An unconventional News Portal.

ಕಾವೇರಿ ತಾಂತ್ರಿಕ ಸಮಿತಿಯಿಂದ ಸುಪ್ರಿಂ ಕೋರ್ಟಿಗೆ ವರದಿ ಸಲ್ಲಿಕೆ; ರಿಪೋರ್ಟಿನಲ್ಲೇನಿದೆ?

ಕಾವೇರಿ ತಾಂತ್ರಿಕ ಸಮಿತಿಯಿಂದ ಸುಪ್ರಿಂ ಕೋರ್ಟಿಗೆ ವರದಿ ಸಲ್ಲಿಕೆ; ರಿಪೋರ್ಟಿನಲ್ಲೇನಿದೆ?

ಕಾವೇರಿ ಉನ್ನತ ಮಟ್ಟದ ತಾಂತ್ರಿಕ ಸಮಿತಿ ತನ್ನ 87 ಪುಟಗಳ ಸುದೀರ್ಘ ಸ್ಥಳ ಪರಿಶೀಲನಾ ವರದಿಯನ್ನು ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ.

ಪರ್ಯಾಯ ಬೆಳೆಗಳು ಮತ್ತು ನೀರಾವರಿ ಅಳವಡಿಸಿಕೊಳ್ಳುವುದು; ಈ ಮೂಲಕ ನೀರಿನ ಪೋಲು ತಡೆಗಟ್ಟುವುದು. ಅಟೋಮ್ಯಾಟಿಕ್ ನೀರಿನ ಅಳತೆ ಮಾಪನ ಅಳವಡಿಸಿಕೊಳ್ಳುವುದು. ರಾಜ್ಯದ ಜನರಿಗೆ ಬುದ್ದಿವಾದ ಹೇಳುವುದು ಸೇರಿದಂತೆ ಹಲವು ತೀರ್ಮಾನಗಳನ್ನು ಒಳಗೊಂಡ ವರದಿಯನ್ನು ಸಮಿತಿಯು ಸೋಮವಾರ ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ.

ಕಾವೇರಿ ತಾಂತ್ರಿಕ ಸಮಿತಿ ಸಲ್ಲಿಸಿದ ರಿಪೋರ್ಟಿನಲ್ಲಿ ಒಟ್ಟು 6 ವಿಭಾಗಗಳಿದ್ದು ಸವಿವರವಾದ ವರದಿ ಇದಾಗಿದೆ.

ಮೊದಲ ಅಧ್ಯಾಯದಲ್ಲಿ ಸಮಿತಿಯು ಸಮಸ್ಯೆಯ ಹಿನ್ನಲೆಯ ಬಗ್ಗೆ ಚರ್ಚೆ ನಡೆಸಿದೆ. ಎರಡನೇ ಅಧ್ಯಾಯವನ್ನು ಕರ್ನಾಟಕ ಸರಕಾರ ಸಲ್ಲಿಸಿದ ಮನವಿಗೆ ಮೀಸಲಾಗಿಟ್ಟಿದೆ. ಮೂರನೇ ಅಧ್ಯಾಯದಲ್ಲಿ ಸ್ಥಳ ಪರಿಶೀಲನೆ ಸಂದರ್ಭ ಕಂಡು ಬಂದ ಪರಿಸ್ಥಿತಿಗಳನ್ನು ವಿವರಿಸಲಾಗಿದೆ.

cauvery central-teamನಾಲ್ಕನೇ ಅಧ್ಯಾಯ ಪ್ರಮುಖವಾಗಿದ್ದು, ಪಡೆದುಕೊಂಡ ದಾಖಲೆಗಳನ್ನು ತಜ್ಞರ ತಂಡ ಅವಲೋಕನ ಮಾಡಿದೆ. ಇದರಲ್ಲಿ ಕಳೆದ 42 ವರ್ಷಗಳಲ್ಲಿ ಕೆಆರ್ಎಸ್, ಮೆಟ್ಟೂರು ಜಲಾಶಯಕ್ಕೆ ಹರಿದು ಬಂದ ನೀರಿನ ಪ್ರಮಾಣ, ಕರ್ನಾಟಕ ತಮಿಳುನಾಡಿಗೆ ಬಿಡುಗಡೆ ಮಾಡಿದ ನೀರಿನ ಪ್ರಮಾಣ ಮೊದಲಾದ ವಿಷಯಗಳ ಕ್ರೋಢೀಕೃತ ಮಾಹಿತಿಗಳಿವೆ. ಐದನೇ ಅಧ್ಯಾಯದಲ್ಲಿ ಸಮಿತಿ ತನ್ನ ವರದಿಯ ಸಾರಾಂಶಗಳನ್ನು ದಾಖಲಿಸಿ, ಕೊನೆಯ ಭಾಗವನ್ನು ತೀರ್ಮಾನಕ್ಕೆ ಮೀಸಲಿರಿಸಿದೆ. ಇಲ್ಲಿ ತೀರ್ಮಾನಗಳನ್ನು ಸಾಮಾಜಿಕ ಮತ್ತು ತಾಂತ್ರಿಕ ಎಂದು ವಿಭಾಗಿಸಿದ್ದು, ಸಾಮಾಜಿಕವಾಗಿ 5 ತೀರ್ಮಾನಗಳು ಮತ್ತು ತಾಂತ್ರಿಕವಾಗಿ 8 ತೀರ್ಮಾನಗಳನ್ನು ಸಮಿತಿಯು ತೆಗೆದುಕೊಂಡಿದೆ.

ಸಮಿತಿಯ ತೀರ್ಮಾನಗಳೇನು?

ಸಾಮಾಜಿಕ ತೀರ್ಮಾನಗಳನ್ನು ನೋಡುವುದಾದರೆ, ನೀರು ಕಡಿಮೆಯಾಗಿರುವ ಕಾರಣ ಎರಡೂ ರಾಜ್ಯದಲ್ಲಿ ರೈತರಿಗೆ ಭಾರೀ ಸಮಸ್ಯೆಯಾಗಿದೆ. ಕೃಷಿ ಮತ್ತು ಮೀನುಗಾರಿಕೆಗೆ ನೀರಿನ ಅಭಾವವಾದ ಕಾರಣ ಎರಡೂ ರಾಜ್ಯಗಳಿಗೆ ಭಾರೀ ಹೊಡೆತ ಬಿದ್ದಿದೆ.ಇದರಿಂದ ನಿರುದ್ಯೋಗ ಸೃಷ್ಟಿಯಾಗಿದೆ, ಆರ್ಥಿಕ ಸಂಕಷ್ಟ ಎದುರಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕರ್ನಾಟಕ ಸರ್ಕಾರ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಬರುವ 48 ತಾಲೂಕುಗಳ ಪೈಕಿ 42 ತಾಲೂಕಗಳನ್ನು ಕೇಂದ್ರ ಸರ್ಕಾರದ ಮಾರ್ಗದರ್ಶಿ ನಿಯಮಗಳ ಪ್ರಕಾರ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಿದೆ.

ಕರ್ನಾಟಕ ಮತ್ತು ತಮಿಳುನಾಡು ಎರಡೂ ಸರಕಾರಗಳು ‘ತಮಿಳುನಾಡು ಮತ್ತು ಪುದುಚೆರಿ’ಯಲ್ಲಿ ಜಮೀನಿನಲ್ಲಿರುವ ಬೆಳೆಗಳನ್ನು ಗಮನಿಸಬೇಕು. ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಯ ಮಹತ್ವಾಕಾಂಕ್ಷೆಯನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು; ಎರಡೂ ಸರಕಾರಗಳು ಅದಕ್ಕೆ ತಕ್ಕಂತೆ ಜನರಿಗೆ ತಿಳಿ ಹೇಳಬೇಕು ಎಂದು ಹೇಳಲಾಗಿದೆ.

ಸಮಿತಿಯ ತಾಂತ್ರಿಕ ನಿರ್ಧಾರಗಳು

ಇನ್ನು ತಾಂತ್ರಿಕ ಅಂಶ ಗಮನಿಸುವುದಾದರೆ, ‘ಈಗಿರುವ ನೀರಿನ ಬಳಕೆಯ ಅರ್ಧದಷ್ಟನ್ನು ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ ಯೋಜನಾಬದ್ಧವಾದ, ವೈಜ್ಞಾನಿಕ ಕೃಷಿ ಅಗತ್ಯ. ನೀರಿನ ಹರಿವಿನ ದಿಕ್ಕನ್ನು ಆಧರಿಸಿ ಬೆಳೆ ಬೆಳೆಯುವುದು, ಹವಾಮಾನ ಮುನ್ಸೂಚನೆಗಳನ್ನು ಗಮನಕ್ಕೆ ತೆಗೆದುಕೊಳ್ಳುವುದು, ಇವೇ ಮುಂತಾದ ವಿಧಾನಗಳನ್ನು ಅಳವಡಿಸಿಕೊಂಡು ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬೇಕು,’ ಎಂದು ಸಮಿತಿ ಹೇಳಿದೆ.

ರೈತರಿಗೆ ನೀರು ಪೂರೈಸುವ ವ್ಯವಸ್ಥೆಗಳು ದಶಕದಷ್ಟು ಹಣೆಯದಾಗಿದ್ದು, ಗುಣಮಟ್ಟ ಉಳಿಸಿಕೊಂಡಿಲ್ಲ. ಹೊಲಗಳಿಗೆ ನೀರು ಹರಿಸುವ ವಿಧಾನವೂ ಅಂದ ಕಾಲದ್ದಾಗಿದ್ದು, ಅವೈಜ್ಞಾನಿಕವಾಗಿದೆ. ಇದಕ್ಕೆ ಪರ್ಯಾಯವಾಗಿ ಕೊಳವೆಗಳ ಮೂಲಕ ನೀರು ಹರಿಸುವುದು, ತುಂತುರು ನೀರಾವರಿ ಮತ್ತು ಹನಿ ನೀರಾವರಿ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಪ್ರತಿ ರೈತರಿಗೂ ಸಮಾನವಾಗಿ ನೀರು ಸಿಗುವಂತಾಗಲು ‘ಆನ್-ಫಾರ್ಮ್ ಡೆವಲೆಪ್ಮೆಂಟ್’ ಕೆಲಸಗಳು ನಡೆಯಬೇಕಾಗಿವೆ ಎಂದು ವರದಿ ಹೇಳಿದೆ.

ಇನ್ನು ಸಮುದ್ರ ಬದಿಯಲ್ಲಿರುವ ಜಮೀನುಗಳಿಗೆ ಅಂತರ್ಜಲ ಬಳಸಿಕೊಳ್ಳಲು ಸಾಧ್ಯವಿಲ್ಲ; ಕಾರಣ ನೀರು ಉಪ್ಪಾಗಿರುತ್ತದೆ. ಅಲ್ಲಿ ಮೆಟ್ಟೂರು ಜಲಾಶಯದ ನೀರನ್ನು ಮಾತ್ರ ಬಳಸಿಕೊಳ್ಳಬೇಕಾಗುತ್ತದೆ. ತಮಿಳುನಾಡು ಕೃಷಿಗೆ ಹಲವು ರೀತಿಯಲ್ಲಿ ಬೆಂಬಲ ನೀಡಿದೆ. ಆದರೆ ನೀರಾವರಿ ಸಿಕ್ಕಿದರೆ ಮಾತ್ರ ರೈತರಿಗೆ ಸಿಕ್ಕ ಬೆಂಬಲ ಸಾರ್ಥಕಾಗುತ್ತದೆ ಎಂದು ಸಮಿತಿಯು ತೀರ್ಮಾನಿಸಿದೆ.

ಕರ್ನಾಟಕ ಪದೇ ಪದೇ ಕುಡಿಯುವ ನೀರಿನ ಬೇಡಿಕೆಯನ್ನು ಸುಪ್ರೀಂ ಕೋರ್ಟಿನ ಮುಂದೆ ಇಟ್ಟಿತ್ತು, ಇದಕ್ಕೆ ಸಂಬಂಧಿಸಿದಂತೆ ಸಮಿತಿಯು ತನ್ನ ವರದಿಯಲ್ಲಿ ಕುಡಿಯುವ ನೀರಿನಲ್ಲಿ ಪೋಲಾಗದಂತೆ ಜಾಗ್ರತೆ ವಹಿಸಬೇಕು. ಇದಕ್ಕಾಗಿ ದಕ್ಷ ನೀರು ಸರಬರಾಜು ವಿಧಾನ ಅಳವಡಿಸಿಕೊಳ್ಳಬೇಕು ಎಂದೂ ಹೇಳದೆ.

ನೀರಿನ ಹರಿಯುವಿಕೆ ಮತ್ತು ತಿರುಗಿಸುವಿಕೆಯನ್ನು ಅಳತೆ ಮಾಡಲು ಅಟೋಮ್ಯಾಟಿಕ್ (ಸ್ವಯಂಚಾಲಿತ) ಅಳತೆ ಸಾಧನೆಗಳನ್ನು ಅಳವಡಿಸಬೇಕು ಮಾತ್ರವಲ್ಲ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಹಾಕಬೇಕು ಎನ್ನುವ ತೀರ್ಮಾನಕ್ಕೂ ಸಮಿತಿ ಬಂದಿದೆ.

ಬೆಳೆಗಳ ಜೋಡಣೆ ಮತ್ತು ಬೆಳೆಗಳ ವೈವಿಧ್ಯವನ್ನು ಕಾರ್ಯರೂಪಕ್ಕೆ ತರಬೇಕು. ರೈತರ ನಡುವೆ ಸಮರ್ಥವಾಗಿ ನೀರಾವರಿ ಹಂಚಿಕೆ ಮತ್ತು ಪೂರೈಕೆಗಾಗಿ ‘ಪ್ರಾತಿನಿಧಿಕ (ರೈತರನ್ನು ಒಳಗೊಂಡ) ನೀರಾವರಿ ಮ್ಯಾನೇಜ್ ಮೆಂಟ್’ ವ್ಯವಸ್ಥೆ ಬರಬೇಕು ಎಂದೂ ಸಮಿತಿ ಹೇಳಿದೆ.

ಅಕ್ಟೋಬರ್ 6ರಿಂದ 10ರವರೆಗೂ ಜಿ.ಎಸ್.ಝಾ ನೇತೃತ್ವದ 9 ಜನ ತಜ್ಞರ ತಂಡ ಎರಡು ರಾಜ್ಯಗಳ ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಅಧ್ಯಯನ ನಡೆಸಿತ್ತು. ಕೆಆರ್‍ಎಸ್, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳು ಹಾಗೂ ಜಲಾಶಯ ವ್ಯಾಪ್ತಿಯಲ್ಲಿ 2 ದಿನಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧ ಮಾಡಿತ್ತು. ಈ ವೇಳೆ ಕಾವೇರಿ ಕೊಳ್ಳದ ಜನ ಕೂಡಾ ಕಾವೇರಿ ಟೀಂ ಮುಂದೆ ತಮ್ಮ ಕಷ್ಟವನ್ನು ಹೇಳಿಕೊಂಡು ಅಳಲು ತೋಡಿಕೊಂಡಿದ್ದರು.

ಇನ್ನು ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರಿಂ ಕೋರ್ಟಿನ ತ್ರಿ ಸದಸ್ಯ ಪೀಠದ ಮುಂದೆ ನಾಳೆ (ಮಂಗಳವಾರ) ವಿಚಾರಣೆ ನಡೆಯಲಿದೆ.

Leave a comment

Top