An unconventional News Portal.

ಆಶಾದಾಯಕ ಬೆಳವಣಿಗೆ: ಕ್ರಿಕೆಟ್ ಹೊರತಾದ ಕ್ರೀಡೆಗಳ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ

ಆಶಾದಾಯಕ ಬೆಳವಣಿಗೆ: ಕ್ರಿಕೆಟ್ ಹೊರತಾದ ಕ್ರೀಡೆಗಳ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ

ಭಾರತದ ಪಾಲಿಗೆ ಕ್ರಿಕೆಟ್ ಕೂಡ ಧರ್ಮ ಎಂಬ ಮಾತಿದೆ. ಇದಕ್ಕೆ ಪ್ರಮುಖ ಕಾರಣ ದೇಶದ ಟಿವಿ ವೀಕ್ಷಕರ ಮನಸ್ಥಿತಿ. ಕ್ರಿಕೆಟ್ ಪಂದ್ಯಾವಳಿಗಳ ನೇರ ಪ್ರಸಾರವಿದ್ದಾಗ ದೊಡ್ಡ ಸಂಖ್ಯೆಯ ಜನ ಟಿವಿಯನ್ನು ವೀಕ್ಷಿಸುತ್ತಾರೆ ಎಂದು ರೇಟಿಂಗ್‌ ಏಜೆನ್ಸಿಗಳು ಹೇಳುತ್ತವೆ. ಹೀಗಾಗಿ ಕ್ರಿಕೆಟ್ ಕೂಡ ಧರ್ಮದ ರೀತಿಯಲ್ಲಿ ಭಾರತೀಯರನ್ನು ಹಿಡಿದಿಟ್ಟಿದೆ ಎಂದು ಮಾರುಕಟ್ಟೆಯ ತಜ್ಷರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಟಿವಿ ನೋಡುವವರ ಇಚ್ಚೆಗಳನ್ನು ಅಳೆಯಲು ಇರುವ ಮಾನದಂಡ ಟಿಆರ್‌ಪಿ ಅಥವಾ ಟೆಲಿವಿಝನ್ ರೇಟಿಂಗ್ ಪಾಯಿಂಟ್. ಟಿಆರ್‌ಪಿಗಳನ್ನು ತಾಳೆ ಮಾಡುವ ಬಾರ್ಕ್‌ ಸಂಸ್ಥೆ ದೇಶದಲ್ಲಿ ಕ್ರೀಡಾ ವೀಕ್ಷಕರ ಮನಸ್ಥಿತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿದೆ. ಕ್ರಿಕೆಟ್ ನೆಚ್ಚಿಕೊಂಡ ವೀಕ್ಷಕರ ಒಲವು ಇತರೆ ಕ್ರೀಡೆಗಳ ಕಡೆಗೂ ಹರಿಯುತ್ತಿದೆ ಎಂಬುದನ್ನು ಅದರ ಇತ್ತೀಚಿನ ವರದಿಯೊಂದು ಗುರುತಿಸಿದೆ.

ಕಳೆದ ವರ್ಷ ಕ್ರಿಕೆಟ್ ಜತೆಗೆ, ಇತರೆ ಕ್ರೀಡೆಗಳ ನೇರ ಪ್ರಸಾರವನ್ನು ನೋಡುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂಬ ವಿಚಾರವನ್ನು ಬಾರ್ಕ್‌ ವರದಿ ಬಹಿರಂಗಗೊಳಿಸಿದೆ.

2016ರಲ್ಲಿ ಕ್ರಿಕೆಟ್ ಹೊರತಾದ ಕ್ರೀಡೆಗಳನ್ನು ವೀಕ್ಷಿಸುವ ಜನರ ಸಂಖ್ಯೆ ಶೇ. 20ರಷ್ಟಿದೆ ಎಂದು ಬಾರ್ಕ್‌ ವರದಿ ಹೇಳುತ್ತಿದೆ. ಇದರಲ್ಲಿ ಶೇ. 80ರಷ್ಟು ಜನ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್), ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್), ರಿಯೋ ಒಲೆಂಪಿಕ್ಸ್- 2016, ಪ್ರೀಮಿಯರ್ ಬ್ಯಾಡ್ಮಿಂಟನ್‌ ಲೀಗ್ ಹಾಗೂ ಹಾಕಿ ಇಂಡಿಯಾ ಲೀಗ್‌ ಪಂದ್ಯಾವಳಿಗಳನ್ನು ಜನ ನೇರಪ್ರಸಾರದಲ್ಲಿ ವೀಕ್ಷಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಬಾರ್ಕ್‌ ವರದಿಯ ಗ್ರಾಫಿಕ್ಸ್ ಮಾಹಿತಿ.

ಬಾರ್ಕ್‌ ವರದಿಯ ಗ್ರಾಫಿಕ್ಸ್ ಮಾಹಿತಿ.

ಕೆಲವೇ ವರ್ಷಗಳ ಕೆಳಗೆ ಕ್ರಿಕೆಟ್ ಭಾರತ ಕ್ರೀಡಾಲೋಕವನ್ನು ಆವರಿಸಿಕೊಂಡಿತ್ತು. ಇದಕ್ಕೆ ಕಾರಣ ಆರ್ಥಿಕವಾಗಿ ಕ್ರಿಕೆಟ್ ಬಲಿಷ್ಠವಾಗಿ ಬೆಳೆದಿರುವುದು. ಆರ್ಥಿಕವಾಗಿ ಸದೃಢವಾಗುತ್ತಲೇ ಕ್ರಿಕೆಟ್ ಪಂದ್ಯಾವಳಿಗಳು ತಾಂತ್ರಿಕವಾಗಿಯೂ ಬಲಗೊಂಡವು. ಹೀಗಾಗಿ ನೇರ ಪ್ರಸಾರಗಳು ಹೆಚ್ಚು ಕ್ರೀಯಾಶೀಲವಾಗಿ ಮೂಡಿಬಂದವು. ನಂತರ ಬಂದ ಐಪಿಎಲ್‌ ಕ್ರಿಕೆಟ್‌ ಹುಚ್ಚನ್ನು ತಾರಕ್ಕೇರಿಸಿತು. ಈ ಸಮಯದಲ್ಲಿ ಕ್ರಿಕೆಟ್‌ನಿಂದಾಗಿ ಇತರೆ ದೇಸಿ ಕ್ರೀಡೆಗಳು ನೆಲಕ್ಕಚ್ಚುತ್ತಿವೆ ಎಂಬ ಟೀಕೆಗಳು ಕೇಳಿ ಬಂದಿದ್ದವು.

ಆದರೆ, ಕ್ರಿಕೆಟ್ ಹೊರತಾದ ಕ್ರೀಝ್‌ ಹುಟ್ಟುಹಾಕಿದ್ದು ಪ್ರೊ ಕಬಡ್ಡಿ ಪಂದ್ಯಾವಳಿಗಳು. ಒಂದು ಮಟ್ಟದ ಹೂಡಿಕೆ ಜತೆಗೆ, ಕ್ರೀಡೆಯಲ್ಲಿರುವ ಗಡಸುತನ ಟಿವಿ ವೀಕ್ಷಕರನ್ನು ಬೆಳೆಯುವಲ್ಲಿ ಸಫಲವಾಗಿದೆ. ಇದನ್ನು ಬಾರ್ಕ್‌ ವರದಿ ಕೂಡ ನಿರೂಪಿಸುತ್ತಿದೆ.

ಈ ವರದಿಯ ಪ್ರಕಾರ, ಪ್ರೊ ಕಬಡ್ಡಿ ಪಂದ್ಯಾವಳಿಗಳು ಹೆಚ್ಚು ಜನರನ್ನು ಆಕರ್ಷಿಸಿವೆ. ಇದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಬಡ್ಡಿ ಪಂದ್ಯಾವಳಿಗಳಿಗೆ ಮಾರುಹೋಗಿದ್ದಾರೆ ಎಂಬುದು ತಿಳಿದು ಬಂದಿದೆ. ಇದೇ ವೇಳೆ, ರಾಷ್ಟ್ರೀಯ ಕ್ರೀಡೆ ಹಾಕಿ ಜನರ ಗಮನವನ್ನು ಸೆಳೆಯುವಲ್ಲಿ ಕಡಿಮೆ ಪಾತ್ರವನ್ನು ಹೊಂದಿದೆ.

ರಾಜ್ಯವಾರು ಕ್ರೀಡಾ ವೀಕ್ಷಕರ ಮನಸ್ಥಿತಿಗೆ ಬಂದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿ ಕಬಡ್ಡಿ ಅಭಿಮಾನಿಗಳನ್ನು ಹೊಂದಿದೆ.  ಗೋವಾ, ತೆಲಂಗಾಣ ನಂತರದ ಸ್ಥಾನದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಜನ ಕಬಡ್ಡಿ ಪಂದ್ಯಾವಳಿಗಳ ನೇರ ಪ್ರಸಾರವನ್ನು ವೀಕ್ಷಿಸಿದ್ದಾರೆ. ಕೇರಳ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಫುಟ್ಬಾಲ್ ಪಂದ್ಯಾವಳಿಗಳು ವೀಕ್ಷಕರನ್ನು ಹಿಡಿದಿಟ್ಟಿವೆ. ಪಂಜಾಬ್, ಹರಿಯಾಣ, ಛತ್ತೀಸ್‌ಘಡ ರಾಜ್ಯಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ದೊಡ್ಡ ಸಂಖ್ಯೆಯ ಟಿವಿ ವೀಕ್ಷಕರಿದ್ದಾರೆ ಎಂಬುದನ್ನು ಬಾರ್ಕ್‌ ವರದಿ ಹೇಳುತ್ತದೆ.

ಜೂನ್‌ ತಿಂಗಳಿನಲ್ಲಿ ಪ್ರೊ ಕಬಡ್ಡಿ ಪಂದ್ಯಾವಳಿಗಳು ಶುರುವಾಗಲಿವೆ. ಈ ಹಿನ್ನೆಲೆಯಲ್ಲಿ ಬಾರ್ಕ್ ನೀಡಿರುವ ಕಳೆದ ವರ್ಷದ ಈ ಮಾಹಿತಿ ಜಾಹೀರಾತುದಾರರನ್ನು ಕ್ರಿಕೆಟ್‌ ಹೊರತಾದ ಕ್ರೀಡೆಗಳು ಆಕರ್ಷಿಸಲು ಅನುಕೂಲ ಮಾಡಿಕೊಡುತ್ತಿದೆ. ಜತೆಗೆ, ಬದಲಾಗುತ್ತಿರುವ ದೇಶದ ಕ್ರೀಡಾ ವೀಕ್ಷಕರ ಮನಸ್ಥಿತಿಯ ಕುರಿತು ಗಮನ ಸೆಳೆಯುತ್ತಿದೆ. ಹೇಗೇ ನೋಡಿದರೂ, ಟಿವಿ ಲೋಕದ ಪಾಲಿಗೆ ಇದೊಂದು ಆಶಾದಾಯಕ ಬೆಳವಣಿಗೆ.

Top