An unconventional News Portal.

ನೋಟು ಬದಲಾವಣೆಗೆ ಜನರ ಸ್ಪಂದನೆ: ಹಾಸ್ಯಕ್ಕೆ ಮೊರೆಹೋದವರ ಕನ್ನಡದ ಅಭಿವ್ಯಕ್ತಿಗಳಿವು!

ನೋಟು ಬದಲಾವಣೆಗೆ ಜನರ ಸ್ಪಂದನೆ: ಹಾಸ್ಯಕ್ಕೆ ಮೊರೆಹೋದವರ ಕನ್ನಡದ ಅಭಿವ್ಯಕ್ತಿಗಳಿವು!

ನೋಟು ಬದಲಾವಣೆ ಪ್ರಕ್ರಿಯೆ ದೇಶಾದ್ಯಂತ ಈಗ ಚರ್ಚೆಗೆ ಗ್ರಾಸವಾಗಿದೆ. ಜನ ಸಾಮಾನ್ಯರು ಕಳೆದ 10 ದಿನಗಳಿಂದ ಬ್ಯಾಂಕುಗಳ ಮುಂದೆ ಸಾಲು ಗಟ್ಟಿ ನಿಂತಿದ್ದಾರೆ. ಈವರೆಗೆ 55 ಸಾವುಗಳಾಗಿವೆ. ಆರ್ಥಿಕ ಕ್ರಾಂತಿ ಹೆಸರಿನಲ್ಲಿ ಶುರುವಾದ ಈ ವಿದ್ಯಮಾನ ಈಗ ಸುಪ್ರಿಂ ಕೋರ್ಟ್ ಕೆಂಗಣ್ಣಿಗೂ ಗುರಿಯಾಗಿದೆ. ‘ದೇಶದಲ್ಲಿ ದಂಗೆಗಳು ಏಳಬಹುದು’ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಅನಿಸಿಕೆಗಳನ್ನು ತಿಳಿಸಿದೆ. ಪರಿಸ್ಥಿತಿ ಹೀಗೆ ಬಿಗಡಾಯಿಸುತ್ತಿರುವ ಸಮಯದಲ್ಲಿ, ನೋಟುಗಳ ಬದಲಾವಣೆ ಕುರಿತು ಅತೃಪ್ತಿಗಳನ್ನು ಹೊರಹಾಕಲು ಜನ ತಮ್ಮದೇ ಹಾದಿಯನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ಒಂದು- ಹಾಸ್ಯ.

ಟ್ವಿಟರ್ ಮತ್ತು ಇತರೆ ಮೈಕ್ರೊ ಬ್ಲಾಗ್ಗಳಲ್ಲಿ ನೋಟು ಬದಲಾವಣೆ ಕುರಿತು ಜೋಕುಗಳು ಹರಿದಾಡುತ್ತಿವೆ. ವಿಶೇಷವಾಗಿ ಕನ್ನಡದಲ್ಲಿ ಜನ ತಮ್ಮ ಕ್ರೀಯಾಶೀಲ ಅಭಿವ್ಯಕ್ತಿಗಳನ್ನು ಜೋಕುಗಳ ರೂಪದಲ್ಲಿ ಹರಿಯಬಿಡುತ್ತಿದ್ದಾರೆ. ಅಂತಹ ಕೆಲವು ತಮಾಷೆಯ ಅಭಿವ್ಯಕ್ತಿಗಳನ್ನು ‘ಸಮಾಚಾರ’ ಇಲ್ಲಿ ಪಟ್ಟಿ ಮಾಡಿದೆ.

ಈ ಅತಂತ್ರ ಪರಿಸ್ಥಿತಿಯಲ್ಲೂ ಒಮ್ಮೆ ಅವುಗಳನ್ನು ಓದಿ; ನಕ್ಕು ಬಿಡಿ…


ಸಣ್ಣ ಕಥೆ:

ಒಬ್ಬ ಕಳ್ಳ ಒಂದು ದಿನ ಒಂದು ಮನೆಗೆ ನುಗ್ಗಿದ. ಎಲ್ಲರೂ ಮಲಗಿದ್ದರು. ಎಲ್ಲರಿಗೂ ಎಚ್ಚರ ತಪ್ಪುವ ಔಷಧ ಕೊಟ್ಟ.
ತಿಜೋರಿ ತೆಗೆದು ನೋಡಿದ. ಬರೀ 500 ಹಾಗು 1000 ರೂ ನೋಟುಗಳು.

ಸಿಟ್ಟಿಗೆದ್ದ ಅವನು

ಮಲಗಿದ್ದ ಎಲ್ಲರ ಕೈಬೆರಳಿಗೆ ಮಸಿ ಹಚ್ಚಿ ಓಡಿ ಹೋದ .


“ಸಾರ್, ಈ ಇಂಕ್ ಮಾರ್ಕ್ನ್ನು ನೀರಿನಲ್ಲಿ ತೊಳೆದರೆ ಹೋಗುತ್ತಾ?”

“ಇಲ್ಲ”

“ಸೋಪಾಕಿ ತೊಳೆದರೆ ಹೋಗುತ್ತಾ?”

“ಇಲ್ಲ”

“ಶಾಂಪೂ ಹಾಕಿದ್ರೆ?”

“ಇಲ್ಲ”

“ಎಷ್ಟು ದಿನ ಇಂಕ್ ಉಳಿದುಕೊಳ್ಳುತ್ತೆ?”

“ಒಂದು ವರ್ಷ…”

“ಹಾಗಾದ್ರೆ ನನ್ನ ತಲೆಗೆ ಹಾಕಿ, ಈ ಹೇರ್ ಡೈ ಹಾಕಿ ಹಾಕಿ ಸುಸ್ತಾಗಿ ಹೋಗಿದೀನಿ” 


ಇದೀಗ ಬಂದ ಸುದ್ದಿ:

ಬ್ಯಾಂಕ್ ಗೆ ಬಂದವರ ಬೆರಳಿಗೆ ಹಚ್ಚುತ್ತಿರುವ ಶಾಹಿ ಗುರುತು ಅಳಿಸಿ ಹೋಗುತ್ತಿರುವುದರಿಂದ, ಬ್ಯಾಂಕಿಗೆ ಬರುವವರೆಲ್ಲರಿಗೆ
‘ಬರೆ ಎಳೆಯಲು’ ತೀರ್ಮಾನಿಸಲಾಗಿದೆ.
ನಾಳೆ ಹೊಸ ಸುದ್ದಿ ಬರಬಹುದು.

…ನಿರೀಕ್ಷಿಸಿ…


ಟಿವಿಯಲ್ಲಿ ಮೇರೆ ಪ್ಯಾರೇ ದೇಶ್ ವಾಸಿಯೋ ಬಾಯಿಯೋ/ ಬೆಹನೋ ಅಂತ ಕಿವಿಮೇಲೆ ಬಿದ್ದರೆ ನೆನಪಿಡಿ…
ಮತ್ತೊಂದು ಗುನ್ನ ರೆಡಿ ಆಗಿದೆ ಅಂತ ಅರ್ಥ…


ಕನಕ ಜಯಂತಿಯನ್ನು ಇವತ್ತು ನಿಜವಾಗ್ಲೂ ಆಚರಣೆ ಮಾಡಿದವರು ಬ್ಯಾಂಕ್ನವರು…
‘ಬಾಗಿ ಲನು ತೆರೆದು ಸೇವೆಯನ್ನು ಕೊಡೊ ಹರಿಯೇ’ ಅಂತ ಕನಕ ದಾಸರು ಹಾಡಿದ್ರಲ್ವಾ? ಅದನ್ನವರು ಅಕ್ಷರಶಃ ಪಾಲಿಸುತ್ತಿದ್ದಾರೆ. 


ಮಾನ್ಯ ಪ್ರಧಾನಮಂತ್ರಿಗಳಿಗೆ ಕುಡುಕರ ವಿನಂತಿ:

ಒಂದೋ ಬಾರ್ ನವರಿಗೆ ಹಳೆ ನೋಟು ತಗೊಳೋಕೆ ಹೇಳಿ, ಇಲ್ಲಾಂದ್ರೆ ಬ್ಯಾಂಕ್ ನಲ್ಲೇ ಸಾರಾಯಿ ಮಾರಾಟದ ವ್ಯವಸ್ಥೆ ಮಾಡಿ… ದಿನಾ ಎರಡೆರಡು ಕಡೆ ಕ್ಯೂ ನಿಲ್ಲಾಕ ನಮ್ ಕೈಲಿ ಆಗಲ್ಲ! 


ರಾತ್ರಿ ಎಲ್ರೂ ಮಲಗಿದ ಮೇಲೆ, ಒಂದೆರಡು ಗೋಣಿಚೀಲದಲ್ಲಿ ಹಳೇ ಪೇಪರ್ ತುಂಬಿ ಬೆಂಕಿ ಹಚ್ಚೋಣ ಅನ್ಕೋತಾ ಇದೀನಿ

ಏನಿಲ್ಲ ಅಂದ್ರೂ…

ಏರಿಯಾದಲ್ಲಿ ಮರ್ಯಾದೆ ಹೆಚ್ಚಾಗುತ್ತೆ !


10 ದಿನ ಪುರಸೊತ್ತೆ ಇಲ್ಲದೆ ಕೆಲಸ ಮಾಡಿದರೂ ಜ್ಞಾನ ತಪ್ಪದ ಕ್ಯಾಷಿಯರ್; ಒಬ್ಬಳು ಮಹಿಳೆ ನೋಟ್ ಎಕ್ಸಚೇಂಜ್ ಮಾಡಿದಾಗ 2000 ದ ಹೊಸ ಪಿಂಕ್ ನೋಟ್ ನೋಡಿ ಹೇಳಿದ ಮಾತು ಕೇಳಿ ಜ್ಞಾನ ತಪ್ಪಿದ..

ಆ ಮಾತು ಯಾವುದೆಂದರೆ.. “ಅಣ್ಣಾ…. ಬೇರೆ ಕಲರ್ ತೋರಿಸಿ…”


ಮದ್ವಿ ಸಲುವಾಗಿ ಎರಡೂವರಿ ಲಕ್ಷ ವಿಡ್ರಾ ಮಾಡಬಹುದು ಅಂತ ಸರಕಾರ ರೂಲ್ ಮಾಡಿದ ಕೂಡಲೇ ಧಾರವಾಡದ ಗುಂಡ್ಯಾ ಬ್ಯಾಂಕಿಗೆ ಓಡಿದ!!

ಗುಂಡ್ಯಾ: ಎರಡೂವರಿ ಲಕ್ಷ ಕೊಡ್ರಿ!

ಮ್ಯಾನೇಜರು: ಯಾಕಪ್ಪ? ಯಾರ ಲಗ್ನ ಐತಿ?

ಗುಂಡ್ಯಾ: ತುಳಸಿ ಲಗ್ನ ರೀ ಸರ!

ಎಚ್ಚರಾ ತಪ್ಪಿ ಬಿದ್ದ ಮ್ಯಾನೇಜರಪ್ಪ ಇನ್ನೂ ಎದ್ದಿಲ್ಲ!!


ಆತ: ಏನಾಗಿದೆ ಈ ಜನರಿಗೆ? ಮಾಲ್ನಲ್ಲಿ ಕ್ಯೂ ನಿಲ್ತಾರೆ, ಸಿನೆಮಾ ಟಿಕೆಟಿಗಾಗಿ ಕ್ಯೂ ನಿಲ್ತಾರೆ, ಬಸ್ ಪಾಸಿಗಾಗಿ ಕ್ಯೂ ನಿಲ್ತಾರೆ, ಪಟಾಕಿ ತಗೊಳ್ಳೊಕೆ ಕ್ಯೂ ನಿಲ್ತಾರೆ, ಮಕ್ಕಳ ಅಡ್ಮಿಷನ್ ಮಾಡಿಸಲು ಕ್ಯೂ ನಿಲ್ತಾರೆ… ಈಗ ದೇಶಕ್ಕಾಗಿ ಕ್ಯೂ ನಿಲ್ಲೋಕೆ ಆಗಲ್ಲ ಅಂತಿದಾರಲ್ಲ.

ಈತ: ನಿಜ ಕಣೋ, ನಾನು ಈ ಬ್ಯಾಂಕ್ ಮುಂದೆ ನಿಂತಿದೀನಿ. ಎಲ್ಲಿದೀಯಾ?

ಈತ: ವಾಷಿಂಗಟನ್ ಮಗ 


“ಇಲ್ಲಿಂದ ಬ್ಯಾಂಕ್ ಎಷ್ಟು ದೂರ ಇದೆ”

“ಎರಡು ಕಿ. ಮೀ ಆಗ್ಬಹುದು…”

“ಆಟೋದಲ್ಲಿ ಹೋಗೊದ, ಇಲ್ಲ ನಡಕೊಂಡೇ ಹೋಗ್ಬೋದಾ?”

“ಮೊದಲು ನನ್ನ ಹಿಂದೆ ಬಂದು ನಿಂತ್ಕೊ. ಇಲ್ಲಿರುವ ಎಲ್ಲರೂ ಅಲ್ಲಿಗೇ ಹೊರಟಿದ್ದಾರೆ. ನಿಂದೇನು ಸ್ಪೆಷಲ್?” 


 

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top