An unconventional News Portal.

ಉಪಚುನಾವಣೆ: ‘ಕೈ’ಗೆ ನೆರವಾದ ಜಾತಿ ಸಮೀಕರಣ; ಕಮಲಕ್ಕೆ ಮುಳುವಾದ ಅಹಿಂದ ರಾಜಕಾರಣ

ಉಪಚುನಾವಣೆ: ‘ಕೈ’ಗೆ ನೆರವಾದ ಜಾತಿ ಸಮೀಕರಣ; ಕಮಲಕ್ಕೆ ಮುಳುವಾದ ಅಹಿಂದ ರಾಜಕಾರಣ

ಒಂದು ಕಡೆ ಜಾತಿ ಲೆಕ್ಕಾಚಾರ, ಮತ್ತೊಂದು ಕಡೆ ಚುನಾವಣಾ ತಂತ್ರಗಾರಿಕೆ. ನಡುವೆ ಒಂದಷ್ಟು ಭೀಕರ ಭಾಷಣ, ವ್ಯಕ್ತಿಗತ ನೆಲೆಯ ಆರೋಪಗಳು. ಕೊನೆಯಲ್ಲಿ ಯಥೇಚ್ಚ ಹಣದ ಹರಿಯುವಿಕೆ… ಫಲಿತಾಂಶ ವ್ಯರ್ಥ ಕಸರತ್ತಿನಂತೆ ಭಾಸವಾಗಿದ್ದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಜಯ.

ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಗೀತಾ ಮಹದೇವ ಪ್ರಸಾದ್ ಹಾಗೂ ಕಳಲೆ ಕೇಶವಮೂರ್ತಿ ಅವರುಗಳನ್ನು ಅಲ್ಲಿನ ಮತದಾರರು ಕೈ ಹಿಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ ಕಣ, ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಅಂತೆಲ್ಲಾ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಈ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಡೆ ಗೆಲುವಿನ ನಗೆ ಬೀರಿದೆ.

ಕಳೆದ ಒಂದು ತಿಂಗಳ ಅಂತರದಲ್ಲಿ ರಾಜ್ಯದ ಸಚಿವರು, ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು, ಉಬಯ ಪಕ್ಷಗಳ ಸಂಸದರು ಹೀಗೆ ನಾಯಕರ ದಂಡೇ ನೆರೆಯುವ ಮೂಲಕ ಚುನಾವಣೆಯ ಕಣಗಳನ್ನು ರಂಗೇರಿಸಿದ್ದರು. ಮಾಧ್ಯಮಗಳಲ್ಲಿಯೂ ನಿರಂತರ ವರದಿ, ವಿಶ್ಲೇಷಣೆಗಳಿಗೆ ಈ ಎರಡೂ ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆ ಜಾಗ ಪಡೆದುಕೊಂಡಿತ್ತು. ಆದರೆ ಅವುಗಳ ಫಲಿತಾಂಶದ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಂತೆ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.

ಗುಂಡ್ಲುಪೇಟೆ ವಿಚಾರ:

ಗೀತಾ ಮಹದೇವ ಪ್ರಸಾದ್.

ಗೀತಾ ಮಹದೇವ ಪ್ರಸಾದ್.

ಕರ್ನಾಟಕ ಮತ್ತು ತಮಿಳುನಾಡು, ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವ, ಸ್ವಾತಂತ್ರ್ಯದ ನಂತರ ಇಲ್ಲೀವರೆಗೂ ಕೇವಲ ಮೂರು ಶಾಸಕರನ್ನು ಕಂಡಿರುವ, ಲಿಂಗಾಯತರ ಮತಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿದ್ದ ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವ ಪ್ರಸಾದ್ 12, 077 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಪತಿ, ಸಹಕಾರಿ ಸಚಿವರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ಸಾವಿನಿಂದಾಗಿ ಅವರು ಈ ಚುನಾವಣಾ ಕಣಕ್ಕೆ ಇಳಿದಿದ್ದರು. ಒಂದು ಕಡೆ ಅನುಕಂಪದ ಅಲೆ, ಮತ್ತೊಂದು ಕಡೆ ಆಡಳಿತ ಪಕ್ಷದ ಹೆಜ್ಜೆ ಹೆಜ್ಜೆಯ ಬೆಂಬಲ ಅವರನ್ನು ಗೆಲುವಿನ ಹೊಸ್ತಿಲಿಗೆ ತಂದು ಬಿಟ್ಟಿದೆ. ಈ ಮೂಲಕ ಕಳೆದ ಬಾರಿ ಪತಿಯ ಗೆಲುವಿನ ಅಂತರವನ್ನೂ ಗೀತಾ ಮೀರಿಸಿದ್ದಾರೆ.

ಕಳೆದ ಚುನಾವಣೆಗಳನ್ನು ನೋಡಿದರೆ ಇಲ್ಲಿನ ಲಿಂಗಾಯತ ಮತಗಳು ಯಡಿಯೂರಪ್ಪ ಹಿಂದೆ ಇದ್ದಂತೆ ಕಂಡು ಬಂದಿದ್ದವು. ಹೀಗಾಗಿಯೇ, ಶಿಕಾರಿಪುರವನ್ನು ಮಗನಿಗೆ ಬಿಟ್ಟು ಕೊಟ್ಟು ಯಡಿಯೂರಪ್ಪ ಗುಂಡ್ಲಿಪೇಟೆಯಲ್ಲಿ ಚುನಾವಣೆಗೆ ನಿಲ್ಲಬಹುದು ಎಂಬ ವರದಿಗಳಾಗಿದ್ದವು. ಬಿಜೆಪಿಯ ಮತ್ತೊಬ್ಬ ಲಿಂಗಾಯತ ಸಮುದಾಯದ ನಾಯಕ ವಿ. ಸೋಮಣ್ಣ ಕೂಡ ಗುಂಡ್ಲುಪೇಟೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಸುದ್ದಿಗಳಾಗಿದ್ದವು. ಆದರೆ, ಅಪ್ಪಟ ಲಿಂಗಾಯತರಂತೆಯೇ ಬದುಕಿದ್ದ ಮಹದೇವ ಪ್ರಸಾದ್ ತಮ್ಮ ಸಮುದಾಯದವರ ಜತೆಗೆ ಅಹಿಂದ ಮತಗಳನ್ನು ಒತೆಗಿಟ್ಟುಕೊಂಡಿದ್ದರು. ಹೀಗಾಗಿಯೇ ಅವರು ನಿರಂತರವಾಗಿ ಕ್ಷೇತ್ರದಲ್ಲಿ ಗೆಲವು ಸಾಧಿಸಿಕೊಂಡು ಬಂದಿದ್ದರು.


Backgroud: ‘ಜುಗಾರಿ ಕ್ರಾಸ್’ನ ಸೋಲಿಲ್ಲದ ಸರದಾರ, ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಸಾವು


ಅವರಿಂದ ತೆರವಾದ ಸ್ಥಾನಕ್ಕೆ ಗೀತಾ ಅಭ್ಯರ್ಥಿ ಎಂದು ಘೋಷಿಸುತ್ತಿದ್ದ ಹಾಗೆ ಅನುಕಂಪದ ಅಲೆ ಚುನಾವಣೆಯನ್ನು ಗೆಲ್ಲಿಸಬಲ್ಲದು ಎಂದು ಎಲ್ಲಿರಿಗೂ ಅನ್ನಿಸಿತ್ತು ಕೂಡ. ಅದೀಗ ನಿಜವಾಗಿದೆ. ಗೀತಾ ಗೆದ್ದಿದ್ದಾರೆ. ಇನ್ನುಳಿದಿರುವುದು, ಸಿಎಂ ಸಿದ್ದರಾಮಯ್ಯ ಗುಂಡ್ಲುಪೇಟೆ ಜನರಿಗೆ ನೀಡಿದ ಆಶ್ವಾಸನೆಯಂತೆ ಅವರಿಗೆ ಸಚಿವೆ ಸ್ಥಾನ ನೀಡಬೇಕಿದೆ.

ನಂಜನಗೂಡಿನ ಸ್ವಾಭಿಮಾನ:

shrinivas-prasad-siddaramaiah

ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ದಲಿತರ ನರಮೇಧದ ನಂತರ ರಾಜಕೀಯ ಪ್ರವರ್ಧಮಾನಕ್ಕೆ ಬಂದವರು ಶ್ರೀನಿವಾಸ್ ಪ್ರಸಾದ್. ಹಿಂದೆ ಲಿಂಗಾಯತ ಸಮುದಾಯದ ವಿರುದ್ಧ ದಲಿತ ಸ್ವಾಭಿಮಾನಿಯಾಗಿ ಅವರು ಮಿಂಚಿದ್ದವರು. ಸಚಿವ ಸ್ಥಾನದಿಂದ ಕೈಬಿಟ್ಟ ಕಾರಣಕ್ಕೆ ಕಾಂಗ್ರೆಸ್ ತೊರೆದರು. ಹಲವು ಕಾರಣಗಳಿಗಾಗಿ ಬಿಜೆಪಿ ಅಡಿಯಲ್ಲಿ ಮತ್ತೆ ಚುನಾವಣೆಯನ್ನು ಎದುರಿಸಲು ಮುಂದಾದರು.


More Insights: ‘ಬದನವಾಳು’ವಿನಿಂದ ಬಿಜೆಪಿವರೆಗೆ: ಕುತೂಹಲ ಮೂಡಿಸಿರುವ ದಲಿತ ಹೋರಾಟಗಾರನ ‘ಲಿಂಗಾಯತ ಸಮೀಕರಣ’!


ಈ ಸಮಯದಲ್ಲಿ ಅವರು ಹೇಳಿದ ‘ಸ್ವಾಭಿಮಾನ’ ಮತ್ತು ‘ದುರಹಂಕಾರ’ ಎಂಬ ಎರಡು ಪದಗಳು ಇಡೀ ಚುನಾವಣೆಯ ಪ್ರಚಾರದ ವೈಖರಿಯನ್ನು ಬದಲಿಸಿದವು. ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಅವರನ್ನು ಬೆಂಬಲಿಸಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಕೂಡ ಕೀಳು ಭಾಷೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಆದರೆ ಕ್ಷೇತ್ರದ ಜನ ಶ್ರೀನಿವಾಸ್ ಪ್ರಸಾದ್ ಅವರ (ಬಹುಶಃ) ಕೊನೆಯ ಹೋರಾಟವನ್ನು ಸ್ವಾಭಿಮಾನ ನೆಲೆ ಎಂದು ದಲಿತ ಸಮುದಾಯ ಪರಿಭಾವಿಸಲೇ ಇಲ್ಲ. ಇತ್ತ ಲಿಂಗಾಯತ ಮತದಾರರು ತನ್ನ ‘ಸಾಂಪ್ರದಾಯಿಕ ಶತ್ರು’ ಪ್ರಸಾದರನ್ನು ಅತ್ತ ಬೆಂಬಲಿಸದೆ, ವಿರೋಧವನ್ನೂ ಮಾಡದೆ ತಟಸ್ಥರಾಗಿ ಉಳಿದು ಬಿಟ್ಟರು. ಅದರ ಪರಿಣಾಮವನ್ನು ಫಲಿತಾಂಶದ ಅಂತರ ಸಾರಿ ಹೇಳುತ್ತಿದೆ. ಅವರ ವಿರುದ್ಧ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ಕಳಲೆ ಕೇಶವಮೂರ್ತಿ 17, 560 ಮತಗಳ ಅಂತರದ ಭರ್ಜರಿ ಜಯ ದಾಖಲಿಸಿದ್ದಾರೆ.

ಜೆಡಿಎಸ್‌ ವಹಿಸಿದ ಪಾತ್ರ:

ಈ ಎರಡೂ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸದಿರಲು ತೆಗೆದುಕೊಂಡ ತೀರ್ಮಾನವೇ ಅರ್ಧ ಕಾಂಗ್ರೆಸ್‌ ಗೆಲುವಿಗೆ ಸೋಪಾನವಾಯಿತು. ವಿಶೇಷವಾಗಿ ನಂಜನಗೂಡಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿಯನ್ನು ನೀಡಿದ್ದು ಜೆಡಿಎಸ್‌. ಕಳಲೆ ಕೇಶವ ಮೂರ್ತಿ ಕಾಂಗ್ರೆಸ್ ಅಡಿಯಲ್ಲಿ ಚುನಾವಣೆಗೆ ಇಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಖುದ್ದಾಗಿ ಜಿಲ್ಲಾ ಜಿಡಿಎಸ್ ನಾಯಕರ ಮನೆಗೆ ಭೇಟಿ ನೀಡಿದರು. ದೇವೇಗೌಡ ಮನೆಗೆ ಕಾಲಿಡಲು ಹಿಂದೆ ಮುಂದೆ ನೋಡುವ ಸಿದ್ದರಾಮಯ್ಯ ಸ್ಥಳೀಯ ಜೆಡಿಎಸ್ ನಾಯಕ ಮನೆಗೆ ನೀಡಿದ ಭೇಟಿ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯದ ಫಲಿತಾಂಶ ನೋಡುತ್ತಿದ್ದರೆ, ಸಿದ್ದರಾಮಯ್ಯ ನಡೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ.

ತಂತ್ರಗಾರಿಕೆಯ ಜಯ:

ಕಾಂಗ್ರೆಸ್ ಗೆಲುವಿಗೆ ಇನ್ನುಳಿದ ಕಾರಣಗಳು ಸಿಗುವುದು ಅದರ ಚುನಾವಣಾ ಪ್ರಚಾರದ ತಂತ್ರಗಾರಿಕೆಯಲ್ಲಿ. ಡಿ. ಕೆ. ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್, ಯು. ಟಿ. ಖಾದರ್, ಎಂ. ಬಿ. ಪಾಟೀಲ್ ಹೀಗೆ ಪ್ರತಿ ಸಮುದಾಯಗಳನ್ನು ಪ್ರತಿನಿಧಿಸುವ ನಾಯಕರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಅವರ ಮೂಲಕ ಆಯಾ ಸಮುದಾಯಗಳ ಮತಗಳನ್ನು ಭದ್ರಮಾಡಿಕೊಳ್ಳುವ ಪ್ರಯತ್ನ ಮಾಡಿತು. ಇದರ ಜತೆಗೆ ತಳ ಸಮುದಾಯಗಳನ್ನು ತೃಪ್ತಗೊಳಿಸಲು ತಂತ್ರಗಳನ್ನು ಹೆಣೆದಿತ್ತು. ಉದಾಹರಣೆಗೆ ಉಪ್ಪಾರ, ನಾಯಕ, ಮಡಿವಾಳ ಸೇರಿದಂತೆ ಇತರೆ ಸಣ್ಣ ಸಮುದಾಯಗಳಿಂದ ಬಂದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಲಾಗಿತ್ತು. ಅದರ ಫಲವನ್ನು ಚುನಾವಣೆಯ ಮತಗಳ ರೂಪದಲ್ಲಿ ವಾಪಾಸ್ ಪಡೆಯಲಾಯಿತು.

ಪರಿಣಾಮ, ಸಿದ್ದರಾಮಯ್ಯ ತಮ್ಮ ಸ್ಥಳೀಯ ನೆಲೆಯಲ್ಲಿ ಜಾತಿ ಆಧಾರಿತ ಮತಗಳು ಕಾಂಗ್ರೆಸ್ ಜತೆಗೆ ಇವೆ ಮತ್ತು ತಮ್ಮ ನಾಯಕತ್ವ ಪ್ರಶ್ನಾತೀತವಾಗಿದೆ ಎಂಬುದನ್ನು ಗೆಲುವಿನ ಮೂಲಕ ಸಾಭೀತು ಪಡಿಸಿದ್ದಾರೆ. ಅಹಿಂದ ಮತಗಳನ್ನು ಒಗ್ಗೂಡಿಸಿಕೊಂಡೇ ಚುನಾವಣಾ ಅಖಾಡಕ್ಕೆ ಇಳಿಯುವ ಅವರ ತಂತ್ರಗಾರಿಕೆ ಫಲ ನೀಡಿದೆ. ಭವಿಷ್ಯದ ಭರವಸೆಯನ್ನೂ…

ಕೊನೆಯಲ್ಲಿ, ಬಿಜೆಪಿಯ ಸೋಲಿನಿಂದ ಪಾಠ ಕಲಿಯುವುದಾಗಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಲಿಂಗಾಯಿತ ಮತ್ತು ದಲಿತ ಮತಗಳ ಸಮೀಕರಣವನ್ನು ಹೆಣೆಯುವ ಅವರ ತಂತ್ರಗಾರಿಕೆ ಭಾರಿ ಪ್ರಮಾಣದಲ್ಲಿ ಮುಖಭಂಗವನ್ನು ಅನುಭವಿಸಿದೆ. ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರನ್ನು ತ್ರಿಶಂಕು ಸ್ಥಿತಿಗೆ ತಳ್ಳಿದ ಅವರ ಈ ತಂತ್ರಗಾರಿಕೆ ವಿಫಲವಾಗಿದ್ದನ್ನು ಬಹುಶಃ ಮುಂದಿನ ದಿನಗಳಲ್ಲಿ ಬಿಜೆಪಿ ಅರ್ಥ ಮಾಡಿಕೊಳ್ಳಬಹುದು. ಬೇರೆ ದಾರಿಗಳೇ ಇಲ್ಲದೆ, ಮತ್ತದೇ ‘ಹಿಂದುತ್ವ ನೆಲೆ’ಯ ರಾಜಕೀಯಕ್ಕೆ ಭಾರತೀಯ ಜನತಾ ಪಕ್ಷ ಮರಳಬಹುದು.

Leave a comment

Top