An unconventional News Portal.

ಸಿಎಂ ಕಾರು, ಕಪ್ಪು ಕಾಗೆ ಮತ್ತು ಮಾಧ್ಯಮ ‘ಅಪಶಕುನಿ’ಗಳಿಗೆ ಆದ ಕಪಾಳಮೋಕ್ಷ!

ಸಿಎಂ ಕಾರು, ಕಪ್ಪು ಕಾಗೆ ಮತ್ತು ಮಾಧ್ಯಮ ‘ಅಪಶಕುನಿ’ಗಳಿಗೆ ಆದ ಕಪಾಳಮೋಕ್ಷ!

ಗುರುವಾರ ಮುಂಜಾನೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗೃಹ ಕಚೇರಿ ಕೃಷ್ಣಾ ಮುಂದೆ ಕನ್ನಡ ಸುದ್ದಿ ವಾಹಿನಿಗಳ ಪಾಲಿಗೆ ‘ಅಘಾತ’ಕಾರಿ ಘಟನೆಯೊಂದು ನಡೆದು ಹೋಯ್ತು. ಇಡೀ ರಾಜ್ಯವನ್ನೇ ‘ಬೆಚ್ಚಿ ಬೀಳಿಸಿದ’ ಪ್ರಕರಣದಲ್ಲಿ ಘಟನೆಗೆ ಕಾರಣವಾಗಿದ್ದು ಒಂದು ಸಣ್ಣ ಕಾಗೆ ಮರಿ…

ನಿರೂಪಣೆ ಯಾಕೋ ಕೊಂಚ ಅತಿಯಾಯಿತು ಅಂತ ಅನ್ನಿಸುತ್ತಿದೆಯಾ?

ಗುರುವಾರ ಸಂಜೆ ಹೊತ್ತಿಗೆ ಟಿವಿ ನೋಡುತ್ತಿದ್ದವರಿಗೆ ಇದೇ ಭಾವವೊಂದು ಮೂಡಿತ್ತು. ಮನೆ ಮುಂದೆ ನಿಲ್ಲಿಸಿದ್ದ ಮುಖ್ಯಮಂತ್ರಿ ಕಾರಿನ ಮೇಲೆ ಕೆಲ ನಿಮಿಷಗಳ ಕಾಲ ಕೂತ ಕಾಗೆ ಮರಿ ಅಲ್ಲಿಂದ ಕದಲಿಲ್ಲ. ಸಿಬ್ಬಂದಿ ಓಡಿಸಲು ಯತ್ನಿಸಿದರೂ ಆ ಕಾಗೆ ಕುಳಿತೇ ಇತ್ತು. ಕೊನೆಗೆ ಕಾಗೆ ಮರಿಯನ್ನು ಸಿಬ್ಬಂದಿ ಎತ್ತಿಕೊಂಡು ದೂರದಲ್ಲಿ ಬಿಟ್ಟರು. ಸಾಮಾನ್ಯ ದೃಶ್ಯವೊಂದು ‘ಎಕ್ಸ್’ಕ್ಲೂಸಿವ್’ ಪಟ್ಟ ಕಟ್ಟಿಕೊಂಡು ಟಿವಿಗಳಲ್ಲಿ ಭಿತ್ತರವಾಗಲು ಶುರುಮಾಡಿತು. ಅದಕ್ಕೆ ಶಕುನ, ನಂಬಿಕೆಗಳ ಬಣ್ಣ ಬಳಿಯುವ ಅತೀ ಬುದ್ದಿವಂತಿಕೆಯ ಪ್ರದರ್ಶನವೂ ನಡೆಯಿತು. ನ್ಯೂಸ್ ಚಾನಲ್ಗಳನ್ನು ನೋಡುತ್ತಿದ್ದವರಿಗೆ ಸಹಜವಾಗಿಯೇ ಇವರದ್ದು ಅತಿಯಾಯಿತು ಅಂತ ಅನ್ನಿಸಿತು.

crow

ಅಷ್ಟಕ್ಕೂ ಸಿಎಂ ಮನೆ ಮುಂದೆ ನಿಂತ ರಾಜಕೀಯ ಬೀಟ್ ವರದಿಗಾರನೊಬ್ಬನಿಗೆ ಇದೂ ಕೂಡ ಒಂದು ದೊಡ್ಡ ಸುದ್ದಿ ಅಂತ ಅನಿಸಿದ್ದೇ ಅಚ್ಚರಿ ಮೂಡಿಸುವ ವಿಚಾರ. ಬೀಟ್ ವರದಿಯನ್ನು ಹೆಕ್ಕಲು ಹೋದ ಮೇಲೆ ಏನಾದರೊಂದು ಸುದ್ದಿ ಕೊಡಲೇಬೇಕೆಂಬ ಒತ್ತಡ ಇದರ ಹಿಂದಿತ್ತೋ, ಪಕ್ಕದ ವರದಿಗಾರ ಕೊಟ್ಟು ಬಿಟ್ಟರೆ, ತಾನು ಬೈಸಿಕೊಳ್ಳಬೇಕು ಎಂಬ ಮನಸ್ಥಿತಿ ಕೆಲಸ ಮಾಡಿತೋ, ಅಂತು ಕಾಗೆ ಮರಿಯ ಸುದ್ದಿಯನ್ನು ನ್ಯೂಸ್ ರೂಂಗೆ ಆತ ತಲುಪಿಸಿಬಿಟ್ಟಿದ್ದ. ಆದರೆ, ನ್ಯೂಸ್ ರೂಂ ನಿರ್ವಹಿಸುವ ಹಿರಿತಲೆಗಳಲ್ಲಿ ವಿವೇಚನೆ ಕೆಲಸ ಮಾಡಬೇಕಲ್ಲವಾ? ಸಾಮಾಜಿಕ ಹೊಣೆಗಾರಿಕೆ ಹಾಳಾಗಿ ಹೋಗಲಿ, ಕಾಗೆ ಎಂಬ ಪಕ್ಷಿ ಅಪಶಕುನ ಅಲ್ಲ, ಪಕ್ಷಿಗಳ ಜಾತಿಯಲ್ಲಿಯೇ ಅತೀ ಬುದ್ದಿವಂತ ಪಕ್ಷಿ ಎಂಬ ಸಾಮಾನ್ಯ ಜ್ಞಾನವಾದರೂ ಇದ್ದಿದ್ದರೆ, ಕಾಗೆಗೆ ಶಕುನ ಬಣ್ಣ ಬಳಿಯುವ ಮಟ್ಟಕ್ಕೆ ಅವರು ಹೋಗುತ್ತಿರಲಿಲ್ಲ ಅನ್ನಿಸುತ್ತದೆ.

ಸಿಎಂ ಕಾರಿನ ಬಣ್ಣ ಯಾವುದು? ಯಾವ ಕಂಪೆನಿಗೆ ಸೇರಿದ್ದು? ಕಾರ್ ನಂಬರ್ ಏನು? ಸಿದ್ದರಾಮಯ್ಯನವರದು ವೃಶ್ಚಿಕ ರಾಶಿ, ವಿಶಾಖಾ ನಕ್ಷತ್ರ ಅಂತೆಲ್ಲ ಕಾಗೆ ಸುದ್ದಿಗೆ ರೆಕ್ಕೆ ಪುಕ್ಕ ಬಿಡಿಸಿ ಅತೀ ಬುದ್ಧಿವಂತಿಕೆ ಪ್ರದರ್ಶಿಸಲು ಹೊರಟವರಿಗೆ ಟಿಆರ್ಪಿ ಆಚೆಗೂ ಜಗತ್ತು ತಮ್ಮನ್ನು ಗಮನಿಸುತ್ತದೆ ಎಂಬ ವಿವೇಕ ಬೇಡವಾ? ನೋಡು ನೋಡುತ್ತಿದ್ದಂತೆ ಕರ್ನಾಟಕದ ಅತೀ ದೊಡ್ಡ ಸಮಸ್ಯೆ ಎಂಬಂತೆ ಕಾರಿನ ಮೇಲೆ ಕುಳಿತ ಕಾಗೆ ಮರಿಯನ್ನೇ ಪದೇ ಪದೇ ತೋರಿಸಿ ಇವರು ಸಾಧಿಸಿದ್ದಾದರೂ ಏನು? ಶತಮಾನಗಳಿಂದ ಮೌಢ್ಯವನ್ನು ಬೆನ್ನಿಗೆ ಕಟ್ಟಿಕೊಂಡು, ತನ್ನ ಬುದ್ದಿವಂತಿಕೆ ಆಚೆಗೆ ಅಪಖ್ಯಾತಿಗೆ ಒಳಗಾದ ಪಾಪದ ಪಕ್ಷಿಯನ್ನು ಮತ್ತದೇ ಹಳದಿ ಕಣ್ಣುಗಳಿಂದ ಜನ ನೋಡುವಂತೆ ಮಾಡಿದ್ದೇ ಸಾಧನೆ, ಅಲ್ವಾ?

ಇದು ಸಾರ್ವಜನಿಕರ ಅಭಿಪ್ರಾಯ ಅಲ್ವಾ?

ಇದು ಸಾರ್ವಜನಿಕರ ಅಭಿಪ್ರಾಯ ಅಲ್ವಾ?

ಇವತ್ತು ತಂತ್ರಜ್ಞಾನ ಬೆಳೆದಿದೆ. ಟಿವಿ ವೀಕ್ಷಕರೂ ಕೂಡ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ವೇದಿಕೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರಲ್ಲಿಯೂ ಚೂರು ಪಾರು ಬುದ್ದಿವಂತಿಕೆ ಎಂಬುದು ಕೆಲಸ ಮಾಡುತ್ತಿದೆ ಎಂದು ಒಂದು ಕ್ಷಣ ಯೋಚನೆ ಮಾಡಿದ್ದರೆ ಇಂತಹದೊಂದು ಅಪಸವ್ಯವನ್ನು ಸೃಷ್ಟಿಸುವ ಮಟ್ಟಕ್ಕೆ  ಮಾಧ್ಯಮಗಳ ಬುದ್ದಿವಂತರು ಹೋಗುತ್ತಿರಲಿಲ್ಲ. ಇಂತಹ ‘ಗಿಮಿಕ್ ಜರ್ನಲಿಸಂ’ ಇವತ್ತಲ್ಲ ನಾಳೆ ಛೀ, ಥೂಗೆ ಕಾರಣವಾಗುತ್ತದೆ ಮತ್ತು ಅದಕ್ಕೆ ಇವತ್ತು ವಿವೇಕ ರಹಿತ ಪತ್ರಿಕೋದ್ಯಮ ನಡೆಸುತ್ತಿರುವವರು ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದ್ದಾರೆ.

ಬಹುಶಃ ಕಾಗೆ ಸುದ್ದಿಯಲ್ಲೇ ಸುದ್ದಿ ವಾಹಿನಿಗಳು ಗುರುವಾರ ಕಳೆದು ಬಿಡುತ್ತಿದ್ದವೇನೋ? ಆದರೆ ರಾಷ್ಟ್ರೀಯ ವಾಹಿನಿಗಳು ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಲು ಕರ್ನಾಟಕ ಶಾಸಕರು ಲಂಚ ಬೇಡಿಕೆ ಇಟ್ಟ ತನಿಖಾ ವರದಿಯನ್ನು ಭಿತ್ತರಿಸುವ ಮೂಲಕ ತಟ್ಟೆಯಲ್ಲಿ ಸತ್ತು ಬಿದ್ದ ಕತ್ತೆಯನ್ನು ಎತ್ತಿ ತೋರಿಸಿದವು. ಇದ್ದಕ್ಕಿದ್ದಂತೆ ನ್ಯೂಸ್ ರೂಂ ವಾತಾವರಣ ಬದಲಾಯಿತು. ಕೆಲವು ಕ್ಷಣಗಳ ಹಿಂದೆ ಕಾಗೆ, ಶಕುನ ಅಂತ ಬಾಯಿ ಬಡಿದುಕೊಳ್ಳುತ್ತಿದ್ದವರು, ರಾಜಕಾರಣ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ಅಂತ ಚೀರಾಟ ಶುರು ಮಾಡಿದರು. ಇದು ಹೊರಗಿನಿಂದ ನೋಡುತ್ತಿದ್ದ ವೀಕ್ಷಕರ ಮುಂದೆ ಬೆತ್ತಲಾದ ಗಳಿಗೆ ಅದು. ಪಾಠ ಕಲಿಯುವ ಮನಸ್ಸಿರುವವರಿಗೆ ಇದೊಂದು ನೆನಪಿಟ್ಟುಕೊಳ್ಳಬೇಕಾದ ಕಪಾಳಮೋಕ್ಷ.

 

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top