An unconventional News Portal.

‘ಕಾವೇರಿ ಕವರೇಜ್’; ದಿನದ ಪ್ರಮುಖ 10 ಬೆಳವಣಿಗೆಗಳು!

‘ಕಾವೇರಿ ಕವರೇಜ್’; ದಿನದ ಪ್ರಮುಖ 10 ಬೆಳವಣಿಗೆಗಳು!

ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬೆನ್ನಿಗೆ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಮುಖ್ಯವಾಗಿ ಮಂಡ್ಯ, ಹಾಸನ ಮತ್ತು ಮೈಸೂರಿನಲ್ಲಿ ಪ್ರತಿಭಟನೆಗಳು ಜೋರಾಗಿದ್ದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿ ಜನ ಬೀದಿಗಿಳಿದಿದ್ದು, ಹೆದ್ದಾರಿಗಳನ್ನು ತಡೆದಿರುವ ಹಿನ್ನಲೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ವಪಕ್ಷ ಸಭೆ ಕರೆದಿದ್ದು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.


ಮಂಗಳವಾರ ನಡೆದ ಪ್ರಮುಖ 10 ಬೆಳವಣಿಗೆಗಳು ಇಲ್ಲಿವೆ,

  1. ಕರ್ನಾಟಕದ ಹಾಸನ, ಚಾಮರಾಜನಗರ, ಮಂಡ್ಯ, ಮೈಸೂರು ಮತ್ತು ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಮತ್ತು ರೈತರಿಂದ ಪ್ರತಿಭಟನೆ; ಕಾವೇರಿದ ವಾತಾವರಣ. ಅತ್ತ ತಮಿಳುನಾಡಿನಲ್ಲೂ ಸುಪ್ರೀಂ ಹೇಳಿದ್ದಷ್ಟು ನೀರು ಸಾಲಲ್ಲ ಅಂತ ರೈತರಿಂದ ಆಕ್ರೋಶ.

  2. ಬಿಜೆಪಿ ಮತ್ತು ರೈತ ಸಂಘದಿಂದ ಪದೇ ಪದೇ ಕೆಆರ್ಎಸ್ ಗೆ ಮುತ್ತಿಗೆ ಯತ್ನ. ಜಲಾಶಯದ ಹೊರಗೆ ಕಾರ್ಯಕರ್ತರಿಂದ ಧರಣಿ. ಮುನ್ನಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬೀಡು ಬಿಟ್ಟಿರುವ ಕ್ಷಿಪ್ರ ಕಾರ್ಯಾಚರಣೆ ಪಡೆ. ಪ್ರವಾಸಿಗರಿಗೆ 4 ದಿನಗಳ ಕಾಲ ಕೆಆರ್ಎಸ್, ಬೃಂದಾವನ ಗಾರ್ಡನ್ಗೆ ಪ್ರವೇಶ ನಿಷೇಧ.

  3. ಮಂಗಳವಾರ ಕರೆ ನೀಡಲಾಗಿದ್ದ ಮಂಡ್ಯ ಜಿಲ್ಲಾ ಬಂದ್ ಯಶಸ್ವಿ. ಭಾರಿ ಪ್ರತಿಭಟನೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಇನ್ನೂ ಎರಡು ದಿನ ರಜೆ ಘೋಷಣೆ. ಸಂಜಯನಗರ ವೃತ್ತದಲ್ಲಿ ಸಾವಿರಾರು ಜನ ಜಮಾವಣೆಯಾಗಿದ್ದು ತೀವ್ರ ಪ್ರತಿಭಟನೆ. ಶ್ರೀರಂಗಪಟ್ಟಣದಲ್ಲಿಯೂ ಜನರಿಂದ ರಸ್ತೆ ತಡೆ, ಪ್ರತಿಭಟನೆ.

  4. ಸಂಜಯನಗರ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೇರಿ ರಾಜ್ಯದ ರಾಜಕೀಯ ನಾಯಕರ ಫ್ಲೆಕ್ಸ್ ಹರಿದು ಹಾಕಿ, ಭಾವಚಿತ್ರಕ್ಕೆ ಬೆಂಕಿ ಇಟ್ಟು ಪ್ರತಿಭಟನೆ. ಲೋಕೋಪಯೋಗಿ ಇಲಾಖೆ, ಸಹಕಾರ ಸಂಘಗಳ ಕಟ್ಟಡಕ್ಕೆ ನುಗ್ಗಿ ಉದ್ರಿಕ್ತರಿಂದ ದಾಂಧಲೆ.

  5. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಮನೆಗೆ ಮುತ್ತಿಗೆ ಯತ್ನ. ತಮಿಳುನಾಡಿಗೆ ನೀರು ಬಿಡದಂತೆ ಒತ್ತಾಯ.

  6. ವಿಧಾನ ಸೌಧದಲ್ಲಿ ಕಾನೂನು ತಜ್ಞರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತುಕತೆ. ಸಂಜೆ 6 ಗಂಟೆಗೆ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿಕೆ.

  7. ತಮಿಳುನಾಡು ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ. ಅತ್ತಿಬೆಲೆಯಲ್ಲಿ ಜಯಕರ್ನಾಟಕ ಕಾರ್ಯಕರ್ತರಿಂದ ಪ್ರತಿಭಟನೆ. ಸುರಕ್ಷತೆ ಪಾಲನೆಗಾಗಿ ಸ್ಥಳದಲ್ಲಿ ಬೆಂಗಳೂರು ಗ್ರಾಮಾಂತರ ಎಸ್.ಪಿ ಮೊಕ್ಕಾಂ.

  8. ಬೆಂಗಳೂರಿನಲ್ಲಿ ತಮಿಳಿಗರು ಹೆಚ್ಚಾಗಿ ವಾಸಿಸುವ ಭಾಗಗಳಲ್ಲಿ ಭಿಗಿ ಬಂದೋಬಸ್ತ್. ಕರ್ನಾಟಕದಿಂದ ತಮಿಳುನಾಡಿಗೆ ಬಸ್ ಸಂಚಾರ ಸ್ಥಗಿತ, ತಮಿಳುನಾಡಿನಿಂದಲೂ ಬಾರದ ಬಸ್. ಸಂಚಾರ ನಿಲ್ಲಿಸಿದ 700 ಬಸ್ಗಳು.

  9. ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ವಾಟಾಳ್ ನಾಗರಾಜ್, ಸಾ.ರಾ ಗೋವಿಂದು ನೇತೃತ್ವದಲ್ಲಿ ಪ್ರತಿಭಟನೆ. ಸೆಪ್ಟೆಂಬರ್ 9 ರಂದು ರಾಜ್ಯ ಬಂದ್ಗೆ ಕರೆ.

  10. ಜನರು ಶಾಂತಿಯಿಂದ ಇರುವಂತೆ ಜನರಲ್ಲಿ ಮತ್ತು ರೈತರಲ್ಲಿ ಮನವಿ ಮಾಡಿಕೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾನೂನು ಸಚಿವ ಟಿ.ಬಿ ಜಯಚಂದ್ರ.

ಚಿತ್ರ ಕೃಪೆ: ಪ್ರಜಾವಾಣಿ

Leave a comment

Top