An unconventional News Portal.

‘ಕಾಲ್ ಡ್ರಾಪ್’ಗೆ ಪರಿಹಾರ: ಟೆಲಿಕಾಂ ಕಂಪನಿಗಳ ಮೊರೆಗೆ ಅಸ್ತು ಎಂದ ಸುಪ್ರಿಂ ಕೋರ್ಟ್

‘ಕಾಲ್ ಡ್ರಾಪ್’ಗೆ ಪರಿಹಾರ: ಟೆಲಿಕಾಂ ಕಂಪನಿಗಳ ಮೊರೆಗೆ ಅಸ್ತು ಎಂದ ಸುಪ್ರಿಂ ಕೋರ್ಟ್

ಕಾಲ್ ಡ್ರಾಪ್ಗೆ ದಂಡ ವಿಧಿಸುವಂತೆ ಭಾರತೀಯ ದೂರ ಸಂಪರ್ಕ ಪ್ರಾಧಿಕಾರ ಮಾಡಿದ್ದ ಶಿಫಾರಸನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.

ಈ ಮೂಲಕ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಪ್ರತಿ ಕಾಲ್ ಡ್ರಾಪ್ ಗೆ ಒಂದು ರೂ ದಂಡ ವಿಧಿಸುವಂತೆ ಟ್ರಾಯ್ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಟೆಲಿಕಾಂ ಕಂಪನಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.ಈ ಕುರಿತು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಟ್ರಾಯ್ ಆದೇಶವನ್ನು ರದ್ದುಮಾಡಿ ತೀರ್ಪು ನೀಡಿದೆ.

ದಿನದಲ್ಲಿ ಗರಿಷ್ಠ ಮೂರಕ್ಕಿಂತ ಹೆಚ್ಚು ಕರೆಗಳು ಕಾಲ್ ಡ್ರಾಪ್ ಆದಲ್ಲಿ ಈ ಕಾಲ್ ಡ್ರಾಪ್‍ಗಳಿಗೆ ಪ್ರತಿ ಕಾಲ್ ಡ್ರಾಪ್ಗೆ 1 ರೂಪಾಯಿಯಂತೆ ಗ್ರಾಹಕರಿಗೆ ಪರಿಹಾರ ನೀಡುವಂತೆ ಆದೇಶಿಸಿ ಟ್ರಾಯ್ ಕಳೆದ ವರ್ಷ ಮಾಡಿದ್ದ ಪ್ರಕಟಣೆಯ ವಿರುದ್ಧ ಟೆಲಿಕಾಮ್ ಆಪರೇಟರ್ಗಳು ಸಲ್ಲಿಸಿದ ದೂರುಗಳ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು.

‘ಈ ಆದೇಶ ಅಕ್ರಮ, ನಿರಂಕುಶ, ಪಾರದರ್ಶಕವಲ್ಲ ಹಾಗೂ ನ್ಯಾಯೋಚಿತವಾದುದಲ್ಲ’ ಎಂದು ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಆರ್.ಎಫ್. ನಾರಿಮನ್ ಅವರ ಪೀಠ ಹೇಳಿತು.

ಟ್ರಾಯ್ ಪ್ರಕಟಣೆಯನ್ನು ಎತ್ತಿ ಹಿಡಿದು ದೆಹಲಿ ಹೈಕೋರ್ಟ್ ಫೆಬ್ರುವರಿ 29ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಿ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ಮತ್ತು ಅಸೋಸಿಯೇಶನ್ ಆಫ್ ಯುನಿಫೈಡ್ ಸರ್ವೀಸ್ ಪ್ರೊವೈಡರ್ ಆಫ್ ಇಂಡಿಯಾ (ಯುಎಸ್‍ಪಿಎಐ) ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು 2015ರ ಅಕ್ಟೋಬರ್ 16ರಂದು ಶಿಫಾರಸು ಮಾಡಿತ್ತು.

ಕಾಲ್ ಡ್ರಾಪ್ ಎಂದರೇನು?

ಸರ್ವೀಸ್ ಪ್ರೊವೈಡರ್ ನ ನೆಟ್ ವರ್ಕ್ ನ ವ್ಯಾಪ್ತಿಯೊಳಗೇ ಮೊಬೈಲ್ ನಲ್ಲಿ ಮಾತನಾಡುವಾಗ ಮಧ್ಯದಲ್ಲಿಯೇ ಬಳಕೆದಾರರು ಕರೆಯನ್ನು ಕಟ್ ಮಾಡದಿದ್ದರೂ ಕರೆ ಕಡಿತವಾಗುವ ಸಮಸ್ಯೆಗೆ ಕಾಲ್ ಡ್ರಾಪ್ ಎನ್ನುತ್ತಾರೆ. ದೆಹಲಿ ಮತ್ತು ಮುಂಬೈಗಳಲ್ಲಿ ಟ್ರಾಯ್ ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಪರೀಕ್ಷೆ ನಡೆಸಿದ್ದು, ದೆಹಲಿಯಲ್ಲಿ ಕಾಲ್ ಡ್ರಾಪ್ ಪ್ರಮಾಣ ಶೇಕಡಾ 17.29ರಷ್ಟಿದ್ದು, ಮುಂಬೈಯಲ್ಲಿ ಶೇಕಡಾ 5.56ರಷ್ಟಿದೆ. ಟ್ರಾಯ್ ನಿಯಮದ ಪ್ರಕಾರ ಅದು ಶೇಕಡಾ 2 ಕ್ಕಿಂತ ಕಡಿಮೆ ಇರಬೇಕು.

Leave a comment

Top