An unconventional News Portal.

ಅಮೆರಿಕಾ ಅಧ್ಯಕ್ಷ ಪಟ್ಟಕ್ಕೆ ಹರಿಯುತ್ತಿರುವ ಹಣದ ಹೊಳೆ ಮತ್ತು ಟಿವಿ ರೇಟಿಂಗ್!

ಅಮೆರಿಕಾ ಅಧ್ಯಕ್ಷ ಪಟ್ಟಕ್ಕೆ ಹರಿಯುತ್ತಿರುವ ಹಣದ ಹೊಳೆ ಮತ್ತು ಟಿವಿ ರೇಟಿಂಗ್!

ವಿಶ್ವದ ಅತಿ ಹೆಚ್ಚು ಅಧಿಕಾರ ಹೊಂದಿರುವ ಕಚೇರಿ ಎಂದು ಕರೆಸಿಕೊಳ್ಳುವ ಅಮೆರಿಕಾ ಅಧ್ಯಕ್ಷೀಯ ಪಟ್ಟಕ್ಕಾಗಿ ನಡೆಯುತ್ತಿರುವ ಚುನಾವಣಾ ಪೂರ್ವ ಪ್ರಚಾರದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ.

ಸದ್ಯದ ಅಂತಾರಾಷ್ಟ್ರೀಯ ಮಾಧ್ಯಮಗಳ ಮಾಹಿತಿ ಪ್ರಕಾರ ಈವರೆಗೆ 70.8 ಕೋಟಿ ರೂಪಾಯಿಗಳನ್ನು ಅಧ್ಯಕ್ಷೀಯ ಚುನಾವಣೆಯ ಮುಂಚೂಣಿಯಲ್ಲಿರುವ ಇಬ್ಬರು ಅಭ್ಯರ್ಥಿಗಳು ಚಂದಾ ರೂಪದಲ್ಲಿ ಸಂಗ್ರಹಿಸಿದ್ದಾರೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ಡೋನಾಲ್ಡ್ ಟ್ರಂಪ್ ಎಂಬ ಶ್ರೀಮಂತ ಕಲೆ ಹಾಕಿರುವ ಚಂದಾ ಹಣದ ಮೊತ್ತ 18. 2 ಕೋಟಿ ರೂಪಾಯಿಗಳು. ರಿಪಬ್ಲಿಕನ್ ಪಕ್ಷದ ಹಿಲರಿ ಕ್ಲಿಂಟನ್ ಧನ ಸಹಾಯ ಪಡೆಯುವುದರಲ್ಲಿ ಮುಂಚೂಣಿಯಲ್ಲಿದ್ದು, ಈವರೆಗೆ ಅವರ ಪ್ರಚಾರ ತಂಡ ಸಂಗ್ರಹಿಸಿದ ಮೊತ್ತ ಸುಮಾರು 52. 6 ಕೋಟಿಯಷ್ಟಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷಗಳೊಳಗಿನ ಚುನಾವಣೆಯಿಂದ ಆರಂಭವಾಗಿ ಅಧ್ಯಕ್ಷೀಯ ಚುನಾವಣೆವರೆಗೆ ಒಟ್ಟು ವೆಚ್ಚವಾಗುವ ಮೊತ್ತ ಸುಮಾರು 40 ಸಾವಿರ ಕೋಟಿ ಎಂಬುದು ಒಂದು ಅಂದಾಜು. ಕಳೆದ ಬಾರಿಯ ಚುನಾವಣೆಯಲ್ಲಿ ಇಷ್ಟು ಪ್ರಮಾಣದ ಹಣ ವಿನಿಯೋಗವಾಗಿತ್ತು ಎಂದು ಸಮೀಕ್ಷೆಗಳು ಹೇಳುತ್ತವೆ. ಈ ಬಾರಿ ಇದಕ್ಕಿಂತಲೂ ಹೆಚ್ಚು ಹಣವನ್ನು ಚುನಾವಣೆಗಾಗಿ ಎರಡು ಪಕ್ಷಗಳ ಅಭ್ಯರ್ಥಿಗಳು ವೆಚ್ಚ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಬಾರಿ ನಮ್ಮಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು 30 ಸಾವಿರ ಕೋಟಿ ರೂಪಾಯಿ ದೇಶದ ಉದ್ದಗಲಗಳಲ್ಲಿ ನಾನಾ ಪಕ್ಷಗಳ ಅಭ್ಯರ್ಥಿಗಳು ವೆಚ್ಚ ಮಾಡಿದ್ದರು ಎಂದು ವರದಿಯಾಗಿತ್ತು.

ಸೂಪರ್ ಪ್ಯಾಕ್ ಲಾಬಿ:

ಅಮೆರಿಕಾ ಚುನಾವಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತ ಬಂದವರು ಅಲ್ಲಿನ ಕಾರ್ಪೊರೇಟ್ ಲಾಬಿಗಳು. ಪ್ರತಿ ಬಾರಿಯೂ ಅಧ್ಯಕ್ಷೀಯ ಚುನಾವಣೆ ನಡೆದಾಗ ಗೆಲುವಿಗೆ ಸಮೀಪ ಇರುವ ಅಭ್ಯರ್ಥಿಗಳಿಗೆ ವಾಲ್ ಸ್ಟ್ರೀಟ್ ಕಾರ್ಪೊರೇಟ್ ಲಾಬಿಗಳು ಹಣವನ್ನು ಸುರಿಯುವುದು ಸಂಪ್ರದಾಯ. ಇದಕ್ಕಾಗಿಯೇ ‘ಸೂಪರ್ ಪ್ಯಾಕ್’ ಎಂಬ ಸಂಸ್ಥೆಯೊಂದನ್ನು ಇವು ಹುಟ್ಟು ಹಾಕಿವೆ. ಈವರೆಗೆ, ಡೋನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರಕ್ಕಾಗಿ ಸೂಪರ್ ಪ್ಯಾಕ್ ಕಡೆಯಿಂದ ಸುಮಾರು 1. 2 ಕೋಟಿ ಹಣವನ್ನು ಸಂಗ್ರಹಿಸಿ ಕೊಡಲಾಗಿದೆ. ಹಿಲರಿ ಕ್ಲಿಂಟನ್ ಪ್ರಚಾರದ ವೆಚ್ಚಗಳಿಗಾಗಿ ಲಾಬಿ ಕಡೆಯಿಂದ 15. 2 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದು ಆರಂಭ ಅಷ್ಟೆ ಎಂಬುದು ಇವುಗಳ ಕಾರ್ಯಚರಣೆಯನ್ನು ಬಲ್ಲವರು ಹೇಳುವ ಮಾತು.

ಇದೇ ಮಾದರಿಯಲ್ಲಿ ಬೆಂಗಳೂರು ಮೂಲದ ಕಾರ್ಪೊರೇಟ್ ಲಾಬಿ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ‘ಬಿ- ಪ್ಯಾಕ್’ ಹೆಸರಿನಲ್ಲಿ ಆಯ್ದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕಾಗಿ ಹಣವನ್ನು ನೀಡಿದ್ದನ್ನು ಸ್ಮರಿಸಬಹುದು.

ಟಿವಿಗಳಿಗೆ ರೇಟಿಂಗ್ ಸಂಭ್ರಮ:

ಅಮೆರಿಕಾ ಅಧ್ಯಕ್ಷೀಯ ಚುನಾವಣೆ 2017ರಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಚುನಾವಣಾ ಪೂರ್ವ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಅದರಲ್ಲೂ, ಕಣದಲ್ಲಿ ಡೆಮಾಕ್ರಟಿಕ್ ಪಕ್ಷದ ಕಡೆಯಿಂದ ಡೋನಾಲ್ಡ್ ಟ್ರಂಪ್ ಇರುವುದು ಅಲ್ಲಿನ ಟಿವಿ ವಾಹಿನಿಗಳಿಗೆ ರೇಟಿಂಗ್ ಮಳೆಯನ್ನೇ ಹರಿಸುತ್ತಿದೆ. “ಟ್ರಂಪ್ ಮಾತುಗಳು ದೇಶಕ್ಕೆ ಒಳ್ಳೆಯದು ಮಾಡುತ್ತವೋ ಬಿಡುತ್ತವೋ. ಆದರೆ ನಮಗಂತೂ (ಸಿಬಿಎಸ್) ರೇಟಿಂಗ್ ಮಳೆ ಹರಿಸುತ್ತಿವೆ,” ಎಂದು ಸಿಬಿಎಸ್ ವಾಹಿನಿಯ ಸಿಇಓ ಬಹಿರಂಗ ಹೇಳಿಕೆ ನೀಡಿದ್ದಾರೆ.

ಸದ್ಯ, ಅಮೆರಿಕಾದಲ್ಲಿ ಟ್ರಂಪ್ ವಿರೋಧಿಸಿ ಸಾಕಷ್ಟು ಮಾಧ್ಯಮ ಸಂಸ್ಥೆಗಳು ನಿಲುವು ತೆಗೆದುಕೊಂಡಿದ್ದರೂ ರೇಟಿಂಗ್ ವಿಚಾರದಲ್ಲಿ ಖುಷಿಯಾಗಿಯೇ ಇವೆ. ಟ್ರಂಪ್ ಭಾಷಣದಲ್ಲಿ ಜನಾಂಗೀಯ ದ್ವೇಷ, ಮುಸ್ಲಿಂ ದ್ವೇಷ ಹಾಗೂ ಯುದ್ಧದಾಹಿ ನಿಲುವುಗಳು ಈಗ ಅಮೆರಿಕಾದಲ್ಲಿ ಭರ್ಜರಿಯಾಗಿಯೇ ಬಿಕರಿಯಾಗುತ್ತಿವೆ.

ಹೀಗಾಗಿಯೇ, ಇಲ್ಲಿನ ವಾಹಿನಿಗಳು ಟ್ರಂಪ್ ಭಾಷಣಗಳಿಗೆ ಹೆಚ್ಚಿನ ಸಮಯಾವಕಾಶವನ್ನೂ ನೀಡುತ್ತಿವೆ. ಪಕ್ಷದ ಉಳಿದ ಅಷ್ಟೂ ಅಭ್ಯರ್ಥಿಗಳಿಗೆ ಸಿಕ್ಕ ಕವರೇಜ್ ಟ್ರಂಪ್ಗೆ ಸಿಕ್ಕ ಸಮಯಾವಕಾಶಕ್ಕೆ ಸಮವಾಗಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಟ್ರಂಪ್ಗೆ ಈವರೆಗೆ ಸಿಕ್ಕಿರುವ ಟಿವಿ ಕವರೇಜ್- ಸಮೀಕ್ಷೆ ವರದಿ

ಟ್ರಂಪ್ಗೆ ಈವರೆಗೆ ಸಿಕ್ಕಿರುವ ಟಿವಿ ಕವರೇಜ್- ಸಮೀಕ್ಷೆ ವರದಿ

ಸದ್ಯಕ್ಕೆ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಪ್ರಚಾರ ಕಣಗಳ ಮುಖ್ಯಾಂಶಗಳು ಇವು. ಮುಂದಿನ ದಿನಗಳಲ್ಲಿ ಯಾರ್ಯಾರು ಎಷ್ಟು ಹಣ ವಿನಿಯೋಗಿಸಿದ್ದಾರೆ ಎಂಬುದರ ಸ್ಪಷ್ಟ ಮಾಹಿತಿ ಸಿಗಲಿವೆ. ಅಷ್ಟೊತ್ತಿಗೆ ಅಧ್ಯಕ್ಷೀಯ ಪಟ್ಟಕ್ಕೆ ಯಾರು ಬಂದು ಕುಳಿತುಕೊಳ್ಳಲಿದ್ದಾರೆ ಎಂಬುದರ ಸುಳಿವೂ ಸಿಕ್ಕಿರುತ್ತದೆ; ಜತೆಗೆ ಮಾಧ್ಯಮಗಳ ವಹಿಸಿದ ಪಾತ್ರದ ಬಗ್ಗೆಯೂ.

Leave a comment

Top