An unconventional News Portal.

ಡೈರಿ EXPOSE: ಕಾಂಗ್ರೆಸ್ ಎಂಎಲ್‌ಸಿ ಗೋವಿಂದರಾಜು ‘ಹೈಕಮಾಂಡ್ ವ್ಯವಹಾರ’ ಬಹಿರಂಗ

ಡೈರಿ EXPOSE: ಕಾಂಗ್ರೆಸ್ ಎಂಎಲ್‌ಸಿ ಗೋವಿಂದರಾಜು ‘ಹೈಕಮಾಂಡ್ ವ್ಯವಹಾರ’ ಬಹಿರಂಗ

ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಗೋವಿಂದರಾಜು ಮನೆಯಲ್ಲಿ ನಡೆದ ಐಟಿ ದಾಳಿ ವೇಳೆ ಸಿಕ್ಕ ‘ಡೈರಿ ಹಾಳೆ’ಗಳು ಕೊನೆಗೂ ದಿಲ್ಲಿಯಲ್ಲಿ ಬಿಡುಗಡೆಗೊಂಡಿವೆ.

ಗುರುವಾರ ಸಂಜೆ ವೇಳೆಗೆ ರಾಷ್ಟ್ರೀಯ ಮಾಧ್ಯಮಗಳು ಬಹುನಿರೀಕ್ಷೆ ಮೂಡಿಸಿದ್ದ ಡೈರಿಯ ಹಾಳೆಗಳಲ್ಲಿದ್ದ ರಾಜ್ಯ ಕಾಂಗ್ರೆಸ್‌ನ ‘ಹೈಕಮಾಂಡ್ ವ್ಯವಹಾರ’ಗಳ ವಿವರಗಳನ್ನು ಬಹಿರಂಗಗೊಳಿವೆ. ಉತ್ತರ ಪ್ರದೇಶ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ಇನ್ನೇನು 10 ಗಂಟೆಗಳ ಅವಧಿ ಇದೆ ಎನ್ನುವಾಗಲೇ ಬಹಿರಂಗಗೊಂಡಿರುವ ಈ ಮಾಹಿತಿ ಸಹಜವಾಗಿಯೇ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆ. ರಾಜ್ಯದಲ್ಲಿ ಇದರ ಪರಿಣಾಮ ಇನ್ನೊಂದೆರಡು ದಿನ ಜೋರಾಗಿಯೇ ಇರಲಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಕೆಲವು ದಿನಗಳ ಹಿಂದಷ್ಟೆ ಪತ್ರಿಕಾಗೋಷ್ಠಿ ನಡೆಸಿ ‘ಡೈರಿ’ ವಿಚಾರವನ್ನು ಪ್ರಸ್ತಾಪಿಸಿದ್ದರು. ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಲಂಚ ಪಡೆಯಲಾಗಿದೆ ಮತ್ತು ಹೈಕಮಾಂಡ್‌ಗೆ ಕಪ್ಪ ಕಾಣಿಕೆಯನ್ನು ರಾಜ್ಯ ಕಾಂಗ್ರೆಸ್‌ ಮುಖಂಡರು ಸಲ್ಲಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದಾದ ನಂತರ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಇದೇ ಡೈರಿಯ ಕುರಿತು ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ್ದನ್ನು ಸುದ್ದಿ ವಾಹಿನಿಯೊಂದರ ಕ್ಯಾಮೆರಾ ಸೆರೆ ಹಿಡಿದಿತ್ತು. ಅದು ನಂತರ ಕಾಂಗ್ರೆಸ್ ಪಡಸಾಲೆ ತಲುಪಿ ಸುದ್ದಿಗೋಷ್ಠಿಯ ಮೂಲಕ ಬಿಡುಗಡೆಗೊಂಡಿತ್ತು. ಚುನಾವಣೆಗೆ ವರ್ಷವಿದೇ ಎನ್ನುವಾಗಲೇ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ‘ಡೈರಿ- ಸಿಡಿ’ ವಿಚಾರದಲ್ಲಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದವು.


Related: ಅಯೋಗ್ಯರ ಸಂತೆಯಲ್ಲಿ ‘ಸಿಡಿ- ಡೈರಿ’ ರಾಜಕೀಯ: ಇದಕ್ಕಿಂತ ಹೆಚ್ಚಿಗೆ ಇನ್ನೇನು ನಿರೀಕ್ಷಿಸಲು ಸಾಧ್ಯ?


ಹೀಗಿರುವಾಗಲೇ, ಈಗ ದಿಲ್ಲಿಯಲ್ಲಿ ಐಟಿ ಇಲಾಖೆಯ ದಾಳಿಯ ವೇಳೆಯಲ್ಲಿ ಸಿಕ್ಕಿರುವ ಡೈರಿಯ ಪುಟಗಳು ಬಹಿರಂಗವಾಗಿವೆ. ಇವುಗಳಲ್ಲಿ ಇನಿಷಿಯಲ್ ರೂಪದಲ್ಲಿ ಹೆಸರುಗಳನ್ನು ನಮೋದಿಸಲಾಗಿದೆ. ಅವುಗಳ ಮುಂದೆ ಕೋಟಿಯಲ್ಲಿರುವ ಮೊತ್ತವನ್ನು ಬರೆಯಲಾಗಿದೆ. ಈ ಮೊತ್ತದಲ್ಲಿ ಎರಡು ರೀತಿಯ ವ್ಯವಹಾರ ನಡೆದಿರುವುದು ಡೈರಿಯಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಮೊದಲನೆಯದು, ಸಂಗ್ರಹವಾಗಿರುವ ಮೊತ್ತ…

cong-dairy-receive

ಹಣ ಸಂಗ್ರಹದ ವಿವರಗಳು ಉಲ್ಲೇಖವಾಗಿರುವ ರೀತಿ ಇದು.

ಎರಡನೆಯದು ಸಂದಾಯ ಮಾಡಿರುವ ಮೊತ್ತ…

ಹಣವನ್ನು ಸಂದಾಯ ಮಾಡಿರುವ ಕುರಿತು ಡೈರಿಯಲ್ಲಿ ಉಲ್ಲೇಖವಾಗಿರುವುದು ಹೀಗೆ.

ಹಣವನ್ನು ಸಂದಾಯ ಮಾಡಿರುವ ಕುರಿತು ಡೈರಿಯಲ್ಲಿ ಉಲ್ಲೇಖವಾಗಿರುವುದು ಹೀಗೆ.

 ಇದರ ಜತೆಗೆ, ಯಾರ್ಯಾರಿಂದ ಹಣವನ್ನು ಪಡೆಯಲಾಗಿದೆ ಎಂದು ವಿವರಗಳೂ ಡೈರಿಯಲ್ಲಿವೆ. ‘ಟೈಮ್ಸ್ ನೌ ವಾಹಿನಿ’ ನೀಡಿರುವ ಗ್ರಾಫಿಕ್ಸ್ ವಿವರ ಹೀಗಿದೆ: 

cong-dairy-1


cong-dairy-2


cong-dairy-3


ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂಎಲ್‌ಸಿ ಗೋವಿಂದರಾಜು, “ನನ್ನ ಮನೆಯ ಮೇಲೆ ದಾಳಿ ನಡೆದ ಸಮಯದಲ್ಲಿ ಯಾರೋ ಡೈರಿ ಬಿಟ್ಟು ಹೋಗಿರಬಹುದು. ಅದು ನನ್ನ ಕೈ ಬರಹ ಅಲ್ಲ,” ಎಂದಿದ್ದಾರೆ. ಐಟಿ ಅಧಿಕಾರಿಗಳು ದಾಳಿಯ ವೇಳೆ ಇಬ್ಬರು ಸ್ವತಂತ್ರ ಸಾಕ್ಷಿದಾರರ ಸಮ್ಮುಖದಲ್ಲಿಯೇ ಡೈರಿಯನ್ನು ವಶಕ್ಕೆ ಪಡೆಯಲಾಗಿತ್ತು ಎಂದು ರಾಷ್ಟ್ರೀಯ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಡೈರಿಯಲ್ಲಿ ಉಲ್ಲೇಖವಾಗಿರುವ ಇನಿಷಿಯಲ್‌ಗಳು ಯಾರ ಹೆಸರನ್ನು ಸೂಚಿಸುತ್ತವೆ ಎಂಬುದು ಊಹೆಗೆ ನಿಲುಕದ ಸಂಗತಿ ಏನಲ್ಲ. ಜತೆಗೆ, ಚುನಾವಣೆ ಸಮಯದಲ್ಲಿ ಮಾಧ್ಯಮಗಳನ್ನೂ (7 ಕೋಟಿ) ಸೇರಿ ಯಾರು, ಯಾರಿಗೆ ಹಣವನ್ನು ತಲುಪಿಸಲಾಗಿದೆ ಎಂಬ ಅಂಶಗಳು ಈ ಮೂಲಕ ಬಹಿರಂಗವಾಗಿವೆ.

ಈ ಹಿಂದೆ, ಸಹರಾ ಡೈರಿ ಹೊರಬೀಳುವ ಮೂಲಕ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ ಸಿಕ್ಕಿರುವ ಡೈರಿಯ ವಿಚಾರದಲ್ಲಿ ಬಿಜೆಪಿ ಅಖಾಡಕ್ಕೆ ಇಳಿಯಲು ದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿದೆ.

ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಮುನ್ಸೂಚನೆಗಳಿವು.

Top