An unconventional News Portal.

‘ಅರಾಜಕತೆಯತ್ತ ಮಣಿಪುರ’: 51 ದಿನಗಳಿಂದ ಹೆದ್ದಾರಿ ಬಂದ್ ಮಾಡಿರುವ ನಾಗಾ ಬಂಡುಕೋರರು

‘ಅರಾಜಕತೆಯತ್ತ ಮಣಿಪುರ’: 51 ದಿನಗಳಿಂದ ಹೆದ್ದಾರಿ ಬಂದ್ ಮಾಡಿರುವ ನಾಗಾ ಬಂಡುಕೋರರು

ಸಪ್ತ ಸಹೋದರಿಯರ ನಾಡು, ಈಶಾನ್ಯ ಭಾರತದ ಪುಟ್ಟ ರಾಜ್ಯ ಮಣಿಪುರದಲ್ಲಿ ನಾಗಾಗಳು ಮತ್ತು ರಾಜ್ಯ ಸರಕಾರದ ನಡುವಿನ ತಿಕ್ಕಾಟದಿಂದ ಅರಾಜಕತೆ ಸೃಷ್ಟಿಯಾಗಿದೆ.

ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರವನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಕಳೆದ ಹಲವು ವಾರಗಳಿಂದ ರಾಷ್ಟ್ರೀಯ ಹೆದ್ದಾರಿ-2ನ್ನು ‘ಸಂಯುಕ್ತ ನಾಗಾ ಒಕ್ಕೂಟ’ (ಎಸ್ಎನ್ಸಿ) ಬಂದ್ ಮಾಡಿದೆ. ಇದರಿಂದ ರಾಜ್ಯಕ್ಕೆ ಅಗತ್ಯ ಸರಕುಗಳ ಸರಬರಾಜು ನಿಂತಿದ್ದು, ದೈನಂದಿನ ಬದುಕು ಏರುಪೇರಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೀಗ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿದ್ದು, ರಾಜ್ಯ ಸರಕಾರ, ಸಂಯುಕ್ತ ನಾಗಾ ಒಕ್ಕೂಟ (ಎಸ್ಎನ್ಸಿ) ಮತ್ತು ಕೇಂದ್ರ ಸರಕಾರದ ನಡುವಿನ ತ್ರಿಕೋನ ಸಮಸ್ಯೆಯಾಗಿ ಇದು ಬದಲಾಗಿದೆ.

ಗುರುವಾರ ಕೇಂದ್ರ ಸರಕಾರ ಮಣಿಪುರ ಸರಕಾರಕ್ಕೆ ಗಂಭೀರ ಪ್ರಶ್ನೆಗಳನ್ನು ಕೇಳಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್’ಗೆ ಪತ್ರ ಬರೆದಿದ್ದು, “ಸಂವಿಧಾನ ವಿರೋಧಿ ಶಕ್ತಿಗಳನ್ನು ತುರ್ತಾಗಿ ಮಟ್ಟ ಹಾಕುವಂತೆ,” ಕೇಳಿಕೊಂಡಿದ್ದಾರೆ. ಮಾತ್ರವಲ್ಲ “ಕಾನೂನು ಸುವ್ಯವಸ್ಥೆ ಪಾಲನೆ ಮಾಡುವುದು ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವುದು ರಾಜ್ಯದ ಕರ್ತವ್ಯ,” ಎಂದಿದ್ದಾರೆ.

“ಕೇಂದ್ರ ಸರಕಾರ ಸತತ ಮನವಿಗಳನ್ನು ಮಾಡಿಕೊಂಡಿದೆ. ರಾಜ್ಯ ಪೊಲೀಸರ ಜತೆ ಕೈಜೋಡಿಸಲು ಕೇಂದ್ರ ಪೊಲೀಸರು ಸಿದ್ಧವಾಗಿದ್ದಾಗಲೂ,  ರಾಜ್ಯ ಸರಕಾರ ರಾಷ್ಟ್ರೀಯ ಹೆದ್ದಾರಿ-2ನ್ನು ಸಂಚಾರ ಮುಕ್ತ ಮಾಡಲು ವಿಫಲವಾಗಿದೆ,” ಎಂದು ಅವರು ಪತ್ರದಲ್ಲಿ ದೂರಿದ್ದಾರೆ.

7 ಜಿಲ್ಲೆಗಳೇ ಸಮಸ್ಯೆಯ ಮೂಲ:

ಮಣಿಪುರ ಸರಕಾರ ಇತ್ತೀಚೆಗೆ 7 ಜಿಲ್ಲೆಗಳನ್ನು ಹೊಸದಾಗಿ ರಚಿಸಿತ್ತು. ಆಡಳಿತ ಸುಲಲಿತವಾಗಿ ನಡೆಯಲು ಈ ರಚನೆ ಮಾಡಿರುವುದಾಗ ರಾಜ್ಯ ಸರಕಾರ ಹೇಳಿಕೊಂಡಿತ್ತು. ಆದರೆ ಇದನ್ನು ಒಪ್ಪದ ಸಂಯುಕ್ತ ನಾಗಾ ಒಕ್ಕೂಟ 7 ಜಿಲ್ಲೆಗಳ ರಚನೆ ‘ಗ್ರೇಟರ್ ನಾಗಲಿಂ’ ರಚನೆ ಪ್ರಯತ್ನವನ್ನು ಮುರಿಯುವ ಯತ್ನ ಎಂದು ವ್ಯಾಖ್ಯಾನಿಸಿತ್ತು. ನಾಗಾಗಳ ನಡುವೆ ಒಡಕು ತರಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ ಎಂದು ಆಪಾದನೆ ಮಾಡಿದೆ.

ಇದರ ವಿರುದ್ಧ ತೀವ್ರ ಪ್ರತಿಭಟನೆ ಆರಂಭಿಸಿದ್ದ ನಾಗಾಗಳು ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್ ಮಾಡಿದ್ದರು. ಗುರುವಾರ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡು 52 ದಿನಗಳು ಕಳೆದಿತ್ತು. ರಾಜ್ಯಕ್ಕೆ ಪೆಟ್ರೋಲ್, ಡೀಸೆಲ್ ಪೂರೈಕೆಯೂ ನಿಂತು ಅಷ್ಟೇ ದಿನವಾಗಿತ್ತು. ಆದರೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ.

ಮಣಿಪುರದಲ್ಲಿ ಮುಖ್ಯಮಂತ್ರಿ ಜತೆ ಕಿರಣ್ ರಿಜಿಜು (ಚಿತ್ರ ಕೃಪೆ: ಎಎನ್ಐ)

ಮಣಿಪುರದಲ್ಲಿ ಮುಖ್ಯಮಂತ್ರಿ ಜತೆ ಕಿರಣ್ ರಿಜಿಜು (ಚಿತ್ರ ಕೃಪೆ: ಎಎನ್ಐ)

ಇದೇ ವಿಚಾರವಾಗಿ ಸಮಸ್ಯೆ ಬಗೆಹರಿಸಲು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಮಣಿಪುರಕ್ಕೆ ತೆರಳಿ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದಾರೆ.

ನಾಗಾ ಸಮಸ್ಯೆಗೆ ಪರಿಹಾರ ಯತ್ನ:

‘ನಾಗಾಲ್ಯಾಂಡ್ ರಾಷ್ಟ್ರೀಯ ಸಮಾಜವಾದಿ ಒಕ್ಕೂಟ (ಇಸಾಕ್ ಮುವಾಹ್)’ ತಂಡದ ಜತೆ ಕೇಂದ್ರ ಮಾತುಕತೆಗೆ ನಿರ್ಧರಿಸಿದ್ದು. ಮಧ್ಯಪ್ರವೇಶಿಸಿದೆ. 2015ರಲ್ಲಿ ಇಸಾಕ್ ಮುವಾಹ್ ಗುಂಪು ಕೇಂದ್ರ ಸರಕಾರದ ಜತೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಲ್ಲಿ ದಶಕಗಳ ಹಿಂದಿನ ನಾಗಾ ಸಮಸ್ಯೆಗೆ ಅಂತ್ಯಹಾಡಲು ನಿರ್ಧರಿಸಲಾಗಿತ್ತು. ಇದಕ್ಕೂ ಮೊದಲು ಇಸಾಕ್ ಮುವಾಹ್ ತಂಡ 1997ರಲ್ಲಿ ಕೇಂದ್ರ ಸರಕಾರದ ಜತೆ ಒಪ್ಪಂದ ಮಾಡಿಕೊಂಡಿತ್ತು. ನಾಗಾಗಳನ್ನು ದೊಡ್ಡಮಟ್ಟಕ್ಕೆ ಪ್ರತಿನಿಧಿಸುವ ಈ ಸಂಘಟನೆ “ಗ್ರೇಟರ್ ನಾಗಾಲಿಂ”ಗಾಗಿ ಒತ್ತಾಯಿಸುತ್ತಾ ಬಂದಿದೆ. ಒಂದೊಮ್ಮೆ ಅದು ಸಾಧ್ಯವಾಗದೇ ಇದ್ದರೆ ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿರುವ ನಾಗಾಗಳಿಗೆ ಭೂಮಿ ನೀಡಬೇಕು ಎಂದು ಬೇಡಿಕೆ ಇಡುತ್ತಾ ಬಂದಿದೆ.

ಎಲ್ಲಾ ಒಪ್ಪಂದ, ಮಾತುಕತೆಗಳ ಆಚೆಗೂ ಇಂಥಹದ್ದೊಂದು ಸಮಸ್ಯೆಗೆ ಅಂತ್ಯ ಹಾಡಲು ಯಾವ ಸರಕಾರಕ್ಕೂ ಸಾಧ್ಯವಾಗಿಲ್ಲ. ಅಥವಾ ಅಂತಹದ್ದೊಂದು ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ.

ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಕೆಲವು ಭಾಗಗಳಲ್ಲಿ ಕರ್ಫ್ಯೂ ಹಾಕಲಾಗಿದ್ದು ಮೊಬೈಲ್ ಇಂಟರ್ನೆಟನ್ನೂ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಯಾವ ಮಾದರಿಯ ಪರಿಹಾರವನ್ನು ಕಾಣಲಿದೆ ಎಂಬುದು ಈಶಾನ್ಯ ಭಾರತದ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಹೋರಾಟಗಳ ಮೇಲೆ ಪರಿಣಾಮ ಬೀರಲಿದೆ.

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top