An unconventional News Portal.

ಹೋರಾಟ ಸ್ಥಗಿತಗೊಳಿಸಿದ ಮಾದೇಗೌಡ; ಸಿಂಗಾಪುರಕ್ಕೆ ಜಯಲಲಿತಾ? ‘ಕಾವೇರಿ’ ದಿನದ ಬೆಳವಣಿಗೆಗಳು

ಹೋರಾಟ ಸ್ಥಗಿತಗೊಳಿಸಿದ ಮಾದೇಗೌಡ; ಸಿಂಗಾಪುರಕ್ಕೆ ಜಯಲಲಿತಾ? ‘ಕಾವೇರಿ’ ದಿನದ ಬೆಳವಣಿಗೆಗಳು

ದಿನದ ಪ್ರಮುಖ ಬೆಳವಣಿಗೆಯಲ್ಲಿ ಕಳೆದ 19 ದಿನಗಳಿಂದ ಸತತ ಪ್ರತಿಭಟನೆ ನಡೆಸುತ್ತಿದ್ದ ಮಾದೇಗೌಡರು ತಮ್ಮ ಹೋರಾಟ ನಿಲ್ಲಿಸಿದ್ದಾರೆ. ಇನ್ನೊಂದು ಕಡೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಮಾದೇಗೌಡ-ಸಿದ್ಧರಾಮಯ್ಯ ಫೋನ್ ಚರ್ಚೆ

ಶನಿವಾರ ಬೆಳಿಗ್ಗೆ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಾಸಕ ಚೆಲುವರಾಯ ಸ್ವಾಮಿ ಮೊಬೈಲಿನಿಂದ ಕರೆ ಮಾಡಿದ್ದರು. “ನಾವು ನೀರು ಬಿಡುವುದಿಲ್ಲ ಪ್ರತಿಭಟನೆ ನಿಲ್ಲಿಸಿ,” ಎಂದು ಕೇಳಿಕೊಂಡರು. “ಆದರೆ ನಮಗೆ ಬೇಕಾಗಿದ್ದು ಪರಿಹಾರ. ಬಂದ್ ವೇಳೆ ಬಂಧಿಸಲಾಗಿರುವ ರೈತರು, ಹೋರಾಟಗಾರರು ಬಿಡುಗಡೆ ಮಾಡಬೇಕು,” ಎಂದು ಮಾದೇಗೌಡರು ಬೇಡಿಕೆ ಇಟ್ಟರು. “ನಾನು ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ,” ಎಂದು ಮುಖ್ಯಮಂತ್ರಿ ಹೇಳಿದರೂ ಕೇಳದ, ಮಾದೇಗೌಡರು, “ಬೇಲ್ ನೀಡುವ ಮೊದಲೇ ಬಿಡುಗಡೆಮಾಡಬೇಕು. ರೈತರಿಗೆ ಪರಿಹಾರ ಘೋಷಣೆ ಮಾಡಲೇಬೇಕು,” ಎಂದು ಒತ್ತಾಯಿಸಿದರು. ಇದಕ್ಕೆ ಸಿದ್ಧರಾಮಯ್ಯ ಗಮನ ಹರಿಸುವುದಾಗಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

ಇದಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಜಿ.ಮಾದೇಗೌಡರು, “ಮುಖ್ಯಮಂತ್ರಿ ನನ್ನೊಂದಿಗೆ ಮಾತನಾಡಿದ್ದಾರೆ. ಪ್ರತಿಭಟನೆ ಹಿಂದೆಗೆದುಕೊಳ್ಳಲು ಹೇಳಿದ್ದಾರೆ. ಆದರೆ ಹಾಗೆ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ತಾತ್ಕಾಲಿಕವಾಗಿ ಹೋರಾಟ ಹಿಂದಕ್ಕೆ ಪಡೆದಿದ್ದೇವೆ.” ಎಂದು ಹೇಳಿದರು.

ತಮಿಳುನಾಡಿಗೆ ಕೆ.ಆರ್.ಎಸ್.ನಿಂದ ನೀರು ಹರಿಸುವುದಿಲ್ಲ ಹಾಗೂ ಕಾವೇರಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹೀಗಾಗಿ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡರು ಹೇಳಿದ್ದಾರೆ. “28ರಂದು ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ನದಿ ನೀರು ಬಿಡುವ ಸಂಬಂಧ ವಿಚಾರಣೆ ಇದೆ. ಅಂದಿನ ಆದೇಶ ನೋಡಿ ಚಳವಳಿಯನ್ನು ಮುಂದುವರಿಸಲಾಗುವುದು,” ಎಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ ಸಹಜಸ್ಥಿತಿಗೆ ಜನಜೀವನ

ಪ್ರತಿಭಟನೆ ಹಿಂದಕ್ಕೆ ಪಡೆಯುತ್ತಿದ್ದಂತೆ ಮಂಡ್ಯದಲ್ಲಿ ಜನಜೀವನ ನಿಧಾನಕ್ಕೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಸೋಮವಾರದಿಂದ 17 ದಿನಗಳಿಂದ ಶಾಲೆ ಕಾಲೇಜಿಗೆ ನೀಡಿದ್ದ ರಜೆಯನ್ನೂ ಹಿಂತೆಗೆದುಕೊಳ್ಳಲಾಗಿದೆ. ಹೀಗಾಗಿ ಶಾಲೆ ಕಾಲೇಜುಗಳೂ ಎಂದಿನಂತೆ ಆರಂಭವಾಗಲಿವೆ. ಶನಿವಾಋ ಮಧ್ಯಾಹ್ನದಿಂದಲೇ ಪ್ರಮುಖ ರಸ್ತೆಯಲ್ಲಿ ಜನಜೀವನ ಕಂಡು ಬಂತು.

ಆದರೆ ಅಹಿತಕರ ಘಟನೆಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಪೊಲೀಸ್ ಬಂದೋಬಸ್ತ್ ಮುಂದುವರಿಯಲಿದೆ.

ಚಿಕಿತ್ಸೆಗಾಗಿ ಜಯಲಲಿತಾ ಸಿಂಗಪುರಕ್ಕೆ?

diuygpevdl-1474641314ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ತೆರಳುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ. “ಅಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೀಗಾಗಿ ಚೆನ್ನೈನಲ್ಲೇ ಚಿಕಿತ್ಸೆ ಮುಂದುವರಿಸಲಾಗುವುದು,” ಎಂದು ‘ಎಐಎಡಿಎಂಕೆ’ ವಕ್ತಾರೆ ಸಿಆರ್ ಸರಸ್ವತಿ ಹೇಳಿದ್ದಾರೆ.

ನಿರ್ಜಲೀಕರಣ, ಮಧುಮೇಹ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಗುರುವಾರ ರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಶನಿವಾರ ಬೆಳಿಗ್ಗಿನವರೆಗೆ ಆರೋಗ್ಯದಲ್ಲಿ ಚೇತರಿಕೆಯೇ ಕಂಡು ಬರದ ಹಿನ್ನಲೆಯಲ್ಲಿ ಸಿಂಗಪುರಕ್ಕೆ ಕೊಂಡೊಯ್ಯುವ ಯೋಜನೆ ಹಾಕಿಕೊಳ್ಳಲಾಗಿತ್ತು. ಇದೀಗ ಆರೋಗ್ಯದಲ್ಲಿ ಸುಧಾರಣೆಯಾಗಿರುವುದರಿಂದ ಸಿಂಗಾಪುರಕ್ಕೆ ಕೊಂಡೊಯ್ಯುವ ಸಾಧ್ಯತೆ ಇಲ್ಲ.

ಆಸ್ಪತ್ರೆ ಸುತ್ತ ಶುಕ್ರವಾರದಿಂದಲೇ ಸಾವಿರಾರು ಜಯಲಲಿತಾ ಅಭಿಮಾನಿಗಳು ನೆರೆದಿದ್ದು ತಮ್ಮ “ಅಮ್ಮ” ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ದೇವೇಗೌಡರು ಮಾತನಾಡಿ, “ಶಿಘ್ರವಾಗಿ ಗುಣಮುಖವಾಗಿ ವಾಪಸ್ಸು ಬಂದು ಈ ರಾಷ್ಟ್ರದ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸುತ್ತೇನೆ. ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು. ಅವರಿಗೆ ಆರೋಗ್ಯ ಸರಿ ಇಲ್ಲ ಎಂದಾಗ ಮನಸಿಗೆ ದುಖಃವಾಯಿತು,” ಎಂದು ಹೇಳಿದರು.

ಕಾನೂನು ಸಮರ

ಕರ್ನಾಟಕ ಅಧಿವೇಶನದಲ್ಲಿ ತಿಳಿದುಕೊಂಡಿರುವ ನಿರ್ಧಾರದ ಬಗ್ಗೆ ನಾಳೆ ಫಾಲಿ ನಾರಿಮನ್ ಬೇಟಿಯಾಗಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಮಾಹಿತಿ ನೀಡಲಿದ್ದಾರೆ.

ಇನ್ನು ಅತ್ತ ಸುಪ್ರಿಂ ಕೋರ್ಟ್ ಗಮನ ಸೆಳೆಯಲು ತಮಿಳುನಾಡು ಆಲೋಚಿಸಿದೆ. ಕರ್ನಾಟಕ ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘಿಸಿ ನೀರು ಬಿಡುತ್ತಿಲ್ಲ ಎಂಬುದನ್ನು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತರಲು ತಮಿಳುನಾಡು ಚಿಂತನೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Top