An unconventional News Portal.

ಮೀಟ್ ಮಿಸ್ ಕಾಜಲ್: ಕರಾವಳಿ ಕರ್ನಾಟಕದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ!

ಮೀಟ್ ಮಿಸ್ ಕಾಜಲ್: ಕರಾವಳಿ ಕರ್ನಾಟಕದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ!

ನೀವು ಕರಾವಳಿ ಕರ್ನಾಟಕದವರಾಗಿದ್ದರೆ, ನಿಮಗೆ 107.8 ಸಮುದಾಯ ರೇಡಿಯೋ ಬಗ್ಗೆ ಮಾಹಿತಿ ಇರುತ್ತದೆ. ಸೈಂಟ್ ಅಲೋಶಿಯಸ್ ಕಾಲೇಜು ನಡೆಸುವ ಸಮುದಾಯ ರೇಡಿಯೋ ಇದು. ಅದರಲ್ಲೀಗ ಪ್ರತಿ ಮಂಗಳವಾರ ಸಂಜೆ ಐದರಿಂದ ಆರು ಗಂಟೆಗೆ ಪ್ರಸಾರವಾಗುವ ‘ಶುಭ ಮಂಗಲ’ ಎಂಬ ಕಾರ್ಯಕ್ರಮದಲ್ಲಿ ಒಂದು ದನಿ ಕೇಳಿಬರಲಾರಂಭಿಸಿದೆ. ಅಂದ ಹಾಗೆ, ಆ ದನಿಯ ಹಿಂದಿರುವುದು ಗಂಡು ಅಲ್ಲ, ಹೆಣ್ಣು ಅಲ್ಲ; ಬದಲಿಗೆ ಮಂಗಳಮುಖಿ. ಈ ಮೂಲಕ ಕರಾವಳಿ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಟ್ರಾನ್ಸ್ ಜಂಡರ್ ಸಮುದಾಯದ ಯುವತಿಯೊಬ್ಬರು ಮೊದಲ ಬಾರಿಗೆ ರೇಡಿಯೋ ಎಂಬ ಪ್ರಭಾವಿ ಮಾಧ್ಯಮದಲ್ಲಿ ಜಾಕಿಯಾಗಿ ಕೆಲಸ ಶುರುಮಾಡಿದ್ದಾರೆ.

ಹೆಸರು ಕಾಜಲ್. ಜನಿಸಿದ್ದು ಮಂಡ್ಯದ ಪುಟ್ಟ ಹಳ್ಳಿಯೊಂದರಲ್ಲಿ. ಶಾಲೆಗೆ ಹೋಗುತ್ತಿದ್ದ ಕಾಜಲ್ ಮನೆಯವರ ಪಾಲಿಗೆ, ಊರ ಜನರ ಪಾಲಿಗೆ ಹುಡುಗ. ಆದರೆ ಅಂತರಾಳದಲ್ಲಿ ಹೆಣ್ತನಗಳು ಅರಳತೊಡಗಿದ್ದವು. ಹೆಚ್ಚು ಕಡಿಮೆ, ಎಲ್ಲಾ ತೃತೀಯ ಲಿಂಗಿಗಳು ಆರಂಭ, ಬೆಳವಣಿಗೆಯಂತೆಯೇ ಕಾಜಲ್ ಬದುಕು ಕೂಡ ಸಾಗಿ ಬಂದಿದೆ.

“ನಾನು ಇತರರಿಗಿಂತ ವಿಭಿನ್ನವಾಗಿದ್ದನೆಂದು ನನಗೆ ಬಾಲ್ಯದಲ್ಲಿಯೇ ಗೊತ್ತಾಯಿತು. ನನ್ನ ವಯಸ್ಸಿನ ಹುಡುಗರೊಂದಿಗೆ ನನಗೆ ಯಾವತ್ತೂ ಬೆರೆಯಲಾಗಲಿಲ್ಲ. ಅವರೆಲ್ಲ ಕ್ರಿಕೆಟ್, ಫುಟ್ಬಾಲ್ ಮತ್ತು ಕುಸ್ತಿಯನ್ನು ಆಡುತ್ತಿದ್ದರು. ನಾನು ಹುಡುಗಿಯರ ಜೊತೆ ಮಾತನಾಡುತ್ತ, ಹಾಡುತ್ತ ಮತ್ತು ಚಿತ್ರಗೀತೆಗಳಿಗೆ ನೃತ್ಯ ಮಾಡುತ್ತಿದ್ದೆ,” ಎಂದು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾರೆ ಕಾಜಲ್.

ಆದರೆ, ಸಮಾಜ ತೃತೀಯ ಲಿಂಗಿಗಳ ಈ ಬದಲಾವಣೆಯನ್ನು ಅಷ್ಟು ಸುಲಭಕ್ಕೆ ಒಪ್ಪುವುದಿಲ್ಲ. ಮೊದಲು ವಿರೋಧ, ಬೆನ್ನಲ್ಲೇ ಕುಹಕ ನಂತರ ಮನೆಯವರ ಅಳು ಹೀಗೆ ಕಾಜಲ್ ಬದುಕಲ್ಲಿಯೂ ಅಡೆತಡೆಗಳಿಗೇನೂ ಕಡಿಮೆ ಇರಲಿಲ್ಲ. ಶಾಲೆಯಲ್ಲಿ ಹುಡುಗಿಯರ ಜೊತೆ ಕುಳಿತೊಳ್ಳುತ್ತಿರುವುದಕ್ಕೆ ಒಮ್ಮೆ ಗಣಿತ ಶಿಕ್ಷಕರು ವಿರೋಧ ವ್ಯಕ್ತಪಡಿಸುತ್ತಾರೆ. ಅಲ್ಲಿಂದ ಆಚೆಗೆ ಕಾಜಲ್ ಶಾಲೆಯನ್ನೇ ತೊರೆಯುತ್ತಾರೆ. ಈ ಸಮಯದಲ್ಲಿ ತನ್ನಂತೆಯೇ ಗಂಡಾಗಿ ಹುಟ್ಟಿ, ಹೆಣ್ಣಾಗಿ ಬೆಳೆಯುವ ತೃತೀಯ ಲಿಂಗಿಗಳ ಸಂಪರ್ಕಕ್ಕೆ ಬರುತ್ತಾರೆ. ಅವರ ಜತೆಗೊಂದು ಸಂವಹನ ಪ್ರಾರಂಭವಾಗುತ್ತದೆ. ಮಂಡ್ಯದಲ್ಲಿ ತೃತೀಯ ಲಿಂಗಿಗಳ ಸಮುದಾಯದ ಜತೆಗೆ ಕೆಲಸ ಮಾಡುವ ಮಹಾದೇವಿ ಸಂಪರ್ಕಕ್ಕೆ ಬರುವ ಮೂಲಕ ಕಾಜಲ್ ಬದುಕು ಬದಲಾಗುತ್ತದೆ.

“ಜನರು ಜಾತಿ ಧರ್ಮ, ಕುಲ ಗೋತ್ರ ಮತ್ತು ಸ್ಥಾನಮಾನಗಳ ಸಂಕೀರ್ಣತೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಟ್ರಾನ್ಸ್ ಜೆಂಡರ್ ಕಮ್ಯೂನಿಟಿಯಲ್ಲಿ ಅದ್ಯಾವುದನ್ನೂ ಕೇಳುವುದಿಲ್ಲ. ಮುಂದೇ ಏನಾಗಬೇಕು ಎನ್ನುವುದಷ್ಟೇ ಇಲ್ಲಿ ಮುಖ್ಯವಾಗಿರುತ್ತದೆ,” ಎಂದು ಕಾಜಲ್ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಮನೆಯವರ ವಿರೋಧ, ಸುತ್ತಮುತ್ತಲಿನ ಕುಹಕಗಳಿಂದ ತಪ್ಪಿಸಿಕೊಳ್ಳಲು ಕಾಜಲ್ ಮುಂಬೈ ಹಾದಿ ಹಿಡಿಯುತ್ತಾರೆ. ಅಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಮೂಲಕ ಅಧಿಕೃತವಾಗಿ ಹೆಣ್ಣಾಗಿ ಬದಲಾಗುತ್ತಾರೆ ಕಾಜಲ್. ಆಗ ಅವರಿಗೆ 13 ವರ್ಷ. ತನ್ನ ಹತ್ತನೇ ತರಗತಿಯ ವಿದ್ಯಾಭ್ಯಾಸವನ್ನು ಮುಂಬೈಯಲ್ಲಿಯೇ ಮುಗಿಸಿಕೊಂಡು ಪಿಯುಸಿ ಪರೀಕ್ಷೆ ಬರೆಯಲು ತನ್ನ ಹಳ್ಳಿಗೆ ಹಿಂದಿರುಗುತ್ತಾರೆ. ಪರೀಕ್ಷೆಯಲ್ಲಿ ಶೇ. 85% ರಷ್ಟು ಫಲಿತಾಂಶದೊಂದಿಗೆ ಪಾಸಾಗುತ್ತಾರೆ ಕೂಡ.

ಆದರೆ ಹಳ್ಳಿಗೆ ಮರಳಿದಾಗ ಸಹೋದರನ ಬೈಗುಳವನ್ನು ಎದುರಿಸಬೇಕಾಗುತ್ತದೆ. ಬೆಂಗಳೂರಿನ ಬಸ್ ನಿಲ್ದಾಣವೊಂದರಲ್ಲಿ ತನ್ನ ತಾಯಿಯನ್ನು ಭೇಟಿಯಾಗುತ್ತಾರೆ. ತಮ್ಮ ಮನದಾಳವನ್ನು ಬಿಚ್ಚಿಡುತ್ತಾರೆ. ಕೊನೆಗೆ, ತಾಯಿಯ ಒತ್ತಾಸೆ ಮೇರೆ, ತಂದೆಯ ಅನುಮತಿಯೊಂದಿಗೆ ಮನೆಯಲ್ಲಿಯೇ ಮುಂದುರಿಯಲಿ ನಿರ್ಧಿಸುತ್ತಾರೆ. ಆದರೆ ತನ್ನ ಸಮುದಾಯದವರಾರು ಇಲ್ಲದ ಪರಿಸರ ಅವರಿಗೆ ಒಗ್ಗಿ ಬರುವುದಿಲ್ಲ.

ಲಿಂಗ ಯಾವುದೇ ಇರಲಿ, ಹಳ್ಳಿಗಳಲ್ಲಿ ಅವಕಾಶದ ಕೊರತೆ ಬಾಧಿಸುತ್ತದೆ. ಕಾಜಲ್ ಕೂಡ ಹಳ್ಳಿಯ ಪರಿಸರದಲ್ಲಿ ತಮ್ಮ ಕನಸುಗಳನ್ನು ಕಟ್ಟಲು ಒದ್ದಾಡುತ್ತಾರೆ. ಕೊನೆಗೆ, ಬೇರೆ ದಾರಿ ಕಾಣದೆ ಮತ್ತೆ ಮುಂಬೈ ಹಾದಿ ಹಿಡಿಯುತ್ತಾರೆ.

ಮುಂಬೈನಲ್ಲಿ ಬಾರ್ ಡಾನ್ಸರ್, ರಸ್ತೆಯಲ್ಲಿ ಭಿಕ್ಷುಕಿ ಹೀಗೆ ನಾನಾ ವೇಷಗಳನ್ನು ಅವರು ಹಾಕುತ್ತಾರೆ. ನಂತರ ಒಂದು ಸರ್ಕಸ್ ಕಂಪನಿಯಲ್ಲಿ ನೃತ್ಯಗಾತಿಯಾಗಿ ಅವಕಾಶ ಗಿಟ್ಟಿಸುತ್ತಾರೆ. ಇದಾದ ಸುಮಾರು 9 ವರ್ಷಗಳ ನಂತರ ಪ್ರದರ್ಶನಕ್ಕಾಗಿ ಕರ್ನಾಟಕಕ್ಕೆ ಮರಳುತ್ತಾರೆ.

ಉಡುಪಿಯ ಬ್ರಹ್ಮಾವರ ಕಾಜಲ್ ಪ್ರೀತಿಯ ಊರಾಗುತ್ತದೆ. ಅಲ್ಲಿಯೇ ನೆಲೆ ನಿಲ್ಲಲು ತೀರ್ಮಾನಿಸುತ್ತಾರೆ. ಕಳೆದ 9 ವರ್ಷಗಳಿಂದ ಆಕೆ ಅಲ್ಲಿಯೇ ಇದ್ದಾರೆ. ಈಗ ಕಾಜಲ್ ಬ್ರಹ್ಮಾವರ ಎಂದು ಹೆಸರನ್ನೂ ಬದಲಿಸಿಕೊಂಡಿದ್ದಾರೆ. “ಈ ಸ್ಥಳವು ನನಗೆ ಪ್ರೀತಿ ನೀಡಿ ಗೌರವಿಸಿದೆ. ಇಂತಹ ಪ್ರೀತಿಯನ್ನು ನಾನು ಬೇರೆಲ್ಲಿಯೂ ಪಡೆಯಲಿಲ್ಲ. ಇದು ನನ್ನ ನೋಟ ಅಥವಾ ಲಿಂಗದ ಮೇಲೆ ಯಾವುದೇ ತೀರ್ಪು ನೀಡದೆ ನನ್ನನ್ನು ಒಪ್ಪಿಕೊಂಡಿದೆ. ಪ್ರೀತಿಸಿದೆ,” ಎಮದು ಬ್ರಹ್ಮಾವರದ ಕುರಿತು ಪ್ರೀತಿಯಿಂದ ಮಾತನಾಡುತ್ತಾರೆ ಕಾಜಲ್.

ನೀವು ಒಂದುವೇಳೆ ಟ್ರಾನ್ಸಜೆಂಡರ್ ಆಗಿದ್ದರೆ ಜನ ನಿಮ್ಮನ್ನು ಸಿಗ್ನಲ್ ನಲ್ಲಿ ನಿಂತುಕೊಂಡು ಬಿಕ್ಷೆ ಬೇಡುವಂತೆ ಅಥವಾ ಸೆಕ್ಸ್ ವರ್ಕ್ ಗೆ ಇಳಿಯುವಂತೆ ಬಯಸುತ್ತಾರೆ. ಆದರೆ ಯಾಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ತೃತೀಯ ಲಿಂಗಿಗಳು ಈ ಕೆಲಸಕ್ಕೆ ಬರುತ್ತಾರೆ ಎಂದು ಯೋಚಿಸುವುದಿಲ್ಲ. ಯಾವುದೇ ಕೆಲಸವನ್ನು ನಮಗೆ ಯಾರೂ ಕೊಡದೇ ಇರುವುದರಿಂದ ನಾವು ಈ ಕೆಲಸವನ್ನು ಆಯ್ದುಕೊಳ್ಳುತ್ತೇವೆ. ನಮಗೆ ಕೆಲಸ ನೀಡಿದರೆ ನಾವೇಕೆ ಬಿಸಿಲಲ್ಲಿ ನಿಂತುಕೊಂಡು ಬಿಕ್ಷೆ ಬೇಡುತ್ತಿದ್ದೆವು? ನಾವು ನಮ್ಮನ್ನು ಮಿನಿಸ್ಟರ್ ಮಾಡಿ ಎಂದು ಕೇಳುವುದಿಲ್ಲ. ನಮಗೆ ಘನತೆಯಿಂದ ಬದುಕಲು ಕನಿಷ್ಠ ಒಂದು ಕೆಲಸ ಕೊಡಿ ಎಂದು ಕೇಳುತ್ತಿದ್ದೇವೆ…

ಕಾಜಲ್ ಕನಸುಗಳನ್ನು ನಸುಗಳನ್ನಾಗಲು ಸಹಾಯ ಮಾಡಿದವರು ಎಂಜಿಎಂ ಕಾಲೇಜಿನ ಉಪನ್ಯಾಸಕರಾದ ಮಂಜುನಾಥ್ ಕಾಮತ್ . ಇವರನ್ನು ಕಾಜಲ್ ತನಗೆ ಪುನರ್ಜನ್ಮ ನೀಡಿದ ತಂದೇ ಎಂದೇ ಭಾವಿಸುತ್ತಾರೆ. ಕಾಜಲ್ ಅಧ್ಯಯನ ಮಾಡಲು ಬಯಸಿದಾಗ ಅದಕ್ಕೆ ಸಹಾಯ ಮಾಡಿದ್ದು ಇದೇ ಮಂಜುನಾಥ್. ಶಿಕ್ಷಣದ ಖರ್ಚು ವೆಚ್ಚಗಳನ್ನು ನೋಡಿಕೊಂಡು, ಮತ್ತಷ್ಟು ಅಧ್ಯಯನ ಮಾಡಲು ಹುರಿದುಂಭಿಸಿದ್ದಾರೆ. ಕಾಜಲ್ ಇನ್ನೇನು ಶೀಘ್ರದಲ್ಲಿಯೇ ಪದವಿಯನ್ನೂ ಪಡೆಯಲಿದ್ದಾರೆ.

ಕಾಜಲ್ಗೆ ಸಾರ್ವಜನಿಕವಾಗಿ ಮಾತನಾಡುವ ಕಲೆಯನ್ನು ಕಲಿಯಲು ಮಂಜುನಾಥ್ ಅವರು ಪ್ರೋತ್ಸಾಹ ನೀಡುತ್ತಾರೆ. ನಂತರದಲ್ಲಿ ಆಕೆ ತಾನು ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕು ಎಂದು ಬಯಸಿದಾಗ ಅದಕ್ಕೆ ಸಹಾಯ ಮಾಡುತ್ತಾರೆ. ಸ್ಪಂದನಾ ಟಿವಿಯ ಅವಿನಾಶ್ ಕಾಮತ್, ಕಾಜಲ್ ಅವರಿಗೆ ಆಂಕರ್ ಆಗಲು ತರಬೇತಿ ನೀಡುತ್ತಾರೆ. ಈ ಸಮಯದಲ್ಲಿಯೇ ಕಾಜಲ್ ಗೆ ಪ್ರಶಸ್ತಿ ಸ್ವೀಕರಿಸುವಂತೆ ಚೆನ್ನೈನಿಂದ ಕರೆ ಬರುತ್ತದೆ. ಅಲ್ಲಿಂದ ಸುಮಾರು ಕಾರ್ಯಕ್ರಮಗಳಿಗೆ ಅವರು ಆಹ್ವಾನಿತರಾಗುತ್ತಾರೆ. ಅಲ್ಲಿ ತಮ್ಮ ಸಮುದಾಯದವರ ಬಗ್ಗೆ ಮಾತನಾಡುತ್ತಾರೆ. ಒಂದು ಸಮಾರಂಭದಲ್ಲಿ ರೇಡಿಯೋ ಸಾರಂಗ್ (107.8) ದ ಅಭಿಷೇಕ್ ಶೆಟ್ಟಿ ಕಾಜಲ್ ಮಾತುಗಳನ್ನು ಕೇಳಿ ಪ್ರಭಾವಿತರಾಗಿತ್ತಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ನಡೆಸುವ ಈ ಕಮ್ಯೂನಿಟಿ ರೇಡಿಯೋಗೆ ರೇಡಿಯೋ ಜಾಕಿ ಆಗುವಂತೆ ಅವರನ್ನು ಪ್ರೋತ್ಸಾಹಿಸುತ್ತಾರೆ.

ಈ ಮೂಲಕ  ಕಾಜಲ್ ಕರಾವಳಿ ಕರ್ನಾಟಕದ ಮೊದಲ ರೇಡಿಯೋ ಜಾಕಿಯಾಗಿ ಕೆಲಸ ಆರಂಭಿಸಿದ್ದಾರೆ. ಕಾಜಲ್ ರೇಡಿಯೋ ಜಾಕಿಯಾಗಿ ‘ಶುಭಮಂಗಲ’ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಪ್ರತಿ ಮಂಗಳವಾರ ಸಾಯಂಕಾಲದ 5-6 ಗಂಟೆಯ ಅವಧಿಯಲ್ಲಿ ಮಾತನಾಡುತ್ತಾರೆ. ಬಿಡುವು ಮಾಡಿಕೊಂಡು ನೀವೂ ಒಮ್ಮೆ ಕಾಜಲ್ ಮಾತಿಗೆ ಕಿವಿಯಾಗಿ.

ಮಾಹಿತಿ ಮತ್ತು ಚಿತ್ರಗಳು: ಬೆಟರ್ ಇಂಡಿಯಾ.

Leave a comment

Top