An unconventional News Portal.

ಹೈಕಮಾಂಡ್ ಬಾಲ್ ಎಸೆಯುವ ಮುನ್ನವೇ ಹಿಟ್ ವಿಕೆಟ್ ಆಗ್ತಾರಾ ಸಿದ್ದರಾಮಯ್ಯ?

ಹೈಕಮಾಂಡ್ ಬಾಲ್ ಎಸೆಯುವ ಮುನ್ನವೇ ಹಿಟ್ ವಿಕೆಟ್ ಆಗ್ತಾರಾ ಸಿದ್ದರಾಮಯ್ಯ?

ಅಧಿಕಾರಕ್ಕೆ ಬಂದು ಮೂರು ವರ್ಷಗಳಲ್ಲಿ, ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಂದ ಎಚ್ಚರಿಕೆ ಸಂದೇಶವೊಂದು ಶುಕ್ರವಾರ ರವಾನೆಯಾಗಿದೆ.

ದಿಲ್ಲಿಯಲ್ಲಿ ಗೃಹ ಸಚಿವ ಜಿ. ಪರಮೆಶ್ವರ್ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಹೊರಬಂದ ಬಳಿಕ ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆ, ಕಳೆದ ಎರಡು ದಿನಗಳಿಂದ ದಿಲ್ಲಿಯ ಆಂಗ್ಲ ದೈನಿಕಗಳಲ್ಲಿ ಸಿದ್ದರಾಮಯ್ಯ ಕುರಿತು ಬರುತ್ತಿರುವ ವರದಿಗಳು ಹಾಗೂ ದಿಲ್ಲಿ ಮಟ್ಟದಲ್ಲಿ ರಾಜ್ಯ ಸರಕಾರದ ಆಡಳಿತ ವೈಖರಿ ಕುರಿತು ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಹೀಗೊಂದು ಗುಮಾನಿಗೆ ಕಾರಣವಾಗಿವೆ.

ಸಂದೇಶ ರವಾನೆ:

ಎರಡು ದಿನಗಳಿಂದ ದಿಲ್ಲಿಯ ಪ್ರಮುಖ ಆಂಗ್ಲ ದೈನಿಕಗಳಲ್ಲಿ ಸಿಎಂ ಪುತ್ರ ಡಾ. ಯತೀಂದ್ರ ಅವರ ಪಾಲುದಾರಿಕೆಯ ಕಂಪನಿಗೆ ನೀಡಿದ ಟೆಂಡರ್ ಕುರಿತು ಸುದ್ದಿಯಾಗುತ್ತಿದೆ. ‘ಸಿದ್ದರಾಮಯ್ಯ ಪುತ್ರನ ಕಂಪನಿಗೆ ಸರಕಾರಿ ಆಸ್ಪತ್ರೆಯಲ್ಲಿ ಟೆಂಡರ್ ನೀಡಿದ ಆರೋಪ’ ಎಂಬ ತಲೆಬರಹದಲ್ಲಿ ‘ಎಕನಾಮಿಕ್ ಟೈಮ್ಸ್ ದಿಲ್ಲಿ ಆವೃತ್ತಿಯಲ್ಲಿ ಸುದ್ದಿ ಮಾಡಲಾಗಿದೆ. ‘ಸಿಎಂ ಪುತ್ರ ಪಾಲುದಾರನಾದ ನಂತರ ಮೂರು ಟೆಂಡರ್ ಪಡೆದ ಕಂಪನಿ’ ಎಂದು ‘ಇಂಡಿಯನ್ ಎಕ್ಸ್ಪ್ರೆಸ್ ಮುಖಪುಟದಲ್ಲಿ ಪ್ರಕಟಿಸಿದೆ. ಸಹಜವಾಗಿಯೇ ಐದು ರಾಜ್ಯಗಳ ಚುನಾವಣೆಯ ತಲೆಬಿಸಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಇವು ಬಂದಿರುತ್ತವೆ. ಈ ಮೂಲಕ ಕರ್ನಾಟಕದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶ ರವಾನೆಯಾಗಿರುವ ಸಾದ್ಯತೆ ಇದೆ.

ಸುಮ್ಮನೆ ಬಂದೆ:

ವಿಷಯ ಹೀಗಿರುವಾಗ, ನಿಗದಿಯಾದಂತೆ ಶುಕ್ರವಾರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಜಿ. ಪರಮೇಶ್ವರ್ ಭೇಟಿ ಮಾಡಿದ್ದಾರೆ. ಹೊರಬಂದಾಗ ಎದುರಿಗೆ ಸಿಕ್ಕ ಮಾಧ್ಯಮಗಳಿಗೆ, “ಅಖಿಲ ಭಾರತ ಅಥ್ಲೆಟಿಕ್ ಫೆಡರೇಶನ್’ಗೆ ಉಪಾಧ್ಯಕ್ಷನಾಗಿ ಆಯ್ಕೆಯಾದ ವಿಚಾರವನ್ನು ತಿಳಿಸಲು ಬಂದೆ. ಅದನ್ನು ಕೇಳಿ ಮೇಡಂ ಖುಷಿ ಪಟ್ಟರು,” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಕ್ಕೂಟವೊಂದಕ್ಕೆ ಉಪಾಧ್ಯಕ್ಷನಾಗಿ ಆಯ್ಕೆಯಾದ ವಿಚಾರ ತಿಳಿಸಲು ಜಿ. ಪರಮೇಶ್ವರ್ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದರಾ? ಇದು ಅರ್ಧ ಸತ್ಯ ಅಷ್ಟೆ. ಹಾಗಾದರೆ, ಜಿ. ಪರಮೇಶ್ವರ್ ಸೋನಿಯಾ ಗಾಂಧಿ ಜತೆ ಏನು ಮಾತುಕತೆ ನಡೆಸಿದರು ಎಂಬುದನ್ನು ಯಾಕೆ ಬಾಯಿ ಬಿಡಲಿಲ್ಲ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಎಚ್ಚರಿಕೆ ಗಂಟೆ:

ಪರಮೇಶ್ವರ್ ಏನನ್ನೂ ಬಾಯಿ ಬಿಟ್ಟು ಹೇಳದೇ ಹೋದರೂ, ಕರ್ನಾಟಕದ ಮಾಧ್ಯಮಗಳಲ್ಲಿ ‘ಸಿಎಂಗೆ ಎಚ್ಚರಿಕೆ ನೀಡಿದ ಸೋನಿಯಾ ಗಾಂಧಿ’ ಎಂಬ ಸುದ್ದಿ ಹರಡಿಯಾಗಿದೆ. ‘ಸೋನಿಯಾ ಗಾಂಧಿ ಕರ್ನಾಟಕದ ಆಡಳಿತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದೆ ಬಿಜೆಪಿಯು ದುರಾಡಳಿತ, ಸ್ವಜನ ಪಕ್ಷಪಾತದಿಂದ ನಾಶವಾದ ಉದಾಹರಣೆಯಿಂದ ಪಾಠ ಕಲಿಯಿರಿ ಎಂದು ಹೇಳಿ ಕಳುಹಿಸಿದ್ದಾರೆ’ ಎಂಬುದು ಜಿ. ಪರಮೇಶ್ವರ್ ಹೈಕಮಾಂಡ್ ಭೇಟಿ ಕುರಿತು ಬರುತ್ತಿರುವ ಸುದ್ದಿಗಳು. ಇದು ಅಂತೆ ಕಂತೆಗಳ ಸುದ್ದಿಯಾದರೂ, ಈ ಸಮಯದಲ್ಲಿ ಸತ್ಯಕ್ಕೆ ಹತ್ತಿರವಿರುವ ಸಾಧ್ಯತೆಗಳಿವೆ. ಜತೆಗೆ ಮೊನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದ ದಿಗ್ವಿಜಯ್ ಸಿಂಗ್ ಕೂಡ, ”ನಾವು ಕರೆಯುವವರೆಗೂ ದಿಲ್ಲಿಗೆ ಬರಬೇಡಿ, ಬರ ನಿರ್ವಹಣೆ ನೋಡಿಕೊಳ್ಳಿ,” ಎಂದು ಸಿಎಂಗೆ ಹೇಳಿರುವುದೂ ಈ ಸಮಯದಲ್ಲಿ ಒಂದಕ್ಕೊಂದು ತಾಳೆಯಾಗುತ್ತಿದೆ.

ಇದೇ ವೇಳೆ, ಅತ್ತ ಬರ ನಿರ್ವಹಣೆ ವಿಚಾರದಲ್ಲಿ ಪ್ರತಿ ಹಂತದಲ್ಲೂ ಉಡಾಫೆ ಮೇಲಿಂದ ಕೆಳಗಿನವರೆಗೂ ಕಾಣಿಸುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬೆಳವಣಿಗೆಗಳನ್ನು ಗಮನಿಸದೇ ಹೋದರೆ, ಭವಿಷ್ಯದಲ್ಲಿ ಹೈಕಮಾಂಡ್ ಬಾಲ್ ಎಸೆಯುವ ಮುನ್ನವೇ ಹಿಟ್ ವಿಕೆಟ್ ಆಗುವ ಸಾಧ್ಯತೆಗಳಿವೆ.

(ಚಿತ್ರ: ಇಂಡಿಯನ್ ಎಕ್ಸ್ಪ್ರೆಸ್)

Top