An unconventional News Portal.

ಆಸ್ತಿ ಮಾರಾಟಕ್ಕೆ ನಿಂತ ‘ಶ್ರೀಮಂತ ಭಾರತೀಯರು’ ಮತ್ತು ಅವರ ಹಾಸಿಗೆ ಮೀರಿದ ಲೆಕ್ಕಾಚಾರಗಳು!

ಆಸ್ತಿ ಮಾರಾಟಕ್ಕೆ ನಿಂತ ‘ಶ್ರೀಮಂತ ಭಾರತೀಯರು’ ಮತ್ತು ಅವರ ಹಾಸಿಗೆ ಮೀರಿದ ಲೆಕ್ಕಾಚಾರಗಳು!

ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ ಪಂಗನಾಮ ಹಾಕಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಪ್ರಕರಣದ ಸುತ್ತ ಚರ್ಚೆಗಳು ನಡೆಯುತ್ತಿರುವಾಗಲೇ, ಆಸ್ತಿಗಿಂತ ಜಾಸ್ತಿ ಸಾಲ ಮಾಡಿಕೊಂಡಿರುವ ಕಾರ್ಪೋರೇಟ್ ಕಂಪೆನಿಗಳತ್ತ ರಿಸರ್ವ್ ಬ್ಯಾಂಕ್ ಚಾಟಿ ಬೀಸಿದೆ.

RBI-1ಭಾರತೀಯ ಬ್ಯಾಂಕ್ಗಳಲ್ಲಿ ವಸೂಲಿಯಾಗದ ಸಾಲ ಬೆಟ್ಟದಷ್ಟಿದೆ. ಇವುಗಳಲ್ಲಿ ದೈತ್ಯ ಕಾರ್ಪೋರೇಟ್ ಕಂಪೆನಿಗಳದ್ದೇ ಸಿಂಹ ಪಾಲು. ಕೃಷಿಗಾಗಿ ಬೆಳೆ ಸಾಲ ತೆಗೆದ ರೈತನದ್ದು ಏನಿದ್ದರೂ ಚಿಲ್ಲರೆ ಕಾಸು. ಹೀಗೆ ವಸೂಲಾಗದೆ ಉಳಿದ ಸಾಲದಲ್ಲಿ ಸುಮಾರು ಐದು ಲಕ್ಷ ಕೋಟಿ ಹಣವನ್ನು ಈ ವರ್ಷ ವಸೂಲಿ  ಮಾಡಲು ರಿಸರ್ವ್ ಬ್ಯಾಂಕ್ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಸಾಲ ನೀಡಿದ್ದ ಬ್ಯಾಂಕ್ಗಳು ಕಂಪೆನಿಗಳ ಮೇಲೆ ಮರುಪಾವತಿಗಾಗಿ ಒತ್ತಡ ಹೇರಲಾರಂಭಿಸಿವೆ.

ತಮ್ಮ ಕಂಪೆನಿಯ ಸ್ಥಿರಾಸ್ತಿ ಮೌಲ್ಯಕ್ಕಿಂತಲೂ ಹತ್ತಿಪ್ಪತ್ತು ಪಟ್ಟು ಸಾಲ ಎತ್ತಿರುವ ‘ಸೋ ಕಾಲ್ಡ್ ಸಿರಿವಂತ ಭಾರತೀಯರು’ ಈಗ ತಮ್ಮ ಇದ್ದ ಬದ್ದ ಆಸ್ತಿ ಮಾರಿ ಸಾಲ ಕಟ್ಟಲು ಹೊರಟಿದ್ದಾರೆ. ಈ ಆಸ್ತಿ ಮಾರಾಟದಲ್ಲಿ ವಿಮಾನ ನಿಲ್ದಾಣಗಳು, ಬಂದರು, ಉಕ್ಕು ಸ್ಥಾವರಗಳು, ತೈಲ ಶುದ್ದೀಕರಣ ಘಟಕಗಳು, ಕಲ್ಲಿದ್ದಲು ಗಣಿಗಳು, ಎಕ್ಸ್’ಪ್ರೆಸ್ ಹೈವೇಗಳು, ಹೋಟೆಲ್ಗಳು, ಖಾಸಗಿ ವಿಮಾನಗಳೆಲ್ಲಾ ಸೇರಿವೆ. ಕೆಲವರಂತೂ ಬೇರೆ ಬೇರೆ ಕಂಪೆನಿಗಳಲ್ಲಿ ಮಾಡಿರುವ ಹೂಡಿಕೆಗಳು ಮತ್ತು ಇಡೀ ಕಂಪೆನಿಯನ್ನೇ ಮಾರಾಟಕ್ಕೆ ಮುಂದಾಗಿದ್ದಾರೆ.

ಈ ಕುರಿತು ವರದಿ ಮಾಡಿರುವ ‘ದಿ ಹಿಂದೂ’ ಪತ್ರಿಕೆ ಸಾಲ ಮರುಪಾವತಿ ಬಾಕಿ ಉಳಿಸಿಕೊಂಡ ಟಾಪ್ 10 ಕಂಪೆನಿಗಳ ಪಟ್ಟಿ ಕೊಟ್ಟಿದೆ. ವಿಶೇಷ ಅಂದರೆ ಈ ಹತ್ತು ಕಂಪೆನಿಗಳು ಸೇರಿ ಸುಮಾರು 5 ಲಕ್ಷ ಕೋಟಿ ಸಾಲ ಬಾಕಿ ಉಳಿಸಿಕೊಂಡಿವೆ. ಈಗ ಅದರಲ್ಲಿ ಅನಿವಾರ್ಯವಾಗಿ 2 ಲಕ್ಷ ಕೋಟಿ ಮರುಪಾವತಿ ಮಾಡಬೇಕಾಗಿದೆ. ಬಾಕಿ ಉಳಿಸಿಕೊಂಡ ಕಂಪೆನಿಗಳು ಮತ್ತು ಅವುಗಳ ಸ್ಥಿರಾಸ್ಥಿ ಮೌಲ್ಯವನ್ನು ‘ಸಮಾಚಾರ’ ಗ್ರಾಫಿಕ್ಸ್ ವಿವರಿಸಿದೆ.

ಈ ಕಂಪೆನಿಗಳೂ ಅಲ್ಲದೇ ಇನ್ನೂ ಎರಡು ಕಂಪೆನಿಗಳು ಈ ಟಾಪ್ ಟೆನ್ ಲಿಸ್ಟ್’ನಲ್ಲಿವೆ. ಅವುಗಳಲ್ಲಿ ಒಂದು ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್. ಇದರ ಒಟ್ಟು ಸಾಲ 1,87,079 ಕೋಟಿ ರೂಪಾಯಿ. ಆದರೆ ಕಾಲ ಕಾಲಕ್ಕೆ ಬ್ಯಾಂಕ್ ಬಡ್ಡಿ ಕಟ್ಟುತ್ತಾ ಬರುತ್ತಿರುವ ಕಾರಣಕ್ಕೆ ಈ ಕಂಪೆನಿಯ ಬಗ್ಗೆ ಬ್ಯಾಂಕ್ಗಳು ಸೊಲ್ಲೆತ್ತುತ್ತಿಲ್ಲ.

ಎರಡನೆಯದು, ನೂರಾರು ಕಂಪೆನಿಗಳನ್ನು ನಡೆಸುವ ಟಾಟ ಗ್ರೂಪ್ನಿಂದಲೂ ಇದೇ ರೀತಿ ಸಾಲ ಬಾಕಿ ಇದೆ. ಬಾಕಿ ಉಳಿಸಿಕೊಂಡ ಸಾಲ ಕಟ್ಟುವ ಸಲುವಾಗಿಯೇ ಬ್ರಿಟನ್’ನಲ್ಲಿರುವ ಸ್ಟೀಲ್ ಘಟಕವನ್ನು ಟಾಟಾ ಮಾರಲು ಹೊರಟಿದೆ. ಇನ್ನೂ ಹಲವು ಕಂಪೆನಿಗಳು ಇದೇ ಹಾದಿಯಲ್ಲಿದ್ದು ತಮ್ಮ ಆಸ್ತಿಗಳನ್ನು ಮಾರಾಟಕ್ಕಿಟ್ಟಿವೆ.

ನವೀನ್ ಜಿಂದಾಲ್ ಮತ್ತು ಸಜ್ಜನ್ ಜಿಂದಾಲ್ ಒಡೆತನದ ಜಿಂದಾಲ್ ಗ್ರೂಪ್, ಡಿ.ಎಲ್.ಎಫ್ ಗ್ರೂಪ್, ಶ್ರೀ ರೇಣುಕಾ ಶುಗರ್ಸ್, ಸಹರಾ ಗ್ರೂಪ್ ಈ ಸಾಲಿನಲ್ಲಿ ನಿಲ್ಲುತ್ತವೆ. ಈ ಕಂಪೆನಿಗಳೂ ಭಾರೀ ಸಾಲ ಬಾಕಿ ಉಳಿಸಿಕೊಂಡಿದ್ದು ಮರುಪಾವತಿಗೆ ಆಸ್ತಿಗಳನ್ನು ಮಾರುವುದು ಅನಿವಾರ್ಯವಾಗಿದೆ.

‘ಸಾಲ ಮಾಡಿಯಾದ್ರೂ ತುಪ್ಪ ತಿನ್ನು’ ಎನ್ನುತ್ತದೆ ಗಾದೆ ಮಾತು. ಆದರೆ, ತುಪ್ಪ ತಿಂದವರು ಈಗ ವಾಪಾಸ್ ಕಕ್ಕಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅವರನ್ನೇ ಅಲ್ಲವಾ, ಶ್ರೀಮಂತ ಭಾರತೀಯರು ಎಂದು ಪಟ್ಟಿ ಮಾಡುತ್ತಿದ್ದದ್ದು?

New Microsoft Excel Worksheet

Top