An unconventional News Portal.

ನಿಸರ್ಗದ ವಿರುದ್ಧ ನೈಸರ್ಗಿಕ ಗೋಡೆ ನಿರ್ಮಾಣ; 100 ಬಿಲಿಯನ್ ಗಿಡ ನೆಡಲು ಚೀನಾ ಪಣ!

ನಿಸರ್ಗದ ವಿರುದ್ಧ ನೈಸರ್ಗಿಕ ಗೋಡೆ ನಿರ್ಮಾಣ; 100 ಬಿಲಿಯನ್ ಗಿಡ ನೆಡಲು ಚೀನಾ ಪಣ!

ಚೀನಾ ಅಂದ್ರೆ ನೆನಪಾಗೋದು ಮಹಾ ಗೋಡೆ. ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ಗೋಡೆಯನ್ನು ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಾಣ ಮಾಡಲಾಗಿತ್ತು; ಹೀಗಂತ ಇತಿಹಾಸ ಹೇಳುತ್ತೆ. ಆದ್ರೆ ಈಗ ಮತ್ತೆ ಇಂತಾದ್ದೇ ಒಂದು ಗೋಡೆಯನ್ನು ನಿರ್ಮಿಸಲು ಹೊರಟಿದೆ ಚೀನಾ ಸರ್ಕಾರ. ಈ ಹೊಸ ಗೋಡೆಗೆ ಕಲ್ಲು, ಮಣ್ಣುಗಳನ್ನು ಬಳಸದಿರಲು ಚೀನಾ ಸರಕಾರ ನಿರ್ಧರಿಸಿದೆ. ಬದಲಿಗೆ, ಪಕ್ಕಾ ನೈಸರ್ಗಿಕ ಗೋಡೆ ಇದಾಗಲಿದೆ. ಇನ್ನೊಂದು ಅರ್ಥದಲ್ಲಿ ಇದನ್ನು ಚೀನಾದ ನೈಸರ್ಗಿಕ ಮಹಾ ಗೋಡೆ ಎನ್ನಬಹುದು.

ಚೀನಾದಲ್ಲಿ ಹಸಿರು ಮಹಾ ಗೋಡೆ ನಿರ್ಮಾಣಕ್ಕೆ ಕಾರಣ ಗೋಬಿ ಮರುಭೂಮಿ. ವಿಶ್ವದ ಐದನೇ ಅತೀದೊಡ್ಡ ಮರುಭೂಮಿ ಎಂಬ ಹಣೆಪಟ್ಟಿ ಇದಕ್ಕಿದೆ. ವರ್ಷದಿಂದ ವರ್ಷಕ್ಕೆ ಈ ಮರುಭೂಮಿಯ ವಿಸ್ತೀರ್ಣ ಹೆಚ್ಚಾಗುತ್ತಿದೆ. ಮುಂದೊಂದು ದಿನ ಇದು ತನ್ನ ವ್ಯಾಪ್ತಿ ಮೀರಿ ಹಬ್ಬುವ ಆತಂಕವನ್ನು ಪರಿಸರ ತಜ್ಞರು ವ್ಯಕ್ತಪಡಿಸಿದ್ದರು. ಹೀಗಾಗಿ, ಮರುಭೂಮಿಯ ಬೆಳವಣಿಗೆಯನ್ನು ತಡೆಯಲು ಚೀನಾ ಸರಕಾರ ಮತ್ತೆ ನಿಸರ್ಗ ನೀತಿಗೆ ತಲೆಬಾಗಿದೆ.

7_China-Great-Green-Wall

ಗೋಬಿ ಮರುಭೂಮಿ ಇರೋದು ಚೀನಾ ಮತ್ತು ಮಂಗೋಲಿಯಾ ನಡುವಿನ ಗಡಿಭಾಗದಲ್ಲಿ. ಉಬಯ ದೇಶಗಳ ನಡುವಿನ ಗಡಿಭಾಗವನ್ನು ಮರುಭೂಮಿ ಆಕ್ರಮಿಸಿಕೊಳ್ಳುತ್ತ ಬರುತ್ತಿದ್ದಂತೆ ಚೀನಾ ಸರಕಾರ ಎಚ್ಚೆತ್ತುಕೊಂಡಿತು. 1978ರಲ್ಲಿಯೇ ಇದರ ಪರಿಣಾಮಗಳನ್ನು ವಿಜ್ಞಾನಿಗಳು ಗುರುತಿಸಿದರು. ಅವತ್ತಿಗೆ ಅವರು ಕಂಡುಕೊಂಡಿದ್ದು, ಮರುಭೂಮಿಯನ್ನು ಬೆಳೆಯದಂತೆ ತಡೆಯಲು ನಿಸರ್ಗ ಸಹಜವಾದ ಗೋಡೆಯೊಂದನ್ನು ನಿರ್ಮಿಸುವುದು. ಈ ಯೋಜನೆಗೀಗ ಸುಮಾರು 73 ವರ್ಷ ವಯಸ್ಸು.

‘ದಿ ಗ್ರೇಟ್ ಗ್ರೀನ್ ವಾಲ್’ ಯೋಜನೆ 2050ಕ್ಕೆ ಪೂರ್ಣಗೊಳ್ಳಲಿದೆ ಎಂದು ಚೀನಾ ಹೇಳಿಕೊಂಡಿದೆ. ಒಟ್ಟು 4500 ಕಿ. ಮೀ ಪ್ರದೇಶದಲ್ಲಿ ಸುಮಾರು 100 ಬಿಲಿಯನ್ ಮರಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಸರಕಾರದ ಜತೆಗೆ ಹಲವು ಸಂಘಟನೆಗಳು ಕೈ ಜೋಡಿಸಿವೆ. ಈವರೆಗೆ ಒಟ್ಟು 66 ಬಿಲಿಯನ್ ಮರಗಳನ್ನು ನಡೆಲಾಗಿದೆ.

ಈವರೆಗೆ 55 ಲಕ್ಷ ಚದರ ಅಡಿಯಲ್ಲಿ ಮರಗಳು ಬೆಳೆದು ನಿಂತಿವೆ. ಇದು ಜಗತ್ತಿನಲ್ಲಿಯೇ ಅತೀ ದೊಡ್ಡ ಮಾನವ ನಿರ್ಮಿತ ಅರಣ್ಯ ಪ್ರದೇಶ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಜಾಗತಿಕ ತಾಪಮಾನ ಇಳಿಕೆಗಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮಗಳು ನಡೆಯುತ್ತಿವೆ. ಇದಕ್ಕೆ ಹೋಲಿಸಿದರೆ, ಚೀನಾ ಒಂದೇ ಉಳಿದ ಜಗತ್ತಿನ ಅಷ್ಟೂ ಸಸಿಪಾತಿಗಿಂತ ಎರಡೂವರೆ ಪಟ್ಟು ಹೆಚ್ಚಿನ ಸಸಿ ನೆಟ್ಟಿದೆ.

4_China-Great-Green-Wall

ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಳ ಅಂತರಾಷ್ಟ್ರೀಯ ಸಮಸ್ಯೆ ಎಂದು ಮುಂದುವರಿದ ದೇಶಗಳು ಒಪ್ಪಿಕೊಂಡಿವೆ. ಇದಕ್ಕಾಗಿ ಕಲ್ಲಿದ್ದಲಿನ ಬಳಕೆಯನ್ನು ಕಡಿಮೆ ಮಾಡುವ ಕುರಿತು ಒಪ್ಪಂದ ಮಾಡಿಕೊಂಡಿವೆ. ಈ ಸಮಯದಲ್ಲಿ ಮಾನವ ನಿರ್ಮಿತ ಅರಣ್ಯ ಪ್ರದೇಶದ ಮಾದರಿ ಎಲ್ಲರ ಗಮನವನ್ನು ಸಹಜವಾಗಿಯೇ ಸೆಳೆಯುತ್ತಿದೆ. ಮುಂದೊಂದಿನ ನಮ್ಮದೇ ರಾಜಸ್ಥಾನದ ಮರುಭೂಮಿಯಲ್ಲಿ ಹೀಗೊಂದು ದಟ್ಟಾರಣ್ಯವನ್ನು ನಿರ್ಮಿಸುವ ಯೋಜನೆ ರೂಪುಗೊಂಡರೂ ಅಚ್ಚರಿ ಏನಿಲ್ಲ.

Top