An unconventional News Portal.

ಕ್ಯಾನ್ಸರ್ ಕಾಯಿಲೆಗೆ ಮಣಿಯಲಿಲ್ಲ; ಐಸಿಎಸ್ಸಿ ಪರೀಕ್ಷೆಯಲ್ಲಿ ಸೋಲಲಿಲ್ಲ: ಕೋಲ್ಕತ್ತಾ ವಿದ್ಯಾರ್ಥಿಯೊಬ್ಬನ ಯಶೋಗಾಥೆ

ಕ್ಯಾನ್ಸರ್ ಕಾಯಿಲೆಗೆ ಮಣಿಯಲಿಲ್ಲ; ಐಸಿಎಸ್ಸಿ ಪರೀಕ್ಷೆಯಲ್ಲಿ ಸೋಲಲಿಲ್ಲ: ಕೋಲ್ಕತ್ತಾ ವಿದ್ಯಾರ್ಥಿಯೊಬ್ಬನ ಯಶೋಗಾಥೆ

ಕ್ಯಾನ್ಸರ್ ಕಾಯಿಲೆಯನ್ನು ಮೆಟ್ಟಿನಿಂತು ಐಸಿಎಸ್ಸಿ ಪರೀಕ್ಷೆಯಲ್ಲಿ ಶೇ. 95. 8 ಅಂಕ ಗಳಿಸುವ ಮೂಲಕ ಕೋಲ್ಕತ್ತಾ ಮೂಲದ ವಿದ್ಯಾರ್ಥಿಯೊಬ್ಬ ಸುದ್ದಿ ಕೇಂದ್ರಕ್ಕೆ ಬಂದಿದ್ದಾನೆ.

ರಾಘವ್ ಚಂಡಕ್ ಎಂಬ ವಿದ್ಯಾರ್ಥಿಗೆ ಲಿಂಪೋಬ್ಲಾಸ್ಟಿಕ್ ಲುಕೆಮಿಯಾ ಕಾಯಿಲೆ ಇರುವುದು ಕಳೆದ ಏಪ್ರಿಲ್ ತಿಂಗಳಿನಲ್ಲಿ ಪತ್ತೆಯಾಗಿತ್ತು. ಹೀಗಾಗಿ, ಆಸ್ಪತ್ರೆಗೆ ದಾಖಲಾದ ಆತ, ತನ್ನ ಹೆರಿಟೇಜ್ ಶಾಲೆಯಿಂದ ಹೊರಗುಳಿಯಬೇಕಾಯಿತು. ಆದರೆ, ಆಸ್ಪತ್ರೆಯ ಹಾಸಿಗೆಯಲ್ಲಿಯೇ ಓದು ಮುಂದುವರಿಸಿದ ರಾಘವ್ ಇದೀಗ ಉತ್ತಮ ಅಂಕಗಳೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ.

“ನನ್ನ ಸಹೋದರ ಕೂಡ ಅದೇ ತರಗತಿಯಲ್ಲಿ ಓದುತ್ತಿದ್ದರಿಂದ ನನಗೆ ನೋಟ್ಸ್ ಸಿಕ್ಕಿದವು. ಇದರಿಂದ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಸಾಧ್ಯವಾಯಿತು,” ಎಂದು ವಿದ್ಯಾರ್ಥಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ.

“ಒಟ್ಟು ಎರಡು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕಾದ ಸ್ಥಿತಿ ಇತ್ತು. ನಂತರ ಪ್ರತಿ ತಿಂಗಳು 7 ದಿನಗಳ ಕಾಲ ಕೀಮೊಥೆರಪಿಗಾಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾಗಿತ್ತು. ಆದರೆ, ಆತನ ಓದಿನ ಆಸಕ್ತಿ ಕುಂದಲಿಲ್ಲ,” ಎಂದು ರಾಘವ್ ತಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಶಾಲೆ ಕೂಡ ಈ ಸಮಯದಲ್ಲಿ ರಾಘವ್ ಆಸೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಿತ್ತು. ಟಾಟಾ ಮೆಡಿಕಲ್ ಸೆಂಟರ್ನಲ್ಲಿ ಕಿಮೋಥೆರಪಿ ನಡೆಯುತ್ತಿದ್ದ ಸಮಯದಲ್ಲಿಯೇ ನೋಟ್ಸ್ ಹಾಗೂ ವಿದ್ಯಾಭ್ಯಾಸಕ್ಕೆ ಸಾಮಗ್ರಿಗಳನ್ನು ಒದಗಿಸುವ ಮೂಲಕ ಕೆಲವು ಶಿಕ್ಷಕರು ಕ್ಯಾನ್ಸರ್ ಬಾಧಿತ ವಿದ್ಯಾರ್ಥಿಗೆ ನೈತಿಕ ಬಲ ತುಂಬಿದರು.

“ರಾಘವ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವುದು ಗೊತ್ತಾದಾಗ ಆತನ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿತ್ತು. ನೀವು ನನ್ನ ಆರೋಗ್ಯವನ್ನು ನೋಡಿಕೊಳ್ಳಿ, ನಾನು ನನ್ನ ಓದನ್ನು ನೋಡಿಕೊಳ್ಳುತ್ತೇನೆ ಎಂದು ಆತನೇ ನಮಗೆ ಸಾಂತ್ವಾನ ಹೇಳಿದ,” ಎಂದು ತಂದೆ ಹೇಳುತ್ತಾರೆ.

ಫೂಟ್ಬಾಲ್ ಅಭಿಮಾನಿಯಾಗಿರುವ ರಾಘವ್ ಐಐಟಿ ಸೇರುವ ಕನಸು ಇಟ್ಟುಕೊಂಡಿದ್ದಾನೆ.

 

Top