An unconventional News Portal.

ಮಟ್ಟು, ಪೂಜಾರಿ, ಜೈನ್ ಮತ್ತು ‘ಬಿಲ್ಲವ ರಾಜಕಾರಣ’: ಚುನಾವಣಾ ಕಣಕ್ಕೆ ದಿನೇಶ್ ಅಮೀನ್?

ಮಟ್ಟು, ಪೂಜಾರಿ, ಜೈನ್ ಮತ್ತು ‘ಬಿಲ್ಲವ ರಾಜಕಾರಣ’: ಚುನಾವಣಾ ಕಣಕ್ಕೆ ದಿನೇಶ್ ಅಮೀನ್?

ದಕ್ಷಿಣ ಕನ್ನಡದ ಕಾಂಗ್ರೆಸ್ ಪಡಸಾಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಲೆಕ್ಕಾಚಾರಗಳು ಶುರುವಾಗಿವೆ.

ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರ್ಯಾರು ಎಂಬ ಚರ್ಚೆಗಳು ಆರಂಭವಾಗಿದ್ದು, ಮೂಡುಬಿದಿರೆ ಕ್ಷೇತ್ರಕ್ಕೆ ಕಾಂಗ್ರೆಸ್ ವಲಯದಿಂದ ಅಚ್ಚರಿಯ ರೀತಿಯಲ್ಲಿ ಪತ್ರಕರ್ತರೊಬ್ಬರ ಹೆಸರು ಕೇಳಿ ಬರುತ್ತಿದೆ.

ಅವರು ಮತ್ಯಾರೂ ಅಲ್ಲ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು.

“ಮುಂದಿನ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಸಾಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ದಿನೇಶ್ ಅಮೀನ್ ಮಟ್ಟು ಕೂಡಾ ಇದ್ದಾರೆ,” ಎನ್ನುತ್ತಾರೆ ಮಂಗಳೂರು ಕಾಂಗ್ರೆಸ್ಸಿನ ಹಿರಿಯರೂ ಆದ ಮಾಜಿ ಶಾಸಕರೊಬ್ಬರು.

ದಿನೇಶ್ ಆಪ್ತವಲಯದವರೇ ಹೇಳುವ ಪ್ರಕಾರ, “ದಿನೇಶ್ ಅಮೀನ್ ಮಟ್ಟು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೂಡುಬಿದಿರೆ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತರಾಗಿದ್ದಾರೆ.” ಆದರೆ ಈ ಮಾತನ್ನು ದಿನೇಶ್ ತಳ್ಳಿ ಹಾಕಿದ್ದಾರೆ.

“ನಾನು ಹಿಂದೊಮ್ಮೆ ಹೇಳಿದ್ದು ಹೌದು. (ಮೋಹನ್) ಆಳ್ವ ಸ್ಪರ್ಧಿಸಿದರೆ ನಾನು ಅವರ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೆ. ಅದೆಲ್ಲಾ ಗಂಭೀರವಾಗಿ ಹೇಳಿದ್ದಲ್ಲ. ನನ್ನ ಆಪ್ತವಲಯದಲ್ಲಿಯೂ ಹೀಗೆ ತಮಾಷೆಗೆ ಹೇಳುತ್ತಿರುತ್ತೇನೆ. ಆದರೆ ರಾಜಕಾರಣಿಯಾಗುವ ಆಸಕ್ತಿ ನನಗೆ ಸದ್ಯಕ್ಕೆ ಇಲ್ಲ. ನಾನು ಬಹುಶಃ ಪತ್ರಕರ್ತನಾಗಿಯೇ ಸಾಯುತ್ತೇನೆ ಎಂದು ಕಾಣಿಸುತ್ತದೆ. ಆದರೆ ಮುಂದೇನಾಗುತ್ತದೆಯೋ ಗೊತ್ತಿಲ್ಲ. ನಾನು ಪ್ರಜಾವಾಣಿಯಲ್ಲಿದ್ದಾಗ ನಾನೆಂದೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಆಗುತ್ತೇನೆ ಎಂದುಕೊಂಡಿರಲಿಲ್ಲ,” ಎಂಬ ಗೊಂದಲದಲ್ಲಿಯೇ ಮಾತನಾಡುತ್ತಾರೆ ದಿನೇಶ್ ಅಮೀನ್ ಮಟ್ಟು.

ಮಟ್ಟು – ಪೂಜಾರಿ ಜುಗಲ್ಬಂದಿ:

ಸಿದ್ಧರಾಮಯ್ಯ ಮುಖ್ಯಮಂತ್ರಿಯಾದ ನಂತರ ಅವರ ಮಾಧ್ಯಮ ಸಲಹೆಗಾರರಾಗಿ ಬಂದವರು ದಿನೇಶ್ ಅಮೀನ್ ಮಟ್ಟು. ಸಲಹೆಗಾರರಾದ ಬಳಿಕ, ಅವರ ಬರವಣಿಗೆಯ ಹಿನ್ನಲೆ ಮತ್ತು ಬಹಿರಂಗ ಮಾತುಗಳ ಕಾರಣಕ್ಕೆ ವೈಚಾರಿಕ ವಲಯದಲ್ಲಿ ಅವರೊಬ್ಬ ವಿವಾದಾತ್ಮಕ ವ್ಯಕ್ತಿಯಾಗಿ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದೇ ಅವಧಿಯಲ್ಲಿ ಕರಾವಳಿಯ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ತಮ್ಮ ಎಂದಿನ ಶೈಲಿಯಲ್ಲಿ ಮುಖ್ಯಮಂತ್ರಿಗಳನ್ನು ಟೀಕಿಸಿದಾಗ, ಎದುರಾಗಿ ನಿಂತವರು ಇದೇ ದಿನೇಶ್ ಅಮೀನ್ ಮಟ್ಟು. ಕಳೆದ ಮೂರುವರೆ ವರ್ಷಗಳಲ್ಲಿ ಮಟ್ಟು ಮತ್ತು ಪೂಜಾರಿ ನಡುವೆ ಹಲವು ವಾಗ್ವಾದಗಳು ನಡೆದಿವೆ; ಮಟ್ಟು ಬಹಿರಂಗ ಪತ್ರಗಳನ್ನೂ ಬರೆದಿದ್ದಾರೆ. ಇತ್ತೀಚೆಗೆ ನಡೆದ ‘ಚಲೋ ಉಡುಪಿ’ ವೇದಿಕೆಯಲ್ಲಿಯೂ ಅಮೀನ್ ಮಟ್ಟು ಪೂಜಾರಿಯವರನ್ನು ಟೀಕಿಸಿದ್ದರು. ಈ ಟೀಕೆ, ಪತ್ರ ಸಮರದಲ್ಲೆಲ್ಲಾ ಬಿಲ್ಲವ ಸಮುದಾಯ ಹಾದು ಹೋಗಿದೆ. ಅಂದ ಹಾಗೆ ಇಬ್ಬರೂ ಕರಾವಳಿಯ ಅತೀ ದೊಡ್ಡ ಬಿಲ್ಲವ ಸಮುದಾಯಕ್ಕೆ ಸೇರಿದವರು ಎಂಬುದು ವಿಶೇಷ.

ಬಿಲ್ಲವ ರಾಜಕಾರಣ:

ಇಲ್ಲೀವರೆಗೆ ಬಿಲ್ಲವ ಸಮುದಾಯದ ಅಘೋಷಿತ ನಾಯಕರಾಗಿ ಇದ್ದವರು ಜನಾರ್ಧನ ಪೂಜಾರಿ. ಆದರೆ ಇತ್ತೀಚೆಗೆ ದಿನೇಶ್ ಅಮೀನ್, ನಾರಾಯಣ ಗುರು ಮತ್ತು ಬಿಲ್ಲವ ಸಮುದಾಯವನ್ನು ತಮ್ಮ ಮಾತಿನ ನಡುವೆ ತುಸು ಹೆಚ್ಚಾಗಿಯೇ ಎಳೆದು ತರುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರದ ವತಿಯಿಂದ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇದಕ್ಕೆ ದಿನೇಶ್ ಅಮೀನ್ ಕಾರಣ ಎಂಬ ಸುದ್ದಿಯೂ ಇತ್ತು. ಇದನ್ನು ಸಿದ್ಧರಾಮಯ್ಯ ತಳ್ಳಿ ಹಾಕಿದ್ದರು.

“ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸಿಗೆ ಬಿಲ್ಲವ ಮತಗಳು ನಿರ್ಣಾಯಕ. ಬಿಲ್ಲವ ಸಮುದಾಯದಿಂದ ಇಲ್ಲೀವರೆಗೆ ಇದ್ದವರು ಬೆಳ್ತಂಗಡಿಯ ವಸಂತ ಬಂಗೇರ ಮತ್ತು ಜನಾರ್ಧನ ಪೂಜಾರಿ. ಬಂಗೇರರು ಆರೋಗ್ಯದ ಕಾರಣಕ್ಕೆ ಕಳೆದ ಚುನಾವಣೆಯಲ್ಲಿಯೇ ಕೊನೆಯ ಘಳಿಗೆಯಲ್ಲಿ ಸ್ಪರ್ಧಿಸಿದ್ದವರು; ಈ ಬಾರಿ ಅವರು ಸ್ಪರ್ಧಿಸಲಾರರು. ಕಾಂಗ್ರೆಸ್ಸಿನ ಒಳಗಡೆ ಜನಾರ್ಧನ ಪೂಜಾರಿಯವರನ್ನು ಮೂಲೆಗುಂಪು ಮಾಡುವ ಪ್ರಯತ್ನ ಈಗಾಗಲೇ ಜಾರಿಯಲ್ಲಿದೆ. ಕಾಂಗ್ರೆಸ್ ಕಚೇರಿಯಲ್ಲಿ ಅವರನ್ನು ಪ್ರೆಸ್ ಮೀಟ್ ಮಾಡಲು ಬಿಡುತ್ತಿಲ್ಲ. ಇತ್ತೀಚೆಗೆ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಿಂದಲೂ ಅವರನ್ನು ದೂರ ಇಡಲಾಗಿತ್ತು. ಹೀಗಿರುವಾಗ ಬಿಲ್ಲವ ಸಮುದಾಯದ ಪ್ರತಿನಿಧಿಯಾಗಿ ಮಟ್ಟು ಮೂಡಿ ಬರಬಹುದು,” ಎಂಬ ಚರ್ಚೆಗಳೂ ಅವರ ಆಪ್ತವಲಯದಿಂದಲೇ ತೇಲಿ ಬಂದಿದೆ.

ಮೂಡುಬಿದಿರೆಯೇ ಯಾಕೆ?:

ಮೂಡುಬಿದಿರೆಯನ್ನು ಸತತ ಕಳೆದ 4 ಅವಧಿಗಳಿಂದ ಪ್ರತಿನಿಧಿಸುತ್ತಾ ಬಂದವರು ಹಾಲಿ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್. ಕೆಲವು ಸಮಯದ ಹಿಂದೆ ಅವರು ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಅಲ್ಲಿಂದ ದಿನೇಶ್ ಸ್ಪರ್ಧೆಯ ಚರ್ಚೆಗಳು ಗರಿಗೆದರಿದ್ದವು.

“ಕರಾವಳಿಯಲ್ಲಿ ಮೂಡಬಿದಿರೆ ರಾಜಕೀಯವಾಗಿ ಜಾತ್ಯಾತೀತ ಕ್ಷೇತ್ರ. ಕರಾವಳಿಯಲ್ಲಿ ಬಿಜೆಪಿ ಗೆಲ್ಲದ ಒಂದೇ ಒಂದು ಕ್ಷೇತ್ರ ಇದ್ದರೆ ಅದು ಮೂಡುಬಿದಿರೆ ಮಾತ್ರ,” ಎನ್ನುತ್ತಾರೆ ಮಟ್ಟು. ಇಲ್ಲಿ ಕಾಂಗ್ರೆಸ್ಸಿನಿಂದ ಯುವ ರಾಜಕಾರಣಿ ಮಿಥುನ್ ರೈ ಮುಂದಿನ ಚುನಾವಣೆಯ ಅಭ್ಯರ್ಥಿಯಾಗಲು ಪೈಪೋಟಿಗೆ ಇಳಿದಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡಿನ ಜತೆ ಚೆನ್ನಾಗಿರುವ ರಮ್ಯಾ ಮಂಗಳೂರಿಗೆ ಬಂದಿದ್ದಾಗ ಆಕೆಯ ಜತೆಗೇ ಇದ್ದವರು ಮಿಥುನ್ ರೈ. ಡಿ.ಕೆ.ಶಿವಕುಮಾರ್ ಜತೆಗೂ ರೈ ಚೆನ್ನಾಗಿದ್ದಾರೆ. ಹಾಗೆಯೇ ಸಂಘಪರಿವಾರದ ಜತೆಯೂ ಅವರು ಹೊಂದಾಣಿಕೆಯಿಂದ ಇದ್ದಾರೆ ಎಂಬ ಆರೋಪ ಕೆಲವು ಕಾಂಗ್ರೆಸ್ಸಿನವರಿಂದಲೇ ಕೇಳಿ ಬಂದಿದೆ.

“ಒಂದೊಮ್ಮೆ ಇಲ್ಲಿ (ಮೂಡುಬಿದಿರೆ) ಸಂಘ ಪರಿವಾರದವರು ಪ್ರಾಭಲ್ಯರಾಗುತ್ತಿದ್ದಾರೆ ಎಂದು ನನಗೆ ಅನಿಸಿದಲ್ಲಿ ‘ರಿಸ್ಕ್’ ತೆಗೆದುಕೊಳ್ಳಲೂಬಹುದು. ‘ನಾನು ನಿಲ್ಲುವುದಿಲ್ಲ’ ಎಂದು ಹೇಳುತ್ತಿದ್ದರೂ, ಜೈನ್ (ಅಭಯಚಂದ್ರ) ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತಾರೆ ಎಂದು ನನ್ನ ಅನಿಸುತ್ತಿದೆ. ಅವರು ನಿಂತರೆ ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ,” ಎಂದು ತಮ್ಮ ಸ್ಪರ್ಧೆಯ ಸಾಧ್ಯತೆಯನ್ನು ಓಪನ್ ಮಾಡಿ ಕ್ಲೋಸ್ ಮಾಡಿದರು ಮಟ್ಟು.

“ಅಮೀನ್ ಮಟ್ಟು ಸ್ವತಃ ಮೂಡುಬಿದಿರೆ ಕ್ಷೇತ್ರಕ್ಕೆ ಸೇರಿದವರು. ಅವರಿಗೆ ಪಕ್ಷ ಟಿಕೆಟ್ ನೀಡಿದರೆ ನಾನು ಸಂಪೂರ್ಣ ಬೆಂಬಲಿಸುತ್ತೇನೆ; ನಾನು ಕಾಂಗ್ರೆಸ್ ಕಾರ್ಯಕರ್ತ. ಆದರೆ ನಾನಿನ್ನೂ ಸ್ಪರ್ಧಿಸುವುದಿಲ್ಲ ಎಂದು ಹೇಳಿಲ್ಲ. ಯುವ ರಾಜಕಾರಣಿಗಳಿಗೆ ಅವಕಾಶ ನೀಡಬೇಕು ಎಂದು ನಾನು ಹಿಂದೊಮ್ಮೆ ಹಾಗೆ ಹೇಳಿದ್ದೆ. ಆದರೆ ಇನ್ನೂ ಒಂದೂವರೆ ವರ್ಷ ಇದೆ ಈಗಲೇ ಹೇಳಲು ಸಾಧ್ಯವಿಲ್ಲ,” ಎಂದು ತಮ್ಮ ಸ್ಪರ್ಧೆಯ ಸಾಧ್ಯತೆಯನ್ನು ಮುಕ್ತವಾಗಿಡುತ್ತಾರೆ ಅಭಯಚಂದ್ರ ಜೈನ್.

“ಬಹುಶಃ ಮಟ್ಟು ಎಂಎಲ್ಸಿ ಆಗಬಹುದು. ಯಾಕೆಂದರೆ ಅವರ ಬಳಿ ಹಣವಿಲ್ಲ,” ಎಂದು ಅಭಿಪ್ರಾಯ ಪಡುತ್ತಾರೆ ಅಭಯಚಂದ್ರ ಜೈನ್. “ನಾನು ರಾಜಕೀಯದಿಂದ ದೂರ ಉಳಿಯಲು ಕಾರಣ ನನ್ನ ಬಳಿ ಹಣ ಇಲ್ಲದೆ ಇರುವುದೂ ಹೌದು. ಹಣ ಇಲ್ಲದಿದ್ದರೂ ಹೊಂದಿಸುವುದು ತೀರಾ ಕಷ್ಟವೇನಲ್ಲ. ದಕ್ಷಿಣ ಕನ್ನಡದಲ್ಲಿ ಕಡಿಮೆ ಖರ್ಚಿನಲ್ಲಿ ಚುನಾವಣೆ ಗೆಲ್ಲಬಹುದು,” ಎನ್ನುತ್ತಾರೆ ದಿನೇಶ್.

“ಮೂಡುಬಿದಿರೆ ಮುಸ್ಲಿಂ, ಕ್ರಿಶ್ಚಿಯನ್, ಬಂಟರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ. ಅವರು (ಮಟ್ಟು) ಚುನಾವಣೆಗೆ ನಿಂತರೆ ಶೇಕಡಾ 90 ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಮತ ಹಾಕಬಹುದು. ಇನ್ನು ಬಿಲ್ಲವರನ್ನು ಮ್ಯಾನೇಜ್ ಮಾಡಿದರೆ ಗೆಲುವು ಕಷ್ಟವೇನಲ್ಲ,” ಎಂಬ ಲೆಕ್ಕಾಚಾರವನ್ನು ಮಟ್ಟು ಆಪ್ತರು ಮುಂದಿಡುತ್ತಿದ್ದಾರೆ.

ಪತ್ರಕರ್ತರು ರಾಜಕಾರಣಿಗಳಾಗುವ ಬದಲಾವಣೆಗೆ ಕರ್ನಾಟಕ ಹಿಂದಿನಿಂದಲೂ ಸಾಕ್ಷಿಯಾಗಿದೆ. ಈ ಸಾಲಿಗೆ ದಿನೇಶ್ ಕೂಡಾ ಸೇರಲಿದ್ದಾರಾ? ಗೊತ್ತಿಲ್ಲ. ಕಾಲವೇ ಅದನ್ನು ನಿರ್ಧರಿಸಲಿದೆ.

Leave a comment

Top