An unconventional News Portal.

‘ರಿಯಲ್ V/S ಫೇಕ್’; ಗೊಂದಲ ಮೂಡಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವಿಟ್ಟರ್ ಖಾತೆ ‘ನಕಲಿ’

‘ರಿಯಲ್ V/S ಫೇಕ್’; ಗೊಂದಲ ಮೂಡಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವಿಟ್ಟರ್ ಖಾತೆ ‘ನಕಲಿ’

‘ಸಿಎಂ ಆಫ್ ಕರ್ನಾಟಕ (CM of Karnataka)’ ಹೆಸರಿನಲ್ಲಿ ವಿವಾದಾತ್ಮಕ ಟ್ವೀಟುಗಳನ್ನು ಮಾಡುತ್ತಿದ್ದ ಟ್ವಿಟ್ಟರ್ ಖಾತೆ ನಕಲಿ ಎಂದು ಗೊತ್ತಾಗಿದೆ. ವಿಚಿತ್ರ ಎಂದರೆ ನಿಜವಾದ ಟ್ವಿಟ್ಟರ್ ಖಾತೆಯ ಹೆಸರೂ ಹಾಗೆಯೇ ಇದೆ. ಆದರೆ ಸಿದ್ಧರಾಮಯ್ಯ ನೈಜ ಟ್ವಿಟ್ಟರ್ ಖಾತೆಗೆ ಟ್ವಿಟ್ಟರ್ ಕಡೆಯಿಂದ ಅಧಿಕೃತ ಮಾನ್ಯತೆ ಸಿಕ್ಕಿದ್ದು, ಹೆಸರಿನೊಂದಿಗೆ ರೈಟ್ ಮಾರ್ಕ್ ಕಾಣಿಸುತ್ತದೆ. ನಕಲಿ ಟ್ವಿಟ್ಟರ್ ಖಾತೆಯಲ್ಲಿ ಈ ಅಧಿಕೃತ ರೈಟ್ ಮಾರ್ಕ್ ಇಲ್ಲದ್ದನ್ನು ಬಳಕೆದಾರರು ಗಮನಿಸಬಹುದು.

ಸಿಎಂ ಅಧಿಕೃತ ಖಾತೆಗೆ ಸುಮಾರು 80 ಸಾವಿರ ಫಾಲೋವರ್ ಗಳಿದ್ದು, ಅನಧಿಕೃತ ಖಾತೆಗೆ ಕೇವಲ 60 ಜನ ಫಾಲೋವರ್ ಗಳಿದ್ದಾರೆ. ಅಧಿಕೃತ ಖಾತೆಗೆ ಇದು ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆ ಎಂಬ ಅಡಿ ಬರಹ ಇದೆ. ಮತ್ತು ಲೊಕೇಷನ್ ಬೆಂಗಳೂರಿನಲ್ಲಿದೆ. ಅದೇ ಅನಧಿಕೃತ ಟ್ವಿಟ್ಟರ್ ಖಾತೆಯ ಲೊಕೇಷನ್ ಆಂಡ್ರೋಮಿಡಾ (ಗ್ಯಾಲಾಕ್ಸಿಯ ಹೆಸರು)ನಲ್ಲಿದೆ. ಮತ್ತು ಇದು ಕರ್ನಾಟಕದ ಸಾಮಾನ್ಯ ಮನುಷ್ಯನ ಅಧಿಕೃತ ಟ್ವಿಟ್ಟರ್ ಖಾತೆ ಎಂದು ಬರೆಯಲಾಗಿದೆ. ಇನ್ನು ಒರಿಜಿನಲ್ ಖಾತೆ 2014ರಲ್ಲಿ ರಚನೆಯಾಗಿದ್ದರೆ ಫೇಕ್ ಖಾತೆ ಇದೇ ಡಿಸೆಂಬರಿನಲ್ಲಿ ಸೃಷ್ಠಿಸಲಾಗಿದೆ.

cm siachen tweet controvercy

ಅಸಂಬದ್ದ ಪೋಸ್ಟುಗಳ ಸ್ಯಾಂಪಲ್

ನಕಲಿ ಖಾತೆ ಅಸಲಿ ಖಾತೆಯಂತೆಯೇ ಹೆಸರು, ಪ್ರೊಫೈಲ್ ಚಿತ್ರ ಹಾಗೂ ಕವರ್ ಫೋಟೋ ಹೊಂದಿದ್ದು ಕಳೆದ ಹಲವು ದಿನಗಳಿಂದ ಟ್ವಿಟ್ಟರ್ ಬಳಕೆದಾರರ ಹಾದಿ ತಪ್ಪಿಸುತ್ತಿದೆ. ಸದರಿ ನಕಲಿ ಅಕೌಂಟ್ ಮೂಲಕ ವಿವಾದಾತ್ಮಕ, ಅಸಂಬದ್ಧ ಟ್ವೀಟುಗಳು ರವಾನೆಯಾಗುತ್ತಿವೆ. “ಇದನ್ನೇ ಹಲವು ಬಳಕೆದಾರರು ಅಧಿಕೃತ ಟ್ವಿಟ್ಟರ್ ಎಂದುಕೊಂಡಿದ್ದಾರೆ. ಹಾಗಂದುಕೊಂಡು ಪ್ರತಿಕ್ರಿಯೆಗಳನ್ನೂ ಕೊಡುತ್ತಿದ್ದಾರೆ. ಕೆಲವರು ಶೇರ್ ಮಾಡುತ್ತಿದ್ದಾರೆ. ಅಲ್ಲಿ ಬರೆಯುವವರೂ ಬೇಕೆಂದೇ ತಪ್ಪು ಮಾಡಿ ಮುಖ್ಯಮಂತ್ರಿಯನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ. ಈ ಖಾತೆ ನಿರ್ವಹಿಸುತ್ತಿರುವರ ಮೇಲೆ ಬಹುಶಃ ಸೋಮವಾರ ಪೊಲೀಸ್ ಕೇಸು ದಾಖಲಿಸುವ ಸಾಧ್ಯತೆ ಇದೆ,” ಎಂದು ವಿಧಾನಸೌಧದ ಮೂಲಗಳು ಹೇಳಿವೆ.

ಮುಖ್ಯಮಂತ್ರಿಗಳ ‘ಸಿಯಾಚಿನ್’ ವಿವಾದ:

ನಕಲಿ ಅಸಲಿಗಳ ಮಧ್ಯೆ ಮುಖ್ಯಮಂತ್ರಿಯವರ ಅಧಿಕೃತ ಖಾತೆಯಲ್ಲೇ ‘ಸಿಯಾಚಿನ್ ಚೀನಾದಲ್ಲಿ ಇದೆ’ ಎನ್ನುವ ಅರ್ಥ ಬರುವಂತೆ ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. 21ನೇ ತಾರೀಕು ಮುಖ್ಯಮಂತ್ರಿ ಸಿದ್ಧರಾಮಯ್ಯ ಚೀನಾದ ಸಿಚುವಾನ್ ಪ್ರಾಂತ್ಯದಿಂದ ಬಂದಿದ್ದ ಲೀ ಝೋಂಗ್ ನೇತೃತ್ವದ ನಿಯೋಗವನ್ನು ಬೇಟಿಯಾಗಿದ್ದರು. ಇದರ ಅಪ್ಡೇಟ್ ಪೋಸ್ಟ್ ಮಾಡುವವರು ತಪ್ಪಾಗಿ “ಚೀನಾದ ಸಿಯಾಚಿನ್ ಪ್ರಾಂತ್ಯದಿಂದ ಬಂದಿದ್ದ…” ಎಂದು ಬರೆದಿದ್ದರು. ಇದು ರಾಷ್ಟ್ರ ಮಟ್ಟದ ಸುದ್ದಿಯಾಗಿತ್ತು.siachuan-controvercy
ನಿಜವಾಗಿಯೂ ನಡೆದಿದ್ದೇನೆಂದರೆ ಮುಖ್ಯಮಂತ್ರಿಗಳ ಅಧಿಕೃತ ಛಾಯಾಚಿತ್ರಕಾರರು ಚಿತ್ರದ ಜತೆಗೆ ಅಡಿಬರಹವನ್ನು ತಪ್ಪಾಗಿ ಕಳಿಹಿಸಿಕೊಟ್ಟಿದ್ದರು. ಇದನ್ನು ಪರಿಶೀಲನೆಯೂ ಮಾಡದೆ ಟ್ವಿಟ್ಟರ್ ಪುಟ ನಿರ್ವಹಿಸುವವರು ಪೋಸ್ಟ್ ಮಾಡಿದ್ದರು. ನಂತರ ತಪ್ಪು ಟ್ವೀಟನ್ನು ಹಿಂದಕ್ಕೆ ಪಡೆದು, ಸರಿಪಡಿಸಿ ಮತ್ತೊಮ್ಮೆ ಟ್ವೀಟ್ ಮಾಡಲಾಗಿತ್ತು.

Top