An unconventional News Portal.

ಆಕ್ರೋಶಕ್ಕೆ ಪ್ರತಿಭಟನೆಯ ಬಲ: FDA ಮರುಪರೀಕ್ಷೆಗೆ ರಾಜ್ಯಾದ್ಯಂತ ಬೆಂಬಲ

ಆಕ್ರೋಶಕ್ಕೆ ಪ್ರತಿಭಟನೆಯ ಬಲ: FDA ಮರುಪರೀಕ್ಷೆಗೆ ರಾಜ್ಯಾದ್ಯಂತ ಬೆಂಬಲ

ಒಳಗೇ ಕುದಿಯುತ್ತಿರುವ ವಿಚಾರವೊಂದಕ್ಕೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಹೇಗೆ ಪ್ರತಿಭಟನೆ ಸ್ವರೂಪ ನೀಡಬಹುದು ಎಂಬುದಕ್ಕೆ ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸಾಕ್ಷಿಯಾಗಲಿದೆ.

FDA ಆಕಾಂಕ್ಷಿಗಳು ಮರು ಪರೀಕ್ಷೆಗೆ ಆಗ್ರಹಿಸಿ ಫೇಸ್ ಬುಕ್ ಹಾಗೂ ವಾಟ್ಸಾಪ್ ಮೂಲಕ ನಡೆಸುತ್ತಿದ್ದ ಅಭಿಯಾನಕ್ಕೆ ರಾಜ್ಯಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘FDA ಮರು ಪರೀಕ್ಷೆ ಹೋರಾಟ ಸಂಘಟನೆ’ ಹೆಸರಿನಲ್ಲಿ ಮೇ. 23ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ‘ಭಾರಿ ಪ್ರತಿಭಟನೆ’ಯನ್ನು ನಡೆಸಲು ಆಕಾಂಕ್ಷಿಗಳು ತೀರ್ಮಾನಿಸಿದ್ದಾರೆ. FDA ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಆಕ್ರೋಶ ದನಿಗಳು ಮುನ್ನಲೆಗೆ ಬಂದಿದ್ದವು.

“ನಾವು ವಾಟ್ಸಾಪ್ ಹಾಗೂ ಫೇಸ್ ಬುಕ್ ಮೂಲಕ ನೀಡಿದ ಪ್ರತಿಭಟನೆ ಕರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಪ್ರತಿಕ್ರಿಯೆಗಳು ಬರುತ್ತಿವೆ. ಕಳೆದ ಮೂರು ದಿನಗಳಲ್ಲಿ ಗುಲ್ಬರ್ಗಾ, ಬಾಗಲಕೋಟೆ, ಹಾವೇರಿ, ಗದಗ, ರಾಯಚೂರು ಜಿಲ್ಲೆಗಳಿಂದ 1, 500ಕ್ಕೂ ಹೆಚ್ಚು ಕರೆಗಳು ಬಂದಿವೆ. ಹೀಗಾಗಿ, ಸುಮಾರು 5 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ,” ಎಂದು ಆಯೋಜಕರಲ್ಲಿ ಒಬ್ಬರಾದ ತುಮಕೂರಿನ ನರೇಂದ್ರ ಬಾಬು ‘ಸಮಾಚಾರ’ಕ್ಕೆ ತಿಳಿಸಿದರು.

“ನಮಗೆ ಕರೆಗಳು ಬರದ ಜಿಲ್ಲೆಗಳು ಅಂದರೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ. ಇವೆರಡು ಜಿಲ್ಲೆಗಳನ್ನು ಹೊರತು ಪಡಿಸಿದರೆ, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕರೆಗಳು ಬಂದಿವೆ. ಪ್ರತಿಯೊಬ್ಬರಲ್ಲೂ ಕೆಪಿಎಸ್ಸಿ ವ್ಯವಸ್ಥೆ ಬಗ್ಗೆ ಆಕ್ರೋಶ ಇದೆ. ಹೋರಾಟ ಮಾಡಿಯಾದರೂ ಮರು ಪರೀಕ್ಷೆಯನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ,” ಎಂದು ಬಾಬು ಮಾಹಿತಿ ನೀಡಿದರು.

ವಾರದ ಹಿಂದಷ್ಟೆ ‘ಕೆಪಿಎಸ್ಸಿ ಚಲೋ’ ಹೆಸರಿನಲ್ಲಿ FDA ಅಭ್ಯರ್ಥಿಗಳು ಉದ್ಯೋಗ ಸೌಧದ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ಮರು ಪರೀಕ್ಷೆಗೆ ಆಗ್ರಹಿಸಿ ಕೆಪಿಎಸ್ಸಿ ಕಾರ್ಯದರ್ಶಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೆ, “ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ, ಮೇ. 23ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಆಯೋಜಿಸಲು ತೀರ್ಮಾನಿಸಿದೆವು. ಈ ಮೂಲಕ ಸರಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶ,” ಎಂದು ಆಯೋಜಕ ಶಂಕರ್ ಸಿಹಿಮೊಗೆ ತಿಳಿಸಿದರು.

ಅಂದು ನಡೆಸಿದ ಪ್ರತಿಭಟನೆಯಲ್ಲಿ ಸಲ್ಲಿಸಿದ ಮನವಿ ಪತ್ರದಲ್ಲಿ, FDA ಮರು ಪರೀಕ್ಷೆ ಸೇರಿದಂತೆ, ಹಲವು ಬೇಡಿಕೆಗಳನ್ನು ಮುಂದಿಡಲಾಗಿತ್ತು.

FDA-Manavi-1

ಸರಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾನುವಾರ ಬೆಂಗಳೂರು ಆಕಾಶವಾಣಿಯಲ್ಲಿ ‘ಫೋನ್ ಇನ್’ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೆ ಕರೆ ಮಾಡಿದ FDA ಆಕಾಂಕ್ಷಿಗಳು ಮರು ಪರೀಕ್ಷೆಗೆ ಒತ್ತಾಯಿಸಿದರು.

ಈ ಮೂಲಕ ತಮ್ಮ ಸಮಸ್ಯೆಗಳ ಕಡೆಗೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನವನ್ನು ಸೆಳೆಯಲು ಸಫಲರಾದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಮಾಧಾನ ಮಾಡಿದರು.

ಹೀಗೆ, ಸಣ್ಣ ಮಟ್ಟದಲ್ಲಿ ಆರಂಭವಾದ ಅಸಮಾಧಾನ ಪ್ರತಿಭಟನೆಯ ಸ್ವರೂಪವನ್ನು ಪಡೆದುಕೊಳ್ಳುವುದು ನಿಚ್ಚಳವಾಗಿದೆ. ಹಿಂದೆ ಕೆಎಎಸ್ ಆಕಾಂಕ್ಷಿಗಳು ಕೆಪಿಎಸ್ಸಿ ವಿರುದ್ಧ ಇದೇ ಸ್ವಾತಂತ್ರ್ಯ ಉದ್ಯಾನವನಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕೊನೆಯ ಹಂತದಲ್ಲಿ ಬೆಂಬಲ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾವು ಹೆಚ್ಚುವಂತೆ ಮಾಡಿದ್ದರು. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚೆಗಳಿಗೆ ವೇದಿಕೆ ನಿರ್ಮಾಣವಾಗಿತ್ತು.

ಇದೀಗ FDA ವಿದ್ಯಾರ್ಥಿಗಳು ಬೀದಿಗೆ ಇಳಿಯಲು ಮುಂದಾಗಿದ್ದಾರೆ. ಇದನ್ನು ಮುಖ್ಯವಾಹಿನಿ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅದಕ್ಕಿಂತ ಹೆಚ್ಚಾಗಿ ಕೆಪಿಎಸ್ಸಿಯ ಕಾಯಕಲ್ಪದ ಅಗತ್ಯತೆಯನ್ನು ಇದು ಎತ್ತಿ ತೋರಿಸುತ್ತಿದೆ. ಸರಕಾರದ ಇಚ್ಚಾಶಕ್ತಿಯ ಪರೀಕ್ಷೆಯೂ ಈ ಮೂಲಕ ನಡೆಯಲಿದೆ.

ಕೆಪಿಎಸ್ಸಿ ಕುರಿತು ‘ಸಮಾಚಾರ’ದ ಇನ್ನಷ್ಟು ವರದಿಗಳು ಇಲ್ಲಿವೆ. (ಕೆಪಿಎಸ್ಸಿಯಲ್ಲಿ ಕಳಂಕಿತರಿಂದ ಸಂದರ್ಶನ, ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಕಳಂಕಿತ ಅಧಿಕಾರಿ ಶಾಮ್ ಭಟ್)

Leave a comment

Top