An unconventional News Portal.

ಸಮಾಜದ ಸ್ವಾಸ್ಥ್ಯದ ಸಂಕೇತದಂತಿದ್ದವರು ಅಶೋಕ್ ಪೈ: ಒಂದು ನೆನಪು

ಸಮಾಜದ ಸ್ವಾಸ್ಥ್ಯದ ಸಂಕೇತದಂತಿದ್ದವರು ಅಶೋಕ್ ಪೈ: ಒಂದು ನೆನಪು

  •  ಅರವಿಂದ ಎಮ್. ಎಮ್,  ತುರುವೇಕೆರೆ

ಜನಮಾನಸದಲ್ಲಿ ಒಬ್ಬರಾಗಿದ್ದ ಅಶೋಕ್ ಪೈ, ಮೋಜಿನ ಕುದುರೆಯನ್ನು ಹತ್ತಿ ಹನ್ನೊಂದು ಕೇರಿ ಸುತ್ತಿ ಬಸವಳಿದ ನಮಗೆ ಸ್ವಾಸ್ಥ್ಯದ ಸಂಕೇತದಂತಿದ್ದರು. ಓದಿನ ಕಾಲು ಅನುಭವವನ್ನು, ಮುಕ್ಕಾಲು ಅಂದುಕೊಂಡು ಹೋದವರಿಗೆ ಜತೆಯಲ್ಲಿದ್ದವರು ಅವರು. ಅನುಭವ ಕೈ ಕೊಟ್ಟು, ಮನಸು ಮುದುಡಿದಾಗ ಆಪ್ತರಂತೆ ಕೈ ಹಿಡಿಯುತ್ತಿದ್ದವರು ಅಶೋಕ್ ಪೈ. ಎಷ್ಟೋ ಬಾರಿ ಮಾನಸಿಕ ತಜ್ಞರ ಬಳಿ ಎಡತಾಕುವಾಗ ಹುಟ್ಟಿಕೊಳ್ಳುವ ಆತಂಕ ಇವರ ಕಂಡೊಡನೆ ಸುಳಿಯದೇ ಹೋದ ಅನುಭವ ಹಲವು ಗೆಳೆಯರಿಗೆ ಆಗಿದೆ. ”ದೇವರು, ಆಚರಣೆಗಳು ಇಲ್ಲದಿದ್ದರೆ ದೇಶವೇ ಮಾನಸಿಕ ಆಸ್ಪತ್ರೆೆಗಳಿಂದ ತುಂಬಿ ಹೋಗುತ್ತಿತ್ತು,” ಎನ್ನುತ್ತಿದ್ದವರು ಮಾನಸಿಕ ತಜ್ಞ ಅಶೋಕ್ ಪೈ.

ಕೇವಲ ವೈದ್ಯ ಚಿಕಿತ್ಸೆ ಕ್ಷೇತ್ರಕ್ಕಷ್ಟೆ ಅವರು ಸೀಮಿತರಾಗಿರಲಿಲ್ಲ. ಅಂದ ಕಾಲದಲ್ಲಿ ಅವರು ನಿರ್ಮಿಸಿದ ‘ಕಾಡಿನ ಬೆಂಕಿ’ ಇಂದು ತಂತ್ರಜ್ಞಾನ ಬೆಳೆದ ಕಾಲದಲ್ಲೂ ಗಮನ ಸೆಳೆಯುತ್ತದೆ. ‘ಬೆಳ್ಳಿ ಮಂಡಲ’ ಅನ್ನುವ ಸಂಬಂಧ ಬೆಸೆದು, ಬದುಕಿನ ಕಲಿಸುವ ಮೇಷ್ಟ್ರಾಗಿದ್ದರು ಅವರು.

ಇವತ್ತು ಅವರು ಇನ್ನಿಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಅವರ ಆಸ್ಪತ್ರೆಯ ಆವರಣದಲ್ಲಿ ಕಾಣುವ ಜನ ಅವರು ಪ್ರತಿನಿಧಿಸಿದ ಸಮಾಜದ ಸಂಕೇತದಂತಿದೆ. ಸಮಾಜದ ಹಲವು ನೆಲೆಗಳಿಂದ ಘಾಸಿಗೊಳಪಟ್ಟ ಸಮುದಾಯದಂತೆಯೇ ಅವರೆಲ್ಲರೂ ಕಾಣಿಸುತ್ತಿದ್ದಾರೆ. ಅದು ಹೊರನೋಟಕ್ಕೆ ಮಾತ್ರವಾಗಿರದೆ ಅಶೋಕ್ ಪೈ ಸಮುದಾಯದೊಟ್ಟಿಗೆ ಬದುಕುತ್ತಿದ್ದ ರೀತಿಯಾಗಿಯೂ, ಜನಮಾನಸದಲ್ಲಿ ಬೆರೆತ ಬಗೆಯಾಗಿಯೂ ಕಾಣಿಸುತ್ತಿದೆ.

ನಮ್ಮೂರಿನ ಗೆಳೆಯನೊಬ್ಬ ಪುಸ್ತಕಗಳನ್ನು ಓದಿಕೊಂಡು, ಕೊನೆಗೆ ಗೊತ್ತು ಗುರಿ ಇಲ್ಲದಂತೆ ಆಗಿ ಅವರ ಬಳಿಗೆ ಹೋಗಿದ್ದ. ಅವನ ಒಳಗಿನ ಓದು, ಜ್ಞಾನ ಮತ್ತು ಮಿತಿಗಳನ್ನು ನಿಧಾನವಾಗಿ ಅರ್ಥ ಪಡಿಸಿ, ಹೊಸ ಲೋಕದತ್ತ ಆತನನ್ನು ಕೊಂಡೊಯ್ದಿದ್ದವರು ಅಶೋಕ್ ಪೈ. ಇನ್ಯಾರೋ ಪ್ರೇಮ ವೈಫಲ್ಯವಾಗಿ, ಇಡೀ ಬದುಕೇ ಹಾಳಾಗಿ ಹೋಯಿತು ಅಂದಾಗ ಬದುಕಿನ ಮಮತೆಯನ್ನು ಕಲಿಸಿದವರು ಇವರೇ.

ಬೆಂಗಳೂರು ಸುತ್ತ ಮುತ್ತ ಮಾನಸಿಕ ಚಿಕಿತ್ಸೆಯ ಅಗತ್ಯ ಇರುವವರಿಗೆ ಇವುನ್ಯಾವನೊ ನಿಮ್ಹಾನ್ಸ್ ಕೇಸು ಅಂತಾರೆ. ಶಿವಮೊಗ್ಗದ ಅಸುಪಾಸಿನ ಜನ ‘ಅಶೋಕ್ ಪೈ ಹತ್ತಿರ ತೋರುಸ್ಕಳಲೇ’ ಅನ್ನುತ್ತಾರೆ. ಅದು ತಮಾಷೆಯೇ ಆಗಿದ್ದರೂ, ಒಂದು ಹಂತದಲ್ಲಿ ಇವತ್ತು ಸಾಮಾಜಿಕವಾಗಿ ಅಗತ್ಯವಿರುವ ಮಾನಸಿಕ ಚಿಕಿತ್ಸೆ ಮತ್ತು ಅದಕ್ಕೆ ಅನುರೂಪಿಯಾದ ವ್ಯಕ್ತಿಯೊಬ್ಬರನ್ನು ಜನ ಸ್ಮರಿಸಿಕೊಳ್ಳುವ ಬಗೆಯನ್ನು ತೋರಿಸುತ್ತದೆ. ವ್ಯಕ್ತಿಯೊಬ್ಬರು ಭರವಸೆಯ ಮಾತಾಗಿ ಉಳಿದ ನಿದರ್ಶನ ಅಶೋಕರಿಗೆ ಮಾತ್ರ ಮೀಸಲು.

ಮನುಷ್ಯ ಆಲೋಚನಾ ಜೀವಿಯಾದಂತೆಯೇ ಆತನು ಸಮಾಜಕ್ಕೆ ಹಾಗೂ ತನ್ನ ಸುತ್ತ ಲಿನ ಪರಿಸರಕ್ಕೆ ಸಂಪನ್ನ  ನಾಗರೀಕನಾಗುವ ಜವಾಬ್ದಾರಿಯನ್ನು ಹೊರಬೇಕಾಗಿರುತ್ತದೆ. ಜನರ ಮಿಡಿತದೊಟ್ಟಿಗೆ ಬದುಕಿದ್ದ ಜನರ ಸ್ವಾಸ್ಥ್ಯವನ್ನು ಕಾಪಾಡುತ್ತ, ಅವರ ಬದುಕಿನ ಅಳತೆಗೋಲಿನಂತೆ ಬದುಕಿದವರು ಅಶೋಕ್ ಪೈ. ಅವರಿವತ್ತು ದೊಡ್ಡ ಸಂಖ್ಯೆಯಲ್ಲಿರುವ ಶಿಷ್ಯ ಬಳಗವನ್ನೇ ಉಳಿಸಿ ಹೋಗಿದ್ದಾರೆ. ಅದರಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳಲು ಸಂತಾಪ ಸೂಚಿಸಬೇಕಾದ ಈ ಸಮಯದಲ್ಲಿ ಹೆಮ್ಮೆ ಎನ್ನಿಸುತ್ತದೆ.

ಚಿತ್ರ: ಡೈಜಿ ವರ್ಲ್ಡ್

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top