An unconventional News Portal.

ಸಂಪುಟ ಪುನಾರಚನೆ ಖಚಿತ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತು ಪಡಿಸಿ…!

ಸಂಪುಟ ಪುನಾರಚನೆ ಖಚಿತ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತು ಪಡಿಸಿ…!

ಎರಡು ವರ್ಷಗಳಿಂದ ಹೊಯ್ದಾಟದಲ್ಲಿದ್ದ ಸಂಪುಟ ಪುನಾರಚನೆ ಕಗ್ಗಂಟು ಬಗೆಹರಿದಿದೆ.

ಸಂಪುಟ ಪುನಾರಚನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ದಾರೆ. ಒಟ್ಟು 13 ಅಥವಾ 14 ಸಚಿವರು ಸಂಪುಟದಿಂದ ಹೊರಬರಲಿದ್ದು 12 ಸಚಿವರು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಸಂಪುಟದಿಂದ ಯಾರು ಹೊರಕ್ಕೆ? ಯಾರು ಒಳಬರಲಿದ್ದಾರೆ ಎಂಬ ಹೆಸರುಗಳೀಗ ಚಲಾವಣೆಗೆ ಬಂದಿವೆ.

ಶನಿವಾರ ಬೆಳಗ್ಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, “ಸಂಪುಟ ಪುನಾರಚನೆಗೆ ಒಪ್ಪಿಗೆ ಸಿಕ್ಕಿದೆ. ನಾಳೆ ಅಥವ ನಾಡಿದ್ದು ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿಯನ್ನು ರವಾನಿಸುತ್ತೇವೆ,” ಎಂದು ಹೇಳಿದರು. ಜೊತೆಗೆ ಸಂಪುಟದಿಂದ ಹೊರಗುಳಿಯಲಿರುವ ಮತ್ತು ಸೇರಲಿರುವ ಸಚಿವರ ಹೆಸರುಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ನಾಳೆಯೇ ಸಂಪುಟ ಪುನಾರಚನೆ ನಡೆಯಲಿದ್ದು, ರಾಜಭವನದಲ್ಲಿ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

“ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ದರೂ, ಒಂದು ಸ್ಥಾನಕ್ಕೆ ಎರಡೆರಡು ಹೆಸರುಗಳನ್ನು ಇಟ್ಟುಕೊಂಡೇ ಪಟ್ಟಿ ಮಾಡಲಾಗಿರುತ್ತದೆ. ಹೀಗಾಗಿ ಕೊನೆಯ ಹಂತದಲ್ಲಿಯೂ ಹೆಸರುಗಳು ಬದಲಾಗುವ ಸಾಧ್ಯತೆಗಳಿವೆ,” ಎಂದು ಸಿಎಂ ಕಚೇರಿ ಮೂಲಗಳು ಹೇಳುತ್ತಿವೆ.

ಹೊರಕ್ಕೆ ಯಾರು?

ಸದ್ಯ ಮಾಧ್ಯಮಗಳ ವರದಿ ಪ್ರಕಾರ, 13 ರಿಂದ 14 ಜನ ಸಂಪುಟದಿಂದ ಹೊರ ಹೋಗಲಿದ್ದಾರೆ. ಅವರ ಪಟ್ಟಿ ಹೀಗಿದೆ. ಶಾಮನೂರು ಶಿವಶಂಕರಪ್ಪ (ತೋಟಗಾರಿಕೆ), ಖಮರುಲ್ ಇಸ್ಲಾಂ (ಪೌರಾಡಳಿತ), ಶ್ರೀನಿವಾಸ ಪ್ರಸಾದ್ (ಕಂದಾಯ), ವಿನಯ್ ಕುಮಾರ್ ಸೊರಕೆ (ನಗರಾಭಿವೃದ್ಧಿ), ಪಿ.ಟಿ ಪರಮೇಶ್ವರ ನಾಯಕ್ (ಕಾರ್ಮಿಕ), ಶಿವರಾಜ್ ತಂಗಡಗಿ (ಸಣ್ಣ ನೀರಾವರಿ), ಸತೀಶ್ ಜಾರಕಿಹೊಳಿ (ಸಣ್ಣ ಕೈಗಾರಿಕೆ), ಅಂಬರೀಶ್ (ವಸತಿ), ಅಭಯ್ ಚಂದ್ರ ಜೈನ್ (ಕ್ರೀಡೆ) ಬಾಬೂರಾವ್ ಚಿಂಚನಸೂರು (ಜವಳಿ), ದಿನೇಶ್ ಗುಂಡೂರಾವ್ (ಆಹಾರ ಮತ್ತು ನಾಗರಿಕ ಸರಬರಾಜು), ಎಸ್.ಆರ್.ಪಾಟೀಲ್ (ಐಟಿ-ಬಿಟಿ), ಕಿಮ್ಮನೆ ರತ್ನಾಕರ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ).

ಯಾರು ಒಳಕ್ಕೆ?:

ಸದ್ಯ ಸಂಪುಟಕ್ಕೆ ಯಾರು ಸೇರಲಿದ್ದಾರೆ ಎನ್ನುವ ಬಗ್ಗೆ ನಿಖರ ಮಾಹಿತಿಗಳಿಲ್ಲ. ಸುಮಾರು 12 ಜನ ಹೊಸತಾಗಿ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ರುದ್ರಪ್ಪ ಮಾನಪ್ಪ ಲಮಾಣಿ (ಹಾವೇರಿ), ಸಂತೋಷ್ ಲಾಡ್ (ಕಲಘಟಗಿ), ಕಾಗೋಡು ತಿಮ್ಮಪ್ಪ (ಸಾಗರ), ಪ್ರಮೋದ್ ಮಧ್ವರಾಜ್ (ಉಡುಪಿ), ಪ್ರಿಯಾಂಕ ಖರ್ಗೆ (ಚಿತ್ತಾಪುರ), ಎಂ. ಕೃಷ್ಣಪ್ಪ (ವಿಜಯನಗರ), ರಮೇಶ್ ಕುಮಾರ್ (ಶ್ರೀನಿವಾಸಪುರ), ತನ್ವೀರ್ ಸೇಠ್ (ನರಸಿಂಹರಾಜ ಕ್ಷೇತ್ರ), ರಮೇಶ್ ಜಾರಕಿಹೊಳಿ (ಗೋಕಾಕ್), ಸಿ. ಎಸ್ ನಾಡಗೌಡ (ಮುದ್ದೇಬಿಹಾಳ), ಬಸವರಾಜ ರಾಯರೆಡ್ಡಿ (ಯಲಬುರ್ಗಾ), ಎಚ್.ವೈ.ಮೇಟಿ (ಬಾಗಲಕೋಟೆ) ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳಬೇಕಾಗಿದೆ.

ರಾಷ್ಟ್ರೀಯ ಮಾಧ್ಯಮಗಳು ಮಾತ್ರ ಕರ್ನಾಟಕದ ಸಂಪುಟ ಪುನರಾಚನೆ ಮುಂದಕ್ಕೆ ಹೋಗಿದೆ ಎಂದು ವರದಿ ಮಾಡುತ್ತಿವೆ. ‘ಸಿದ್ದರಾಮಯ್ಯ ಸಿದ್ಧಪಡಿಸಿದ ಸಚಿವರ ಪಟ್ಟಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ,’ ಎಂದು ‘ಇಂಡಿಯಾ ಟುಡೆ’ ಹೇಳಿದೆ.

ಹೀಗಾಗಿ, ನಿಖರವಾಗಿ ಸಂಪುಟಕ್ಕೆ ಯಾರು ಒಳಬರುತ್ತಾರೆ, ಹೊರಹೋಗುವವರು ಯಾರು ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟ. ಆದರೆ, ರಾಜ್ಯದಲ್ಲಿ ಹೊಸ ಸಂಪುಟ ಅಸ್ಥಿತ್ವಕ್ಕೆ ಬರುವುದು ಈವರೆಗಿನ ಬೆಳವಣಿಗೆಗಳು ಖಚಿತಪಡಿಸಿವೆ.

Top