An unconventional News Portal.

ಕಾವೇರಿಗಾಗಿ ಮುಂದುವರಿದ ಅಧಿವೇಶನ: ರೈತರ ಸಂಕಷ್ಟಗಳ ಬಗ್ಗೆಯೂ ಚರ್ಚೆ ನಡೆಯಲಿ

ಕಾವೇರಿಗಾಗಿ ಮುಂದುವರಿದ ಅಧಿವೇಶನ: ರೈತರ ಸಂಕಷ್ಟಗಳ ಬಗ್ಗೆಯೂ ಚರ್ಚೆ ನಡೆಯಲಿ

‘ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ, ವಿಶೇಷವಾಗಿ ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಉಂಟಾಗಿರುವ ನೀರಿನ ಕೊರತೆ ಬಗ್ಗೆ ಚರ್ಚೆ’ ನಡೆಸಲು ಮುಂದುವರಿದ ಉಪ ಅಧಿವೇಶನ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಸುಪ್ರಿಂ ಕೋರ್ಟ್ ಸೆ. 30ರಂದು ತಮಿಳುನಾಡಿಗೆ ಆರು ದಿನಗಳ ಕಾಲ ಪ್ರತಿ ದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿತ್ತು. ಜತೆಗೆ, ಈ ಬಾರಿಯೂ ಆದೇಶ ಪಾಲನೆ ಮಾಡದಿದ್ದರೆ ಕಾನೂನಿನ ಕೆಂಗಣ್ಣಿಗೆ ತುತ್ತಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಸರ್ವ ಪಕ್ಷ ಸಭೆಯನ್ನು ಸರಕಾರ ನಡೆಸಿತ್ತು. ಇಲ್ಲಿ ಮುಂದುವರಿದ ಉಪ ಅಧಿವೇಶನ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಪಾರಾಗುವ ಸೂತ್ರ:

ಸುಪ್ರಿಂ ಕೋರ್ಟ್ ಆದೇಶವನ್ನು ಧಿಕ್ಕರಿಸುವ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ನಡೆಸುವ ಮೂಲಕ ಕಾವೇರಿ ನೀರನ್ನು ‘ಕುಡಿಯಲು ಮಾತ್ರವೇ ಬಳಸುವ’ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಮುಂದುವರಿದ ಉಪ ಅಧಿವೇಶನವು ಎದುರಾಗಿರುವ ಬಿಕ್ಕಟ್ಟನ್ನು ಪರಿಹಾರ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ನಿರ್ಣಯಕ್ಕೆ ಬರಲಿದೆ.

ಆ. 6ರಂದು ಮತ್ತೆ ಸುಪ್ರಿಂ ಕೋರ್ಟ್ ದ್ವಿ ಸದಸ್ಯ ಪೀಠ ಕಾವೇರಿ ವಿಚಾರದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಇದಕ್ಕೂ ಮುಂಚೆ, ನೀರು ಹರಿಸುವ ಅಥವಾ ಹರಿಸದಿರುವ ನಿರ್ಣಯವನ್ನು ಅಧಿವೇಶನವು ತೆಗೆದುಕೊಳ್ಳಬೇಕಿದೆ.

‘ಒಳಹರಿವಿನ ನಂತರ ರಾಜ್ಯದ ಕಾವೇರಿ ಜಲಾಶಯಗಳ ಒಟ್ಟು ನೀರಿನ ಸಂಗ್ರಹ ಇಂದು 32 ಟಿಎಂಸಿ ಅಡಿಗಳಿಗೆ ಏರಿದೆ. ಈ ಏರಿಕೆಯ ಹಿನ್ನೆಲೆಯಲ್ಲಿ ಇಕ್ಕಟ್ಟಿನಿಂದ ಹೊರಬೀಳಲು ನೀರು ಬಿಡುವ ಅನಿವಾರ್ಯ ದಾರಿಯನ್ನು ರಾಜ್ಯ ಸರ್ಕಾರ ಸೋಮವಾರ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಿದೆ ಎನ್ನಲಾಗಿದೆ.’ ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.

‘ರಾಜ್ಯದ ರೈತರ ಗದ್ದೆಗಳಿಗೆ ನೀರು ಹರಿಸಿದರೆ ಸೋರಿ ಹೋಗುವ ಮತ್ತು ಬಸಿದು ಕೆಳಭಾಗಕ್ಕೆ ಹರಿಯುವ ನೀರಿನ ಕನಿಷ್ಠ ಪ್ರಮಾಣ ದಿನವೊಂದಕ್ಕೆ 3000 ಕ್ಯುಸೆಕ್ (ಸುಮಾರು ನಾಲ್ಕನೆಯ ಒಂದು ಟಿಎಂಸಿ ಅಡಿ) ಎಂದು ಅಂದಾಜು ಮಾಡಲಾಗಿದೆ. ಈ ನೀರು ಹರಿದು ತಮಿಳುನಾಡಿನ ಮೆಟ್ಟೂರು ಜಲಾಶಯವನ್ನೇ ಸೇರುತ್ತದೆ. ಈ ನೀರನ್ನು ತಾನು ಬಿಟ್ಟದ್ದು ಎಂದೇ ಸುಪ್ರೀಂ ಕೋರ್ಟ್ ಮುಂದೆ ಕರ್ನಾಟಕ ಹೇಳಿಕೊಳ್ಳಲು ಬರುತ್ತದೆ. ಪರಿಣಾಮವಾಗಿ ನ್ಯಾಯಾಲಯದ ಆದೇಶವನ್ನು ಆಂಶಿಕವಾಗಿ ಪಾಲಿಸಿದಂತೆ ಆಗಿ ನ್ಯಾಯಾಂಗ ನಿಂದನೆಯ ಕ್ರೋಧ ತನ್ನ ಮೇಲೆ ಎರಗುವುದನ್ನು ಸದ್ಯದ ಮಟ್ಟಿಗಾದರೂ ನಿವಾರಿಸಿಕೊಂಡಂತೆ ಆಗುತ್ತದೆ’ ಎಂದು ವರದಿ ಹೇಳಿದೆ.

ಮುಂದುವರಿದ ಸಂಕಷ್ಟಗಳು:

ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಕೃಷಿ ಭೂಮಿ ಬರಡು ಬಿದ್ದಿದೆ. ನಾಲೆಗಳಿಗೆ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಹರಿಸಿದ ನೀರನ್ನು ನೆಚ್ಚಿಕೊಂಡು ರೈತರು ಹಾಕಿದ ಬೆಳೆಗಳೂ ಈಗ ಒಣಗಿ ನಿಂತಿವೆ. “ಸರಕಾರ ಅಧಿವೇಶನದಲ್ಲಿ ತಮಿಳುನಾಡಿಗೆ ನೀರು ಹರಿಸುವ ಕುರಿತು ನಿರ್ಣಯವನ್ನು ತೆಗೆದುಕೊಳ್ಳುವುದು ಒಂದು ಅಂಶವಾಗಬೇಕು. ಅದರ ಜತೆಗೆ, ಕಾವೇರಿ ಕಣಿವೆ ರೈತರಿಗೆ ಪರಿಹಾರ ನೀಡುವ ಬಗ್ಗೆಯೂ ಚರ್ಚೆ ನಡೆಸಬೇಕು. ಮುಂದಿನ ವರ್ಷಗಳಲ್ಲಿ ಈ ಭಾಗದಲ್ಲಿ ಕೃಷಿ ಬಿಕ್ಕಟ್ಟು ಸೃಷ್ಟಿಯಾಗಲಿದೆ,” ಎನ್ನುತ್ತಾರೆ ಮಂಡ್ಯ ಭಾಗದ ಕಾವೇರಿ ಹೋರಾಟಗಾರರು.

Top