An unconventional News Portal.

‘ಮೂರು ಕೊಲೆಗಳು; ಒಂದು ವ್ಯಸನ’: ಪೊಲೀಸರು ಮುಂದಿಡುವ ‘ಗಾಂಜಾ ಥಿಯರಿ’ಯ ಸುತ್ತಾಮುತ್ತಾ…

‘ಮೂರು ಕೊಲೆಗಳು; ಒಂದು ವ್ಯಸನ’: ಪೊಲೀಸರು ಮುಂದಿಡುವ ‘ಗಾಂಜಾ ಥಿಯರಿ’ಯ ಸುತ್ತಾಮುತ್ತಾ…ರಾಜ್ಯದ ಅಪರಾಧ ಲೋಕದಲ್ಲಿ ಪಾತಕಗಳನ್ನು ಎಸಗಲು ಪ್ರೇರಣೆ ನೀಡುತ್ತಿತ್ತು ಎನ್ನಲಾದ ‘ಮಧ್ಯ’ದ ಜಾಗವನ್ನೀಗ ‘ಗಾಂಜಾ’ ಆಕ್ರಮಿಸಿದೆಯಾ?

ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು, ಅವುಗಳ ಸುತ್ತ ಹಬ್ಬುತ್ತಿರುವ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೀಗೊಂದು ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಪೊಲೀಸರು ಮತ್ತು ಮಾಧ್ಯಮ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೋಮು ಕೊಲೆಗಳ ಹಿಂದೆ ‘ಗಾಂಜಾ ಅಮಲು’ ಕೆಲಸ ಮಾಡುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಅದು ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣವಿರಲಿ ಅಥವಾ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಕದಿರೇಶನ್ ಹತ್ಯೆ ಇರಲಿ, ಪೊಲೀಸರು ಹಂತಕರಿಗೂ, ‘ಗಾಂಜಾ ವ್ಯಸನ’ಕ್ಕೂ ಸಂಬಂಧವಿತ್ತು ಎಂದು ಹೇಳಿಕೆ ನೀಡಿರುವುದು ಈಗ ಸಾರ್ವಜನಿಕವಾಗಿ ಲಭ್ಯವಿದೆ.

ಈ ಹಿಂದಿನ ದಿನಗಳಲ್ಲಿ ಬಾರ್‌ಗಳಲ್ಲಿ, ಮತ್ತಿತರ ಪ್ರದೇಶಗಳಲ್ಲಿ ಕೊಲೆಗಳಾದಾಗ ಪೊಲೀಸರು ಮೊದಲಿಗೆ ನೀಡುತ್ತಿದ್ದ ಮಾಹಿತಿ ‘ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಕೊಲೆ ಮಾಡಲಾಗಿದೆ’. ಆದರೆ ಇದೀಗ ಪೊಲೀಸರು ಆರೋಪಿಗಳ ಕುಡಿತದ ಚಟದ ಅವಲೋಕನ ಬಿಟ್ಟು ‘ಗಾಂಜಾ’ ವ್ಯಸನದ ಸಾಧ್ಯತೆಯನ್ನು ಹೊರಹಾಕುತ್ತಿದ್ದಾರೆ. ಅಸಲಿಗೆ ಭಾರತದಲ್ಲಿ ವೈದ್ಯಕೀಯ ಬಳಕೆಗೆ ಮಾತ್ರ ಗಾಂಜಾ ಬಳಸಬಹುದು. ಅದು ಬಿಟ್ಟರೆ ವೈಯಕ್ತಿಕವಾಗಿ 7 ಗ್ರಾಂವರೆಗೂ ಗಾಂಜಾವನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಕಳೆದ ವರ್ಷ ಪತ್ರಕರ್ತ ಅಗ್ನಿ ಶ್ರೀಧರ್‌ ನಿವಾಸದ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ 7 ಗ್ರಾಂಗಿಂತ ಕಡಿಮೆ ಗಾಂಜಾ ಕೂಡ ಲಭ್ಯವಾಗಿತ್ತು. ಆದರೆ ಅದನ್ನು ಪೊಲೀಸರು ವಶಕ್ಕೆ ಪಡೆದಿರಲಿಲ್ಲ ಮತ್ತು ಪ್ರಕರಣವನ್ನು ಕೂಡ ದಾಖಲಿಸಿರಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಆದರೆ, ಗಾಂಜಾವನ್ನು ಬೆಳೆಯುವುದು ಕೂಡಾ ಭಾರತದಲ್ಲಿ ನಿಷಿದ್ಧ.

ಇತ್ತೀಚೆಗೆ ನಡೆದ ಮೂರು ಕೋಮು ಕೊಲೆಗಳ ಸುತ್ತ ಹುಟ್ಟಿಕೊಂಡ ಊಹಾಪೋಹಗಳನ್ನು ಗಮನಿಸಿದಲ್ಲಿ ಗಾಂಜಾ ಸೇವನೆಯಿಂದಲೇ ಕೊಲೆಗೆ ಪ್ರೇರೇಪಣೆ ಸಿಕ್ಕಿದೆ ಎಂಬ ಥಿಯರಿ ಕಂಡುಬರುತ್ತದೆ. ಅದರ ಸತ್ಯಾಸತ್ಯತೆಗಳ ಸುತ್ತ ಸರಿಯಾದ ತನಿಖೆಗಳು ನಡೆಯದೇ ಇದ್ದರೂ, ಗಾಂಜಾವನ್ನು ಕಾರಣವಾಗಿಸಲಾಗುತ್ತಿದೆ. ಯಾಕೆ ಹೀಗೆ?

ದೀಪಕ್‌ ರಾವ್‌ ಹತ್ಯೆ:

ಮಂಗಳೂರಿನ ಕಾಟಿಪಳ್ಳದಲ್ಲಿ ಹತ್ಯೆಯಾದ ದೀಪಕ್‌ ರಾವ್‌ ಕೊಲೆಗೂ ಗಾಂಜಾ ನಂಟು ಮಾಡಲಾಗಿತ್ತು. ಕೊಲೆಯ ಆರೋಪಿಗಳಾದ ಇರ್ಷಾದ್, ರಿಸ್ವಾನ್‌, ಪಿಂಕಿ ನವಾಝ್‌ ಮತ್ತು ನೌಶಾದ್‌ಗೂ ದೀಪಕ್‌ ರಾವ್‌ಗೂ ಜಗಳವಾಗಿತ್ತು, ಗಾಂಜಾ ಮತ್ತಿನಲ್ಲಿದ್ದ ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆರೋಪಿಗಳೆಲ್ಲರೂ ಗಾಂಜಾ ನಶೆಯನ್ನು ಮಾಡುತ್ತಿದ್ದರು, ಅದರಿಂದಲೇ ಅವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಒಂದೆಡೆ ಬಿಜೆಪಿ ದೀಪಕ್‌ ಕೊಲೆಯನ್ನು ದಾಳವಾಗಿಟ್ಟುಕೊಂಡು ಕರಾವಳಿಯನ್ನು ರಾಜಕೀಯ ಗರಡಿಯನ್ನಾಗಿ ಮಾಡಿಕೊಂಡಿತ್ತು, ಮತ್ತೊಂದೆಡೆ ಪೊಲೀಸರು ಪ್ರಕರಣಕ್ಕೆ ಗಾಂಜಾ ಟ್ವಿಸ್ಟ್‌ ನೀಡಿದ್ದರು.

ಹಾಗಂತ ಕಾಟಿಪಳ್ಳದಲ್ಲಿ ಜನರಿಗೆ ವ್ಯಸನಗಳ ಕುರಿತು ಚಿಂತೆ ಇಲ್ಲ ಅಂತೇನಿಲ್ಲ. ಈ ಹಿಂದೆ, ‘ಸಮಾಚಾರ’ ಸ್ಥಳಕ್ಕೆ ಭೇಟಿ ನೀಡಿದ ಅಲ್ಲಿನ ಸ್ಥಳೀಯರು ಗಾಂಜಾ ಮುಕ್ತ ಕಾಟಿಪಳ್ಳಕ್ಕಾಗಿ ಭಿತ್ತಿ ಚಿತ್ರಗಳನ್ನು ಹಚ್ಚಿದ್ದು ಕಂಡು ಬಂದಿತ್ತು. ದೊಡ್ಡ ಸಂಖ್ಯೆಯ ನಿರುದ್ಯೋಗಿ ಯುವಕರು, ಗಲ್ಫ್‌ ರಾಷ್ಟ್ರಗಳಲ್ಲಿನ ಆಂತರಿಕ ಬಿಕ್ಕಟ್ಟಿನಿಂದ ಸ್ವದೇಶಕ್ಕೆ ಮರಳಿದವರು ಗಾಂಜಾ ನಶೆಯ ಮೂಲದ ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಇದ್ದದ್ದು ಕಂಡು ಬಂದಿತ್ತು.

ಸಂತೋಷ್‌ ಕೊಲೆ:

ಕಳೆದ ಜನವರಿ ತಿಂಗಳ 31ರಂದು ಬೆಂಗಳೂರಿನ ಜೆಸಿ ನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ 28 ವರ್ಷದ ಯುವಕ ಸಂತೋಷ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆಗೈಯ್ಯಲಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣವನ್ನು ಮುಂದಿಟ್ಟುಕೊಂಡ ಬಿಜೆಪಿ ನಾಯಕರು, ಸಂತೋಷ್ ಕೊಲೆಗೆ ಧರ್ಮ ಮತ್ತು ರಾಜಕಾರಣದ ಕುಲಾವಿ ತೊಡಿಸುವ ಪ್ರಯತ್ನದಲ್ಲಿ ತೊಡಗಿದ್ದರು.

ಇವೆಲ್ಲದರ ನಡುವೆ, “ಗಾಂಜಾ ಸೇದುತ್ತಿದ್ದ ಆರೋಪಿಗಳಾದ ವಸೀಂ, ಫಿಲಿಪ್‌, ಇರ್ಫಾನ್‌ ಮತ್ತು ಉಮರ್‌ ಜತೆಗೆ ಸಂತೋಷ್ ಜಗಳವಾಗಿತ್ತು. ಸಿಟ್ಟಿನ ಭರದಲ್ಲಿ ಚಾಕುವಿನಿಂದ ಇರಿಯಲಾಗಿದೆ,” ಎಂಬುದಾಗಿ ಉತ್ತರ ವಿಭಾಗ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಹೇಳಿಕೆ ನೀಡಿದ್ದರು.

ದೀಪಕ್‌ ರಾವ್‌ ಕೊಲೆಗೆ ಪೊಲೀಸರು ಪ್ರಾಥಮಿಕವಾಗಿ ನೀಡಿದ್ದ ಕಾರಣವನ್ನೇ ಸಂತೋಷ್‌ ಪ್ರಕರಣದಲ್ಲಿಯೂ ನೀಡಲಾಗಿತ್ತು. ಇದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನು ಕೂಡ ಪೊಲೀಸರು ನೀಡಿದ್ದರು. ಸ್ಥಳೀಯರ ಹೇಳಿಕೆಯ ಪ್ರಕಾರ ಆರೋಪಿ ವಸೀಂ ಗಾಂಜಾ ವ್ಯಸನಿಯಾಗಿದ್ದ. ಅದಕ್ಕಾಗಿ ಸಂತೋಷ್‌ ಒಮ್ಮೆ ಬುದ್ಧಿವಾದವನ್ನು ಹೇಳಿದ್ದನಂತೆ. ಆದರೂ ವಸೀಂ ವ್ಯಸನವನ್ನು ಮುಂದುವರೆಸಿದ್ದ. ಆ ಕಾರಣಕ್ಕಾಗಿಯೇ ಮತ್ತೆ ಜಗಳವಾಗಿ ಸಂತೋಷ್‌ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ ಎನ್ನಲಾಗಿತ್ತು. ಪೊಲೀಸರ ಈ ಥಿಯರಿ ಸತ್ಯವಿರಬಹುದು ಅಥವಾ ಅಲ್ಲದೆಯೂ ಇರಬಹುದು, ಆದರೆ ನಿಷೇದಕ್ಕೊಳಗಾಗಿರುವ ನೈಸರ್ಗಿಕ ಡ್ರಗ್‌ ಇಡೀ ರಾಜ್ಯಾದ್ಯಂತ ತನ್ನ ಕಬಂದ ಬಾಹುಗಳನ್ನು ಹೊಂದಿರುವುದಂತೂ ಇದರಿಂದ ಸ್ಪಷ್ಟವಾಗುತ್ತಿದೆ.

ಮಾಜಿ ಕಾರ್ಪೊರೇಟರ್‌ ಕೊಲೆ:

ನಿನ್ನೆ (ಫೆಬ್ರವರಿ 7) ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್‌ ಕದಿರೇಶನ್‌ರನ್ನು ಹಾಡಹಗಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆರೋಪಿಗಳು ನವೀನ್‌ ಮತ್ತು ವಿನಯ್‌ ಎಂಬುದಾಗಿ ಪೊಲೀಸರು ಗುರುತಿಸಿದ್ದು ಬಂಧನಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿಯೂ ಘಟನೆ ನಡೆದ ತಕ್ಷಣ ಕೇಳಿಬಂದ ವಿಚಾರವೆಂದರೆ ದೇವಸ್ಥಾನದ ಬಳಿ ಗಾಂಜಾ ಸೇದುತ್ತಿದ್ದ ಯುವಕರಿಗೆ ಕದಿರೇಶನ್‌ ಈ ಹಿಂದೆ ಬೈದಿದ್ದರು ಎಂಬುದು. ಬೈದಿದ್ದಷ್ಟೇ ಅಲ್ಲದೇ ಕದಿರೇಷನ್‌ ಎರಡೇಟು ಹೊಡೆದಿದ್ದರು ಎಂಬ ಮಾಹಿತಿ ಪೊಲೀಸ್‌ ಮೂಲಗಳಿಂದ ಲಭ್ಯವಾಗಿತ್ತು. ಆ ದ್ವೇಷವನ್ನು ಮುಂದುವರೆಸಿದ ವಿನಯ್‌ ಮತ್ತು ನವೀನ್‌ ಇನ್ನಿಬ್ಬರು ಸಹಚರರನ್ನು ಸೇರಿಸಿಕೊಂಡು ಕದಿರೇಶನ್‌ರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು.

ಈ ಹಿಂದೆ ಗಾಂಜಾ ವ್ಯಸನ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ್ದ ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ ಸತೀಶ್‌ ಕುಮಾರ್‌, “ಗಾಂಜಾ ಸೇವನೆ ತೀವ್ರವಾಗಿ ಹೆಚ್ಚುತ್ತಿದೆ. ಈಗೀಗ ಅಪರಾಧ ಲೋಕಕ್ಕೆ ಕಾಲಿಡುವ ಹುಡುಗರು ಇದರ ದಾಸರಾಗಿದ್ದಾರೆ. ಗಾಂಜಾದ ಮತ್ತಲ್ಲಿ ಕೊಲೆಗಳನ್ನು, ದರೋಡೆಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಗಾಂಜಾ ಮಾರಾಟವನ್ನು ಮತ್ತು ಸೇವನೆಯನ್ನು ತಡೆಗಟ್ಟುವ ಅವಶ್ಯಕತೆಯಿದೆ. ಅದಕ್ಕಾಗಿ ವಿಶೇಷ ಕಾರ್ಯಾಚರಣೆಯನ್ನು ಬೆಂಗಳೂರು ಪೊಲೀಸರು ಮಾಡುತ್ತಿದ್ದೇವೆ,” ಎಂದಿದ್ದರು.

ವಿಪರ್ಯಾಸವೆಂದರೆ, ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆಮೂಲೆಗಳಲ್ಲೂ ಗಾಂಜಾ ಲಭ್ಯವಿದೆ. ಬೆಂಗಳೂರಿನ ಗಲ್ಲಗಲ್ಲಿಗಳಲ್ಲೂ ಗಾಂಜಾವನ್ನು ಮಾರುವವರಿದ್ದಾರೆ. ಸಿಸಿಬಿ ಕೇಂದ್ರ ಕಚೇರಿಯ ಪಕ್ಕದಲ್ಲಿಯೇ ಇರುವ ನಟರಾಜ ಥಿಯೇಟರ್ ಹಿಂಭಾಗದ ‘ಬಂಗೀ ನಗರ’ದಲ್ಲಿ ಗಾಂಜಾ ಸೊಪ್ಪು ಲಭ್ಯ ಇದೆ.  ತೀರಾ ಪೊಲೀಸರಿಗೆ ಗೊತ್ತಿಲ್ಲದೆ ನಡೆಯುವ ದಂಧೆ ಕೂಡ ಇದಲ್ಲ.

ಕಾನೂನು ಬದ್ಧಗೊಳಿಸಿ:

ಗಾಂಜಾ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಆಂದೋಲನವನ್ನು ರಾಜ್ಯದಲ್ಲಿ ಆರಂಭವಾಗಿದೆ. ‘ಗ್ರೇಟ್‌ ಲೀಗಲೈಸೇಷನ್‌ ಮೂವ್‌ಮೆಂಟ್‌’, ಎಂಬ ಹೆಸರಿನಡಿಯಲ್ಲಿ ವಿದ್ಯಾವಂತ ಬಳಗವೊಂದು ಗಾಂಜಾ ನಿಷೇಧವನ್ನು ವಿರೋಧಿಸಿ ಆಂದೋಲನ ಮಾಡುತ್ತಿದೆ. ವೈಜ್ಞಾನಿಕವಾಗಿ ನೋಡಿದಲ್ಲಿ ಮಧ್ಯ, ತಂಬಾಕು ಮತ್ತಿತರ ನಶೆಯ ವಸ್ತುಗಳಿಗಿಂತ ಗಾಂಜಾ ದೇಹದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುವುದಿಲ್ಲ ಎಂಬುದು ಅವರ ವಾದ. ಅದಕ್ಕೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಾಗುತ್ತಿದ್ದು, ಹಲವು ದೇಶಗಳಲ್ಲಿ ನಿಷೇಧವನ್ನು ಹಿಂಪಡೆಯಲಾಗಿದೆ. ಅಮೆರಿಕಾದ ಕೆಲವು ರಾಜ್ಯಗಳಲ್ಲಿ, ಉರುಗ್ವೆಯಂತಹ ದೇಶಗಳಲ್ಲಿ ಗಾಂಜಾ ಮಾರಾಟ ಮಾಡಲು ಮೆಡಿಕಲ್ ಶಾಪ್‌ಗಳನ್ನು ತೆರೆಯಲಾಗಿದೆ. ಕ್ಯಾನ್ಸರ್‌, ಪಾರ್ಕಿನ್‌ಸನ್ ತರಹದ ಔಷಧಿಗಳಿಲ್ಲದ ಖಾಯಿಲೆಗಳಿಗೆ ಗಾಂಜಾ ಸಹಾಯಕ ಎಂದು ಇಸ್ರೇಲ್‌ನಂತಹ ದೇಶಗಳು ಕಂಡುಕೊಂಡಿವೆ.

ಜಿಎಲ್‌ಎಂ ಚಳವಳಿಯ ಭಾಗವಾಗಿರುವ ಸಂಶೋಧಕ ವಿಜ್ಞಾನಿ ವಿನಯ್‌, “ಗಾಂಜಾ ಸೇವನೆಯಿಂದ ನಡೆಯುತ್ತಿದೆ ಎನ್ನಲಾಗುವ ಅಪರಾಧ ಕೃತ್ಯಗಳಿಗೂ ಮತ್ತು ಬೇರೆ ನಶೆಗಳಿಂದ ಆಗುತ್ತಿರುವ ಅಪರಾಧಗಳಿಗೂ ತಾಳೆ ಹಾಕಲು ಸಾಧ್ಯವೇ?,” ಎಂದು ಪ್ರಶ್ನಿಸುತ್ತಾರೆ. “ಗಾಂಜಾ ನಿಷೇಧದಿಂದ ಕೆಲವರು ಕ್ರಿಮಿನಲ್‌ಗಳು ಅನಿಸಿಕೊಂಡಿದ್ದಾರೆ. ಗಾಂಜಾ ನಿಷೇಧವನ್ನು ಹಿಂಪಡೆದಲ್ಲಿ ಅಮಾಯಕರು ಕ್ರಿಮಿನಲ್‌ಗಳಾಗಿ ನಿಲ್ಲುವುದು ತಪ್ಪುತ್ತದೆ. ಗಾಂಜಾ ನಿಷೇಧವನ್ನು ತೆರವುಗೊಳಿಸಿ ವೈಜ್ಞಾನಿಕ ಸಂಶೋಧನೆ ನಡೆಸುವ ಅಗತ್ಯತೆಯಿದೆ. ತಂಬಾಕು, ಸರಾಯಿ, ಕಳಭಟ್ಟಿ ರೀತಿಯ ವಸ್ತುಗಳಿಂದ ಜನ ಖಾಯಿಲೆಗೆ ಬೀಳುತ್ತಿದ್ದಾರೆ. ಗಾಂಜಾ ಅದರಷ್ಟು ಮಾರಕವಲ್ಲ. ನಿಷೇಧ ತೆರವು ಮಾಡಿ ವೈದ್ಯಕೀಯ ಬಳಕೆಗಾದರೂ ಸರಕಾರ ಅವಕಾಶ ಮಾಡಿಕೊಡಬೇಕು,” ಎಂದವರು ಅಭಿಪ್ರಾಯ ಪಡುತ್ತಾರೆ.

ಒಟ್ಟಾರೆಯಾಗಿ ಈ ಮೂರು ಪ್ರಕರಣಗಳ ನಂತರ ಅವು ಪಡೆದ ತಿರುವುಗಳನ್ನು ಗಮನಿಸಿದರೆ, ಒಂದೋ ನಿಷೇಧಕ್ಕೊಳಗಾಗಿರುವ ಗಾಂಜಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಅಥವಾ ನಿಷೇಧವನ್ನು ತೆರವುಗೊಳಿಸಿ, ಕಾನೂನಿನ ಅಡಿಯಲ್ಲಿ ಅದನ್ನು ತರಬೇಕು. ಗಾಂಜಾ ಸೇವನೆಯಿಂದ ಮಾನಸಿಕವಾಗಿ ಆಗುವ ಬದಲಾವಣೆಗಳ ಬಗ್ಗೆ ವೈಜ್ಞಾನಿಕ ಸಂಶೋಧನೆಗಳಾಗಬೇಕು. ಗಾಂಜಾವನ್ನು ಈಗ ಹಲವು ರೀತಿಯಲ್ಲಿ ಸೇವಿಸುತ್ತಾರೆ. ಉದಾಹರಣೆಗೆ ಸಿಗರೇಟ್‌ ಮಾಡಿಕೊಂಡು ಸೇದುತ್ತಾರೆ, ಪಾನಕಗಳನ್ನು ಮಾಡುತ್ತಾರೆ, ಗೋಲಿಗಳ ರೀತಿ ಮಾಡುತ್ತಾರೆ, ಇನ್ನೂ ಹಲವು ರೀತಿಯಲ್ಲಿ ಸೇವಿಸುತ್ತಾರೆ. ಆದರೆ ಇಲ್ಲಿಯವರೆಗೂ ವೈಜ್ಞಾನಿಕವಾಗಿ ಗಾಂಜಾವನ್ನು ಯಾವ ರೀತಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂಬ ಬಗ್ಗೆ ಸಂಶೋಧನೆಯೇ ನಡೆದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳು, ನಂತರದ ಗಾಂಜಾ ಥಿಯರಿಗಳು, ನಿಷೇಧ ತೆರವಿಗಾಗಿ ನಡೆಯುತ್ತಿರುವ ಗ್ರೇಟ್‌ ಲೀಗಲೈಸೇಷನ್‌ ಮೂವ್‌ಮೆಂಟ್‌, ಬೆಂಗಳೂರಿನ ಗಲ್ಲಿ-ಗಲ್ಲಿಗಳಲ್ಲಿ ಸಿಗುವ ಗಾಂಜಾ, ಹೀಗೆ ಇದು ಆಳಕ್ಕಿಳಿಯಬೇಕಾದ ವಿಷಯ.

ಅಧಿಕಾರದಲ್ಲಿರುವವರಿಗೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕಿರುತ್ತದೆ. ಹೀಗಾಗಿಯೇ ರಾಜಕೀಯ ಹತ್ಯೆಗಳೋ, ಇತರೆ ಅಪರಾಧ ಕೃತ್ಯಗಳೋ, ಎಲ್ಲವನ್ನೂ ತೆಗೆದುಕೊಂಡು ಹೋಗಿ ಗಾಂಜಾಕ್ಕೆ, ಮದ್ಯಕ್ಕೆ, ಅಮಲಿಗೆ ಕಟ್ಟುವ ಕೆಲಸ ನಡೆಯುತ್ತದೆ.

ಇವೆಲ್ಲದರ ಆಚೆಗೆ ಗಾಂಜಾ ಬಳಕೆಯನ್ನು ನಿರ್ಮೂಲನೆ ಮಾಡುವ ಅಥವಾ ಅದಕ್ಕೊಂದು ಸಂಶೋಧನೆಯ ಮುಖಾಂತರ ವೈಜ್ಞಾನಿಕ ಪರಿಕಲ್ಪನೆ ಕಟ್ಟಿಕೊಡುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಿದೆ. ಅದೆಲ್ಲಕ್ಕಿಂತ ಮುಂಚೆ, ಸರಕಾರ, ಮಾಧ್ಯಮಗಳು ತಮ್ಮ ಮಡಿವಂತಿಕೆ ಪಕ್ಕಕ್ಕಿಟ್ಟು ಸಾಮಾಜಿಕ ಚರ್ಚೆಯೊಂದನ್ನು ಹುಟ್ಟುಹಾಕಬೇಕಿದೆ.

Leave a comment

Top