An unconventional News Portal.

ಸಿದ್ದಗಂಗಾ ಮಠದ ಹೆಸರಿನಲ್ಲಿ ಪಂಗನಾಮ: ಔಷಧಿ ಕೊಡುತ್ತೇವೆಂದು ಬಂದು 50 ಸಾವಿರ ಕಿತ್ತರು!

ಸಿದ್ದಗಂಗಾ ಮಠದ ಹೆಸರಿನಲ್ಲಿ ಪಂಗನಾಮ: ಔಷಧಿ ಕೊಡುತ್ತೇವೆಂದು ಬಂದು 50 ಸಾವಿರ ಕಿತ್ತರು!

ಪಾರ್ಶ್ವವಾಯು ಪೀಡಿತರೊಬ್ಬರಿಗೆ ಸಿದ್ದಗಂಗಾ ಮಠದ ಟ್ರಸ್ಟ್ ವತಿಯಿಂದ ಔಷಧಿ ಕೊಡುತ್ತೇವೆ ಎಂದು ಬಂದ ಖದೀಮರಿಬ್ಬರು 50 ಸಾವಿರ ಕಿತ್ತುಕೊಂಡು ಪರಾರಿಯಾದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಿಂದ ವರದಿಯಾಗಿದೆ.

ಶನಿವಾರ ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿಯ ಕವಲೇದುರ್ಗ ಸಮೀಪದ ಕೋಗೊಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರಿಗೆ ಔಷಧಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಇದು ಸಿದ್ದಗಂಗಾ ಮಠದ ಟ್ರಸ್ಟ್ ಕಡೆಯಿಂದ ಉಚಿತ ಸೇವೆ ಎಂದು ಹೇಳಿದ್ದಾರೆ. ನಂತರ 25 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 50 ಸಾವಿರ ಕಿತ್ತುಕೊಂಡು ಪರಾರಿಯಾದ ಪ್ರಸಂಗ ನಡೆದಿದೆ.

ಸದ್ಯ ಇವರು ಕರೆ ಮಾಡಿದ ಮೊಬೈಲ್ ಸಂಖ್ಯೆ (89702-21055) ಸಿಕ್ಕಿದ್ದು, ತೀರ್ಥಹಳ್ಳಿ ಠಾಣೆಯಲ್ಲಿ ಶನಿವಾರವೇ ದೂರು ನೀಡಲಾಗಿದೆ. ಆದರೆ, ಈವರೆಗೆ ಪ್ರಥಮ ಮಾಹಿತಿ ವರದಿ ದಾಖಲಿಸಿಲ್ಲ ಎಂಬ ಮಾಹಿತಿ ‘ಸಮಾಚಾರ’ಕ್ಕೆ ಲಭ್ಯವಾಗಿದೆ.

ಏನಿದು ಪ್ರಕರಣ?:

ಶುಕ್ರವಾರ ತೀರ್ಥಹಳ್ಳಿಯ ಬಳ್ಗಾರ್ ಎಂಬಲ್ಲಿಗೆ ತೆರಳಿದ ಇಬ್ಬರು ಅಪರಿಚಿತರು, ರತ್ನಾಕರ್ ಎಂಬುವವರ ಮನೆಯಲ್ಲಿ ತಾವು ಸಿದ್ದಗಂಗಾ ಮಠದ ಟ್ರಸ್ಟ್ ಕಡೆಯಿಂದ ಬಂದಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಅತ್ತೆ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಗಿದೆ, ಔಷಧಿ ನೀಡುತ್ತಿವಿ ಎಂದಿದ್ದಾರೆ. ಬಾಳ್ಗಾರ್  ರತ್ನಾಕರ್ ಅವರ ಅತ್ತೆ ಅಲ್ಲಿಂದ 15 ಕಿ. ಮೀ ದೂರದ ಕೋಗೊಡು ಎಂಬಲ್ಲಿ ಪಾರ್ಶ್ವವಾಯು ಕಾಯಿಲೆಯಿಂದ ನರಳುತ್ತಿದ್ದರುವುದರಿಂದ, ವಿಳಾಸ ನೀಡಿ ಕಳುಹಿಸಿ ಕೊಟ್ಟಿದ್ದಾರೆ. ಶನಿವಾರ ಕೊಗೋಡಿಗೆ ತೆರಳಿದ ಅದೇ ತಂಡ ಮೊದಲು ಉಚಿತ ಚಿಕಿತ್ಸೆ ಎಂದವರು, ಕೊನೆಗೆ 25 ಸಾವಿರ ನೀಡಿದರೆ ಕಾಯಿಲೆ ಗುಣವಾಗಿಸುವ ತೈಲ ನೀಡುವುದಾಗಿ ಹೇಳಿದ್ದಾರೆ.

ಇದಕ್ಕೆ ಒಪ್ಪಿದ ಮನೆಯವರು, ಹಣ ಮನೆಯಲ್ಲಿ ಇಲ್ಲ. ಪಕ್ಕದ ಊರಿನ ಪರಿಚಯಸ್ಥರ ಬಳಿಯಿಂದ ತೆಗೆದುಕೊಂಡು ಕೊಡುತ್ತೇವೆ ಎಂದಿದ್ದಾರೆ. ಈ ಸಮಯದಲ್ಲಿ ಮನೆಯ ಸದಸ್ಯ ಮಹೇಶ್ ಎಂಬುವವರನ್ನು ಇಬ್ಬರು ತಮ್ಮದೇ ದ್ವಿಚಕ್ರ ವಾಹನದಲ್ಲಿ ಕರೆದುಕೊಂದು ಪಕ್ಕದ ಊರಿಗೆ ತೆರಳಿದ್ದಾರೆ. ಅಲ್ಲಿ ಬೋರ್ ಹಾಕಿಸಲು ತಯಾರು ಮಾಡಿಟ್ಟಿದ್ದ 50 ಸಾವಿರವನ್ನು ಮಹೇಶ್ ತೆಗೆದುಕೊಂಡಿದ್ದಾರೆ. ನಂತರ ಕುಪ್ಪಳ್ಳಿಯಲ್ಲಿ ತೈಲ ಇದೆ, ಅಲ್ಲಿಗೆ ಹೋಗೋಣ ಎಂದು ಕರೆದುಕೊಂಡು ಹೊರಟ ತಂಡ, ದಾರಿ ಮಧ್ಯೆ 50 ಸಾವಿರ ಕಿತ್ತುಕೊಂಡು ಪರಾರಿಯಾಗಿದೆ.

ಮಂಕುಬೂದಿ:

“ಈ ಸಮಯದಲ್ಲಿ ಅವರು ನನಗೆ ಏನು ಮಾಡಿದರು ಎಂದು ಗೊತ್ತಾಗಲಿಲ್ಲ. ಮಂಕುಬೂದಿ ಎರಚಿದಂತೆ ಆಯಿತು. ನಾನು ಯಾವುದಕ್ಕೂ ಪ್ರತಿಭಟಿಸಲಿಲ್ಲ. ಕೊನೆಗೆ, ಘಟನೆ ನಡೆದು ಎಷ್ಟೋ ಸಮಯದ ನಂತರ ನಡೆದಿದ್ದು ಏನು ಎಂಬುದು ಅರ್ಥವಾಯಿತು. ನಾವು ಮೋಸ ಹೋಗಿದ್ದೆವು. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದೇನೆ,” ಎಂದು ಮಹೇಶ್ ‘ಸಮಾಚಾರ’ಕ್ಕೆ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ತೀರ್ಥಹಳ್ಳಿ ಠಾಣೆ ಎಸ್ಐ ಭರತ್ ಕುಮಾರ್, “ಪ್ರಕರಣದಲ್ಲಿ ಸ್ಥಳೀಯರ ಕೈವಾಡ ಇರಬಹುದು ಎಂದು ಶಂಕಿಸಿದ್ದೆವು. ಹಾಗಾಗಿ ದೂರು ದಾಖಲಿಸಿಕೊಳ್ಳಲಿಲ್ಲ. ಈಗಲೇ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ,” ಎಂದರು.

ಶಿವಮೊಗ್ಗ ಎಸ್ಪಿ ರವಿ ಡಿ ಚೆನ್ನಣ್ಣನವರ್, “ಪ್ರಕರಣವನ್ನು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವ ಹೊಣೆ ನನ್ನದು,” ಎಂದು ತಿಳಿಸಿದರು.

“ನಮ್ಮಿಂದ ಯಾರನ್ನೂ ಕಳುಹಿಸಲಾಗಿಲ್ಲ. ನಮ್ಮ ಹೆಸರು ಹೇಳಿಕೊಂಡು ಬಂದರೆ ಪೊಲೀಸರಿಗೆ ದೂರು ಕೊಡಿ,” ಎಂದು ತುಮಕೂರು ಸಿದ್ದಗಂಗಾ ಮಠದ ಆಡಳಿತಾಧಿಕಾರ ವಿಶ್ವನಾಥ್ ‘ಸಮಾಚಾರ’ಕ್ಕೆ ಪ್ರತಿಕ್ರಿಯಿಸಿದರು.

ಮಲೆನಾಡಿನ ಒಂಟಿ ಮನೆಗಳಲ್ಲಿ ಕಾಯಿಲೆಯಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಿ ಔಷಧಿ ಕೊಡುತ್ತೀವಿ ಎಂದು ಮೋಸ ಮಾಡುವ ಜಾಲದ ಕೈವಾಡ ಇದರ ಹಿಂದೆ ಸಕ್ರಿಯವಾಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

Top