An unconventional News Portal.

ಗಣಪತಿ ಆತ್ಯಹತ್ಯೆ ಪ್ರಕರಣ: ಸಿಐಡಿಯಿಂದ ‘ಬಿ ರಿಪೋರ್ಟ್’; ಬೆನ್ನಲ್ಲೇ ಜಾರ್ಜ್ ಪಟ್ಟಾಭಿಷೇಕ?

ಗಣಪತಿ ಆತ್ಯಹತ್ಯೆ ಪ್ರಕರಣ: ಸಿಐಡಿಯಿಂದ ‘ಬಿ ರಿಪೋರ್ಟ್’; ಬೆನ್ನಲ್ಲೇ ಜಾರ್ಜ್ ಪಟ್ಟಾಭಿಷೇಕ?

ರಾಜ್ಯದ ಜನ ಮತ್ತು ಡಿವೈಎಸ್ಪಿ ಗಣಪತಿ ಕುಟುಂಬಸ್ಥರ ನಿರೀಕ್ಷೆ ಕೊನೆಗೂ ನಿಜವಾಗಿದೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಮತ್ತು ಮಾಜಿ ಮಂತ್ರಿ ಕೆ.ಜೆ ಜಾರ್ಜ್ ಗೆ ಸಿಐಡಿ ‘ಕ್ಲೀನ್ ಚಿಟ್’ ನೀಡಿದೆ.

ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಡಿಕೇರಿ ಜೆಎಂಎಫ್‌ ನ್ಯಾಯಲಯದದಲ್ಲಿ ಶನಿವಾರ ಸಿಐಡಿ ಅಧಿಕಾರಿ ಚನ್ನೇಗೌಡ 162 ಪುಟಗಳ ‘ಬಿ ರಿಪೋರ್ಟ್’ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕೆ. ಜೆ. ಜಾರ್ಜ್ ಹಾಗೂ ಎಡಿಜಿಪಿ ಎ. ಎಂ. ಪ್ರಸಾದ್ ಹಾಗೂ ಐಜಿಪಿ ಪ್ರಣಬ್ ಮೊಹಾಂತಿಗೆ ಸಿಐಡಿ ಕ್ಲೀನ್ ಚಿಟ್ ನೀಡಿದೆ.

ಪ್ರಕರಣ ಸಂಬಂಧ ಸೆ. 19ರೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಸಿಐಡಿಗೆ ಆದೇಶಿಸಿದ್ದರು. ನ್ಯಾಯಾಲಯದ ಗಡುವಿಗೆ ಎರಡು ದಿನಗಳಿವೆ ಎನ್ನುವಾಗಲೆ ವರದಿ ಸಲ್ಲಿಕೆಯಾಗಿದೆ.

ಈ ಸಂಬಂಧ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಗಣಪತಿ ಸಹೋದರ ಮಾಚಯ್ಯ, “ಬಿ ರಿಪೋರ್ಟ್ ಹಾಕಲಾಗಿದೆ. ಇದರಿಂದ ನಮಗೆ ನ್ಯಾಯ ಸಿಕ್ಕಿಲ್ಲ. ಪ್ರಕರಣವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ನಾವು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್ಗೆ ಅರ್ಜಿ ಹಾಕಿದ್ದೇವೆ. ಒಬ್ಬ ಸಿಐಡಿಯ ಕೆಳದರ್ಜೆಯ ಅಧಿಕಾರಿಗಳು ಮಾಜಿ ಮಂತ್ರಿ, ಐಜಿಪಿ ಮಟ್ಟದ ಅಧಿಕಾರಿಗಳನ್ನು ಹೇಗೆ ವಿಚಾರಣೆ ಮಾಡಲು ಸಾಧ್ಯ? ಇದು ಗೊತ್ತಿರುವ ವಿಚಾರ. ಹಾಗಾಗಿ ನಾವು ಇಲ್ಲಿಗೇ ಪ್ರಕರಣವನ್ನು ಕೈ ಬಿಡುವುದಿಲ್ಲ,” ಎಂದು ಹೇಳಿದ್ದಾರೆ.

ಹೈಕೋರ್ಟ್‌ ಮೊರೆ:

ಶುಕ್ರವಾರವಷ್ಟೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಗಣಪತಿ ಅವರ ತಂದೆ ಕೆ. ಕುಶಾಲಪ್ಪ ಹಾಗೂ ಸಹೋದರ ಕೆ. ಮಾಚಯ್ಯ ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಸಂದರ್ಭ ಸಲ್ಲಿಸಿದ ಅರ್ಜಿಯಲ್ಲಿ ಕುಟುಂಬಸ್ಥರು, ”ಈ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್‌, ಹಿರಿಯ ಪೊಲೀಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಂತಿ, ಎ. ಎಂ. ಪ್ರಸಾದ್‌ ಆರೋಪಿಗಳಾಗಿದ್ದು, ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಆದರೆ ಮೂವರು ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಅವರು ಸರಕಾರದ ಮೇಲೆ ಹಾಗೂ ತನಿಖೆ ನಡೆಸುತ್ತಿರುವ ಸಿಐಡಿ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ಸಿಐಡಿ ತನಿಖೆಯನ್ನು ಮುಕ್ತಾಯಗೊಳಿಸಿ ‘ಬಿ’ ರಿಪೋರ್ಟ್‌ ಸಲ್ಲಿಸುವ ಸಾಧ್ಯತೆ ಇದೆ,” ಎಂದು ಶಂಕಿಸಿದ್ದರು. ಇದೀಗ ಅವರ ಶಂಕೆಯಂತೆಯೇ ‘ಬಿ ರಿಪೋರ್ಟ್’ ಬಿದ್ದಿದೆ.

”ಗಣಪತಿ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವದವರಲ್ಲ. ಇದರ ಹಿಂದೆ ಏನೋ ನಡೆದಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರ ಬಳಿ ಇದ್ದ ಸರ್ವಿಸ್ ರಿವಾಲ್ವಾರ್‌ನಿಂದ ಎರಡು ಸುತ್ತು ಗುಂಡು ಹಾರಿಸಲಾಗಿದೆ. ಆದರೆ, ಪೊಲೀಸರು ಗಣಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುವ ಅಗತ್ಯವಿದೆ,” ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

”ಹೈಕೋರ್ಟ್‌ ಈ ಪ್ರಕರಣದಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ತಿಳಿಸಿದ್ದರೂ ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ. ಮೊಹಂತಿ ಹಿಂದೆ ಸಿಐಡಿ ಮುಖ್ಯಸ್ಥರಾಗಿದ್ದರು. ಅವರು ತಮ್ಮ ಪ್ರಭಾವ ಬಳಸಿ ಪ್ರಕರಣ ಮುಚ್ಚಿಹಾಕುವಂತೆ ಒತ್ತಡ ಹೇರುವ ಸಾಧ್ಯತೆ ಇದೆ,” ಎಂದು ಅರ್ಜಿದಾರರು ಹೇಳಿದ್ದರು.

ವಿಚಾರಣೆಯಿಂದ ಜಡ್ಜ್ ಹಿಂದಕ್ಕೆ:

ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ನ್ಯಾ.ಎ. ಎಸ್‌. ಬೋಪಣ್ಣ ಏಕಾಏಕಿ ಹಿಂದೆ ಸರಿದ ಘಟನೆಯೂ ನಡೆದಿದೆ. ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳು ಯಾವುದೇ ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದಿದ್ದರು ಎಂದು ‘ವಿಜಯ ಕರ್ನಾಟಕ’ ವರದಿ ಮಾಡಿದೆ.

ಮತ್ತೆ ಮಂತ್ರಿ ಪಟ್ಟ?:

ಅತ್ತ ಕ್ಲೀನ್ ಚಿಟ್ ಸಿಗುವ ಮೊದಲೇ ಮಾಜಿ ಸಚಿವ, ಪ್ರಭಾವಿ ರಾಜಕಾರಣಿ, ಉದ್ಯಮಿ ಕೆ.ಜೆ ಜಾರ್ಜ್ ಮಂತ್ರಿಯಾಗಲು ಹೊರಟಿದ್ದಾರೆ. ಸದ್ಯದಲ್ಲೇ ಅವರು ಮಂತ್ರಿಯಾಗಲಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

ಜುಲೈ 7ರಂದು ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ‘ಟಿವಿ ವನ್’ ಸ್ಥಳೀಯ ವಾಹಿನಿಗೆ ಸಂದರ್ಶನ ನೀಡಿದ್ದ ಅವರು, ತನ್ನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಜಾರ್ಜ್ ಸೇರಿ ಈ ಮೂವರು ಕಾರಣ ಎಂದು ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದರು. ಈ ಪ್ರಕರಣ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತ್ತು. ಕೊನೆಗೆ ತೀವ್ರ ಸಾರ್ವಜನಿಕ ಒತ್ತಡದಿಂದ ಕೆ. ಜೆ. ಜಾರ್ಜ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದರು.

Top