An unconventional News Portal.

ಮಾನವೀಯತೆ ಮರೆತ ಸರಕಾರ; 73 ವಸಂತಗಳ ನಂತರ ಪ್ರತ್ಯೇಕಗೊಂಡ ಅಪೂರ್ವ ದಂಪತಿ

ಮಾನವೀಯತೆ ಮರೆತ ಸರಕಾರ; 73 ವಸಂತಗಳ ನಂತರ ಪ್ರತ್ಯೇಕಗೊಂಡ ಅಪೂರ್ವ ದಂಪತಿ

ಅವರಿಬ್ಬರು ಅಪರೂಪದ ಅಮರ ಪ್ರೇಮಿಗಳು. ಕಳೆದ 73 ವರ್ಷಗಳಿಂದ ಮದುವೆಯಾಗಿ ಜತೆಯಾಗಿದ್ದರು. ಗಂಡ 91 ವರ್ಷದ ಹರ್ಬರ್ಟ್ ಗುಡೈನ್ ಮತ್ತು 89 ವರ್ಷ ಅವರ ಪತ್ನಿ ಅಡ್ರೆ ಗುಡೈನ್ ದೀರ್ಘ ಕಾಲದಿಂದ ಕೆನಡಾದ ಪಾಲನಾ ಕೇಂದ್ರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಅವರೀಗ ತಮ್ಮ 73 ವರ್ಷಗಳ ಸುದೀರ್ಘ ದಾಂಪತ್ಯ ಜೀವನದ ನಂತರ ಪ್ರತ್ಯೇಕಗೊಳ್ಳುತ್ತಿದ್ದಾರೆ. ಅವರನ್ನು ಹೀಗೆ ಪ್ರತ್ಯೇಕಗೊಳಿಸುತ್ತಿರುವುದು ಬೇರೆ ಯಾರೂ ಅಲ್ಲ; ಕೆನಡಾದ ಸರಕಾರ.

73 ವರ್ಷಗಳ ನಂತರ ಬೇರೆ ಬೇರೆಯಾಗುತ್ತಿದ್ದೇವೆ ಎಂಬುದನ್ನು ಈ ಜೋಡಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ತಮ್ಮ ಜೀವನದಲ್ಲಿ ಹೀಗೊಂದು ದುರಂತ ಕ್ರಿಸ್ ಮಸ್ ಎದುರಾಗಬಹುದು ಎಂದು ಅವರಿಬ್ಬರು ಯಾವತ್ತೂ ಅಂದುಕೊಂಡವರಲ್ಲ. ಆದರೆ ಬರಸಿಡಿಲು ಬಂದೆರಗಿದೆ. ಅವರಿಬ್ಬರು ತಮ್ಮ ಭಾರವಾದ ಹೃದಯದೊಂದಿಗೆ ಸಿಹಿ ಮುತ್ತು ನೀಡಿ ದೂರವಾಗಿದ್ದಾರೆ.

ಹರ್ಬರ್ಟ್ ಗುಡೈನ್ ಅನಾರೋಗ್ಯದಿಂದ ಬಳಲುತ್ತಿದ್ದು ನ್ಯೂ ಬ್ರುನ್ಸ್ ವಿಕ್ ನ ಪರ್ಥ್ ಆ್ಯಂಡನೋವರ್ ಪಾಲನಾ ಕೇಂದ್ರದಿಂದ ಅವರನ್ನು ನರ್ಸಿಂಗ್ ಹೋಂಗೆ ವರ್ಗಾಯಿಸಲಾಗಿದೆ. ಆದರೆ ಪತ್ನಿ ಮಾತ್ರ ಪಾಲನಾ ಕೇಂದ್ರದಲ್ಲೇ ಉಳಿದುಕೊಂಡಿದ್ದಾರೆ. ಹೀಗೆ ಕೆನಡಾ ಸರಕಾರ ಜೋಡಿಯೊಂದನ್ನು 73 ವರ್ಷಗಳ ನಂತರ ತನ್ನ ನಿಯಮ ಮುಂದಿಟ್ಟು ಪ್ರತ್ಯೇಕವಾಗಿಸಿದೆ. ಇದಕ್ಕೆ ದೇಶದಾದ್ಯಂತ ತೀವ್ರ ಟೀಕೆ ವ್ಯಕ್ತವಾಗಿದೆ.

ನಾನು ನನ್ನ ಪೋಷಕರ ಬಳಿ ನಿನ್ನೆ ಮಾತನಾಡುತ್ತಿದ್ದಾಗ ಅಮ್ಮ ಅಳುತ್ತಿರುವುದು ಕೇಳಿಸಿತು. ಅವರ ಹಿಂದೆ ತಂದೆ ಕೂಡಾ ಅಳುತ್ತಿದ್ದರು,” ಎಂದು ದಂಪತಿಯ ಪುತ್ರಿ ಡಯಾನಾ ಫಿಲಿಪ್ಸ್ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ತಾಯಿ ಹೇಳಿದರು, ‘ನಮ್ಮ ಪಾಲಿಗೆ ಕ್ರಿಸ್ ಮಸ್ ಮುಗಿಯಿತು. ಮತ್ತು ಇದು ನಾವು ಜೀವನದಲ್ಲಿ ಕಂಡ ಅತೀ ಕೆಟ್ಟ ಕ್ರಿಸ್ ಮಸ್. ಅವರು ಯಾಕೆ ರಜೆ ಮುಗಿಯುವವರೆಗೂ ಕಾಯಲಿಲ್ಲ?”‘ ಎಂದು ಡಯಾನಾ ಫಿಲಿಪ್ಸ್ ಬರೆದುಕೊಂಡಿದ್ದಾರೆ. ಈ ಪೋಸ್ಟನ್ನು 17,000 ಜನರು ಶೇರ್ ಮಾಡಿದ್ದಾರೆ.

Canda Couple

ಈ ಕುರಿತು ಬಿಬಿಸಿಗೆ ಪ್ರತಿಕ್ರಿಯೆ ನೀಡಿರುವ ಪುತ್ರಿ ಫಿಲಿಪ್ಸ್, “ಕಳೆದ ಶುಕ್ರವಾರ ಪ್ರಾಂತೀಯ ಸರಕಾರದಿಂದ ಕರೆ ಬಂದಿತ್ತು. ತಂದೆಯ ಆರೋಗ್ಯ ಕ್ಷೀಣಿಸಿರುವುದರಿಂದ ಹೆಚ್ಚಿನ ಸೌಲಭ್ಯಗಳಿರುವ ಪಾಲನಾ ಕೇಂದ್ರಕ್ಕೆ ವರ್ಗಾಯಿಸಬೇಕು ಎಂಬುದಾಗಿ ಹೇಳಿದರು,” ಎಂದಿದ್ದಾರೆ.

ಈ ಸಂದರ್ಭದಲ್ಲಿ ತಕ್ಷಣ ತೀರ್ಮಾನ ತೆಗೆದುಕೊಳ್ಳದಿದ್ದಾಗ, “ಒತ್ತಾಯ ಪೂರ್ವಕವಾಗಿ ಸ್ವಂತ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಸೂಚಿಸಲಾಯಿತು,” ಎಂದಿದ್ದಾರೆ. ಕ್ರಿಸ್ ಮಸ್ ನಲ್ಲಿ ಜತೆಗಿದ್ದು ನಂತರ ಬೇರೆಯಾಗಬಹುದಲ್ಲ ಎಂದು ಕೇಳಿಕೊಂಡರೂ ಅಧಿಕಾರಿಗಳು ಅದಕ್ಕೆ ಸೊಪ್ಪು ಹಾಕಲಿಲ್ಲಎಂದು ಅವರು ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ದೀರ್ಘ ಕಾದ ಪಾಲನಾ ಕೇಂದ್ರ ಪ್ರತಿನಿಧಿಯು, ನಾನು ಸರಕಾರವು ರೂಪಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕಾಗಿದೆ. ಒಂದೊಮ್ಮೆ ನಾನು ಕಾನೂನುಗಳನ್ನು ಅನುಸರಿಸದಿದ್ದಲ್ಲಿ ನಾನು ನನ್ನ ಪರವಾನಿಗೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಹಂತದಲ್ಲಿ ನಿರ್ಧಾರ ಕೈಗೊಂಡಿದ್ದೇನೆ ಮತ್ತು ಇದು ನನ್ನ ವ್ಯಾಪ್ತಿಯನ್ನು ಮೀರಿದೆ,” ಎಂದಿದ್ದಾರೆ.

ಸರಕಾರಗಳು ಸಮಸ್ಯೆಯನ್ನು ಕಾನೂನಿನ ಕಣ್ಣುಗಳಿಂದ ನೋಡುತ್ತವೆಯೇ ಹೊರತು ಹೃದಯದಿಂದ ಅಲ್ಲ ಎಂಬ ಆರೋಪ ಹಿಂದಿನಿಂದಲೂ ಇದೆ. ಹೀಗೆ ಮಾನವೀಯತೆಯನ್ನು ಮರೆತು ನಿಯಮಗಳನ್ನು ಪಾಲಿಸಿದಾಗ ಏನಾಗುತ್ತದೆ ಎಂಬುದಕ್ಕೆ ಈ ಮನಕಲಕುವ ಘಟನೆಯೇ ಸಾಕ್ಷಿ.

Leave a comment

Top