An unconventional News Portal.

ಆಮ್ ಆದ್ಮಿ ಕುಲುಮೆಯೊಳಗೆ ಅಸಮಾಧಾನದ ಕುದಿ: ಹೊರಬಿದ್ದ ನಾಯಕರ ನಡುವಿನ ‘ಶೀತಲ ಸಮರ’

ಆಮ್ ಆದ್ಮಿ ಕುಲುಮೆಯೊಳಗೆ ಅಸಮಾಧಾನದ ಕುದಿ: ಹೊರಬಿದ್ದ ನಾಯಕರ ನಡುವಿನ ‘ಶೀತಲ ಸಮರ’

ಅತ್ತ ಪಂಜಾಬ್ ಚುನಾವಣೆಯ ಕಾವು ಏರುತ್ತಿರುವ ಹೊತ್ತಿಗೆ ಕರ್ನಾಟಕದ ಆಮ್ ಆದ್ಮಿ ಪಕ್ಷದೊಳಗೆ ಅಸಮಾಧಾನ ಹೊಗೆಯಾಡಲು ಶುರುವಾಗಿದೆ. ಪಕ್ಷದ ರಾಜ್ಯ ಸಹಸಂಚಾಲಕ ರವಿಕೃಷ್ಣಾ ರೆಡ್ಡಿ ಅವರಿಗೆ ಪಕ್ಷದ ಹೊಣೆಗಾರಿಕೆಯಿಂದ ಕೆಲವು ದಿನಗಳ ಮಟ್ಟಿಗೆ ಹೊರಗಿಡಲು ಪಕ್ಷದ ರಾಜ್ಯ ಸಮಿತಿ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ಧಾರವಾಡದಲ್ಲಿ ‘ಪರ್ಯಾಯ ಚಳವಳಿ’ ಹುಟ್ಟು ಹಾಕಲು ನಡೆದ ಸಮಾರಂಭ ಮತ್ತು ಅದರಲ್ಲಿ ಪಾಲ್ಗೊಳ್ಳುವಿಕೆಯ ವಿಚಾರ.

ಪಕ್ಷದ ಈ ಆಂತರಿಕ ಬೇಗುದಿಯನ್ನು ಸ್ವತಃ ರವಿಕೃಷ್ಣಾ ರೆಡ್ಡಿ ಬಹಿರಂಗಪಡಿಸಿದ್ದಾರೆ. ಸದ್ಯ ಈ ಹೊಸ ಬೆಳವಣಿಗೆಯನ್ನು ಹುಡುಕಿಕೊಂಡು ಹೊರಟರೆ ಪಕ್ಷದ ರಾಜ್ಯ ಸಮಿತಿ ಒಳಗೆ ಕಳೆದ ಒಂದೆರಡು ವರ್ಷಗಳ ಅಂತರದಲ್ಲಿ ಹುಟ್ಟಿಕೊಂಡು ನಾಯಕರ ನಡುವಿನ ಶೀತಲ ಸಮರವೇ ಕಾರಣ ಎನ್ನಲಾಗುತ್ತಿದೆ.

ಹಿನ್ನೆಲೆ ಏನು?:

ಅಣ್ಣಾ ಹಜಾರೆ.

ಅಣ್ಣಾ ಹಜಾರೆ.

ಅಣ್ಣಾ ಹಜಾರೆ ನೇತೃತ್ವದಲ್ಲಿ 2011ರ ಸುಮಾರಿಗೆ ಶುರುವಾಗಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಭೂಮಿಕೆ ಸಿದ್ಧವಾಗಿದ್ದು ಬೆಂಗಳೂರಿನಲ್ಲಿ. ಮೊದಲು ‘ಭ್ರಷ್ಟಾಚಾರ ಸಾಕು’ ಎಂಬ ಬ್ಯಾನರ್ ಅಡಿಯಲ್ಲಿ ಬೆಂಗಳೂರಿನಲ್ಲಿ ಚಿಕ್ಕ ಮಟ್ಟದಲ್ಲಿ ಶುರುವಾದ ಕಾಲ್ನಡಿಗೆಯಲ್ಲಿ ಇವತ್ತು ದಿಲ್ಲಿ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಪಾಲ್ಗೊಂಡಿದ್ದರು. ನಂತರ ಅದನ್ನೇ ಬಳಸಿಕೊಂಡು ದೇಶದ ಮಟ್ಟದಲ್ಲಿ ನಾನಾ ಶಕ್ತಿಗಳನ್ನು ಒಗ್ಗೂಡಿಸಿ ‘ಭ್ರಷ್ಟಾಚಾರದ ವಿರುದ್ಧ ಭಾರತ’ (ಐಎಸಿ)ಯನ್ನು ಹುಟ್ಟು ಹಾಕಲಾಗಿತ್ತು. ಅಣ್ಣಾ ಹಜಾರೆ ಅದರ ಪ್ರೇರಕ ಶಕ್ತಿಯಾಗಿದ್ದರು. ಅವತ್ತಿನ ಯುಪಿಎ ಸರಕಾರದ ವಿರುದ್ಧ, ಜನಲೋಕಪಾಲ ಕಾಯ್ದೆಗಾಗಿ ನಿರ್ಣಾಯಕ ಹಂತದಲ್ಲಿ ಹೋರಾಟ ನಡೆದಿತ್ತು. ನಂತರ ಐಎಸಿ ಒಳಗಿನ ಒಂದು ಗುಂಪು ಕೊನೆಗೆ ಆಮ್ ಆದ್ಮಿ ಪಕ್ಷವನ್ನು ಹುಟ್ಟು ಹಾಕಿ ದಿಲ್ಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೇರಿದ್ದು ಇದೀಗ ಇತಿಹಾಸ.

ಹೀಗೆ, ಸಂಘರ್ಷದ ಹಾದಿಯಲ್ಲಿಯೇ ಹುಟ್ಟಿಕೊಂಡ ಪರ್ಯಾಯ ರಾಜಕೀಯ ಪಾರ್ಟಿ ಆಮ್ ಆದ್ಮಿ ಪಕ್ಷ 2015ರಲ್ಲಿ ದಿಲ್ಲಿಯ ವಿಧಾನಸಭೆಯಲ್ಲಿ ಎರಡನೇ ಬಾರಿಗೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರಿತು. ಅದಾದ ಬೆನ್ನಿಗೇ ಪಕ್ಷದ ಇಬ್ಬರು ಹಿರಿಯ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರುಗಳನ್ನು ಪಕ್ಷದಿಂದ ಹೊರಗೆ ಕಳುಹಿಸಲಾಯಿತು. “ಅದೊಂದು ಸೈದ್ಧಾಂತಿಕ ಸಂಘರ್ಷಗಳಿಗೆ ಕಾರಣವಾದ ಅಂಶ. ಕರ್ನಾಟಕದಲ್ಲಿ ಒಂದಷ್ಟು ಮಂದಿ ಯೋಗೇಂದ್ರ ಯಾದವ್ ಜತೆಗೆ ಹೋದರೂ, ಉಳಿದವರು ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡು ಇಲ್ಲಿಯೇ ಉಳಿದರು,” ಎಂದು ನೆನಪಿಸಿಕೊಳ್ಳುತ್ತಾರೆ ಪಕ್ಷದ ಹಿರಿಯ ನಾಯಕರೊಬ್ಬರು.

ಹಾಗೆ ಉಳಿದುಕೊಂಡ ನಾಯಕರ ನಡುವೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದ್ದವು. ವಿಶೇಷವಾಗಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಸಹ ಸಂಚಾಲಕ ರವಿಕೃಷ್ಣಾ ರೆಡ್ಡಿ ನಡುವೆ ಶೀತಲ ಸಮರವೊಂದು ನಡೆದುಕೊಂಡು ಬಂದಿತ್ತು. “ರವಿಕೃಷ್ಣಾ ರೆಡ್ಡಿ ಪಕ್ಷವನ್ನು ಸಾಮಾಜಿಕವಾಗಿ ಪ್ರತಿನಿಧಿಸುತ್ತಿದ್ದವರು. ಪೃಥ್ವಿ ರೆಡ್ಡಿ ಆಂತರಿಕವಾಗಿ ಪಕ್ಷವನ್ನು ಕಟ್ಟುವ ಶಕ್ತಿ ಹೊಂದಿರುವವರು. ಜತೆಗೆ ದಿಲ್ಲಿ ನಾಯಕರಿಗೆ ಹೆಚ್ಚು ಹತ್ತಿರದಲ್ಲಿರುವವರು. ಇಬ್ಬರ ನಡುವೆ ನಾಯಕತ್ವದ ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತು,” ಎನ್ನುತ್ತವೆ ಪಕ್ಷದ ಮೂಲಗಳು.

ಯಾಕೆ ಶಿಸ್ತು ಕ್ರಮ?:

ಧಾರವಾಡದಲ್ಲಿ ನಡೆದ ಜನ ಪರ್ಯಾಯ.

ಧಾರವಾಡದಲ್ಲಿ ನಡೆದ ಜನ ಪರ್ಯಾಯ.

ಹೀಗಿರುವಾಗಲೇ, ಕೆಲವು ದಿನಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಪರ್ಯಾಯ ಚಳವಳಿಗಳನ್ನು ಹುಟ್ಟು ಹಾಕುವ ಕುರಿತು ಧಾರವಾಡದಲ್ಲಿ ನಾನಾ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಕೂಡ ಪಾಲ್ಗೊಂಡಿದ್ದರು. “ಯಾದವ್ ಈಗಾಗಲೇ ‘ಸ್ವರಾಜ್ ಅಭಿಯಾನ’ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ದಿಲ್ಲಿಯ ಆಮ್ ಆದ್ಮಿ ಪಕ್ಷದ ವಿರುದ್ಧ ಆಗಾಗ್ಗೆ ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಹೀಗಿರುವಾಗ ಪರ್ಯಾಯ ಚಳವಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ನಾವು ನಿರ್ಧರಿಸಿದ್ದೆವು,” ಎನ್ನುತ್ತಾರೆ ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು.

ಆದರೆ, ಹಿಂದೆ ಅಮೆರಿಕಾದಲ್ಲಿ ಇದ್ದು, ನಂತರ ವೈಯಕ್ತಿಕ ನೆಲೆಯಲ್ಲಿ ಹೋರಾಟಗಳನ್ನು ಮಾಡಿಕೊಂಡು ಲೋಕಸತ್ತಾ ಪಕ್ಷದಿಂದ ಆಮ್ ಆದ್ಮಿ ಪಕ್ಷಕ್ಕೆ ಬಂದಿದ್ದ ರವಿಕೃಷ್ಣಾ ರೆಡ್ಡಿ ಧಾರವಾಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. “ಅದು ಪರ್ಯಾಯ ರಾಜಕಾರಣದ ಕಾರ್ಯಕ್ರಮವಲ್ಲ. ಎಲ್ಲರೂ ಒಗ್ಗೂಡಿ ಪರ್ಯಾಯವನ್ನು ಹೇಗೆ ನಿರ್ಮಿಸಬೇಕು ಎಂಬ ಕುರಿತು ನಡೆದ ವಿಚಾರ ಸಂಕಿರಣ. ಅದರಲ್ಲಿ ಪಾಲ್ಗೊಂಡಿದ್ದು ನನ್ನ ವೈಯಕ್ತಿಕ ತೀರ್ಮಾನ ಅಷ್ಟೆ. ಅದರಲ್ಲಿ ಪಕ್ಷ ವಿರೋಧಿ ಚಟುವಟಿಕೆ ಏನಿದೆ?” ಎನ್ನುತ್ತಾರೆ ರವಿಕೃಷ್ಣಾ ರೆಡ್ಡಿ.

ಶೀತಲ ಸಮರ: 

ಧಾರವಾಡದ ಕಾರ್ಯಕ್ರಮ ಬೆನ್ನಿಗೇ ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯ ಸಮಿತಿ ಸಭೆಯಲ್ಲಿ ರವಿಕೃಷ್ಣಾ ರೆಡ್ಡಿ ವಿರುದ್ಧ ‘ಪಕ್ಷ ವಿರೋಧಿ ಚಟುವಟಿಕೆ’ ಅಡಿಯಲ್ಲಿ ಶಿಸ್ತು ಕ್ರಮವನ್ನು ಜರುಗಿಸಲಾಯಿತು. “ರವಿಕೃಷ್ಣಾ ರೆಡ್ಡಿ ಮತ್ತು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ನಡುವೆ ಹಿಂದಿನಿಂದಲೂ ಇದ್ದ ಶೀತಲ ಸಮರವೂ ಇದರ ಮೇಲೆ ಪರಿಣಾಮಗಳನ್ನು ಬೀರಿರಬಹುದು,” ಎನ್ನುತ್ತವೆ ಪಕ್ಷದ ಮೂಲಗಳು. ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಈ ಇಬ್ಬರ ನಾಯಕರ ನಡುವೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಅದೀಗ ಪಕ್ಷ ವಿರೋಧಿ ಚಟುವಟಿಕೆ ಹೆಸರಿನಲ್ಲಿ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ.

“ಅವರನ್ನು ಪಕ್ಷದಿಂದ ಹೊರಗೆ ಕಳುಹಿಸಿಲ್ಲ. ಬದಲಿಗೆ ರಾಜ್ಯ ಸಹಸಂಚಾಲಕ ಹೊಣೆಗಾರಿಕೆಯನ್ನು ನಿರ್ವಹಿಸದಂತೆ ನಿರ್ಭಂದ ವಿಧಿಸಲಾಗಿದೆ. ಇದು ಒಂದು ರೀತಿಯ ತಂತ್ರಗಾರಿಕೆ,” ಎಂಬುದು ಪಕ್ಷದ ಸ್ಥರಗಳನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿರುವ ಮಾತು.

ಸದ್ಯ ದಿಲ್ಲಿಯಲ್ಲಿ ಅಧಿಕಾರ ನಡೆಸುತ್ತಲೇ ಪಂಜಾಬ್ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷ ತನ್ನದೇ ತಂತ್ರಗಾರಿಕೆಯಲ್ಲಿ ಮುಳುಗಿದೆ. ಕ್ರಿಕೆಟಿಗ ನವೋಜಿತ್ ಸಿಂಗ್ ಸಿದ್ದು ಹಾಗೂ ಹಾಕಿ ಕ್ರೀಡಾಪಟು ಅಕಾಲಿದಳದ ಪ್ರಗತ್ ಸಿಂಗ್‌ ಅವರುಗಳನ್ನು ಪಕ್ಷಕ್ಕೆ ಕರೆತರುವ ಪ್ರಯತ್ನದಲ್ಲಿದೆ. ಈ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ರಾಜ್ಯವೊಂದರಲ್ಲಿ ಅಧಿಕಾರಕ್ಕೆ ಬರುವ ಆಶಯ ಹೊಂದಿದೆ.

ಈ ಸಮಯದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಪಕ್ಷದ ಕಾರ್ಯಕರ್ತರಲ್ಲಿ ನಿರಾಶೆಯನ್ನು ಹುಟ್ಟು ಹಾಕಿದೆ. “ಮೊದಲಿನಿಂದಲೂ ಹೀಗೆಯೇ. ಎಲ್ಲವೂ ಸರಿಯಾಗಿದೆ, ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುವಾಗಲೇ ಪಕ್ಷದೊಳಗೆ ಒಂದಿಲ್ಲೊಂದು ವಿಚಾರಗಳು ಮುನ್ನೆಲೆಗೆ ಬರುತ್ತವೆ. ನಾಯಕರ ನಡುವಿನ ಕಚ್ಚಾಟದಿಂದ ಕಾರ್ಯಕರ್ತರು ಕಂಗಾಲಾಗುವಂತೆ ಆಗುತ್ತಿದೆ,” ಎನ್ನುತ್ತಾರೆ ಆಮ್ ಆದ್ಮಿ ಪಕ್ಷದ ತಳಮಟ್ಟದ ಕಾರ್ಯಕರ್ತರೊಬ್ಬರು.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top