An unconventional News Portal.

‘ಬೀಸೋ ದೊಣ್ಣೆಯಿಂದ ಪಾರಾಗಲು’: ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ

‘ಬೀಸೋ ದೊಣ್ಣೆಯಿಂದ ಪಾರಾಗಲು’: ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ

ಸುಪ್ರಿಂ ಆದೇಶದಂತೆ ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕ ನಿರ್ಧರಿಸಿದೆ. ಈ ಮೂಲಕ ಪರೋಕ್ಷವಾಗಿ ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ಕರ್ನಾಟಕ ಮುಂದಾಗಿದೆ.

ಸೋಮವಾರ ನಡೆದ ಕೆ.ಬಿ ಕೋಳಿವಾಡ್ ನೇತೃತ್ವದ ‘ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಸಭೆ’ಯಲ್ಲಿ ಈ ತೀರ್ಮಾನಕ್ಕೆ ಕರ್ನಾಟಕ ಬಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ‘ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನಾವು ನೀಡುತ್ತಿರುವ ಆದೇಶ ಉಲ್ಲಂಘಿಸುವುದನ್ನು ಮೊದಲು ನಿಲ್ಲಿಸಲಿ. ಮಂಗಳವಾರ ಮಧ್ಯಾಹ್ನದೊಳಗೆ ನೀರು ಹರಿಸುವ ನಿರ್ಧಾರದ ಬಗ್ಗೆ ಖಚಿತಪಡಿಸಬೇಕು,’ ಎಂದು ಸುಪ್ರೀಂಕೋರ್ಟ್ ಪೀಠ ಸೋಮವಾರ ಮತ್ತೆ ಖಡಕ್ ಸೂಚನೆ ರವಾನಿಸಿದ ಹಿನ್ನಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ.

ಇನ್ನು ಸದನದಲ್ಲಿ ನಾಲ್ಕು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಹೆಚ್ಚುವರಿ ನೀರು ಜಲಾಶಯಗಳಿಗೆ ಹರಿದು ಬಂದಿದೆ. ಹೀಗಾಗಿ ಕುಡಿಯಲು ಬೇಕಾದಷ್ಟು ನೀರು ಇರುವುದನ್ನು ಖಚಿತಪಡಿಸಿಕೊಂಡು ರಾಜ್ಯದ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುವ ನಿರ್ಣಯವನ್ನು ಸದನದಲ್ಲಿ ತೆಗೆದುಕೊಳ್ಳಲಾಯಿತು.

nirnaya

ಸುಪ್ರಿಂಗೆ ಕೇಂದ್ರದ ಮನವಿ

ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಸದ್ಯ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ. ಸೆ.30ರ ಆದೇಶವನ್ನು ಮಾರ್ಪಾಡುಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ಕಾವೇರಿ ನದಿ ನೀರಿನ ಮೇಲಿನ ಹಕ್ಕು ರಾಜ್ಯದ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕ ದೂರವಾಗಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧಿಸಿದ ವಿಚಾರ ಸುಪ್ರೀಂ ಕೋರ್ಟ್‍ನ ಮೂವರು ಜಡ್ಜ್ ಗಳ ಪೀಠದಲ್ಲಿದ್ದು ಇಲ್ಲಿ ಇತ್ಯರ್ಥವಾಗಬೇಕು. ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡಲು ಸುಪ್ರೀಂ ಕೋರ್ಟ್‍ಗೆ ಯಾವುದೇ ಅಧಿಕಾರ ಇಲ್ಲ. ಈ ಆದೇಶವನ್ನು ಪಾಲಿಸಲು ಹೋದರೆ ಮತ್ತೊಂದು ಸಮಸ್ಯೆ ಕಾರಣವಾಗುತ್ತದೆ ಎಂದು ಅಟಾರ್ನಿ ಜನಲರ್ ನ್ಯಾಯಾಧೀಶರಿಗೆ ತಿಳಿಸಿದರು.

ಈ ವೇಳೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕಳೆದ ವಿಚಾರಣೆಯಲ್ಲಿ ಈ ಆದೇಶವನ್ನು ಪಾಲನೆ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಇದಕ್ಕೆ ನನ್ನ ತಪ್ಪಿನಿಂದಾಗಿ ಒಪ್ಪಿಕೊಂಡಿದ್ದೇನೆ. ಸಂವಿಧಾನದ ಅಂತಾರಾಜ್ಯ ಜಲ ವಿವಾದ ಕಾಯ್ದೆ ಪ್ರಕಾರ ಸಂಸತ್‍ನ ಉಭಯ ಸದನಗಳು ಅನುಮೋದನೆ ನೀಡದೇ ನಿರ್ವಹಣಾ ಮಂಡಳಿಯನ್ನು ರಚನೆ ಮಾಡುವಂತೆಯೇ ಇಲ್ಲ. ಅಷ್ಟೇ ಅಲ್ಲದೇ ಅಂತರಾಜ್ಯ ನದಿ ವಿವಾದವನ್ನು ಬಗೆ ಹರಿಸಲು ಸುಪ್ರೀಂ ಕೋರ್ಟ್‍ಗೆ ಯಾವುದೇ ಅಧಿಕಾರ ಇಲ್ಲ ಅಂತ ಮನವಿ ಮಾಡಿಕೊಂಡರು.

ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು ಅಕ್ಟೋಬರ್ 6ಕ್ಕೆ ನಿಗದಿಯಾಗಿದ್ದ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಡೆಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನಾವು ನೀಡುತ್ತಿರುವ ಆದೇಶ ಉಲ್ಲಂಘಿಸುವುದನ್ನು ಮೊದಲು ನಿಲ್ಲಿಸಲಿ. ಮಂಗಳವಾರ ಮಧ್ಯಾಹ್ನದೊಳಗೆ ನೀರು ಹರಿಸುವ ನಿರ್ಧಾರದ ಬಗ್ಗೆ ಖಚಿತಪಡಿಸಬೇಕು ಎಂದು ಸುಪ್ರೀಂಕೋರ್ಟ್ ಪೀಠ ಸೋಮವಾರ ಮತ್ತೆ ಖಡಕ್ ಸೂಚನೆ ರವಾನಿಸಿದೆ. ಕರ್ನಾಟಕ ಸರ್ಕಾರ ಆದೇಶ ಪಾಲನೆಗೆ ಸಂಬಂಧಿಸಿದ ವರದಿಯನ್ನು ಮಂಗಳವಾರ 2 ಗಂಟೆಯೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ತಮ್ಮ ಆದೇಶವನ್ನು ನಿರಾಕರಿಸುತ್ತಿರುವ ಕರ್ನಾಟಕ ಸರ್ಕಾರದ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಕ್ಟೋಬರ್ 1ರಿಂದ 6ರವರೆಗೂ ನಿತ್ಯ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೆ.30ರಂದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಆದೇಶಿಸಿತ್ತು. ಇದಲ್ಲದೇ ಮೂರು ದಿನಗಳೊಳಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಪರಿಷತ್ತಲ್ಲಿ ನಾರಿಮನ್ ವಿರುದ್ಧ ಈಶ್ವರಪ್ಪ ಗರಂ

ಕಾವೇರಿ ನೀರು ಹಂಚಿಕೆ ವಿವಾದ ಪ್ರಕರಣದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿರುವ ಫಾಲಿ ಎಸ್. ನಾರಿಮನ್ ಓರ್ವ ಪಲಾಯನವಾದಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಈಗಾಗಲೇ ಸೆ. 23ರಂದು ನಡೆದ ವಿಶೇಷ ಅಧಿವೇಶನದಲ್ಲಿ ಕಾವೇರಿ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಿಕೊಳ್ಳಬೇಕು. ತಮಿಳುನಾಡಿಗೆ ಹರಿಸಬಾರದು ಎಂದು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಹೀಗಿರುವಾಗ ಮತ್ತೆ ಅಧಿವೇಶನ ಕರೆಯುವ ಅಗತ್ಯ ಏನಿತ್ತು ಎಂದು ಸರ್ಕಾರವನ್ನು ಪ್ರಶ್ನಿಸಿದರು.

ನೀರು ಹರಿಸುವಂತೆ ವಕೀಲರ ತಂಡ ನೀಡಿರುವ ಸಲಹೆಗೆ ಕಿಡಿಕಾರಿದ ಈಶ್ವರಪ್ಪ ನಾರಿಮನ್ ವಿರುದ್ಧ ಹರಿಹಾಯ್ದರು. ಅವರೊಬ್ಬ ಪಲಾಯನವಾದಿ ಎಂದು ಟೀಕಿಸಿದರು. ದಯಮಾಡಿ ವಕೀಲ ಫಾಲಿ ನಾರಿಮನ್ ಅವರನ್ನು ದಯವಿಟ್ಟು ಬದಲಾಯಿಸಿ. ತೀರ್ಪು ಬಂದ ನಂತರ ಪುಸ್ತಕ ಬಿಸಾಕಿ ಹೋಗಲು ಇವರೇ ಬೇಕಾ ಎಂದು ಪ್ರಶ್ನಿಸಿದ ಅವರು ನಾರಿಮನ್ ಅವರಿಗಿಂತ ಮೇಧಾವಿ ವಕೀಲರು ನಮ್ಮಲ್ಲಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜ್ಯ ವಕೀಲರಿಗೆ 76 ಕೋಟಿ ಖರ್ಚು ಮಾಡಿದೆ. ಇಷ್ಟೆಲ್ಲಾ ಮಾಡಿಯೂ ನಮಗೆ ನಕಾರಾತ್ಮಕ ತೀರ್ಪು ಬರುತ್ತಿದೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಈ ಮಾತಿಗೆ ಧ್ವನಿಗೂಡಿಸಿದ ಬಿಜೆಪಿಯ ಹಿರಿಯ ನಾಯಕ ರಾಮಚಂದ್ರೇಗೌಡ ನಮ್ಮ ವಕೀಲರಿಗೆ ನೀಡಿದ 76 ಕೋಟಿ ಹಣದಲ್ಲಿ ತಮಿಳುನಾಡು ಭಾಗದಲ್ಲಿನ ಕಾವೇರಿ ಪಾತ್ರದ ಜಮೀನನ್ನು ನಾವೇ ಖರೀದಿ ಮಾಡಿಕೊಳ್ಳಬಹುದಿತ್ತು ಎಂದು ವ್ಯಂಗ್ಯವಾಡಿದರು.

ಅಟಾರ್ನಿ ಜನರಲ್ ಅವರು ಮೊದಲ ಬಾರಿಗೆ ಮಾಡಿದ ತಪ್ಪನ್ನು ತಿದ್ದಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಕ್ಷಮೆ ಇದೆ. ಆದರೆ ಆ ನಾರಿಮನ್ ಪುಣ್ಯಾತ್ಮ ರಾಜ್ಯವನ್ನು ಹಾಳುಮಾಡಿದ್ದಾರೆ. ಅವರಿಂದ ಯಾವುದೇ ಪ್ರಯೋಜನವಿಲ್ಲ, ಅವರಿಂದಲೇ ಈ ಪರಿಸ್ಥಿತಿ ಬಂದಿದೆ. ಅವರ ಬಗ್ಗೆ ಯಾರೂ ಮಾತನಾಡುವಂತಿಲ್ಲ ಎಂಥಾ ಪರಿಸ್ಥಿತಿ ಎಂದು ಈಶ್ವರಪ್ಪ ಕಿಡಿಕಾರಿದರು.

ಸುಪ್ರೀಂ ಕೋರ್ಟ್ ರೈತರ ರಕ್ಷಣೆ ಮಾಡುತ್ತದೆ ಎಂದುಕೊಂಡಿದ್ದೆ. ಆದರೆ ಬೇಸರದಿಂದ ಹೇಳುತ್ತಿದ್ದೇನೆ ಅವು ರೈತರ ಜೀವವನ್ನು ತಿನ್ನುತ್ತಿವೆ. ದುಡ್ಡು ತೆಗೆದುಕೊಂಡು ಜಡ್ಚಮೆಂಟ್ ಕೊಟ್ಟಿದೆ ಎಂದು ನಾನು ಹೇಳುವುದಿಲ್ಲ. ರಾಜ್ಯದ ಜನರಿಗೆ ಏನಾಗಿದೆ ಎನ್ನುವುದು ಗೊತ್ತಿದೆ. ನಿಯಮ 211 ಪ್ರಕಾರ ನ್ಯಾಯಮೂರ್ತಿಗಳ ಬಗ್ಗೆ ಮಾತನಾಡುವಂತಿಲ್ಲ ಎಂದು ಹೇಳುವ ಮೂಲಕ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಕೇಂದ್ರಕ್ಕೆ ಸರ್ವಪಕ್ಷಗಳ ಅಭಿನಂದನೆ

ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ್ದಕ್ಕೆ ಪರಿಷತ್‍ನಲ್ಲಿ ಸರ್ವಪಕ್ಷದ ನಾಯಕರು ಅಭಿನಂದಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿಯನ್ನು ಕೇಂದ್ರ ಸ್ಥಾಪನೆ ಮಾಡುವುದಿಲ್ಲ ಎಂದು ಅಡ್ವೋಕೆಟ್ ಜನರಲ್ ಅಫಿಡವಿಟ್ ಹಾಕಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ. ಮಾಜಿ ಪ್ರಧಾನಿ ದೇವೇಗೌಡರ ಉಪವಾಸ ಸತ್ಯಾಗ್ರಹ ಮಾಡಿದ್ದು ಕೇಂದ್ರದ ನಿರ್ಧಾರ ಬದಲಾವಣೆಗೆ ಸಹಕಾರಿ ಆಗಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಗೃಹಸಚಿವ ಪರಮೇಶ್ವರ್ ಹೇಳಿದರು.

ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಮುನ್ನ ಸ್ವಲ್ಪ ನೀರನ್ನಾದರೂ ಬಿಡಬೇಕು ಎಂದು ವಕೀಲರು ಸಲಹೆ ಕೊಟ್ಟಿದ್ದಾರೆ. ಆರುವರೆ ಲಕ್ಷ ಹೆಕ್ಟೇರ್ ಬೆಳೆಗಳಿಗೆ ನೀರಿನ ಅವಶ್ಯ ಕತೆ ಇದೆ. ಎರಡು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, ಉಳಿದ ಬೆಳೆಗೆ ನೀರು ಬೇಕು. ಈಗ ನಮ್ಮ ಬಳಿ 34.12 ಟಿಎಂಸಿ ಇದೆ. ಹೆಚ್ಚುವರಿ ನೀರನ್ನು ಏನು ಮಾಡಬೇಕೆಂಬ ತೀರ್ಮಾನ ಆಗಿಲ್ಲ. ಆ ಬಗ್ಗೆ ಈಗ ಚರ್ಚೆ ಆಗಬೇಕು. ಹೆಚ್ಚಿನ ನೀರನ್ನು ಏನು ಮಾಡಬೇಕು ಎನ್ನುವುದೇ ನಮ್ಮ ಮುಂದಿರೋ ಪ್ರಶ್ನೆ ಎಂದು ಪರಮೇಶ್ವರ್ ಹೇಳಿದ್ದರು.

ನಾರಿಮನ್ ಜಾಗಕ್ಕೆ ಸಿಬಲ್?

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪರ ವಾದ ಮಂಡಿಸಲು ಹಿರಿಯ ವಕೀಲ ಫಾಲಿ ನಾರಿಮನ್ ಅವರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ವಕೀಲ ಕಪಿಲ್ ಸಿಬಲ್ ರನ್ನು ನೇಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಸೆ.30ರಂದು ಸುರ್ಪೀಂಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಟಿಪ್ಪಣಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿ ಫಾಲಿ ಎಸ್ ನಾರಿಮನ್ ಅವರು ವಾದ ಮಂಡನೆ ಮಾಡುವುದಿಲ್ಲ ಎಂದು ಹೇಳಿದ್ದರು.

ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುತ್ತಿಲ್ಲ ಎಂಬುದೇ ನಾರಿಮನ್ ವಾದ ಮಂಡಿಸಲು ಹಿಂದೇಟು ಹಾಕಿದ್ದರು ಎಂಬ ವಿಚಾರ ಹಬ್ಬಿತ್ತು. ಆದರೆ, ನಂತರ ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿ, ನಾರಿಮನ್ ಅವರು ವಾದ ಮುಂದುವರೆಸಲಿದ್ದಾರೆ ಎಂದು ಹೇಳಿತ್ತು.

ಆದರೇ ಇದೀಗ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರನ್ನು ರಾಜ್ಯದ ಪರ ವಕೀಲರಾಗಿ ನೇಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದು, ಸುಪ್ರೀಂಕೋರ್ಟಿನಲ್ಲಿ ಕರ್ನಾಟಕ ಸರ್ಕಾರ ಈವರೆಗೆ ತೆಗೆದುಕೊಂಡ ನಿರ್ಣಯಗಳನ್ನು ವಿವರಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ತಮಿಳುನಾಡು ಪ್ರತಿಕ್ರಿಯೆ

ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಿದೆ, ಕರ್ನಾಟಕದ ಪರ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ಅರಿತೇ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಇದು ನಮಗೆ ನಿರೀಕ್ಷಿತ ಬೆಳವಣಿಗೆ. ಇದಕ್ಕೆ ಪ್ರತಿಯಾಗಿ ಏನು ಮಾಡಬೇಕೆಂದು ನಾವು ಈ ಮೊದಲೇ ಸಿದ್ಧವಾಗಿದ್ದೇವೆ ಎಂದು ತಮಿಳುನಾಡು ಸಚಿವರೊಬ್ಬರು ತಿಳಿಸಿದ್ದಾರೆ.

ವಿದುತಲೈ ಸಿರತೈಗಲ್ ಕಚ್ಚಿ ಪಕ್ಷದ ಮುಖ್ಯಸ್ಥ, ಸಂಸದ ತಿರುಮಾವಲನ್ ಪ್ರತಿಕ್ರಿಯಿಸಿದ್ದು, ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಮಿಳರಿಗೆ ದ್ರೋಹ ಎಸಗಿದೆ. ಕರ್ನಾಟಕಕ್ಕೆ ಅನುಕೂಲ ಮಾಡಿಕೊಡಲು ಸುಪ್ರೀಂ ಆದೇಶವನ್ನು ಧಿಕ್ಕರಿಸಿ ಕರ್ನಾಟಕದಲ್ಲಿ ರಾಜಕೀಯ ಲಾಭಪಡೆಯಲು ಕೇಂದ್ರ ಸರ್ಕಾರ ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಫಿಡವಿಟ್‍ಗೆ ಗರಂ ಆಗಿರುವ ಎಐಡಿಎಂಕೆ ವಕ್ತಾರೆ ಸಿ.ಆರ್.ಸರಸ್ವತಿ, ಮಂಡಳಿ ರಚನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದಿರುವ ಕೇಂದ್ರದ ನಿರ್ಧಾರ ಸರಿಯಲ್ಲ. ಕರ್ನಾಟಕಕ್ಕೆ ಮಾತ್ರ ಬೆಂಬಲ ನೀಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

“ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಗಿಮಿಕ್ ಮಾಡುತ್ತಿವೆ. ತಮಿಳುನಾಡಿಗೆ ನೀರು ಬಿಡಲು ಅಲ್ಲಿರುವ ರೈತರಿಗೆ ಯಾವುದೇ ಅಭ್ಯಂತರವಿಲ್ಲ. ಸರಕಾರ ಮತ್ತು ರಾಜಕೀಯ ಪಕ್ಷಗಳು ಮಾತ್ರ ಅಡ್ಡಗಾಲಾಗಿ ನಿಂತಿವೆ. ತಮಿಳುನಾಡಿಗೆ ತನ್ನ ಪಾಲಿನ ನೀರು ಬರುವಂತಾಗಬೇಕು. ಬಹಳ ಕಾಲದಿಂದ ಉಳಿದಿರುವ ಈ ಸಮಸ್ಯೆ ಇತ್ಯರ್ಥವಾಗಬೇಕು,” ಎಂದು ಸರಸ್ವತಿ ಒತ್ತಾಯಿಸಿದ್ದಾರೆ.

ಈ ಮಧ್ಯೆ ಡಿಎಂಕೆ ನಾಯಕ ಕರುಣಾನಿಧಿ ಪ್ರತಿಕ್ರಿಯಿಸಿ, ಕಾವೇರಿ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿ ಪರಿಹಾರ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

Leave a comment

Top