An unconventional News Portal.

ಜನವರಿಯಲ್ಲಿ ‘ಜಾತಿ ಗಣತಿ’ ಬಿಡುಗಡೆ: ಹೊಸ ವರ್ಷದಲ್ಲಿ ಮತ್ತೊಂದು ಸುತ್ತಿನ ಮೀಸಲಾತಿ ಚರ್ಚೆ?

ಜನವರಿಯಲ್ಲಿ ‘ಜಾತಿ ಗಣತಿ’ ಬಿಡುಗಡೆ: ಹೊಸ ವರ್ಷದಲ್ಲಿ ಮತ್ತೊಂದು ಸುತ್ತಿನ ಮೀಸಲಾತಿ ಚರ್ಚೆ?

ಜನವರಿಯಲ್ಲಿ ‘ಸಾಮಾಜಿಕ ಆರ್ಥಿಕ ಗಣತಿ’ಯನ್ನು ಸರಕಾರ ಬಿಡುಗಡೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಭಾನುವಾರ ಹುಬ್ಬಳ್ಳಿಯಲ್ಲಿ ಘೋಷಿಸಿದ್ದಾರೆ.

ಈ ಮೂಲಕ ಹೊಸ ವರ್ಷದ ಆರಂಭದಲ್ಲಿಯೇ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ ಕುರಿತು ಸಮಾಜಿಕ ಚರ್ಚೆಯೊಂದು ಹುಟ್ಟಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಇದೊಂದು ‘ರಾಜಕೀಯ ಅಜೆಂಡಾ’ವೂ ಆಗುವುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಮಾದಿಗ ಮಹಾಸಭಾ ಆಯೋಜನೆ ಮಾಡಿದ್ದ ಸಮಾವೇಶ ಮಹತ್ವ ಪಡೆದುಕೊಂಡಿದೆ.

ಮಹತ್ವದ ಸಮಾವೇಶ:

ಸಂಘಟನೆಗಳ ವಿಚಾರ ಬಂದಾಗ ದಲಿತರಲ್ಲಿಯೇ ಎಡಗೈ ಎಂದು ಕರೆಸಿಕೊಳ್ಳುವ ಜಾತಿಗಳು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಒಂದಾಗಿರುವ ನಿದರ್ಶನಗಳು ಕಡಿಮೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತರಲ್ಲಿ ಎಡಗೈ ಸಮುದಾಯವನ್ನು ಪ್ರತಿನಿಧಿಸುವ ಆಂಜುನೇಯ ಸಮಾಜ ಕಲ್ಯಾಣ ಇಲಾಖೆಯ ಹೊಣೆಯನ್ನು ಹೊತ್ತುಕೊಂಡರು. ಆ ನಂತರ, ಎಡಗೈ ಜಾತಿಗಳನ್ನು ಒಂದೆಡೆ ಸೇರಿಸುವ ಕೆಲಸ ಭರದಿಂದ ಸಾಗಿತ್ತು. ಅದರ ಫಲ ಎಂಬಂತೆ ಭಾನುವಾರ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕರ್ನಾಟಕ ಮಾದಿಗ ಮಹಾಸಭಾ ಹೆಸರಿನಲ್ಲಿ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ವೇದಿಕೆಯಲ್ಲಿಯೇ ಒಳಮೀಲಸಾತಿಯನ್ನು ಘೋಷಿಸುವಂತೆ ಒತ್ತಾಯಿಸಲಾಯಿತು.

ಈ ಸಮಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಹೀಗೆ ವೇದಿಕೆಯಲ್ಲಿಯೇ ಘೋಷಿಸುವುದು ಕಷ್ಟ. ಆದರೆ ಜನವರಿ ವೇಳೆಗೆ ಸಾಮಾಜಿಕ ಮತ್ತು ಆರ್ಥಿಕ ಗಣತಿ ವರದಿಯನ್ನು ಬಿಡುಗಡೆ ಮಾಡಲಾಗುವುದು. ಸದಾಶಿವ ವರದಿಯನ್ನು ಸಂಪುಟದ ಮುಂದೆ ಇಡಲಾಗುವುದು. ಜತೆಗೆ ತಮಿಳುನಾಡು ಮಾದರಿಯಲ್ಲಿ ಶೇ. 70ರಷ್ಟು ಮೀಸಲಾತಿಯನ್ನು ಜಾರಿಗೆ ತಂದು ಒಪ್ಪಿಗೆಗೆ ಕೇಂದ್ರಕ್ಕೆ ಕಳುಹಿಸಲಾಗುವುದು,” ಎಂದು ಘೋಷಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಕೂಡ, ರಾಜ್ಯ ಸರಕಾರ ಒಳಮೀಸಲಾತಿಗೆ ಒಪ್ಪಿಕೊಂಡು ಕೇಂದ್ರದ ಅನುಮೋದನೆಗೆ ಕಳುಹಿಸಿದರೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಒಳಮೀಸಲಾತಿ ಕುರಿತು ಚರ್ಚೆ ಆರಂಭಕ್ಕೆ ವೇದಿಕೆ ಸಜ್ಜಾಗಿದೆ.

ವಿರೋಧ ಯಾರಿಂದ?:

ಈಗಿರುವ ಮೀಸಲು ವ್ಯವಸ್ಥೆಯಲ್ಲಿ ಒಳಮೀಸಲಾತಿಯನ್ನು ತಂದು, ಜಾತಿಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಅವಕಾಶವನ್ನು ನೀಡುವ ಸಂಬಂಧ ದಲಿತ ಸಮುದಾಯಗಳಲ್ಲಿಯೇ ವಿರೋಧವಿದೆ. ವಿಶೇಷವಾಗಿ ದಲಿತರದಲ್ಲಿ ಬಲಗೈ ಎಂದು ಕರೆದುಕೊಳ್ಳುವ ಬೋವಿ ಮತ್ತು ಲಂಬಾಣಿ ಸಮುದಾಯಗಳು ಈಗಾಗಲೇ ಈ ಮೀಸಲು ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿವೆ. ಸರಕಾರ ಬಿಡುಗಡೆ ಮಾಡಲಿರುವ ‘ಜಾತಿ ಗಣತಿ’ಯಲ್ಲಿ ಈ ಸಮುದಾಯಗಳ ಸಂಖ್ಯೆ ಕಡಿಮೆ ಇದೆ ಎಂಬ ಭಾವನೆ ದಟ್ಟವಾಗಿದೆ. ಹೀಗಾಗಿ ನೂತನ ಮೀಸಲಾತಿ ವ್ಯವಸ್ಥೆಯಲ್ಲಿ ಈ ಜಾತಿಗಳಿಗೆ ಮನ್ನಣೆ ಕಡಿಮೆಯಾಗುತ್ತದೆ ಎಂಬ ಆತಂಕವನ್ನು ಅವು ವ್ಯಕ್ತಪಡಿಸುತ್ತಿವೆ.

“ಇದರ ಹಿಂದೆಯೂ ರಾಜಕೀಯ ಇದೆ. ಹೊಸ ಮೀಸಲು ವ್ಯವಸ್ಥೆ ಬಗ್ಗೆ ತಪ್ಪು ತಿಳಿವಳಿಕೆ ಮೂಡಿಸಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಗೆ ಬಂದರೆ, ಎಲ್ಲರಿಗೂ ಅನುಕೂಲವಾಗುತ್ತದೆ,” ಎನ್ನುತ್ತಾರೆ ಶಿವಮೊಗ್ಗದ ಟೆಲೆಕ್ಸ್ ರವಿ. ಅವರು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗಹಿಸಿದ್ದರು.

“ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಾಡಿ ಲಾಂಗ್ವೇಜ್ ನೋಡುತ್ತಿದ್ದರೆ, ಮುಂದಿನ ದಿನಗಳಲ್ಲಿ ಸರಕಾರ ಒಳಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧವಾಗಿದೆ ಎನ್ನಿಸುತ್ತಿತ್ತು,” ಎನ್ನುತ್ತಾರೆ ರವಿ.

ಜಾತಿ ಗಣತಿ:

ಈ ಹಿಂದೆ ‘ಜಾತಿ ಗಣತಿ’ ವಿವರಗಳು ಸೋರಿಕೆಯಾಗಿದ್ದವು. ಕೆಳಜಾತಿಗಳು ಈಗಿರುವ ಅಂಕಿಅಂಶಗಳಿಗೆ ವ್ಯತಿರಿಕ್ತವಾಗಿ ದೊಡ್ಡ ಸಂಖ್ಯೆಯಲ್ಲಿವೆ ಎಂದು ಸುದ್ದಿಯಾಗಿತ್ತು. ಆದರೆ, ಸರಕಾರ ‘ಜಾತಿ ಗಣತಿ’ಯನ್ನು ಬಿಡುಗಡೆ ಮಾಡುವ ಮುನ್ನವೇ ಮೇಲ್ಜಾಜಿಗಳಿಂದ ವಿರೋಧ ವ್ಯಕ್ತವಾಗಿದೆ.

ಈಗ ಜನವರಿಯಲ್ಲಿ ಗಣತಿಯ ವಿವರಗಳನ್ನು ಸರಕಾರ ಬಹಿರಂಗ ಪಡಿಸುವ ಇರಾದೆಯನ್ನು ವ್ಯಕ್ತಪಡಿಸಿದೆ. ಹೀಗಾಗಿ, ಇದು ಹೊಸ ವರ್ಷದಲ್ಲಿ ಸಾಮಾಜಿಕ ಚರ್ಚೆಗೆ ಕಾರಣವಾಗುವುದು ನಿಚ್ಚಳವಾಗಿದೆ. ಇದನ್ನೇ ಮುಂದಿನ ಚುನಾವಣೆಯ ಅಜೆಂಡಾವಾಗಿ ಮಾಡಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top