An unconventional News Portal.

ಪಕ್ಷಭೇದ ಮರೆತು ಪುತ್ರ ಶೋಕ ಹಂಚಿಕೊಂಡವರು; ಮತ್ತು ನಾವು?

ಪಕ್ಷಭೇದ ಮರೆತು ಪುತ್ರ ಶೋಕ ಹಂಚಿಕೊಂಡವರು; ಮತ್ತು ನಾವು?

ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಸಾವಿನ ನೋವನ್ನು ರಾಜ್ಯದ ಮುಖ್ಯಮಂತ್ರಿ, ತಂದೆ, ‘ಕಾಂಗ್ರೆಸ್ ಪಕ್ಷದ’ ಸಿದ್ದರಾಮಯ್ಯ ಜತೆ ಪಕ್ಷಬೇಧ ಮರೆತು ಎಲ್ಲರೂ ಹಂಚಿಕೊಂಡಿದ್ದಾರೆ. ಈ ಮೂಲಕ ಸಾವಿನ ಮನೆಯಲ್ಲಿ ಮಾನವೀಯ ಸಂಬಂಧಗಳಿಗೆ ಇರುವ ಬೆಲೆಯನ್ನು ನಮ್ಮ ಜನಪ್ರತಿನಿಧಿಗಳು ತೋರಿಸಿಕೊಟ್ಟಿದ್ದಾರೆ. ಅಂತಃಕರಣವೇ ಸತ್ತು ಹೋದಂತಾಗಿರುವ ಈ ಕಾಲಘಟ್ಟದ ರಾಜಕಾರಣದಲ್ಲಿ ಇದೊಂದು ಅಪರೂಪ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ವಿಯೋಗದ ನೋವಿನಲ್ಲಿದ್ದಾಗ ‘ತಂದೆ’ಯ ನೋವಿಗೆ ಸಾಂತ್ವನ ಹೇಳಿದವರು ಸಾವಿರಾರು ಜನ. ಹಾಗೆ ಸಮಾಧಾನ ಹೇಳಿದವರಲ್ಲಿ ಪಕ್ಷಬೇಧ ಮರೆತು ಬಂದ ಬಿಜೆಪಿ, ಜೆಡಿಎಸ್ ನಾಯಕರು ಸೇರಿದಂತೆ ಅಕ್ಕ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಸೇರಿದ್ದರು. ಪಕ್ಷದೊಳಗಿನ ವಿರೋಧಿಗಳು, ಅಷ್ಟಾಗಿ ಆಗಿ ಬರದವರೂ ಸಾವಿನ ಸಂತಾಪದಲ್ಲಿ ಸಿದ್ಧರಾಮಯ್ಯ ಅವರೊಳಗಿನ ತಂದೆಯ ನೋವಿಗೆ ಜತೆಯಾಗಿ ನಿಂತಿದ್ದರು; ತಬ್ಬಿಕೊಂಡು ಧೈರ್ಯ ತುಂಬಿದರು. ಅದಕ್ಕಿಂತ ಹೆಚ್ಚಾಗಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಜತೆಗೆ ಕಣ್ಣೀರು ಹಾಕುವ ಮೂಲಕ ನೋವನ್ನು ಹಂಚಿಕೊಳ್ಳುವ ಹೃದಯ ವಿಶಾಲತೆಯನ್ನು ಮೆರೆದರು. ಬಹುಶಃ ಆ ಸಮಯದಲ್ಲಿ ಅವರಿಗೆ ತಮ್ಮ ಮಗನ ನೆನಪು ಮತ್ತು ಹಿಂದೊಮ್ಮೆ ತಾವು ಸಿದ್ದರಾಮಯ್ಯ ಅವರ ಜಾಗದಲ್ಲಿಯೇ ನಿಂತಿದ್ದ ನೆನಪು ಆಗಿರಬೇಕು. ಹಾಗೆ ಕಣ್ಣೀರು ಹಾಕಿದ ಜನಪ್ರತಿನಿಧಿಗಳ ಸಂಖ್ಯೆಯೇ ದೊಡ್ಡದಿತ್ತು.

ಅಂತಿಮ ದರ್ಶನಕ್ಕೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ರಾಜ್ಯಪಾಲ ವಜೂಬಾಯಿ ವಾಲಾ ಎಲ್ಲರೂ ತಂದೆಯ ನೋವಿಗೆ ಸಾಂತ್ವನ ಹೇಳಿದರು. ಸದ್ಯ ಮುಖ್ಯಮಂತ್ರಿಗಳ ಕಡುವೈರಿ ಎಂದು ಕರೆಸಿಕೊಳ್ಳುತ್ತಿರುವ ಎಚ್.ಡಿ ಕುಮಾರಸ್ವಾಮಿಯೂ ಅಂತಿಮ ದರ್ಶನ ಪಡೆದು ಸಾಂತ್ವನ ಹೇಳಿ ಬಂದರು. ಬಸವರಾಜ ಹೊರಟ್ಟಿಯಂತ ಸಿದ್ಧರಾಮಯ್ಯನವರ ಹಳೆ ಗೆಳೆಯರೆಲ್ಲಾ ಎಲ್ಲಾ ಬೇಸರ, ದುಖಃ ದುಮ್ಮಾನಗಳನ್ನು ಬದಿಗಿರಿಸಿ ಒಂದು ಸಣ್ಣ ಸಮಾಧಾನ ಹೇಳಿ ಹೋದರು.

ಪಕ್ಷದೊಳಗೇ ‘ಎಷ್ಟು ಬೇಕು ಅಷ್ಟೇ’ ಸಂಬಂಧ ಇದ್ದವರೂ ತಮ್ಮ ಸಹವರ್ತಿಯ ನೋವು ತಡೆದುಕೊಳ್ಳಲಾಗದೇ ತಾವೂ ಅತ್ತೇ ಬಿಟ್ಟರು. ಹೀಗೆ ಎಲ್ಲರೂ ಸಿದ್ದರಾಮಯ್ಯ ನೋವಿನಲ್ಲಿ ಅರೆಕ್ಷಣದ ನೋವನ್ನು ತಾವೂ ಅನುಭವಿಸಿದರು.

ಜೆಡಿಎಸ್ ಪಕ್ಷ ಬಿಟ್ಟು ಆ ಪಕ್ಷದ ಮೇಲೆ ಇವತ್ತು ಸಮರವನ್ನೇ ಸಾರಿದ್ದರೂ, ದೇವೇಗೌಡರೂ ಸಿದ್ದರಾಮಯ್ಯ ನೋವಿನಿಂದ ಬೇಗ ಚೇತರಸಿಕೊಳ್ಳಲಿ ಎಂದು ಆಶಿಸಿದರು. ಆರೋಗ್ಯದ ಸಮಸ್ಯೆ ಇಲ್ಲದಿದ್ದರೆ ನಾನೂ ಮೈಸೂರಿಗೆ ಹೋಗಿ ಸಿದ್ಧರಾಮಯ್ಯಗೆ ಒಂದಿಷ್ಟು ಸಮಾಧಾನ ಹೇಳಿ ಬರುತ್ತಿದ್ದೆ ಎಂಬ ಮಾತುಗಳು ಅವರ ಬಾಯಿಯಿಂದಲೂ ಹೊರ ಬಂತು. ಕೊನೆಗೆ ಸಿದ್ಧರಾಮಯ್ಯ ಬೆಂಗಳೂರಿಗೆ ಬರುತ್ತಿದ್ದಂತೆ ಬುಧವಾರ ಸಂಜೆ 7:30ರ ವೇಳೆಗೆ ದೇವೇಗೌಡರು ಕಾವೇರಿ ನಿವಾಸದಲ್ಲಿ ಸಿದ್ಧರಾಮಯ್ಯರನ್ನು ಭೇಟಿಯಾಗಿ ಸಮಾಧಾನವೂ ಹೇಳಿ ಬಂದರು. ಅನಾರೋಗ್ಯದ ಮಧ್ಯೆ ಬಂದವರು 45 ನಿಮಿಷ ಸಿದ್ದರಾಮಯ್ಯರೊಂದಿಗೆ ಕಳೆದು ಅವರ ಮನಸಿಗೊಂದಿಷ್ಟು ಸಮಾಧಾನ ಹೇಳಿದರು.

ಸ್ವತಃ ನರೇಂದ್ರ ಮೋದಿ ಟ್ವೀಟ್ ಮಾಡಿ ದೇವರಲ್ಲಿ ಸಿದ್ಧರಾಮಯ್ಯನವರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡು ಅಂತ ಬೇಡಿಕೊಂಡರು. ಅವರ ಟ್ವೀಟ್ಗಳಿಗೂ ವ್ಯಾಪಕ ಟೀಕೆಗಳು ಬಂದಿವೆ ಎಂಬುದನ್ನು ಈ ಸಮಯದಲ್ಲಿ ಗಮನಿಸಬೇಕು.

ಆದರೆ ಇಷ್ಟೆಲ್ಲಾ ನೋಡುತ್ತಿದ್ದ ಜನ, ವಿರೋಧ ಪಕ್ಷಗಳ ಅಂಧಾಭಿಮಾನಿಗಳು ಮಾತ್ರ ಸಾವಿನಲ್ಲೂ ಅಂಧಾಭಿಮಾನ ತೋರಿ ಬಿಟ್ಟರು. ಕೆಲವರಂತೂ ಸಾವನ್ನೂ ಸಂಭ್ರಮಿಸಿದರು.

ಸಾವಿನ ಬೆನ್ನಲ್ಲೇ ಸಿದ್ದರಾಮಯ್ಯ, ಅವರ ಕುಟುಂಬ, ಈ ಲೋಕದ ಯಾತ್ರೆ ಮುಗಿಸಿ ಹೊರಟು ಹೋದ ರಾಕೇಶ್ ಅವಹೇಳನ, ವೈಯಕ್ತಿಕ ತೇಜೋವಧೆಗೆ ಇಳಿದು ಬಿಟ್ಟರು. ರಾಕೇಶ್ ನಡತೆ ಸರಿ ಇಲ್ಲ ಎಂದು ನಿರೂಪಿಸಲು ಬೇರೆ ಬೇರೆ ಪ್ರಯತ್ನಗಳನ್ನು ನಿರಂತರವಾಗಿ ನಡೆಯಿತು. ಯಾವುದೋ ಪಾರ್ಟಿಯಲ್ಲಿದ್ದ ಫೋಟೋವನ್ನು ಬೆಲ್ಜಿಯಂನಲ್ಲಿ ತೆಗೆದಿದ್ದು ಎಂದು ಗಾಳಿ ಸುದ್ದಿ ಹಬ್ಬಿಸಲಾಯಿತು. ಸೆಕ್ಯುರಿಟಿ ಗಾರ್ಡ್ ಒಬ್ಬನ್ನು ಒದೆಯುತ್ತಿರುವ ವ್ಯಕ್ತಿ ರಾಕೇಶ್ ಎನ್ನಲಾಯಿತು. ಬೆಲ್ಜಿಯಂ ಮ್ಯೂಸಿಕ್ ಫೆಸ್ಟ್ ‘ಡ್ರಗ್ ಜಾತ್ರೆ’, ಅಲ್ಲಿಗೆ ಹೋಗಿದ್ದು ಯಾಕೆ ಎಂಬ ಪ್ರಶ್ನೆಗಳನ್ನು ಎತ್ತಿದರು. ಡಿ.ಕೆ. ರವಿಯವರ ತಾಯಿಯನ್ನು ಎಳೆದು ತಂದರು. ಅಧಿಕಾರಿಗಳ ಆತ್ಮಹತ್ಯೆ ಸಾವಿಗಾದ ಶಾಪ ಎಂದರು. ಹೀಗೆ ಏನೇನೋ ಬಂದು ಹೋಯಿತು.

ಕಾಂಗ್ರೆಸ್ ವಿರೋಧಿ ಪಕ್ಷಗಳ ಅಂಧ ಅಭಿಮಾನಿಗಳು ಈ ಕೃತ್ಯದಲ್ಲಿ ತೊಡಗಿದ್ದರೆ, ಅದೇ ಪಕ್ಷದ ನಾಯಕರೆಲ್ಲಾ ದೂರದ ಮೈಸೂರಿನವರೆಗೆ ಹೋಗಿ ಸಿದ್ದರಾಮಯ್ಯರನ್ನು ಬಿಗಿದಪ್ಪಿ ಸಾಂತ್ವನ ಹೇಳಿ ಬಂದರು.

ಯಾವತ್ತೂ ಕರುಣೆಯಿಲ್ಲ, ನೋವಿನ ಅರಿವಿಲ್ಲದ ಕಟುಕ ರಾಜಕಾರಣಿಗಳೆಂದು ಸಾರ್ವಜನಿಕವಾಗಿ ದೂಷಣೆಗೆ ಒಳಗಾಗುವ ಅಪ್ಪಟ ರಾಜಕಾರಣಿಗಳೇ ಸೌಜನ್ಯದಿಂದ ವರ್ತಿಸಿದರು. ತಮ್ಮ ಭಾವುಕತೆಯ ಮುಂದೆ ಎಲ್ಲವನ್ನೂ ಪಕ್ಕಕಿಟ್ಟರು. ಆದರೆ ರಾಜಕಾರಣಿಗಳನ್ನೇ ಹೀಗಳಿಯುವ ನಮಗೇ ಮಾತ್ರ ಇದರಿಂದ ಹೊರಬರಲಾಗಲೇ ಇಲ್ಲ. ಬದಲಾಗಬೇಕಾದವರು ಯಾರು? ಸಮಸ್ಯೆ ಇರುವುದು ಎಲ್ಲಿ?

ಪಕ್ಷಭೇದ ಮರೆತು ಪುತ್ರನ ಶೋಕಕ್ಕೆ ಕಂಬನಿ ಮಿಡಿದವರಾ? ಇಲ್ಲಾ ನಾವಾ? ಇಲ್ಲ ಇಬ್ಬರೂನಾ…

Top