An unconventional News Portal.

‘ವಿಡಿಯೋ ಗಾಯ’ದ ಮೇಲೆ ಸುಪ್ರಿಂ ಕೋರ್ಟ್ ‘ತೀರ್ಪಿನ ಬರೆ’: ಕಿಚ್ಚು ಹೊತ್ತಲು ಇನ್ನೇನು ಬೇಕು?

‘ವಿಡಿಯೋ ಗಾಯ’ದ ಮೇಲೆ ಸುಪ್ರಿಂ ಕೋರ್ಟ್ ‘ತೀರ್ಪಿನ ಬರೆ’: ಕಿಚ್ಚು ಹೊತ್ತಲು ಇನ್ನೇನು ಬೇಕು?

ಸುಪ್ರಿಂ ಕೋರ್ಟ್ ಮಾರ್ಪಾಡು ಆದೇಶ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ನಾಂದಿ ಹಾಡಿದೆ.

ಇದಕ್ಕೂ ಮೊದಲೇ ಸೋಮವಾರ ಮುಂಜಾನೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋವನ್ನು ಸುದ್ದಿವಾಹಿನಿಗಳು ನಿರಂತರ ಪ್ರಸಾರ ಮಾಡಿದ್ದರ ಹಿನ್ನೆಲೆಯಲ್ಲಿ ವಾತಾವರಣ ಬಿಗಡಾಯಿಸಲು ಶುರುವಾಗಿತ್ತು. ಹೀಗಿರುವಾಗಲೇ, ಹೊರಬಿದ್ದ ಸುಪ್ರಿಂ ಕೋರ್ಟ್ ತೀರ್ಪು ಕನ್ನಡ ಸಂಘಟನೆಗಳ ಉಗ್ರ ಪ್ರತಿಭಟನೆಗೆ ಕಾರಣವಾಗಿದೆ.

ಆದೇಶದಲ್ಲೇನಿದೆ?: 

ಸೆ. 5ರಂದು ನೀಡುರುವ ತನ್ನ ಆದೇಶವನ್ನು ಮಾರ್ಪಾಡು ಮಾಡಿ ಸುಪ್ರಿಂ ಕೋರ್ಟ್ ಸೋಮವಾರ ಹೊಸ ಆದೇಶವನ್ನು ಹೊರಡಿಸಿದೆ. ಇದರಲ್ಲಿ ಸೆ. 20ರವರೆಗೆ 12 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ತಿಳಿಸಿದೆ. ಈ ಹಿಂದೆ ಪ್ರತಿ ದಿನ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರಿಂ ಕೋರ್ಟ್ ಹೇಳಿತ್ತು. ಇದೀಗ ನೀರಿನ ಪ್ರಮಾಣವನ್ನು ಕಡಿಮೆ ಮಾಡಿರುವ ನ್ಯಾಯಾಲಯ, ಹೆಚ್ಚುವರಿ ಐದು ದಿನ ನೀರು ಹರಿಸುವಂತೆ ತಿಳಿಸಿದೆ. ಇದರಿಂದಾಗಿ ಕರ್ನಾಟಕ ಸುಮಾರು 48 ಸಾವಿರ ಕ್ಯೂಸೆಕ್ಸ್ ನೀರು ಜಾಸ್ತಿ ಬಿಡಬೇಕಾದ ಅನಿವಾರ್ಯತೆ ಬಿದ್ದಿದೆ.

ನ್ಯಾ. ದೀಪಕ್ ಮಿರ್ಶಾ ಮತ್ತು ನ್ಯಾ. ಯು. ಯು. ಲಲಿತ್ ಅವರುಗಳನ್ನು ಒಳಗೊಂಡ ನ್ಯಾಯಪೀಠವು, ರಾಜ್ಯ ಸರಕಾರ ಸಲ್ಲಿಸಿದ್ದ ವಿಶೇಷ ಮನವಿಯನ್ನು ಪರಿಗಣಿಸಿ ಆದೇಶವನ್ನು ನೀಡಿದೆ. ಜತೆಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದೆ. ಜತೆಗೆ, ಸರಕಾರ ಸಲ್ಲಿಸಿರುವ ಮನವಿಯ ‘ಧ್ವನಿ’ (tone and tenor) ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ. ಕೊನೆಗೆ ಪ್ರಯತ್ನ ಎಂಬಂತೆ, ನ್ಯಾಯಾಲಯ ಆದೇಶ ನೀಡಿದ ನಂತರ, ನ್ಯಾಯಾಧೀಶದ ಕೊಠಡಿಯಲ್ಲಿ ವಕೀಲರಾದ ಫಾಲಿ ನಾರಿಮನ್, ಮೋಹನ್ ಕಾತರಕಿ ಮತ್ತು ಅಡ್ವಕೇಟ್ ಜನರಲ್ ಮಧುಸೂದನ್ ನಾಯಕ್ ಮಾಡಿಕೊಂಡ ಮನವಿಯನ್ನೂ ತಿರಸ್ಕರಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ತಮಿಳುನಾಡು ವರದಿ:

ತಮಿಳುನಾಡಿನ ರಾಜಧಾನಿ ಚೆನ್ನೈ ಬಹುತೇಕ ಶಾಂತವಾಗಿದೆ. ಆದರೆ, ಅಲ್ಲಲ್ಲಿ ಕರ್ನಾಟಕ ನೋಂದಾಯಿತ ವಾಹನಗಳ ಮೇಲೆ ಕಲ್ಲು ತೂರುವ ಪ್ರಯತ್ನಗಳು ವರದಿಯಾಗಿವೆ. ಚೆನ್ನೈ ನಗರದ ಹೃದಯ ಭಾಗದಲ್ಲಿರುವ ವುಡ್ ಲ್ಯಾಂಡ್ ಹೋಟೆಲ್, ರಾಮೇಶ್ವರದ ಕೆಲವು ಕಡೆಗಳಲ್ಲಿ ಕೆಲವು ತಮಿಳು ಸಂಘಟನೆಗಳು ಕನ್ನಡಿಗರನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಆದರೆ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಯಾವುದೇ ಹಾನಿಯಾಗಿಲ್ಲ ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಹುಟ್ಟಿಕೊಂಡ ಪ್ರತಿಭಟನೆ:

ಇತ್ತ ಬೆಂಗಳೂರು ಮತ್ತು ಮಂಡ್ಯದಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ. ಮುಖ್ಯವಾಗಿ ಮೈಸೂರು ರಸ್ತೆ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣದ ಸುತ್ತ ಮತ್ತ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಉದ್ರಿಕ್ತಗೊಂಡು, ಹಿಂಸಾಚಾರಕ್ಕೆ ಇಳಿದಿದ್ದಾರೆ. ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿರುವ ಅಡಿಯಾರ್ ಆನಂದ್ ಭವನ್ ಹೊಟೇಲಿನ ಮೇಲೆ ಸಂಘಟನೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭ ಎರಡು ಬಾರಿ ಪೊಲೀಸರು ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ಗಳು ಕಾರ್ಯಕರ್ತರ ಮೇಲೆ ಲಾಠಿ ಚಾರ್ಚ್ ನಡೆಸಿವೆ. ಇದೇ ರೀತಿ ಬನ್ನೇರುಘಟ್ಟದಲ್ಲಿಯೂ ತಮಿಳುನಾಡು ಮೂಲದ ‘ಆನಂದ್ ಭವನ್’ ಮೇಲೆಯೂ ದಾಳಿ ನಡೆದಿದೆ.

ಇಂದಿರಾನಗರ ಮತ್ತು ಶ್ರೀನಗರದಲ್ಲಿರುವ ಪೂರ್ವಿಕಾ ಮೊಬೈಲ್ ಶೋ ರೂಂ ಮೇಲೆಯೂ ಕಲ್ಲು ತೂರಾಟ ನಡೆಸಿದ್ದು ಗಾಜುಗಳು ಪುಡಿಪುಡಿಯಾಗಿವೆ.

ತಮಿಳುನಾಡು ನೋಂದಣಿ ವಾಗನಗಳನ್ನು ಗುರಿಯಾಗಿಸಿ ಕಾರ್ಯಕರ್ತರು ದಾಳಿ ನಡೆಸುತ್ತಿದ್ದು, ಅಪಾರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಒಡೆದಿದ್ದಾರೆ. ನಾಯಂಡಹಳ್ಳಿ ಒಂದರಲ್ಲೇ 10 ನಿಮಿಷಗಳ ಅಂತರದಲ್ಲಿ 6 ಲಾರಿಗಳಿಗೆ ಬೆಂಕಿ ಹಚ್ಚಲಾಗಿದೆ. ನ್ಯೂ ಟಿಂಬರ್ ಯಾರ್ಡ್ ಲೇಔಟ್ನಲ್ಲಿ ಗೋಕುಲ್ ದಾಸ್ ಟ್ರಾನ್ಸ್ ಪೋರ್ಟಿಗೆ ಸೇರಿದ 25ಕ್ಕೂ ಹೆಚ್ಚು ಲಾರಿಗಳಿಗೆ ಸಾಲು ಸಾಲಾಗಿ ಬೆಂಕಿ ಹಚ್ಚಲಾಗಿದೆ. ಇದಲ್ಲದೇ ಆವಲಹಳ್ಳಿಯಲ್ಲಿ 3 ಲಾರಿ ಮತ್ತು ಮೂರು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬೆಂಗಳೂರು-ಮೈಸೂರು ರಸ್ತೆಯ ಟೋಲ್ ಗೇಟ್ ಬಳಿ ಒಂದು ಲಾರಿಗೆ ಬೆಂಕಿ ಹಚ್ಚಲಾಗಿದೆ. ನೈಸ್ ರಸ್ತೆಯಲ್ಲೂ 4 ಲಾರಿಗಳಿಗೆ ಮತ್ತು ತಮಿಳುನಾಡು ಸಾರಿಗೆ ಸಂಸ್ಥಗೆ ಸೇರಿದ ಒಂದು ಬಸ್ಸಿಗೆ ಬೆಂಕಿ ಹಚ್ಚಲಾಗಿದೆ.

ಬೆಂಗಳೂರಿನಲ್ಲಿ ಏಕಾಏಕಿ ಈ ಪ್ರತಿಭಟನೆಗಳು ಹಿಂಸಾಚಾರ ಆರಂಭವಾಗುತ್ತಿದ್ದಂತೆ, ಮೆಟ್ರೋ ರೈಲು ಸಂಚಾರವನ್ನು ಪೂರ್ತಿಯಾಗಿ ನಿಲ್ಲಿಸಲಾಗಿದೆ. ಮೆಟ್ರೋ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನೂ ಹೊರ ಕಳುಹಿಸಿ ನಿಲ್ದಾಣಗಳಿಗೆ ಬೀಗ ಜಡಿಯಲಾಗಿದೆ.

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರಿನಾದ್ಯಂತ ಶಾಲೆ-ಕಾಲೇಜು, ಖಾಸಗಿ ಕಂಪೆನಿಗಳಿಗೆ ರಜೆ ನೀಡಲಾಗಿದೆ. ಪೀಣ್ಯದಲ್ಲಿ ಫ್ಯಾಕ್ಟರಿಗಳನ್ನೂ ಬಂದ್ ಮಾಡಲಾಗಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನೂ ಅಲ್ಲಲ್ಲಿ ಸ್ಥಗಿತಗೊಳಿಸಲಾಗಿದೆ. ಗಲಾಟೆ ಹಿನ್ನೆಲಯಲ್ಲಿ ಜನರು ಮನೆಗಳತ್ತ ತೆರಳುತ್ತಿದ್ದು ಮೆಜೆಸ್ಟಿಕ್, ಮಾಗಡಿ, ಮೈಸೂರು ರಸ್ತೆ, ಎಂಜಿ ರೋಡ್, ರಿಚ್ಮಂಡ್, ಟೌನ್ ಹಾಲ್, ಹೊಸೂರು, ನವರಂಗ್, ಬೊಮ್ಮನ ಹಳ್ಳಿಯಲ್ಲಿ ಭಾರಿ ಟ್ರಾಫಿಕ್ ಜಾಂ ಸಂಭವಿಸಿದೆ. ಇನ್ನು ಮೆಜೆಸ್ಟಿಕ್ ಸುತ್ತ ಮುತ್ತ ಚಿತ್ರ ಪ್ರದರ್ಶನವನ್ನೂ ಸ್ಥಗಿತಗೊಳಿಸಲಾಗಿದೆ.

ಮಂಡ್ಯ ಭಾಗಗಳಲ್ಲಿ ರೈತರ ಪ್ರತಿಭಟನೆ ಶುರುವಾಗಿದೆ. ಮಂಡ್ಯದ ಮದ್ದೂರಿನ ಗೆಜ್ಜಲಗೆರೆಯಲ್ಲಿ ಒಂದು ಟಾಟಾ ಸುಮೋಗೆ ಹಾಗೂ ಪಾಂಡವಪುರದಲ್ಲಿ ಹಾಲಿನ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಕೆಆರ್’ಎಸ್ ಗೆ ಮತ್ತೆ ಮುತ್ತಿಗೆ ಹಾಕಲು ಯತ್ನ ಕೂಡಾ ನಡೆಯಿತು. ಮಂಡ್ಯ, ಶ್ರೀರಂಗ ಪಟ್ಟಣ, ಗೋರೂರು, ಕೆಆರ್’ಎಸ್, ಕಬಿನಿ ಸುತ್ತ ಮುತ್ತ ಕೂಡಾ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ಪರಿಸ್ಥಿತಿ ಕೈ ಮೀರುತ್ತಿದ್ದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿವಾಸದಲ್ಲಿ ತುರ್ತು ಸಂಪುಟ ಸಭೆ ಕರೆಯಲಾಗಿದೆ. ಈ ನಡುವೆ, ಸಿಎಂ ಸಿದ್ದರಾಮಯ್ಯ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡು ಸಿಎಂ ಜಯಲಲಿತಾಗೆ ಪತ್ರ ಬರೆದಿರುವ ಅವರು, ‘ರಾಜ್ಯದಲ್ಲಿರುವ ತಮಿಳರ ರಕ್ಷಣೆ ನಮ್ಮ ಹೊಣೆ. ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡುವುದು ನಿಮ್ಮ ಹೊಣೆ’ ಎಂದಿದ್ದಾರೆ.

siddharaiah_lette_3007674a

ಶಾಂತಿ ಮಂತ್ರ:

ಸೋಮವಾರ ಬೆಳಗ್ಗೆ ‘ಕನ್ನಡಿಗರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ’ ಎಂದು ದೃಶ್ಯಾವಳಿಗಳನ್ನು ಪದೇ ಪದೇ ತೋರಿಸಿದ ಕನ್ನಡದ ಸುದ್ದಿ ವಾಹಿನಿಗಳು ಮಧ್ಯಾಹ್ನದ ಹೊತ್ತಿಗೆ ‘ಶಾಂತಿ ಮಂತ್ರ’ ಜಪ ಆರಂಭಿಸಿವೆ. ಕಾವೇರಿ ವಿಚಾರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ, ಹಿಂಸಾಚಾರಕ್ಕೆ ಇಳಿಯದಂತೆ ಜನರಿಗೆ ಅವು ಪದೇ ಪದೇ ಮನವಿ ಮಾಡಿಕೊಳ್ಳುತ್ತಿವೆ. ‘ಮಾತು ಹತೋಟಿಯಲ್ಲಿರಲಿ’ ಎಂದು ಜನ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವಾಹಿನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

61de99f1-c8b8-441f-94bc-1e6e34ee8c95

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top