An unconventional News Portal.

ಕ್ಷಮಿಸಿ; ಇದು ಮಾನವೀಯತೆಯ ಸಾವು: ಹಿಟ್ಲರ್, ಭೋಪಾಲ್ ದುರಂತಗಳನ್ನು ನೆನಪಿಸಿದ ‘ರಾಸಾಯನಿಕ ದಾಳಿ’

ಕ್ಷಮಿಸಿ; ಇದು ಮಾನವೀಯತೆಯ ಸಾವು: ಹಿಟ್ಲರ್, ಭೋಪಾಲ್ ದುರಂತಗಳನ್ನು ನೆನಪಿಸಿದ ‘ರಾಸಾಯನಿಕ ದಾಳಿ’

ಸಿರಿಯಾದಲ್ಲಿ ಸರಕಾರ, ಜನ, ಐಸಿಲ್ (ಹಿಂದಿನ ಐಸಿಸ್ಬಂಡುಕೋರರ ನಡುವೆ ನಡೆಯುತ್ತಿರುವ 6 ವರ್ಷಗಳ ಕಾದಾಟ ಈಗ ಆತಂಕಕಾರಿ ತಿರುವನ್ನು ತೆಗೆದುಕೊಂಡಿದೆ. 

ಪರಿಣಾಮ; ಭಯಾನಕ. ರಾಸಾಯನಿಕ ದಾಳಿಗೆ ನೂರಾರು ಜನ ಸಾವನ್ನಪ್ಪಿದ್ದು ಅರ್ಧ ಸಹಸ್ರಕ್ಕಿಂತ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಡಾಲ್ಫ್ ಹಿಟ್ಲರನ ವಿಷಾನಿಲ ಚೇಂಬರ್ ಗಳು, ಭೋಪಾಲ್ ಅನಿಲ ದುರಂತಗಳನ್ನು ಕಿವಿಯಾರೆ ಕೇಳಿ, ಪುಸ್ತಕಗಳಲ್ಲಿ ಓದಿದ್ದ ಹೊಸ ತಲೆಮಾರು, ರಾಸಾಯನಿಕ ದಾಳಿಗಳ ಬೀಭತ್ಸತೆಯನ್ನು ಪ್ರತ್ಯಕ್ಷ ಕಂಡು ಬೆಚ್ಚಿಬಿದ್ದಿದೆ; ಉಸಿರಾಡಲಾಗದೇ ವಿಲ ವಿಲ ಒದ್ದಾಡುವ ಜೀವಗಳನ್ನು ಕಂಡು ವಿಶ್ವವೇ ಪತರಗುಟ್ಟಿ ಹೋಗಿದೆ. ಅದೇ ವೇಳೆಗೆ ಹಿಂಸಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರ ಕ್ರೂರ ಮನಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಇದು ಕನ್ನಡಿ ಹಿಡಿಯುತ್ತಿದೆ. 

ಆಗಿದ್ದೇನು?:

ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ವಾಯವ್ಯ ಭಾಗದ ಖಾನ್‌ಶೇಕ್‌ಹೌನ್‌ ಪಟ್ಟಣದ ಮೇಲೆ ಮಂಗಳವಾರ ಮುಂಜಾನೆ ರಾಸಾಯನಿಕ ದಾಳಿ ನಡೆದಿದೆ. ಇದ್ಲಿಬ್ ಪ್ರಾಂತ್ಯದಲ್ಲಿ ನಡೆದ ಈ ದಾಳಿಯಲ್ಲಿ ಅಧಿಕೃತವಾಗಿ 74 ಜನ ಸಾವನ್ನಪ್ಪಿದ್ದರೆ, 557ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಘಟನಾ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಿದ ನಂತರವೂ ಸಾಕಷ್ಟು ಜನ ಪ್ರಾಣ ಬಿಟ್ಟಿದ್ದಾರೆ

ಇದ್ಲಿಬ್ ಪಟ್ಟಣದ ಹೆಚ್ಚಿನ ಆಸ್ಪತ್ರೆಗಳು ಗಾಯಾಳುಗಳಿಂದಲೇ ತುಂಬಿ ಹೋಗಿವೆ. ಇದ್ಲಿಬ್ ಪ್ರಾಂತ್ಯದ ಆರೋಗ್ಯಾಧಿಕಾರಿ ಮುಂಜಿಲ್ ಖಾಲಿಲ್ , “ಸಂತ್ರಸ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಚಿಕಿತ್ಸೆ ನೀಡಲು ವೈದ್ಯರು ಒದ್ದಾಡುತ್ತಿದ್ದಾರೆ,” ಎಂಬ ಮಾಹಿತಿ ನೀಡಿದ್ದಾರೆ. “ಇಲ್ಲಿಯವರೆಗೆ 74 ಜನ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 107 ರ ಗಡಿ ದಾಟುವ ಸಾಧ್ಯತೆ ಇದೆ. ಹಲವರು ನಾಪತ್ತೆಯಾಗಿದ್ದು, ದಾಳಿಯಲ್ಲಿ ಅಸುನೀಗಿರುವ ಸಾಧ್ಯತೆ ಇದೆ,” ಎಂದವರು ಹೇಳಿದ್ದಾರೆ.

ದಾಳಿಯಲ್ಲಿ 557 ಜನರಿಗೆ ಗಾಯಗಳಾಗಿವೆ ಎಂಬುದು ಖಾಲಿಲ್ ಮಾಹಿತಿ.

ಘಟನೆಗೆ ಸಂಬಂಧಿಸಿದಂತೆ ಇಂಗ್ಲೆಂಡ್ ಮೂಲದ ಸಿರಿಯಾ ಕಣ್ಗಾವಲು ಸಂಸ್ಥೆಯೊಂದು 99 ಜನ ಅಸುನೀಗಿದ್ದಾರೆ. ಇವರಲ್ಲಿ 37 ಮಕ್ಕಳೂ ಸೇರಿದ್ದಾರೆ ಎಂದು ಬುಧವಾರ ಹೇಳಿದೆ. ಸಾವಿನ ಸಂಖ್ಯೆ ಕುರಿತಂತೆ ಬೇರೆ ಬೇರೆ ಸಂಸ್ಥೆಗಳು ಭಿನ್ನ ಲೆಕ್ಕವನ್ನು ಮುಂದಿಡುತ್ತಿವೆ. ಆದರೆ ಎಲ್ಲರೂ ನೂರರ ಆಸುಪಾಸಿನಲ್ಲೇ ಇದ್ದಾರೆ.

ಮನಕಲಕುವ ದೃಶ್ಯಗಳು:

ರಾಸಾಯನಿಕ ದಾಳಿಗೆ ಒಳಗಾದ ಹೆಚ್ಚಿನವರು ವಿಷಾನಿಲ ಸೇವಿಸಿ ಉಸಿರುಕಟ್ಟಿ ಮೃತ ಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಹೋದ ಎಷ್ಟೋ ಕಾರ್ಯಕರ್ತರು ಆಕ್ಸಿಜನ್ ಪ್ಯಾಕೇಟುಗಳ ಮೂಲಕ ಉಸಿರಾಡುತ್ತಿರುವ ಚಿತ್ರಗಳು ಸ್ಥಳದಲ್ಲಿರುವ ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತಿವೆ. ಕೆಲವರು ವಾಂತಿ ಮಾಡಿಕೊಂಡು ಸತ್ತಿದ್ದಾರೆ. ಇನ್ನೂ ಕೆಲವರು ವಿಷಾನಿಲದ ಸೇವನೆಗೆ ಪ್ರಜ್ಞಾಹೀನರಾಗಿದ್ದಾರೆ. ಇನ್ನುಳಿದವರ ಬಾಯಲ್ಲಿ ನೊರೆ ಕಂಡು ಬಂದಿದೆ ಎಂದು ಸಿರಿಯಾದ ಯುದ್ಧ ಭೂಮಿಯಿಂದ ನಿರಂತರ ಸುದ್ದಿಗಳನ್ನು ಭಿತ್ತರಿಸುತ್ತಿರುವ ಅಲ್ ಜಝೀರಾಸುದ್ದಿ ವಾಹಿನಿ ಹೇಳಿದೆ. ಸಿರಿಯಾದ ಮಾನವ ಹಕ್ಕುಗಳ ಕಣ್ಗಾವಲು ಸಮಿತಿ ಕೂಡಾ ಇದೇ ಮಾಹಿತಿ ನೀಡಿದೆ.

“ಖಾನ್‌ಶೇಕ್‌ಹೌನ್‌ ಪಟ್ಟಣದ ಮೇಲೆ ಹಾರಾಟ ನಡೆಸಿದ್ದ ಯುದ್ಧ ವಿಮಾನ ವೊಂದು ವಿಷಯುಕ್ತ ಅನಿಲವನ್ನು ನಮ್ಮ ಮೇಲೆ ಸಿಂಪಡಿಸಿತು,” ಎಂಬುದಾಗಿ ದಾಳಿಗೆ ಒಳಗಾದವರು ನೀಡಿದ ಹೇಳಿಕೆಗಳನ್ನು ಇದೇ ಅಲ್ ಜಝೀರಾ ದಾಖಲಿಸಿದೆ.

ಬಾಣಲೆಯಿಂದ ಬೆಂಕಿಗೆ:

ಒಂದೆಡೆ ಪರಿಸ್ಥಿತಿ ಪೂರ್ತಿ ಹದಗೆಟ್ಟಿದೆ. ಹೀಗಿರುವಾಗಲೇ ಗಾಯಗೊಂಡವರು ಮತ್ತು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದ ಇದ್ಲಿಬ್ ನಗರದ ಪ್ರಮುಖ ಆಸ್ಪತ್ರೆ ಮೇಲೆ ಬುಧವಾರ ಮತ್ತೆ ಬಾಂಬ್‌ ದಾಳಿ ನಡೆದಿದೆ ಎಂದು ಯುದ್ಧ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿರಿಯನ್ ಸಿವಿಲ್ ಡಿಫೆನ್ಸ್ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ಪರಿಣಾಮ “ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಇನ್ನು ಚಿಕಿತ್ಸೆ ನೀಡುವುದು ಅಸಾಧ್ಯ; ನಾವು ಅಘಾತಕ್ಕೆ ಒಳಗಾಗಿದ್ದೇವೆ,” ಎಂದು ಖಾಲಿಲ್ ಹೇಳಿದ್ದಾರೆ. ಒಂದು ಕಾಲದಲ್ಲಿ ಈ ಆಸ್ಪತ್ರೆ ತಿಂಗಳಿಗೆ 30,000 ಜನರಿಗೆ ಚಿಕಿತ್ಸೆ ನೀಡಿತ್ತಿತ್ತು. ಇದೇ ರೀತಿಯಲ್ಲಿ ಖಾನ್‌ಶೇಕ್‌ಹೌನ್‌ ನಗರದ ಆಸ್ಪತ್ರೆಯೊಂದರ ಮೇಲೆಯೂ ಬುಧವಾರ ದಾಳಿ ನಡೆಸಲಾಗಿದೆ.

ರಾಸಾಯನಿಕ ಯಾವುದು?:

ಆದರೆ ಈ ವಿಷಾನಿಲ ದಾಳಿಗೆ ಯಾವ ರಾಸಾಯನಿಕ ಬಳಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ರಾಸಾಯನಿಕ ದಾಳಿಗೆ ಒಳಗಾದವರ ಲಕ್ಷಣಗಳನ್ನು ಗಮನಿಸಿದರೆ ನರ್ವ್ ಏಜೆಂಟ್‘ (ನರಮಂಡಲವನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯದ ವಿಷ) ಬಳಸಲಾಗಿದೆ ಎಂಬ ತೀರ್ಮಾನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಬಂದಿದೆ. ಸಾವಿಗೀಡಾದವರು ಮತ್ತು ಆಸ್ಪತ್ರೆ ಸೇರಿದವರ ದೇಹದಲ್ಲಿ ಯಾವುದೇ ಗಾಯಗಳಾಗಿಲ್ಲ. ಬಹುತೇಕರಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದೆ. ಇದರಿಂದ ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆ ಅಂದಾಜಿಸಿದೆ. ನರ್ವ್ ಏಜೆಂಟ್ ಗೆ ಸೇರುವ ಆರ್ಗನೋ ಫೋರಸ್ ರಾಸಾಯನಿಕ ಸೇವಿಸಿದಾಗ ಕಂಡುಬರುವ ಲಕ್ಷಣಗಳು ಕೆಲವರಲ್ಲಿ ಕಂಡು ಬಂದಿವೆ ಎಂದು ಅದು ಹೇಳಿದೆ.

Syria chemical attack

ದಾಳಿಯ ಬಗ್ಗೆ ಗೊಂದಲಗಳು:

ನಾಗರಿಕರ ಮೇಲೆ ಇಂಥಹದ್ದೊಂದು ಅಮಾನವೀಯ ದಾಳಿ ನಡೆಸಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಎಲ್ಲರೂ ನಾವಲ್ಲ ನಾವಲ್ಲ ಎಂದು ಮೈಕೊಡವಿಕೊಳ್ಳುತ್ತಿದ್ದಾರೆ. ಸಿರಿಯಾದ ವಿಪಕ್ಷ ಸಿರಿಯಾ ರಾಷ್ಟ್ರೀಯ ಮೈತ್ರಿಕೂಟಸರಕಾರದ ಯುದ್ಧ ವಿಮಾನಗಳು ಈ ದಾಳಿ ನಡೆಸಿದ್ದಾಗಿ ಹೇಳಿದೆಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸದ್ ಸೇನೆ ಖಾನ್‌ಶೇಕ್‌ಹೌನ್‌ ಮೇಲೆ ದಾಳಿ ನಡೆಸಿದ್ದನ್ನು ಮಿತ್ರ ರಾಷ್ಟ್ರ ರಷ್ಯಾ ಒಪ್ಪಿಕೊಂಡಿದೆ. “ಆದರೆ ನಾವು ರಾಸಾಯನಿಕ ದಾಳಿ ನಡೆಸಿದ್ದೇವೆ ಎಂಬ ವರದಿ ಸುಳ್ಳು. ಮಾತ್ರವಲ್ಲ ನಾವು ಯಾವತ್ತೂ ಅಂಥಹ ರಾಸಾಯನಿಕಗಳನ್ನೆಲ್ಲಾ ಬಳಸುವುದಿಲ್ಲ,” ಎಂದು ಸಿರಿಯಾದ ಭದ್ರತಾ ಮೂಲಗಳು ಹೇಳಿವೆ.

ಸ್ಥಳದಲ್ಲಿ ವಿಷಕಾರಿ ಅನಿಲ ಬಿಡುಗಡೆಯಾಗಿದ್ದನ್ನು ರಷ್ಯಾ ನಿನ್ನೆಯ ವಿಶ್ವಸಂಸ್ಥೆ ಭದ್ರತಾ ಸಭೆಯಲ್ಲಿ ಒಪ್ಪಿಕೊಂಡಿದೆ. ಬಂಡುಕೋರರ ಶಸ್ತ್ರಾಸ್ತ್ರ ಉಗ್ರಾಣದ ಮೇಲೆ ಸಿರಿಯಾ ಪಡೆ ದಾಳಿ ನಡೆಸಿದಾಗ ವಿಷಕಾರಿ ಅನಿಲ (ಟಾಕ್ಸಿಕ್ ಗ್ಯಾಸ್) ಬಿಡುಗಡೆ ಯಾಗಿದೆ ಎಂಬುದು ರಷ್ಯಾ ರಕ್ಷಣಾ ಸಚಿವಾಲಯದ ವಾದ. “ಈ ಗೋದಾಮಿನಲ್ಲಿ ವಿಷಕಾರಿ ವಸ್ತುಗಳಿಂದ ಕೂಡಿದ ಬಾಂಬ್ ತಯಾರಿಸಲಾಗುತ್ತಿತ್ತು. ಈ ಬಗ್ಗೆ ನಮ್ಮ ಬಳಿ ಖಚಿತ ಮಾಹಿತಿಗಳಿವೆ,” ಎಂದು ವ್ಲಾಡಿಮೀರ್ ಪುಟಿನ್ ಸರಕಾರ ಹೇಳಿದೆ.

ಇದಕ್ಕೆ ಧ್ವನಿಗೂಡಿಸಿರುವ ವಿಶ್ವಸಂಸ್ಥೆಯ ಸಿರಿಯಾ ಪ್ರತಿನಿಧಿ ಮುಂಜೆರ್ ಮುಂಜೆರ್ ,” ಟರ್ಕಿ ಸರಕಾರದ ಮೂಲಕ ಟಾಕ್ಸಿಕ್ ರಾಸಾಯನಿಕಗಳನ್ನು ಭಯೋತ್ಪಾದಕರು ಪಡೆದಿದ್ದಾರೆ,” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ದಾಳಿ ನಡೆಸಿದ್ದು ಯಾರು ಎಂಬುದು ಗೊಂದಲದ ಗೂಡಾಗಿದೆ.

ರಾಸಾಯನಿಕ ದಾಳಿ ಕುರಿತು ತನಿಖೆ ಆರಂಭಿಸಿರುವುದಾಗಿ ವಿಶ್ವಸಂಸ್ಥೆಯ ತನಿಖಾ ಆಯೋಗ ಹೇಳಿದ್ದು, ನಂತರವಷ್ಟೇ ಘಟನೆಯ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಸಿರಿಯಾ ಮತ್ತು ವಿಶ್ವಸಂಸ್ಥೆ:

ಇಡೀ ವಿಶ್ವಕ್ಕೆ ಅದರಲ್ಲೂ ಪ್ರಮುಖವಾಗಿ ಯುರೋಪಿಯನ್ ದೇಶಗಳ ಪಾಲಿಗೆ ಕಗ್ಗಂಟಾಗಿರುವ ಸಿರಿಯಾದ ಭವಿಷ್ಯದ ಕುರಿತು ಚರ್ಚಿಸಲು ಐರೋಪ್ಯ ಒಕ್ಕೂಟ ಮತ್ತು ವಿಶ್ವಸಂಸ್ಥೆ ಬ್ರಸಲ್ಸ್ ನಲ್ಲಿ ಮಂಗಳವಾರ ಸಮ್ಮೇಳನವೊಂದನ್ನು ಆಯೋಜಿಸಿತ್ತು. ಈ ಸಮ್ಮೇಳನ ಆರಂಭದ ದಿನವೇ ಈ ದಾಳಿ ನಡೆದಿರುವುದು ಕಾಕತಾಳೀಯವೋ, ಉದ್ದೇಶಪೂರ್ವಕವೋ ತಿಳಿದು ಬಂದಿಲ್ಲ.

ಫ್ರಾನ್ಸ್ ಒತ್ತಾಯ ಹಾಗೂ ವಿಷಯದ ಗಂಭೀರತೆಯ ಆಧಾರದಲ್ಲಿ ನಿನ್ನೆ ಸಿರಿಯಾದ ರಾಸಾಯನಿಕ ದಾಳಿಯ ಬಗ್ಗೆ ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಸೇರಿತ್ತು. ಸಭೆಯಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕಾ ಕರಡು ಮಸೂದೆಯನ್ನು ಸಿದ್ದಪಡಿಸಿದ್ದು ಘಟನೆಯ ಸಂಪೂರ್ಣ ತನಿಖೆಗೆ ಒತ್ತಾಯಿಸಿವೆ. ಆರ್ಗನೈಜೇಷನ್ ಆಫ್ ದಿ ಪ್ರೊಹಿಬಿಷನ್ ಆಫ್ ಕೆಮಿಕಲ್ ವೆಪನ್ಸ್ (ಒಪಿಸಿಡಬ್ಲ್ಯೂ) ಮೂಲಕ ತನಿಖೆಗೆ ಈ ಕರಡಿನಲ್ಲಿ ಆಗ್ರಹಿಸಲಾಗಿತ್ತು.ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಷ್ಯಾ ಸರಸಗಟಾಗಿ ತಿರಸ್ಕರಿಸಿದೆ.


ಕರಡು ಮಸೂದೆಯಲ್ಲಿದ್ದ ಅಂಶಗಳೆಂದರೆ,

  • ತಕ್ಷಣ ವಿಶ್ವಸಂಸ್ಥೆ ಮತ್ತು ಒಪಿಸಿಡಬ್ಲ್ಯೂ ತಂಡ ಘಟನೆಯ ತನಿಖೆ ಮಾಡಿ ಕಾರಣ ಪತ್ತೆ ಹಚ್ಚಬೇಕು.
  • ಸಿರಿಯಾ ತನ್ನ ಎಲ್ಲಾ ಯುದ್ಧ ವಿಮಾನಗಳ ಹಾರಾಟದ ಯೋಜನೆಗಳು, ದಾಖಲೆಗಳನ್ನು ಮತ್ತು ದಾಳಿಯ ದಿನದ ಮಿಲಿಟರಿಯ ಕಾರ್ಯಯೋಜನೆಗಳ ವಿವರಗಳನ್ನು ನೀಡಬೇಕು.
  • ಎಲ್ಲಾ ಹೆಲಿಕಾಫ್ಟರ್ ಕಮಾಂಡರ್ ಗಳ ಹೆಸರುಗಳನ್ನು ನೀಡಬೇಕು. ಮತ್ತು ಕರೆದಾಗ 5 ದಿನಗಳೊಳಗೆ ತಮ್ಮ ಮೇಲಧಿಕಾರಿಗಳ ಜತೆ ಬಂದು ತನಿಖಾ ತಂಡದೆದುರು ಹಾಜರಾಗಬೇಕು.
  • ಅನುಮಾನ ಇರುವ ವಾಯು ನೆಲೆಯಲ್ಲಿ ತನಿಖೆ ನಡೆಸಲು ತನಿಖಾ ತಂಡಕ್ಕೆ ಸಿರಿಯಾ ಸರಕಾರ ಅವಕಾಶ ನೀಡಬೇಕು.

ಆದರೆ ಇದೆಲ್ಲಾ ಸಾಧ್ಯವೇ ಇಲ್ಲ. ಇದು ಸಿರಿಯಾ ವಿರೋಧಿಮಸೂದೆ ಎಂದು ರಷ್ಯಾ ಕಿಡಿಕಾರಿದೆ. ಮಾತ್ರವಲ್ಲ ತಾನು ಅಸಾದ್ ಸರಕಾರಕ್ಕೆ ಮಿಲಿಟರಿ ಸಹಾಯ ಮುಂದುವರಿಸುವುದಾಗಿ ಹೇಳಿದೆ.

ಸದ್ಯಕ್ಕೆ ಭದ್ರತಾ ಸಮಿತಿಯಲ್ಲಿ ಸಿರಿಯಾ ಸಂಬಂಧಿಸಿದಂತೆ ಮತದಾನ ನಡೆದಿಲ್ಲ. ಮತದಾನ ನಡೆದರೂ ರಷ್ಯಾ ವೀಟೋ ಅಧಿಕಾರ ಹೊಂದಿರುವುದರಿಂದ ಉಳಿದ ರಾಷ್ಟ್ರಗಳಿಗೆ ತಲೆನೋವಾಗಿದೆ. ಆದರೆ ಪಾಶ್ಚಿಮಾತ್ಯ ದೇಶಗಳು ಯಾವುದೇ ವಿನಾಯಿತಿಗೆ ಸಿದ್ಧವಿಲ್ಲ. ಒಂದೊಮ್ಮೆ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ವಿಶ್ವಸಂಸ್ಥೆ ವಿಫಲವಾಗಿದ್ದೇ ಆದಲ್ಲಿ ತಾನು ಏಕಾಂಗಿಯಾಗಿ ಕಠಿಣ ನಿರ್ಧಾರಕ್ಕೆ ಮುಂದಾಗುವುದಾಗಿ ಅಮೆರಿಕಾ ಎಚ್ಚರಿಕೆ ನೀಡಿದೆ.

ರಾಸಾಯನಿಕ ದಾಳಿಗಳ ಇತಿಹಾಸ:

syriacontrolmapಇದು ಸಿರಿಯಾ ಪಾಲಿಗೆ ಹೊಸ ರಾಸಾಯನಿಕ ದಾಳಿಯೇನೂ ಅಲ್ಲ. 2011 ರ ನಂತರ ಸಿರಿಯಾದಲ್ಲಿ ನೂರಾರು ರಾಸಾಯನಿಕ ದಾಳಿಗಳು ನಡೆದ ವರದಿಯಾಗಿವೆ. ಆದರೆ ಈ ಬಾರಿ ನಡೆದ ದಾಳಿ ಸಿರಿಯಾ ಅಂತರ್ಯುದ್ಧದಲ್ಲಿ ನಡೆದ ದಾಳಿಗಳಲ್ಲೇ ಭೀಕರವಾಗಿತ್ತು.

ಈ ಹಿಂದೆ 2013ರ ಆಗಸ್ಟ್ ನಲ್ಲಿ ರಾಜಧಾನಿ ಡಮಾಸ್ಕಸ್ ಹೊರಗೆ ಘೌಟ ಪ್ರದೇಶದಲ್ಲಿ ನಡೆದ ರಾಸಾಯನಿಕ ದಾಳಿಗೆ ನೂರಾರು ಜನ ಸಾವಿಗೀಡಾಗಿದ್ದರು.

ಸುಮಾರು ಆರು ವರ್ಷಗಳ ಸಿರಿಯಾ ನಾಗರಿಕ ಯುದ್ಧದಲ್ಲಿ 5 ಲಕ್ಷದಷ್ಟು ಜನ ಸಾವಿಗೀಡಾಗಿದ್ದರೆ, ದೇಶದ ಒಂದು ಕೋಟಿಯಷ್ಟು ಜನ ಮನೆ ಮಠ ಕಳೆದುಕೊಂಡು ವಲಸೆ ಹೋಗಿದ್ದಾರೆ.

Leave a comment

Top