An unconventional News Portal.

‘ಚಲೋ ಮಡಿಕೇರಿ’ ಯಶಸ್ವಿ; ‘ಶಾಶ್ವತ ಪರಿಹಾರಕ್ಕೆ ತಿಂಗಳೊಳಗೆ ಅಂತಿಮ ರೂಪ’ –ಆಂಜನೇಯ ಭರವಸೆ

‘ಚಲೋ ಮಡಿಕೇರಿ’ ಯಶಸ್ವಿ; ‘ಶಾಶ್ವತ ಪರಿಹಾರಕ್ಕೆ ತಿಂಗಳೊಳಗೆ ಅಂತಿಮ ರೂಪ’ –ಆಂಜನೇಯ ಭರವಸೆ

ಕಳೆದ 16 ದಿನಗಳಿಂದ ರಾಜ್ಯದ ಜನರ ಗಮನ ಸೆಳೆದಿದ್ದ ದಿಡ್ಡಳ್ಳಿ ಹೋರಾಟ ಕೊನೆಗೂ ನಿರ್ಣಾಯಕ ಘಟ್ಟ ತಲುಪಿದೆ. ಶುಕ್ರವಾರ ದಿಡ್ಡಳ್ಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಮತ್ತು ಕಾರ್ಯದರ್ಶಿ ಮಣಿವಣ್ಣನ್ ತಿಂಗಳೊಳಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಅಂತಿಮಗೊಳಿಸಲಾಗುವುದು ಎಂದು ಹೋರಾಟಗಾರರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಇದರೊಂದಿಗೆ ಅನಿರ್ಧಿಷ್ಟಾವಧಿ ಧರಣಿಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಸಿರಿಮನೆ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

ದಿಡ್ಡಳ್ಳಿಯಲ್ಲಿ ಪ್ರತ್ಯಕ್ಷರಾದ ಆಂಜನೇಯ:

ದಿಡ್ಡಳ್ಳಿ ಆದಿವಾಸಿಗಳ ಮನೆ ಕೆಡವಿದ ಪ್ರದೇಶಕ್ಕೆ ಅನಿವಾರ್ಯವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಶುಕ್ರವಾರ ಭೇಟಿ ನೀಡಿ ಮಾತುಕತೆ ನಡೆಸಿದರು.

ಈ ಸಂದರ್ಭ ಸಿರಿಮನೆ ನಾಗರಾಜ್, ಭಾಸ್ಕರ್ ಪ್ರಸಾದ್ ಮತ್ತು ಎ.ಕೆ ಸುಬ್ಬಯ್ಯ ನೇತೃತ್ವದ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ನಿಯೋಗ ಸಚಿವರು ಮತ್ತು ಮಣಿವಣ್ಣನ್, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು, ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಮುಖಾಮುಖಿ ಮಾತುಕತೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದೆ.

chalo-madikeri-7

ಅದರಂತೆ ತಕ್ಷಣಕ್ಕೆ ದಿಡ್ಡಳ್ಳಿ ಜನರಿಗೆ ಈಗಿರುವ ಸ್ಥಳದಲ್ಲೇ ವಸತಿ, ನೀರು, ಆಹಾರ, ಶೌಚಾಲಯ ನಿರ್ಮಿಸಲು ಸಚಿವರು ಒಪ್ಪಿಕೊಂಡಿದ್ದಾರೆ. “ಮಣಿವಣ್ಣನ್ ಉತ್ತಮ ದರ್ಜೆಯ ಟೆಂಟುಗಳನ್ನು ಖರೀದಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದಕ್ಕಾಗಿ 99 ಲಕ್ಷ ರೂಪಾಯಿ ಚೆಕ್ಕನ್ನು ಅವರು ಸ್ಥಳದಲ್ಲೇ ಬಿಡುಗಡೆಯೂ ಮಾಡಿದ್ದಾರೆ,” ಎಂದು ಸಿರಿಮನೆ ನಾಗರಾಜ್ ಮಾಹಿತಿ ನೀಡಿದ್ದಾರೆ.

‘ಕನಿಷ್ಠ ಮೂರು ತಿಂಗಳ ಒಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಏನು ಎಂಬುದನ್ನು ನಿರ್ಧರಿಸಬೇಕು,’ ಎಂದು ಸಮಿತಿ ಬೇಡಿಕೆ ಇಟ್ಟಿತು. “ಇದಕ್ಕೆ ಮಣಿವಣ್ಣನ್ ಮೂರು ತಿಂಗಳು ಬೇಡ ಒಂದು ತಿಂಗಳ ಒಳಗಾಗಿ ಜಾಗ ಹುಡುಕಿ, ಅವರಿಗೆ ಒಪ್ಪಿಗೆ ಎಂದಾದಲ್ಲಿ ಅಲ್ಲಿಯೇ ಪುನರ್ವಸತಿಗೆ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಸತಿ, ಸಮಾಜ ಕಲ್ಯಾಣ, ಅರಣ್ಯ, ಕಂದಾಯ ಸಚಿವರು, ಹೋರಾಟಗಾರರು ಮತ್ತು ಆದಿವಾಸಿಗಳನ್ನು ಒಳಗೊಂಡ ಸಭೆ ನಡೆಸಲಾಗುವುದು. ಒಂದೊಮ್ಮೆ ಅಲ್ಲಿಯೇ ಪುನರ್ವಸತಿಗೆ ಕಾನೂನಿನ ಅಡೆ ತಡೆ ಇದ್ದರೆ ಪರ್ಯಾಯ ವ್ಯವಸ್ಥೆಯನ್ನೂ ಅಂತಿಮಗೊಳಿಸಲಾಗುವುದು ಎಂದು ಅವರು ಪರಿಹಾರ ಸೂತ್ರ ಮುಂದಿಟ್ಟಿದ್ದಾರೆ. ಅದನ್ನು ನಾವು ಒಪ್ಪಿಕೊಂಡಿರುವುದಾಗಿ,” ಎ.ಕೆ ಸುಬ್ಬಯ್ಯ ಹೇಳಿದ್ದಾರೆ.

ಸದರಿ ಆದಿವಾಸಿಗಳು ಮನೆ ಕಟ್ಟಿಕೊಂಡಿರುವ ಜಾಗ ಅರಣ್ಯ ಇಲಾಖೆಯದ್ದು ಅಲ್ಲ ಎಂದು ನಿಯೋಗ ವಾದ ಮಂಡಿಸಿತು. “ಇದು ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶವಲ್ಲ. ಪೈಸಾರೆ ಭೂಮಿ; ಆದರೆ ಅಧಿಕಾರಿಗಳ ತಪ್ಪಿನಿಂದಾಗಿ ಅದು ಆರ್ಟಿಸಿಯಲ್ಲಿ ಅರಣ್ಯ ಪೈಸಾರೆ ಭೂಮಿ ಎಂದು ನಮೂದಾಗಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದೆವು. ಆದ್ದರಿಂದ ಅದನ್ನು ಬರೇ ಪೈಸಾರೆ ಭೂಮಿ ಎಂದು ಬದಲಾಯಿಸಿ ಕಂದಾಯ ಇಲಾಖೆಗೆ ವಾಪಸ್ ನೀಡಬೇಕು ಎಂದು ಕೇಳಿಕೊಂಡೆವು. ಇದಕ್ಕೆ ಸಚಿವರು ಕಾನೂನು ಪರಿಣತರ ಸಲಹೆ ಪಡೆದುಕೊಂಡು ಸಾಧ್ಯವಿದ್ದಲ್ಲಿ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾರೆ,” ಎಂದು ಎ.ಕೆ.ಸುಬ್ಬಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಉಳಿದ ಹಲವು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಚರ್ಚೆಗೆ0 ಎತ್ತಿಕೊಳ್ಳಲಾಗುವುದು. ತಕ್ಷಣಕ್ಕೆ ದಿಡ್ಡಳ್ಳಿಗೆ ಒಂದು ಪರಿಹಾರ ಸಿಗಬೇಕು ಎಂದೂ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬೇಜಾವಬ್ದಾರಿ ವರ್ತನೆ ತೋರಿದ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಯಾದೇವಿ ಗಲಗಲಿಯವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿತು. ಇದಕ್ಕೂ ಸಚಿವರು ಒಪ್ಪಿದ್ದಾರೆ. “ಮುಖ್ಯಮಂತ್ರಿಗಳ ಜತೆ ಸಭೆ ನಡೆಸುವುದಲ್ಲದೆ, ಕೊಡಗಿನಲ್ಲೇ ಜಾಗ ಹುಡುಕಿ ಪುನರ್ವಸತಿ ಕಲ್ಪಿಸಲು, ಸ್ವತಃ ತಾವೂ ಸದಸ್ಯರಾಗಿರುವ ಜಿಲ್ಲಾಧಿಕಾರಿ ನೇತೃತ್ವದ ಸ್ಥಳೀಯ ಸಮಿತಿಯೊಂದನ್ನು ರಚಿಸುವ ಭರವಸೆಯನ್ನು ಮಣಿವಣ್ಣನ್ ನೀಡಿದ್ದಾರೆ. ನಮಗೆ ಮಣಿವಣ್ಣನ್ ಮೇಲೆ ಭರವಸೆ ಇದೆ,” ಎಂದು ಹೇಳುತ್ತಾರೆ ಸಿರಿಮನೆ ನಾಗರಾಜ್.

ಸದ್ಯ ಈ ಎಲ್ಲಾ ಭರವಸೆಗಳನ್ನು ನೀಡಿ ಎಚ್. ಆಂಜನೇಯ ಸ್ಥಳದಿಂದ ವಾಪಾಸಾಗಿದ್ದಾರೆ. ನೀಡಿದ ಭರವಸೆಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿಯನ್ನೀಗ ಅವರು ಪ್ರದರ್ಶಿಸಬೇಕಾಗಿದೆ. ಇಂಥಹುದ್ದೇ ಗುರುತರ ಜವಾಬ್ದಾರಿ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಮೇಲೆಯೂ ಇದೆ.

‘ನಕ್ಸಲರಿಲ್ಲ’ ಐಜಿಪಿ ಸ್ಪಷ್ಟನೆ:

‘ದಿಡ್ಡಳ್ಳಿ ಆದಿವಾಸಿಗಳ ಹೋರಾಟಕ್ಕೆ ಹೊರಗಿನಿಂದ ಬಂದ ನಕ್ಸಲರು ಸಾಥ್ ನೀಡುವ ಶಂಕೆ ಇದೆ,’ ಎಂದು ಗುಪ್ತಚರ ಮಾಹಿತಿ ಬಂದಿದೆ ಎಂದಿದ್ದ ಸರಕಾರ ಈಗ ಮಾತು ಬದಲಿಸಿದೆ. ಪಶ್ಚಿಮ ವಲಯ ಐಜಿಪಿ ಬಿ.ಎ ಸಿಂಗ್ ಮಾಧ್ಯಮಗಳ ಜತೆ ಮಾತನಾಡಿ “ಮಾಲ್ದಾರೆ, ದಿಡ್ಡಳ್ಳಿ ಸುತ್ತ ಮುತ್ತ ನಕ್ಸಲರು ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.  ಮಾತ್ರವಲ್ಲ ಹೊರಗಿನವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

ಏತನ್ಮಧ್ಯೆ ಶುಕ್ರವಾರ ರಾತ್ರಿವರೆಗೆ ಜಾರಿಯಾಗಿದ್ದ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿ ವಿನ್ಸೆಂಟ್ ಡಿ ಸೋಜ 31ರ ವರೆಗೆ ವಿಸ್ತರಿಸಿದ್ದಾರೆ.  “ಮೇಲಾಧಿಕಾರಿಗಳ ಸ್ಪಷ್ಟೀಕರಣಕ್ಕೆ ಕವಡೆ ಕಾಸಿನ ಬೆಲೆ ನೀಡದೇ ಮತ್ತೆ ನಿಷೇದಾಜ್ಞೆಯನ್ನು ಮುಂದುವರೆಸಿರುವುದು ಜಿಲ್ಲಾಧಿಕಾರಿಯವರ ಅಪ್ರಜಾತಾಂತ್ರಿಕ ಸರ್ವಾಧಿಕಾರಿ ಮತ್ತು ದುರಂಹಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ. ಇದು ಆದಿವಾಸಿಗಳಿಗೆ ಜನ ಚಳವಳಿಗಳ ಬೆಂಬಲವಿಲ್ಲದಂತೆ ಮಾಡಿ ಅವರ ಮನೋಬಲವನ್ನು ಮುರಿಯುವ ಪಿತೂರಿ ಆಗಿದೆ,” ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಿಡಿಕಾರಿದೆ. ಒಂದೊಮ್ಮೆ ರಾಜ್ಯ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಜಿಲ್ಲಾಧಿಕಾರಿಯ ಈ ಚಕ್ರಾಧಿಪತ್ಯ ಧೋರಣೆಗೆ ಕಡಿವಾಣ ಹಾಕದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಆಂದೋಲನ ಪ್ರಾರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿದೆ. ಜಿಲ್ಲಾಡಳಿತದ ಈ ಕಾನೂನು ಬಾಹಿರ ಆಜ್ಞೆಯನ್ನು ವಿರೋಧಿಸಿ ಹೋರಾಟ ಸಮಿತಿಯ ಕಾನೂನು ವಿಭಾಗ ನ್ಯಾಯಾಂಗದಲ್ಲಿ ದಾವೆ ಹೂಡಲು ತೀರ್ಮಾನಿಸಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಕ್ರೋಶಕ್ಕೆ ವೇದಿಕೆಯಾದ ‘ಚಲೋ ಮಡಿಕೇರಿ’:

chalo-madikeri-1

ಪೂರ್ವ ನಿರ್ಧಾರದಂತೆ ದಿಡ್ಡಳ್ಳಿ ಆದಿವಾಸಿಗಳನ್ನು ಬೆಂಬಲಿಸಿ ‘ಚಲೋ ಮಡಿಕೇರಿ’ ಸಮಾವೇಶ ನಗರದ ಗಾಂಧಿ ಮೈದಾನದಲ್ಲಿ ನಡೆಯಿತು. ಸಮಾವೇಶಕ್ಕೂ ಮೊದಲು ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಹೋರಾಟಗಾರರು ಮತ್ತು ಸ್ಥಳೀಯರು ಎ.ವಿ ಶಾಲೆಯಿಂದ ಆರಂಭಿಸಿ ನಗರದ ವಿವಿಧ ರಸ್ತೆಗಳಲ್ಲಿ ಜಾಥಾ ನಡೆಸಿದರು. ಭಾಷಾ ತಜ್ಞ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಹಾಗೂ ಹೋರಾಟಗಾರ ಗಣೇಶ್ ಎನ್ ದೇವಿ ಮೆರವಣಿಗೆ ಬ್ಯಾನರ್ ಅನಾವರಣ ಗೊಳಿಸುವ ಮೂಲಕ ದಿಡ್ಡಳ್ಳಿ ಆದಿವಾಸಿಗಳ ಪರವಾದ ಜಾಥಾಕ್ಕೆ ಚಾಲನೆ ನೀಡಿದರು. ಸುಮಾರು ಎರಡು ಕಿಲೋಮೀಟರ್ ಸಾಗಿ ಬಂದ ಜಾಥಾ ಗಾಂಧಿ ಮೈದಾನದಲ್ಲಿ ಸಮಾಪನಗೊಂಡಿತು. ಅಲ್ಲಿ ಸಮಾವೇಶ ಆಯೋಜನೆಯಾಗಿತ್ತು. ಸಮಾವೇಶದಲ್ಲಿ ಸಾವಿರಾರು ಆದಿವಾಸಿಗಳೂ ಪಾಲ್ಗೊಂಡರು.

‘ಚಲೋ ಮಡಿಕೇರಿ’ ವೇದಿಕೆ ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ನೂರ್ ಶ್ರೀಧರ್ “ಶೋಷಕರ ಶಕ್ತಿ ವಿರುದ್ಧ, ಬಲಾಢ್ಯರ ವಿರುದ್ಧ, ಸಂಚುಕೋರರ ವಿರುದ್ಧ ಈ ಹಳ್ಳಿಯ ಜನ ದಿಟ್ಟವಾಗಿ ನಿಂತಿದ್ದಾರೆ. ಅವರಿಗೆ ನಮ್ಮದೊಂದು ಚಪ್ಪಾಳೆ,” ಎಂದು ಮಾತು ಆರಂಭಿಸಿದರು.

noor-chalo-madikeri“ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡುವಂತಹದ್ದು, ಅಸಹಾಯಕತೆಯ ಪ್ರದರ್ಶನ. ಅಸಹಾಯಕತೆಯ ತುತ್ತ ತುದಿ ಅದು. ‘ಆದರೆ ನಾವು ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡಲು ಹೇಳಿದ್ವಾ ಎಂದು ಕೇಳುತ್ತಾರೆ ನಮ್ಮ ಮುಖ್ಯಮಂತ್ರಿಗಳು. ಇವರೇನು ಮನುಷ್ಯರಾ? ಇವರನ್ನು (ದಿಡ್ಡಳ್ಳಿ ಜನ) ಬಟ್ಟೆ ಬಿಚ್ಚಿಸಿರುವುದು ಈ ಸರಕಾರ; ಈ ವ್ಯವಸ್ಥೆ. ನಮ್ಮ ವ್ಯವಸ್ಥೆ ಮಾನಭಂಗ ಮಾಡಲು ಹೊರಟಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಇವತ್ತು ದಿಡ್ಡಳ್ಳಿಯ ಜನ ಬೆಕ್ಕುನಿಂದ ಹುಲಿಯಾಗಿದ್ದಾರೆ. ದಿಟ್ಟವಾಗಿ ಎದುರಿಸಿ ಜೀತದಿಂದ ಹೊರಗೆ ಬಂದಿದ್ದಾರೆ ಎಂದು ಅವರು ವಿಶ್ಲೇಷಿಸಿದರು. “ಇವರೆಲ್ಲಾ ಯಾಕೆ ಲೈನ್ ಮನೆಯಿಂದ ಹೊರ ಬಂದಿದ್ದಾರೆ ಎಂದು ಸರಕಾರಕ್ಕೆ ಅರ್ಥವಾಗ್ತಿಲ್ಲ. ಇವರೆಲ್ಲಾ ನಾವು ಭೂ ಮಾಲಿಕರಾಗಬೇಕೆಂದು ಬಂದವರಲ್ಲ. ನಾನು ಕೂಲಿಯಾಳುಗಳಾಗಬೇಕು ಎಂದು ಬಂದವರು. ಜೀತದಿಂದ ಸ್ವತಂತ್ರ ಜೀವನ ಬೇಕು ಎಂದು ಬಂದವರು. ನಗರದಲ್ಲಿ ಬಸ್ಸು ಸ್ಟಾಂಡಿನಲ್ಲಾದರೂ ಬದುಕುವ ಅವಕಾಶವಿದೆ. ಆದರೆ ಇಲ್ಲಿ ಬದುಕಲು ಜಾಗವಿಲ್ಲ. ಎಲ್ಲಾ ಮೀಸಲು ಅರಣ್ಯಗಳು. ಲೈನ್ ಮನೆಗಳಿಂದ ಇವರೆಲ್ಲಾ ಹೊರಗೆ ಬರಬಾರದು ಎಂದು ಪ್ಲಾಂಟೇಷನ್ ಒಡೆಯರು, ಅಧಿಕಾರಿಗಳು ಕೈ ಜೋಡಿಸಿದ್ದಾರೆ. ಆದರೆ ಈ ಭಲಾಢ್ಯರ ವಿರುದ್ಧ ಈ ದುರ್ಭಲ ಜನ ಗಟ್ಟಿಯಾಗಿ ನಿಂತಿದ್ದಾರೆ. ನೀವು ಏನೇ ಹೇಳಿ, ದಿಡ್ಡಳ್ಳಿ ಸೋಲೊಪ್ಪಿಕೊಳ್ಳಲ್ಲ. ದಿಡ್ಡಳ್ಳಿ ಗೆಲ್ಲಬೇಕು. ಗೆದ್ದೇ ಗೆಲ್ಲುತ್ತದೆ,” ಎಂದು ನೂರ್ ಶ್ರೀಧರ್ ಭರವಸೆಯ ಮಾತುಗಳನ್ನಾಡಿದರು. ನಾವು ತಿಳಿಸಿದ ಪ್ರಮುಖ ಬೇಡಿಕೆಗಳನ್ನು ಸರಕಾರ ಪೂರೈಸಬೇಕು ಎಂದೂ ಅವರು ಮನವಿ ಮಾಡಿಕೊಂಡರು.

ಇನ್ನು ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯರಾದ ಎ.ಕೆ ಸುಬ್ಬಯ್ಯ “ಕೆಲವು ಗುಂಪುಗಳು ಈ (ದಿಡ್ಡಳ್ಳಿ) ಹೋರಾಟವನ್ನು ಹೊಸಕಿ ಹಾಕಲು ಪ್ರಯತ್ನಪಡುತ್ತಿವೆ. ಆದರೆ ಅದು ಸಾಧ್ಯವಿಲ್ಲ,” ಎಂದು ಗುಡುಗಿದರು. ನಮಗೆ ಅಡ್ಡ ಬಂದವರನ್ನು ನಾವು ಮೆಟ್ಟಿ ನಡೆಯೋಣ ಎಂದು ಅವರು ಹೋರಾಟಗಾರರಿಗೆ ಉತ್ಸಾಹ ತುಂಬಿದರು.

“ನಿಮ್ಮ ಹೋರಾಟ ಯಶಸ್ವಿಯಾಗುತ್ತೆ. ಒಗ್ಗಟ್ಟಿನಿಂದ ಹೋರಾಟ ಮಾಡಿ. ನಿಮ್ಮ ಜತೆ ನಾವಿದ್ದೇವೆ. ನಿಮ್ಮನ್ನು ಒಡೆಯುವ ಶಕ್ತಿಗಳಿಗೆ ಕಿವಿ ಕೊಡಬೇಡಿ,” ಎಂದು ಆದಿವಾಸಿಗಳಿಗೆ ಕಿವಿ ಮಾತು ಹೇಳಿದವರು ಕಲ್ಕುಳಿ ವಿಠಲ ಹೆಗ್ಡೆ.

ಆದಿವಾಸಿಗಳನ್ನುದ್ದೇಶಿಸಿ ಮಾತನಾಡಿದ ನಟ ಚೇತನ್ “ದಿಡ್ಡಳ್ಳಿ ಜನರೊಂದಿಗೆ ಮುಂದಿಗೂ ಇರುತ್ತೇನೆ. ಸಮಾಜದಲ್ಲಿ ಸಂಪೂರ್ಣ ಬದಲಾವಣೆ ಬರಬೇಕಿದೆ. ಆದರೆ ಅದು ಒಂದೇ ಸಲಕ್ಕೆ ಬರುವುದಿಲ್ಲ, ಅದಕ್ಕಾಗಿ ತಾಳ್ಮೆಯಿಂದ ಶ್ರಮಿಸೋಣ,” ಎಂದರು.

ಸರಕಾರಾದ ಪ್ರತಿನಿಧಿಯಾಗಿ ಬಂದ ಸಚಿವರ ಭರವಸೆಯೊಂದಿಗೆ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ದಿಡ್ಡಳ್ಳಿ ಹೋರಾಟ ಒಂದು ಹಂತಕ್ಕೆ ಬಂದು ನಿಂತಿದೆ. ಹಾಗೆ ನೋಡಿದರೆ ಇದು ಅಂತಿಮವಲ್ಲ. ಕರ್ನಾಟಕದ ಮಟ್ಟಿಗೆ ಭೂಮಿ ಮತ್ತು ವಸತಿ ಹೋರಾಟದ ಆರಂಭವಿದು. ದಿಡ್ಡಳ್ಳಿ ಜನರಿಗೆ ಭೂಮಿ ಕೊಡಿಸುವುದರ ಜತೆಗೆ ಉಳಿದ ಆದಿವಾಸಿಗಳ, ಭೂಮಿ ಮತ್ತು ವಸತಿ ರಹಿತರ ಬದುಕಿನಲ್ಲಿ ಇದು ಯಾವ ಬದಲಾವಣೆಗಳನ್ನು ತರಲಿದೆ ಎಂಬುದರ ಮೇಲೆ ಇದರ ಪೂರ್ಣ ಯಶಸ್ಸು ನಿಂತಿದೆ.

‘ಜನನುಡಿ’ಯಲ್ಲಿ ದಿಡ್ಡಳ್ಳಿ ನಿರ್ಣಯ:

ಜನನುಡಿ-2016ರ ಉದ್ಘಾಟನಾ ಸಮಾರಂಭದಲ್ಲಿ ದಿಡ್ಡಳ್ಳಿ ಹೋರಾಟದ ಕುರಿತು ನಿರ್ಣಯ ಮಂಡಿಸಲಾಯಿತು. ಚಿತ್ರ ನಟ ಹಾಗೂ ದಿಡ್ಡಳ್ಳಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಚೇತನ್ ನಿರ್ಣಯ ಮಂಡಿಸಿದರು.

  • ಕೊಡಗಿನ ದಿಡ್ಡಳ್ಳಿಯಲ್ಲಿ ನೆಲ-ನೆಲೆ ಕಳೆದುಕೊಂಡು ನಿರಾಶ್ರಿತರಾದ ಆದಿವಾಸಿಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು.
  • ರಾಜ್ಯದ ಆದಿವಾಸಿ ಭೂಹೀನ ವಸತಿಹೀನ ಜನಸಮುದಾಯ ಗಳನ್ನು ಗುರುತಿಸಿ ಆದ್ಯತೆ ಮೇರೆಗೆ ವಸತಿ ಕಲ್ಪಿಸುವ ಕ್ರಿಯಾಯೋಜನೆ ರೂಪಿಸಬೇಕು. ಹಾಗೂ ಅದನ್ನ ಕಾಲಮಿತಿಯಲ್ಲಿ ಜಾರಿಗೊಳಿಸಬೇಕು. ಆದಿವಾಸಿ, ದಲಿತ-ದಮನಿತ ಸಮುದಾಯಗಳ ಘನತೆಯ ಬದುಕಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತೇವೆ. ದಿಡ್ಡಳ್ಳಿಯಲ್ಲಿ ಹೋರಾಟ ನಿರತ ಸಂಗಾತಿಗಳಿಗೆ ‘ಜನನುಡಿ’ ಸಂಪೂರ್ಣ ಬೆಂಬಲ ಸೂಚಿಸುತ್ತದೆ.

ಎಂದು ನಿರ್ಣಯ ಮಂಡಿಸಲಾಯಿತು.

ಚಿತ್ರ ಕೃಪೆ: ಪ್ರಜಾವಾಣಿ

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top