An unconventional News Portal.

ಚೈನಾದ ಪುಟ್ಟ ಪೋರನ ಆಕ್ರೋಶದ ಹಿಂದಿರುವ ಅಸಲಿ ಕಾರಣ ಇಷ್ಟೆ!

ಚೈನಾದ ಪುಟ್ಟ ಪೋರನ ಆಕ್ರೋಶದ ಹಿಂದಿರುವ ಅಸಲಿ ಕಾರಣ ಇಷ್ಟೆ!

ಚೈನಾದ ಪುಟ್ಟ ಬಾಲಕ ಸ್ಥಳೀಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ವಿಡಿಯೋ ಜಗತ್ತಿನಾದ್ಯಂತ ಹರಿದಾಡಿದ ಬೆನ್ನಲ್ಲೇ, ಅಂತರ್ಜಾಲದಿಂದ ದೃಶ್ಯಾವಳಿಯನ್ನು ತೆಗೆಯುವಂತೆ ಸರಕಾರ ಸೂಚನೆ ನೀಡಿದೆ.

“ನನ್ನ ಅಜ್ಜಿಯನ್ನು ಮುಟ್ಟಬೇಡಿ! ದೂರ ಹೋಗಿ!” ಎಂದು ಎರಡು ವರ್ಷದ ಬಾಲಕ ‘ಚೆಂಗುವಾನ್’ ಎಂದು ಕರೆಯುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದು ಕೂಗಾಡಿದ್ದ ದೃಶ್ಯಗಳನ್ನು ಎಲ್ಲರೂ ಕಣ್ತಿಂಬಿಕೊಂಡಿದ್ದರು. ಆದರೆ, ಅಷ್ಟು ಚಿಕ್ಕ ವಯಸ್ಸಿನಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹುಟ್ಟಲು ಕಾರಣಗಳೇನು? ಎಂಬುದು ಮಾತ್ರ ಚರ್ಚೆಗೆ ಬರಲೇ ಇಲ್ಲ.

ಚೈನಾದಲ್ಲಿ ನಗರದ ಶುಚಿತ್ವವನ್ನು ಕಾಪಾಡಲು ‘ಚೆಂಗುವಾನ್’ ಎಂದು ಕರೆಯುವ ಸ್ಥಳೀಯ ಅಧಿಕಾರಿಗಳ ಕಾರ್ಯಪಡೆಯೊಂದಿದೆ. ಇದು ಬೀದಿ ವ್ಯಾಪಾರಿಗಳು ಹಾಗೂ ಪಾದಾಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುವವರನ್ನು ಆಗಾಗ್ಗೆ ತೆರವುಗೊಳಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಈ ಸಮಯದಲ್ಲಿ ಅದು ತೋರಿಸುವ ಕ್ರೂರತೆಗಳು ಆಗಾಗ್ಗೆ ಮುನ್ನಲೆ ಬರುತ್ತಿರುತ್ತವೆ.

2013ರಲ್ಲಿ ಹಳ್ಳಿಯಿಂದ ಕಲ್ಲಂಗಡಿ ತಂದು ಹುನಾನ್ ಪ್ರದೇಶದ ಲಿನ್ವಾ ಎಂಬ ನಗರದಲ್ಲಿ ಮಾರಲು ಬಂದಿದ್ದ 56 ವರ್ಷದ ವಯೋವೃದ್ಧನೊಬ್ಬ ಚೆಂಗುವಾನ್ ಪಡೆಯ ಹೊಡತದಿಂದ ಅಸುನೀಗಿದ್ದ. ಇದರ ವಿರುದ್ಧ ಚೈನಾದಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇಂತಹ ಘಟನೆಗಳಿಂದಾಗಿ ಈ ಪಡೆಯ ವಿರುದ್ಧ ಸಾಮಾನ್ಯ ವ್ಯಾಪಾರಿಗಳಲ್ಲಿ ಹಾಗೂ ಅವರ ಕುಟುಂಬ ಸದಸ್ಯರಲ್ಲಿ ಅಸಹನೆ, ಆಕ್ರೋಶಗಳು ಮಡುವುಗಟ್ಟಿವೆ.

china-toddler-chenguan-2

1997ರಲ್ಲಿ ಸ್ಥಾಪನೆಗೊಂಡ ಚೆಂಗುವಾನ್ ಪಡೆ ತನ್ನ ಕ್ರೂರ ನಡವಳಿಕೆಗಳಿಂದಾಗಿಯೇ ಕುಖ್ಯಾತಿ ಗಳಿಸಿದೆ. ಮಾನವ ಹಕ್ಕು ಸಂಘಟನೆಗಳ ವರದಿಯೊಂದರ ಪ್ರಕಾರ, 2010-2012ರ ನಡುವೆ ಸುಮಾರು 150 ಪ್ರಕರಣಗಲ್ಲಿ ಚೆಂಗುವಾನ್ ಅಧಿಕಾರಿಗಳು ಕ್ರೂರವಾಗಿ ನಡೆದುಕೊಂಡಿದ್ದರು ಎಂಬ ಮಾಹಿತಿ ಸಿಗುತ್ತದೆ.

 

ಇದೀಗ, ಪುಟ್ಟ ಬಾಲಕ ತನ್ನ ಅಜ್ಜಿ ಬೀದಿಯಲ್ಲಿ ಮಾಡುತ್ತಿದ್ದ ವ್ಯಾಪಾರವನ್ನು ತಡೆಯಲು ಬಂದಾಗ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ಚೆಂಗುವಾನ್ ಪಡೆ ಚರ್ಚೆಗೆ ಗ್ರಾಸವಾಗಿದೆ.

ಚೈನಾದ ಕಮ್ಯುನಿಸ್ಟ್ ಸರಕಾರ ಕಾರ್ಯಪಡೆಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿರುವುದನ್ನು ಮುಂದುವರಿಸಿಕೊಂಡು ಬರುತ್ತಿದೆ. ಇದು ಮಾನವ ಹಕ್ಕುಗಳು ದಮನವಾಗುತ್ತಿರುವುದಕ್ಕೆ ಕಾರಣ ಎಂದು ಸರಕಾರೇತರ ಸಂಘಟನೆಗಳು ಆರೋಪಿಸುತ್ತವೆ.

ಸದ್ಯ ವೈರಲ್ ಆಗಿರುವ ವಿಡಿಯೋವನ್ನು ದೇಶದೊಳಗೆ ನಿಷೇಧಿಸುವ ಯೋಚನೆಯಲ್ಲಿ ಅಲ್ಲಿನ ಸರಕಾರ ಇದೆ. ಆದರೆ, ಚೆಂಗುವಾನ್ ಪಡೆಗಳ ವಿರುದ್ಧ ಜನರಿಗಿರುವ ಆಕ್ರೋಶ ತಲೆಮಾರುಗಳಿಗೂ ಹಬ್ಬುತ್ತಿದೆ ಎಂಬುದಕ್ಕೆ ಪುಟ್ಟ ಬಾಲಕ ಸಾಕ್ಷಿಯಾಗಿದ್ದಾನೆ.

Top