಕರ್ಣನ್‌ ಬಂಧಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ. ಆದರೆ ನ್ಯಾ. ಕರ್ಣನ್ ಕಲ್ಕತ್ತಾದಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇದರ ಜತೆಗೆ, ನ್ಯಾ. ಕರ್ಣನ್ ಅವರ ಯಾವುದೇ ಹೇಳಿಕೆಗಳನ್ನು ಪ್ರಕಟಿಸದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಸುಪ್ರಿಂ ಕೋರ್ಟ್ ನಿರ್ಬಂಧ ಹೇರಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ‘ಜಾತಿಯತೆ ಮತ್ತು ಭ್ರಷ್ಟಾಚಾರ ವ್ಯಾಪಕವಾಗಿದೆ’ ಎಂಬ ಗಂಭೀರ ಆರೋಪವನ್ನು ಮಾಡುವ ಮೂಲಕ ನ್ಯಾ. ಕರ್ಣನ್ ಸುದ್ದಿ ಕೇಂದ್ರಕ್ಕೆ ಬಂದವರು. ಇದೀಗ, ಅವರ ಆರೋಪಗಳನ್ನು ನ್ಯಾಯಾಂಗ ನಿಂದನೆ ಅಡಿಯಲ್ಲಿ ಪರಿಗಣಿಸುವ ಮೂಲಕ ಆರೋಪ ಮಾಡಿದ ನ್ಯಾಯಾಧೀಶರನ್ನೇ ಶಿಕ್ಷೆಗೆ ಗುರಿಪಡಿಸಿಲಾಗಿದೆ. ಇದು ನ್ಯಾಯಾಂಗದೊಳಗಿನ ಭ್ರಷ್ಟಾಚಾರದಂತಹ ಆರೋಪಗಳನ್ನು ತೆರೆಮರೆಗೆ ಸರಿಸುವ ಪ್ರಯತ್ನ ಎಂದು ಹಿರಿಯ ವಕೀಲರು ಆರೋಪ ಮಾಡುತ್ತಿದ್ದಾರೆ.

ಏನಿದು ಪ್ರಕರಣ?:

ದೇಶದಲ್ಲಿ ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆ ಜಾರಿ ಬಂದ ನಂತರ ಭ್ರಷ್ಟಾಚಾರದ ವಿರುದ್ಧ ಕೇಂದ್ರ ಸರಕಾರ ಸಮರ ಸಾರಿದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ನ್ಯಾ. ಸಿ. ಎಸ್. ಕರ್ಣನ್ ಜನವರಿ 23ರಂದು 20 ನ್ಯಾಯಾಧೀಶರ (ಇದರಲ್ಲಿ ನಿವೃತ್ತರೂ ಇದ್ದಾರೆ) ಹೆಸರುಗಳನ್ನು ಹಾಗೂ ಮೂವರು ಮದ್ರಾಸ್ ಹೈಕೋರ್ಟ್‌ ಸಿಬ್ಬಂದಿಗಳ ಹೆಸರನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದರು. ಪತ್ರದಲ್ಲಿ, ನ್ಯಾಯಾಧೀಶರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿ ಎಂದು ಕೋರಿದ್ದರು.

ಕರ್ಣನ್ ಪ್ರಧಾನಿಗೆ ಬರೆದ ಪತ್ರ.

ಕರ್ಣನ್ ಪ್ರಧಾನಿಗೆ ಬರೆದ ಪತ್ರ.

ಈ ಪತ್ರ ಬಹಿರಂಗವಾಗುತ್ತಿದ್ದಂತೆ ನ್ಯಾಯಾಂಗ ವ್ಯವಸ್ಥೆಯೊಳಗೆ ಭಾರಿ ಸಂಚಲವನ್ನೇ ಸೃಷ್ಟಿಸಿತ್ತು. ಫೆಬ್ರವರಿ ತಿಂಗಳಿನಲ್ಲಿ ಸುಪ್ರಿಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ನ್ಯಾ. ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ದೂರನ್ನು ದಾಖಲಿಸಿ, ವಿಚಾರಣೆ ಆರಂಭಿಸಿತು.

ಕಳೆದ ಎರಡು ತಿಂಗಳ ಅಂತರದಲ್ಲಿ ಹಲವು ಬಾರಿ ಸುಪ್ರಿಂ ಕೋರ್ಟ್‌ ನ್ಯಾ. ಕರ್ಣನ್ ಅವರಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತು. ಆದರೆ ನ್ಯಾ. ಕರ್ಣನ್ ಸುಪ್ರಿಂ ಕೋರ್ಟ್ ಆದೇಶವನ್ನು ತಿರಸ್ಕರಿಸಿದರು. ಈ ಸಮಯದಲ್ಲಿ ನ್ಯಾ. ಕರ್ಣನ್ ವಿಚಾರಣೆ ನಡೆಸುವ ಅವಕಾಶಗಳನ್ನು ಸುಪ್ರಿಂ ಕೋರ್ಟ್‌ ಮೊಟಕುಗೊಳಿಸಿತು. ಇದೇ ಹೊತ್ತಿನಲ್ಲಿ ‘ತಮ್ಮ ಮನಸ್ಸನ್ನು ಕೆಡಿಸಿದ್ದಕ್ಕಾಗಿ ಹಾಗೂ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಕ್ಕಾಗಿ’ ನ್ಯಾ. ಕರ್ಣನ್ 14 ಕೋಟಿ ಪರಿಹಾರ ನೀಡಿವಂತೆ ಕೋರಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸಾಂವಿಧಾನಿಕ ಪೀಠಕ್ಕೆ ಪತ್ರ ಬರೆಯುವ ಮೂಲಕ ಅಚ್ಚರಿ ಮೂಡಿಸಿದರು. ಜತೆಗೆ, ತಮ್ಮ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ಸುಪ್ರಿಂ ಕೋರ್ಟ್‌ ನ್ಯಾಯಾಧೀಶರ ವಿರುದ್ಧವೇ ನ್ಯಾ. ಕರ್ಣನ್ ಆದೇಶಗಳನ್ನು ತಮ್ಮ ಮನೆಯಿಂದಲೇ ಹೊರಡಿಸಿದರು. ಈ ಸಮಯದಲ್ಲಿ ಸುಪ್ರಿಂ ಕೋರ್ಟ್ ಅವರ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಲು ಮುಂದಾಯಿತು. ಅದಕ್ಕೂ ಕರ್ಣನ್ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಇದೀಗ ಪ್ರಕರಣದಲ್ಲಿ ನ್ಯಾ. ಕರ್ಣನ್‌ಗೆ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಸುಪ್ರಿಂ ಕೋರ್ಟ್‌ ತಪ್ಪು ಮಾಡಿತಾ?: 

ಪ್ರಕರಣದಲ್ಲಿ ನ್ಯಾ. ಕರ್ಣನ್‌ ಅವರಿಗೆ ಶಿಕ್ಷೆ ವಿಧಿಸುವ ಮೂಲಕ ಸುಪ್ರಿಂ ಕೋರ್ಟ್‌ ಗಂಭೀರ ತಪ್ಪನ್ನು ಎಸಗಿದೆ ಎನ್ನುತ್ತಾರೆ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಬಿ. ಟಿ. ವೆಂಕಟೇಶ್. ‘ಸಮಾಚಾರ’ ಜತೆ ಮಾತನಾಡಿದ ಅವರು, “ನ್ಯಾ. ಕರ್ಣನ್ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ಸುಪ್ರಿಂ ಕೋರ್ಟ್ ಅವರ ಮಾನಸಿಕ ಸ್ಥಿಮಿತತೆ ಕುರಿತು ಪ್ರಶ್ನೆಗಳನ್ನು ಎತ್ತಿತ್ತು. ಇದೀಗ ಅದೇ ಪೀಠ ಮಾನಸಿಕ ಸ್ಥಿಮಿತ ಕಳೆದುಕೊಂಡ ಆರೋಪಿಗೆ ಶಿಕ್ಷೆ ವಿಧಿಸಿದೆ. ಇದು ತಾಂತ್ರಿಕವಾಗಿ ಒಪ್ಪಲು ಸಾಧ್ಯವಿಲ್ಲ. ಆರೋಪಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರೆ ಚಿಕಿತ್ಸೆ ನೀಡಬೇಕೇ ಹೊರತು, ಶಿಕ್ಷೆ ವಿಧಿಸುವುದಲ್ಲ,” ಎನ್ನುತ್ತಾರೆ ಅವರು.

ಇದರ ಜತೆಗೆ, ನ್ಯಾ. ಕರ್ಣನ್ ಎತ್ತಿರುವ ಭ್ರಷ್ಟಾಚಾರದಂತಹ ಗಂಭೀರ ವಿಚಾರಗಳು ಹಿನ್ನೆಗೆ ಸರಿಸುವ ಪ್ರಯತ್ನವಿದು ಎನ್ನುತ್ತಾರೆ ಇನ್ನೊಬ್ಬ ಹೈಕೋರ್ಟ್‌ ವಕೀಲ ಜೆ. ಡಿ. ಕಾಶೀನಾಥ್. “ಸುಪ್ರಿಂ ಕೋರ್ಟ್‌ ತನ್ನ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಕಾರಣಕ್ಕೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿದೆ. ಹೀಗೆ ನ್ಯಾಯಾಂಗದೊಳಗಿನ ಭ್ರಷ್ಟಾಚಾರದ ವಿರುದ್ಧ ಪ್ರಶಾಂತ್ ಭೂಷಣ್ ಸೇರಿದಂತೆ ಹಲವುರು ಆರೋಪ ಮಾಡಿದ್ದಾರೆ. ಹೀಗಿರುವಾಗ ಅವರ್ಯಾರಿಗೂ ಇಲ್ಲದ ನ್ಯಾಯಾಂಗ ನಿಂದನೆ ನ್ಯಾ. ಕರ್ಣನ್ ಅವರೊಬ್ಬರಿಗೆ ಮಾತ್ರ ಏಕೆ?” ಎಂದವರು ಪ್ರಶ್ನಿಸುತ್ತಾರೆ.

ಸದ್ಯ, ನ್ಯಾ. ಕರ್ಣನ್ ಪೊಲೀಸ್ ಬಂಧನದಿಂದ ದೂರ ಉಳಿದಿದ್ದಾರೆ. ಅವರ ಪ್ರತಿಕ್ರಿಯೆ ಏನಿದೆ ಎಂಬುದನ್ನು ಮಾಧ್ಯಮಗಳು ಜನರಿಗೆ ತೋರಿಸದಂತೆಯೂ ನಿರ್ಬಂಧವನ್ನು ವಿಧಿಸಲಾಗಿದೆ. ಸುಪ್ರಿಂ ಕೋರ್ಟ್ ಶಿಕ್ಷೆ ನೀಡಿರುವುದನ್ನು ತಾಂತ್ರಿಕ ಕಾರಣಗಳಿಗಾಗಿ ಹಿರಿಯ ವಕೀಲರು ವಿರೋಧಿಸುತ್ತಿದ್ದಾರೆ. ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿರದ್ಧ ಕೂಗುಗಳು ಕೇಳಿ ಬರುತ್ತಿರುವ ಹೊತ್ತಿನಲ್ಲಿ ‘ನ್ಯಾಯಾಂಗದೊಳಗಿನ ಭ್ರಷ್ಟಾಚಾರ’ ಮಾತ್ರ ಸುದ್ದಿ ಕೇಂದ್ರದಿಂದ ದೂರವೇ ಉಳಿದಿದೆ. ನ್ಯಾ. ಕರ್ಣನ್ ಅವರ ಮಾನಸಿಕ ಸ್ಥಿತಿ ಮತ್ತು ನ್ಯಾಯಾಂಗ ನಿಂದನೆ ಪ್ರಕರಣ ಸದ್ದು ಮಾಡುತ್ತಿದೆ.

 

Leave a comment

Top