An unconventional News Portal.

ಸಿಐಡಿ ಪೊಲೀಸರಿಂದ ಜಸ್ಟ್ ಮಿಸ್ಸಾದ ಶಿವಕುಮಾರ ಸ್ವಾಮಿ!

ಸಿಐಡಿ ಪೊಲೀಸರಿಂದ ಜಸ್ಟ್ ಮಿಸ್ಸಾದ ಶಿವಕುಮಾರ ಸ್ವಾಮಿ!

ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಸಿಐಡಿ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಭಾನುವಾರ ನಡೆದಿದೆ.

ಆರೋಪಿ ಶಿವಕುಮಾರ್ ಅಲಿಯಾಸ್ ಶಿವಕುಮಾರ ಸ್ವಾಮಿ, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ಡಯಗ್ನೋಸಿಸ್ ಸೆಂಟರ್ ಒಂದರಲ್ಲಿ ಎರಡು ದಿನಗಳಿಂದ ಚಿಕಿತ್ಸೆ ನೆಪದಲ್ಲಿ ತಂಗಿದ್ದ ಎಂಬ ಮಾಹಿತಿ ಪೊಲೀಸರಿಗೆ ತಡವಾಗಿ ಲಭ್ಯವಾಗಿತ್ತು. ಸಿಐಡಿಯ ಒಂದು ತಂಡ ಸದರಿ ಡಯಾಗ್ನೋಸಿಸ್ ಸೆಂಟರ್ಗೆ ಭೇಟಿ ನೀಡುವ ಮೊದಲೇ ಆತ ಅಲ್ಲಿಂದ ಪರಾರಿಯಾಗಿದ್ದ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಸದ್ಯ, ಚಿಕಿತ್ಸಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ, ಸೆಂಟರ್ ಮಾಲೀಕನನ್ನೂ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಗುರಿಪಡಿಸಲಾಗಿದೆ. ಈ ಸಮಯದಲ್ಲಿ ಶಿವಕುಮಾರ ಸ್ವಾಮಿ ಆಂಧ್ರ ಗಡಿಭಾಗದ ಗೌರಿಬಿದನೂರಿನ ಸುತ್ತಮುತ್ತ ಓಡಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಸೋಮವಾರ ಸಿಐಡಿಯ ಒಂದು ತಂಡ ಗೌರಿಬಿದನೂರಿನಲ್ಲಿ ಬೀಡು ಬಿಟ್ಟಿದೆ.

ಮುಂದುವರಿದ ವಿಚಾರಣೆ:

ಪ್ರಶ್ನೆ ಪತ್ರಿಕೆ ಪ್ರಕರಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ದೂರವಾಣಿ ಕರೆಗಳ ಬೆನ್ನು ಬಿದ್ದಿರುವ ಪೊಲೀಸರು, ಸುಮಾರು 200ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಹೀಗಿದ್ದೂ, ಪ್ರಕರಣದ ಕುರಿತು ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಪದೇ ಪದೇ ಆರೋಪಿಗಳು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವುದು, ತನಿಖಾಧಿಕಾರಿಗಳಿಗೇ ಅಚ್ಚರಿ ಮೂಡಿಸಿದೆ. ಪೊಲೀಸರ ತನಿಖೆಯ ಜಾಡು ಆರೋಪಿಗಳಿಗೆ ಸಿಗುತ್ತಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

ಇಂದು ಪರೀಕ್ಷೆ:

ಈ ನಡುವೆ ಮೂರನೇ ಬಾರಿಗೆ ರಸಾಯನ ಶಾಸ್ತ್ರದ ಮರು ಪರೀಕ್ಷೆ ಮಂಗಳವಾರ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಖುದ್ದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮುತುವರ್ಜಿ ವಹಿಸಿದ್ದಾರೆ. ವಿಚಕ್ಷಣೆಗಾಗಿ ಪ್ರತ್ಯೇಕ ಅಧಿಕಾರಿಗಳ ತಂಡವೊಂದನ್ನು ರಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

 

 

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top