An unconventional News Portal.

ಭಾವನೆಗಳಿಗೆ ಬೆಲೆ; ಜನರ ಆಕ್ರೋಶಕ್ಕೆ ಮಣೆ: ಇದು ದಿನಪತ್ರಿಕೆಗಳ ‘ಕಾವೇರಿ ಕವರೇಜ್’!

ಭಾವನೆಗಳಿಗೆ ಬೆಲೆ; ಜನರ ಆಕ್ರೋಶಕ್ಕೆ ಮಣೆ: ಇದು ದಿನಪತ್ರಿಕೆಗಳ ‘ಕಾವೇರಿ ಕವರೇಜ್’!

‘ಮತ್ತೆ ಭಾವನೆಗಳನ್ನು ಕೆಣಕಿದ ಕಾವೇರಿ’, ‘ಕೆಂಡವಾದ ಕಾವೇರಿ’, ‘ತಮಿಳ್ನಾಡಿಗೆ ಹರಿದ ಕಣ್ಣೀರು’, ‘ಆದೇಶ ಮಾರ್ಪಾಡು: ಅರ್ಜಿ ಸಲ್ಲಿಕೆಗೆ ನಿರ್ಧಾರ’, ‘ಕಾದಿದೆ ಕಾವೇರಿ ಗಂಡಾಂತರ’!, ‘ಆಕ್ರೋಶದ ನಡುವೆಯೂ ಹರಿದ ಕಾವೇರಿ’, ‘ಮತ್ತೆ ಬೆಂಕಿಯಾದ ನೀರು’…

ಇವು ಕನ್ನಡ ಪ್ರಮುಖ ದಿನಪತ್ರಿಕೆಗಳು ಕಾವೇರಿ ವಿಚಾರದಲ್ಲಿ ಬುಧವಾರ ತಮ್ಮ ಮೊದಲ ಪುಟದಲ್ಲಿ ಪ್ರಕಟಿಸಿದ ತಲೆ ಬರಹಗಳು. ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು ಸೋಮವಾರ. ಅಂದು ಹಬ್ಬದ ನಿಮಿತ್ತ ಮುದ್ರಣ ಮಾಧ್ಯಮಗಳು ರಜೆ ತೆಗೆದುಕೊಂಡಿದ್ದವು. ಪತ್ರಿಕಾ ಕಚೇರಿಗಳು ಕೆಲಸ ಆರಂಭಿಸಿದ್ದು ಮಂಗಳವಾರ. ಈ ಹಿನ್ನೆಲೆಯಲ್ಲಿ ಹೆಚ್ಚು ಕಡಿಮೆ ಸುಮಾರು 48 ಗಂಟೆಗಳ ಕಾಲಾವಕಾಶದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಪ್ರಮುಖ ದಿನಪತ್ರಿಕೆಗಳಲ್ಲಿ ಮೂಡಿಬಂದ ‘ಕಾವೇರಿ ಕವರೇಜ್’ ವೃತ್ತ ಪತ್ರಿಕೆಗಳ ಪಾಲಿಗೆ ಹೇಗಿದೆ?. ‘ಸಮಾಚಾರ’ ಇಲ್ಲಿ ಕಟ್ಟಿಕೊಡಲಿದೆ.

ಭಾವನೆಗೆ ಬೆಲೆ:

ಕಾವೇರಿ ವಿಚಾರದಲ್ಲಿ ರಾಜ್ಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದು ಹೆಚ್ಚು ಕಡಿಮೆ ಎಲ್ಲಾ ಪತ್ರಿಕೆಗಳ ಒಕ್ಕೊರಲ ಧ್ವನಿಯಾಗಿ ಹೊರಹೊಮ್ಮಿದೆ. ಬುಧವಾರ ಮುಂಜಾನೆಯ ಬಹುತೇಕ ಪ್ರಮುಖ ಪತ್ರಿಕೆಗಳ ಮೊದಲ ಪುಟದಲ್ಲಿ ಜಾಹೀರಾತಿದೆ. ಅದನ್ನು ದಾಟಿ ಹೋದರೆ ಕಾವೇರಿ ವಿಚಾರದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ಹಾಗೂ ನಂತರ ಅವರ ಪತ್ರಿಕಾಗೋಷ್ಠಿಗೆ ಪತ್ರಿಕೆಗಳು ಮಹತ್ವ ನೀಡಿವೆ. ತಮ್ಮ ಮೊದಲ ಪುಟದಲ್ಲಿ, ಕಾವೇರಿ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ, ವಿಶೇಷವಾಗಿ ಮಂಢ್ಯ, ಮೈಸೂರು ಭಾಗಗಳಲ್ಲಿ ವ್ಯಕ್ತವಾಗುತ್ತಿರುವ ಜನರ ಆಕ್ರೋಶ ಮತ್ತು ಸಾಧ್ಯಾಸಾಧ್ಯತೆಗಳನ್ನು ಪತ್ರಿಕೆಗಳು ಪಟ್ಟಿ ಮಾಡಿವೆ.

ನಂ. 1 ದಿನಪತ್ರಿಕೆ ‘ವಿಜಯವಾಣಿ’ ಕಾವೇರಿ ವಿಚಾರದಲ್ಲಿ ದೊಡ್ಡ ಮಟ್ಟದ ಕವರೇಜ್ ಕೊಟ್ಟಿದೆ. ಸುದ್ದಿ, ಸಂಪಾದಕೀಯದ ಜತೆಗೆ ಕಾವೇರಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ನಲ್ಲಿ ವಾದ ಮಂಡಿಸಿದ ವಕೀಲರ ತಂಡದಲ್ಲಿರುವ ಮೋಹನ್ ಕಾತರಕಿ ಅವರ ಸಂದರ್ಶನವನ್ನು ಹಾಗೂ ಸಜನ್ ಪೂವಯ್ಯ ಅವರ ವಿಶೇಷ ಅಂಕಣಗಳನ್ನು ಪ್ರಕಟಿಸಿದೆ. ಇದರ ಜತೆಗೆ, ಬೆಂಗಳೂರು ಎದುರಿಸಬೇಕಾಗಿ ಬರಬಹುದಾದ ‘ಜಲಕ್ಷಾಮ’ದ ಕುರಿತು ವಿಶೇಷ ವರದಿಯೊಂದನ್ನು ಪ್ರಕಟಿಸಿದೆ. ‘ವಿಜಯ ಕರ್ನಾಟಕ’ ಕೂಡ ಈ ಕುರಿತು ಒಂದು ವರದಿಯನ್ನು ಪ್ರಕಟಿಸಿದೆ.

ಕೃಪೆ: ವಿಜಯವಾಣಿ.

ಕೃಪೆ: ವಿಜಯವಾಣಿ.

ಸರಕಾರಕ್ಕೆ ತರಾಟೆ: 

ಕೃಪೆ: ಉದಯವಾಣಿ.

ಕೃಪೆ: ಉದಯವಾಣಿ.

ಹಾಗೆಯೇ, ಬಹುತೇಕ ಪತ್ರಿಕೆಗಳು ಕಾವೇರಿ ವಿಚಾರದಲ್ಲಿ ಸರಕಾರ ಎಡವಿದ್ದೆಲ್ಲಿ? ಎಂಬ ವಿಶ್ಲೇಷಣೆಗೆ ಇಳಿದಿವೆ. ವಿಶೇಷವಾಗಿ ‘ವಿಜಯವಾಣಿ’, ‘ಉದಯವಾಣಿ’ ಹಾಗೂ ‘ಸಂಯುಕ್ತ ಕರ್ನಾಟಕ’ ಪತ್ರಿಕೆಗಳಲ್ಲಿ ಈ ಕುರಿತು ವಿಶೇಷ ವರದಿಗಳು ಪ್ರಕಟವಾಗಿವೆ. ಈ ಕುರಿತು ತನ್ನ ವರದಿಯಲ್ಲಿ, ‘ಕುಡಿಯಲು ನೀರಿಲ್ಲ ಎಂದು ವಾದಿಸುವ ಬದಲು 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ನ್ಯಾಯಾಲಯದಲ್ಲಿ ವಕೀಲರು ಒಪ್ಪಿಕೊಂಡರು’ ಎಂದು ಹೇಳಿರುವ ಉದಯವಾಣಿ, ‘ಕೋರ್ಟ್ನಲ್ಲಿ ಎಡವಿದರೇ ಕರ್ನಾಟಕದ ವಕೀಲರು’ ಎಂದು ಮುಖಪುಟದಲ್ಲಿ ಪ್ರಕಟಿಸಿದೆ. ವಿವಾದಲ್ಲಿ ಮುಂದೇನು? ಎಂದು ಪಟ್ಟಿ ಮಾಡಿರುವ ಪತ್ರಿಕೆ, ನ್ಯಾಯಾಲಯದಲ್ಲಿ ಆದೇಶದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವ ಬದಲು ಸರಕಾರ ನೀರು ಹರಿಸಲು ಮುಂದಾಗಿದೆ ಎಂದು ಹೇಳಿದೆ. ‘ಪ್ರಜಾವಾಣಿ’ ತನ್ನ ಸಂಪಾದಕೀಯದಲ್ಲಿಯೂ ಸರಕಾರ ಕಾವೇರಿ ವಿಚಾರದಲ್ಲಿ ಪದೇ ಪದೇ ವಿಫಲವಾಗುತ್ತಿರುವುದೇಕೆ ಎಂದು ಅಂಶವನ್ನು ಒತ್ತು ನೀಡಿ ಪ್ರಕಟಿಸಿದೆ.

‘ವಿಶ್ವವಾಣಿ’ ಪತ್ರಿಕೆ ಕಾವೇರಿ ಪ್ರತಿಭಟನೆಗೆ ವಿಶೇಷ ಸ್ಥಾನ ನೀಡುವ ಜತೆಗೆ, ನ್ಯಾಯಾಲಯ ತೀರ್ಪಿನ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಜನರಿಗೆ ಮುಖ ತೋರಿಸಲಾಗದೆ ಓಡಾಡುತ್ತಿದ್ದಾರೆ ಎಂದು ಹೇಳಿದೆ. ಹಳೇ ಮೈಸೂರು ಭಾಗದಲ್ಲಿ ಜನರ ಆಕ್ರೋಶ ಹೊತ್ತಿ ಉರಿಯುತ್ತಿದೆ ಎಂದು ಹೇಳಿರುವ ಪತ್ರಿಕೆ, ಜನ ಮುಖ್ಯಮಂತ್ರಿ ಕಚೇರಿ ಮತ್ತು ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಿಚಾರವನ್ನು ತನ್ನ ಮುಖ ಪುಟದ ‘ಹ್ಯಾಂಗಿಂಗ್ ಹೆಡ್ಲೈನ್’ನಲ್ಲಿ ಪ್ರಕಟಿಸಿದೆ. ‘ಪ್ರಜಾವಾಣಿ’ ಕೂಡ ತನ್ನ ಮುಖಪುಟದಲ್ಲಿ ಕಾವೇರಿ ಕಣಿವೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕವರೇಜ್ ನೀಡಿದೆ.

ಬಂದ್ ಹೈರಾಣು: 

ಸೆ. 9ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ ಕುರಿತು ಎಲ್ಲಾ ಪತ್ರಿಕೆಗಳು ವರದಿ ಪ್ರಕಟಿಸಿವೆ. ಇವುಗಳಲ್ಲಿ ‘ಪ್ರಜಾವಾಣಿ’ ನಡೆಯುತ್ತಿರುವ ಸಾಲು ಸಾಲು ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಹೈರಾಣುತ್ತಿರುವ ಕುರಿತು ವಿಶೇಷ ವರದಿಯೊಂದನ್ನು ತಮ್ಮ ಬೆಂಗಳೂರು ಆವೃತ್ತಿಯಲ್ಲಿ ಪ್ರಕಟಿಸಿದೆ. ವರದಿಯು, ಬಂದ್ ಮತ್ತು ಮುಷ್ಕರಕ್ಕೆ ಕರೆ ನೀಡುವವರಿಂದ ಭದ್ರತಾ ಠೇವಣಿಯನ್ನು ಪಡೆಯಬೇಕು ಎಂಬ ಅನಾಮದೇಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ದಾಖಲಿಸಿದೆ. ಜತೆಗೆ, ಈ ವರ್ಷದಲ್ಲಿ ಸರಣಿ ಬಂದ್ಗಳ ಚಿತ್ರಣವನ್ನೂ ನೀಡಿದೆ.

ಕೃಪೆ: ಪ್ರಜಾವಾಣಿ.

ಕೃಪೆ: ಪ್ರಜಾವಾಣಿ.

ಅಂತರಾಜ್ಯ ಆವೃತ್ತಿಗಳು: 

ಕೃಪೆ: ಟಿಓಐ.

ಕೃಪೆ: ಟಿಓಐ.

ಇದಕ್ಕೆ ಹೋಲಿಸಿದರೆ ಇಂಗ್ಲಿಷ್ ಪತ್ರಿಕೆಗಳು ಕಾವೇರಿ ವಿಚಾರದಲ್ಲಿ ಪ್ರಕಟಿಸಿದ ವರದಿಗಳು ಭಿನ್ನವಾಗಿವೆ. ಅಂತರಾಜ್ಯ ಆವೃತ್ತಿಗಳನ್ನು ಹೊಂದಿರುವ ಕಾರಣಕ್ಕೋ ಏನೋ; ಎಲ್ಲೂ ಭಾವನೆಗಳಿಗೆ ಧಕ್ಕೆಯಾಗಿದೆ, ಅನ್ಯಾಯವಾಗಿದೆ ಎಂಬ ತಲೆಬರಹಗಳನ್ನು ಕೊಟ್ಟಿಲ್ಲ. ಬದಲಾಗಿ ನೇರವಾಗಿ ವರದಿಯನ್ನಷ್ಟೇ ದಾಖಲಿಸಿದೆ. ವಿಶೇಷವಾಗಿ ಕರ್ನಾಟಕ ಆವೃತ್ತಿಗಳಲ್ಲಿ ಕರ್ನಾಟಕದ ಸುದ್ದಿಗಳಿಗೆ ಮಾತ್ರ ಜಾಗ ನೀಡಿದ್ದರೆ, ಚೆನ್ನೈಗೆ ಬರುವಾಗ ತಮಿಳುನಾಡಿನ ಕಾವೇರಿಗೆ ಸಂಬಂಧಿಸಿದ ವಿಚಾರಗಳನ್ನೂ ಪತ್ರಿಕೆಗಳು ಪ್ರಸ್ತಾಪಿಸಿವೆ. ತಮಿಳುನಾಡಿನ ರೈತರಿಗೆ ಈಗ ಬಿಡುಗಡೆ ಮಾಡಿರುವ ನೀರು ಸಾಲುವುದಿಲ್ಲ ಎಂಬ ಆತಂಕಗಳಿಗೆ ಪತ್ರಿಕೆಗಳು ಧ್ವನಿಯಾಗಿವೆ.

ಮುಖ್ಯವಾಗಿ ‘ಟೈಮ್ಸ್ ಆಫ್ ಇಂಡಿಯಾ’ ಮೆಟ್ಟೂರ್ ಡ್ಯಾಂ ವಿಚಾರದಲ್ಲಿ ವಿಸ್ತೃತ ವರದಿಯನ್ನು ಚೆನ್ನೈ ಆವೃತ್ತಿಯಲ್ಲಿ ಪ್ರಕಟಿಸಿದೆ. ಸದ್ಯ ಮೆಟ್ಟೂರು ಡ್ಯಾಂನಲ್ಲಿ 75 ಅಡಿ ನೀರಿದೆ. 15 ಲಕ್ಷ ಎಕರೆಯ ಸಾಂಬಾ ಬೆಳೆಗೆ ನೀರು ಹರಿಸಬೇಕಾದರೆ ಕನಿಷ್ಟ 90 ಅಡಿ ಮುಟ್ಟಬೇಕು. ಆದರೆ ಕರ್ನಾಟಕ ಕೇವಲ (ಅವರ ಪಾಲಿಗೆ) 15 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೆ ಮೆಟ್ಟೂರು ತುಂಬಲಿದೆಯೇ ಎಂಬ ಆತಂಕ ಅಲ್ಲಿನ ರೈತರಲ್ಲಿ ಮನೆ ಮಾಡಿದೆ ಎಂದು ಟಿಓಐ ವರದಿ ಮಾಡಿದೆ.

ಇದರ ಜೊತೆಗೆ, ಕರುಣಾನಿಧಿ 50 ಟಿಎಂಸಿ ನೀರು ಬೇಕು. ಕರ್ನಾಟಕ ಬಿಟ್ಟ ನೀರು ಸಾಲುವುದಿಲ್ಲ, ಮುಂದಿನ ನಿರ್ಧಾರಕ್ಕಾಗಿ ಜಯಲಲಿತಾ ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದನ್ನು ‘ಟೈಮ್ಸ್ ಆಫ್ ಇಂಡಿಯಾ’ ಸಣ್ಣದಾಗಿ ಪ್ರಕಟಿಸಿದ್ದರೆ, ಅದನ್ನೇ ಲೀಡ್ ಮಾಡಿದೆ ಚೆನ್ನೈ ಮೂಲದ ‘ದಿ ಹಿಂದೂ’.

ಬಸ್ ಸಂಚಾರ ಸ್ಥಗಿತ

ಪ್ರತಿಭಟನೆಯಿಂದ ಸಂಚಾರ ವ್ಯವಸ್ಥೆಗೆ ಆದ ಅಡಚಣೆಗಳನ್ನೇ ‘ಡೆಕ್ಕನ್ ಹೆರಾಲ್ಡ್’ ಲೀಡ್ ಸುದ್ದಿಯಾಗಿ ಪ್ರಕಟಿಸಿದೆ. ಪ್ರತಿಭಟನೆಯಿಂದ ಕೆಎಸ್ಆರ್ಟಿಸಿ 63 ಲಕ್ಷ ನಷ್ಟ ಅನುಭವಿಸಿದೆ ಎಂದು ‘ಹಿಂದೂ’ ವರದಿ ಹೇಳಿದೆ. ಇನ್ನು ‘ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ಮೂರು ಪುಟಗಳ ವಿಸ್ತೃತ ವರದಿಯಲ್ಲಿ, ಕರ್ನಾಟಕ ರೈತರ ಆಕ್ರೋಷ, ಬಸ್ ಸಂಚಾರ ವ್ಯತ್ಯಯದಿಂದಾದ ಸಮಸ್ಯೆಗಳು ಹಾಗೂ ಭಾರವಾದ ಹೃದಯದಿಂದ ತಮಿಳುನಾಡಿಗೆ ನೀರು ಬಿಡಲು ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದು ವರದಿಗಳನ್ನು ಪ್ರಕಟಿಸಿದೆ.

ದಿನ ಪತ್ರಿಕೆಗಳು ಒಂದು ಹಂತದಲ್ಲಿ ಇತಿಹಾಸವನ್ನು ದಾಖಲಿಸುವ ಕೆಲಸ ಮಾಡುತ್ತವೆ. ಮುಂದಿನ ಬಾರಿ ಮತ್ತೆ ಕಾವೇರಿ ವಿವಾದ ಹುಟ್ಟಿಕೊಂಡರೆ, ಈ ವರದಿಯನ್ನೊಮ್ಮೆ ನೆನಪಿಸಿಕೊಳ್ಳಿ; ಸಾಕು. ಇತಿಹಾಸ ಹೇಗೆ ಮರುಕಳಿಸುತ್ತದೆ ಎಂಬುದರ ಕುರುಹು ಸಿಗುತ್ತದೆ.

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top