An unconventional News Portal.

ಭಟ್ಕಳದ ಬೀದಿಯಲ್ಲಿ ಹಾಡುಹಗಲೇ ನಡೆದ ‘ಗೋ ರಕ್ಷಣೆ’ ದೊಂಬರಾಟಕ್ಕೆ ಸಾಕ್ಷಿಯಾದ ಮುದ್ದು ಕರು!

ಭಟ್ಕಳದ ಬೀದಿಯಲ್ಲಿ ಹಾಡುಹಗಲೇ ನಡೆದ ‘ಗೋ ರಕ್ಷಣೆ’ ದೊಂಬರಾಟಕ್ಕೆ ಸಾಕ್ಷಿಯಾದ ಮುದ್ದು ಕರು!

ರಾಜ್ಯದ ಅತೀ ಸೂಕ್ಷ್ಮ ನಗರ ಎನ್ನಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಹಾಡು ಹಗಲೇ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ. ಅದೂ ಒಬ್ಬ ‘ಹಿಂದೂ’ ಎಂಬ ಕಾರಣಕ್ಕೆ ಹೊಡೆತ ಕೊಟ್ಟಿದ್ದರೆ, ಇನ್ನೊಬ್ಬ ‘ಹಿಂದೂ’ವಾಗಿದ್ದರೂ ದನದ ಮುದ್ದು ಕರುವೊಂದನ್ನು ಕದ್ದು; ಮಾರಲು ಹೊರಟಿದ್ದ ಎಂಬ ಕಾರಣಕ್ಕೆ ಬೆಲ್ಟಿನಿಂದ ಹಲ್ಲೆಗೆ ಒಳಗಾಗಿದ್ದಾನೆ.

ಈ ಘಟನೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣಗೊಂಡಿದ್ದು ‘ಸಮಾಚಾರ’ಕ್ಕೆ ವಕೀಲರೊಬ್ಬರ ಮೂಲಕ ಲಭ್ಯವಾಗಿದೆ.

ಏನಿದು ಘಟನೆ?:

ಉತ್ತರ ಕನ್ನಡದ ಜಿಲ್ಲೆಯಲ್ಲಿ ಬರುವ ಭಟ್ಕಳದ ಹೆಸರು ಕೇಳುತ್ತಿದ್ದಂತೆ ಮುಸ್ಲಿಂ ಭಯೋತ್ಪಾದನೆ ಹಿನ್ನೆಲೆಗಳು ತಲೆಯಲ್ಲಿ ಸರಿದು ಹೋಗುತ್ತವೆ. ಈ ಹಿಂದೆ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಭಟ್ಕಳದ ಕುರಿತು ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಕನ್ನಡ ನ್ಯೂಸ್ ಚಾನಲ್ಗಳಲ್ಲಿ ಭಟ್ಕಳದ ಸುದ್ದಿಗಳು ಬಂದಿದ್ದವು. ಅದಕ್ಕಿಂತಲೂ ಹೆಚ್ಚಾಗಿ ಸಿಮಿ, ಇಂಡಿಯನ್ ಮುಜಾಹಿದೀನ್ ಹಾಗೂ ಐಸಿಸ್ ಹೆಸರುಗಳ ಜತೆಜತೆಗೆ ಭಟ್ಕಳದ ಹೆಸರು ಆಗಾಗ್ಗೆ ತಳಕು ಹಾಕಿಕೊಳ್ಳುತ್ತಲೇ ಇರುತ್ತದೆ.

ಇವತ್ತಿಗೆ ಪುಟ್ಟ ಐಶಾರಾಮಿ ನಗರದ ರೀತಿಯಲ್ಲಿ ಬೆಳೆದಿರುವ ಭಟ್ಕಳದ ಹೈವೇಯಲ್ಲಿ ಬುಧವಾರ ಬೆಳಗ್ಗೆ 9. 30ರ ಸುಮಾರಿಗೆ ವ್ಯಕ್ತಿಯೊಬ್ಬನನ್ನು ಬಿಳಿ ಸ್ಫೋರ್ಟ್ಸ್ ಟಿ ಶರ್ಟ್ ಹಾಗೂ ಟ್ರ್ಯಾಕ್ ಪ್ಯಾಂಟ್ ಹಾಕಿದ್ದ ಕೇಶವ್ ಹಾಗೂ ಆತನ ಸಂಗಾತಿಗಳು ಥಳಿಸಲು ಶುರುಮಾಡಿದ್ದರು.

bhatkal-1

ಸಾರ್ವಜನಿಕರು ಇದನ್ನು ಹತ್ತಿರದಿಂದ ಗಮನಿಸಲು ಶುರುಮಾಡಿದ ನಂತರ, ಅರ್ಧ ಬೆತ್ತಲಾಗಿದ್ದ ವ್ಯಕ್ತಿಯನ್ನೂ, ಜತೆಗೆ ಒಂದು ಕರುವನ್ನು ದಾರಿಯಲ್ಲಿ ಎಳೆದುಕೊಂಡು ಬರಲಾಯಿತು. ಈ ಸಮಯದಲ್ಲಿ ಅಕ್ಕಪಕ್ಕದಲ್ಲಿದ್ದವರು ಕೇಶವ್ ಎಂಬ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಬೈಯ್ಯುತ್ತಾರೆ. ಈ ಸಮಯದಲ್ಲಿ ಹೆದ್ದಾರಿಯಲ್ಲಿ ಭಟ್ಕಳದಿಂದ ಮಂಗಳೂರು ಕಡೆಗೆ ಹೊರಟಿದ್ದ ಪೊಲೀಸ್ ಜೀಪೊಂದು ಬರುತ್ತದೆ.

bhatkal-2

ಅದರಲ್ಲಿದ್ದ ಮಹಿಳಾ ಪಿಎಸ್ಐ ಒಬ್ಬರು ಗುಂಪನ್ನು ತಾವು ಬಂದಿದ್ದ ಜೀಪಿನಲ್ಲಿ ಕೂರಿಸಿ ಕರುವಿನ ಆರೈಕೆಗೆ ನಿಲ್ಲುತ್ತಾರೆ.

bhatkal-3

ಕೊನೆಗೆ ಕರುವನ್ನು ರಕ್ಷಣೆ ಮಾಡಲು ಹೊರಟಿದ್ದ ಕೇಶವ್ ಹಾಗೂ ಸಾರ್ವಜನಿಕರು ಆಟೋಗೆ ಹತ್ತಿಸುತ್ತಾರೆ. ಅದರ ಜತೆಗೆ ಪೇದೆಯೊಬ್ಬರನ್ನು ಕೂರಿಸುತ್ತಾರೆ.

bhatkal-4

ಈ ಸಮಯದಲ್ಲಿ ಆಟೋದಲ್ಲಿ ಪೊಲೀಸ್ ಪೇದೆಯೊಬ್ಬರ ಜತೆ ನಿಂತ ಮೂಕ ಕರು ಪಿಳಿಪಿಳಿ ಕಣ್ಣು ಬಿಡುತ್ತಿರುತ್ತದೆ.

bhatkal-5

ಇದಿಷ್ಟು ನಮಗೆ ಲಭ್ಯವಾಗಿರುವ ದೃಶ್ಯಗಳಲ್ಲಿ ಸ್ಪಷ್ಟವಾಗಿದೆ.

ಠಾಣೆಯಲ್ಲಿ ಏನಾಯಿತು?: 

ಹೀಗೆ, ಹಾಡು ಹಗಲು ನಡು ಹಾದಿಯಲ್ಲಿ ದೊಂಬರಾಟ ಶುರುಮಾಡಿದ್ದ ಗುಂಪನ್ನು ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಭಟ್ಕಳ ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, “ಬೆಳಗ್ಗೆ ಅಚಾನಕ್ ಆಗಿ ಪೊಲೀಸ್ ವಾಹನಕ್ಕೆ ಈ ಘಟನೆ ಕಂಡು ಬಂದು ಠಾಣೆಗೆ ಕರೆಸಿಕೊಳ್ಳಲಾಯಿತು. ಈ ಸಮಯದಲ್ಲಿ ಸ್ಥಳದಿಂದಲೇ ಮಹಿಳಾ ಪಿಎಸ್ಐ ಒಬ್ಬರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದರು. ಠಾಣೆಗೆ ಕರೆತಂದ ನಂತರ ದನದ ಕರುವನ್ನು ಶೇಖರ ಮಂಜಯ್ಯ ನಾಯಕ್ ಎಂಬಾತ ಮುಸ್ಲಿಂ ಕುಟುಂಬವೊಂದರಿಂದ ಕದ್ದು ತಂದಿದ್ದ. ಅದನ್ನು ಮಾರಲು ತಯಾರಿ ಮಾಡುತ್ತಿದ್ದಾಗ ಕೇಶವ್ ನೇತೃತ್ವದಲ್ಲಿ ಕರುವನ್ನು ರಕ್ಷಿಸಲು ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ.”

ಈ ಸಮಯದಲ್ಲಿ ಮಂಜಯ್ಯ ನಾಯ್ಕ್ ಹಿನ್ನೆಲೆಯನ್ನು ಪರೀಕ್ಷಿಸಿದ ಪೊಲೀಸರು, “ಆತ ಬೆಳಗ್ಗಿಯಿಂದ ಠಾಣೆಯಲ್ಲಿಯೇ ಪ್ರಜ್ಞೆ ಇಲ್ಲದೆ ಕುಳಿತುಕೊಂಡಿದ್ದ. ಅಷ್ಟೊಂದು ಕುಡಿದು ಬಿಟ್ಟಿದ್ದ. ಆತ ಸಾಮಾನ್ಯವಾಗಿ ಕುಡಿತಕ್ಕೆ ಹಣ ಇಲ್ಲದಿರುವಾಗ ದನಗಳನ್ನು ಕದ್ದು ಮಾರಿ ಹಣ ಸಂಪಾದನೆ ಮಾಡುತ್ತಿದ್ದ,” ಎನ್ನುತ್ತಾರೆ. ಇದು ಪೊಲೀಸರು ನೀಡುತ್ತಿರುವ ಆರೋಪಿ ಬಗೆಗಿನ ಪ್ರಾಥಮಿಕ ಮಾಹಿತಿ. ಇದೇ ಸಮಯದಲ್ಲಿ ಭಟ್ಕಳದ ಮುಸ್ಲಿಂ ಕುಟುಂಬವೊಂದು ತಮ್ಮ ಕರು ಕಳುವಾಗಿದೆ ಎಂದು ದೂರು ನೀಡಿದ್ದಾರೆ. ಹೀಗಾಗಿ ಮಂಜಯ್ಯ ನಾಯ್ಕ್ ವಿರುದ್ಧ ಕೇಸು ದಾಖಲಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತು ವರದಿ ಪ್ರಕಟಿಸಿದ ಮಂಗಳೂರು ಮೂಲದ ವೆಬ್ ತಾಣಗಳು ಹಾಗೂ ‘ವಾರ್ತಾ ಭಾರತಿ’ ವರದಿ ಪ್ರಕಟಿಸಿತ್ತು.

ಮುಂದೇನಾಯಿತು?:

ಕರುವನ್ನು ರಕ್ಷಿಸುವ ನೆಪದಲ್ಲಿ ಸಾರ್ವಜನಿಕವಾಗಿ ಕಾನೂನನ್ನು ಕೈಗೆತ್ತಿಕೊಂಡ ಕೇಶವ್ ಹಾಗೂ ಆತನ ಜತೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬರಲು ಶುರುವಾಗಿವೆ. ಈ ಸಮಯದಲ್ಲಿ, ಪೊಲೀಸರು ಐಪಿಸಿ 323, 324, 341 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಕೊಂಡು ಕೇಶವ್ ಹಾಗೂ ಆತನ ಇಬ್ಬರು ಜತೆಗಾರರನ್ನು ಗುರುವಾರ ಬಂಧಿಸಿದ್ದಾರೆ. ಇವರಿಗೆ ನ್ಯಾಯಾಲಯದಲ್ಲಿ ಅದೇ ದಿನ ಜಾಮೀನು ಕೂಡ ಸಿಕ್ಕಿದೆ. ಇನ್ನೂ ಸುಮಾರು 12 ಜನರ ವಿರುದ್ಧ ದೊಂಬಿ ಗಲಾಟೆ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಹೀಗಿರುವಾಗಲೇಮ ಗುರುವಾರ ಸಂಜೆ ವೇಳೆಗೆ, ಭಟ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ದನ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ. ಅಬ್ದುಲ್ಲಾ ಹಾಗೂ ಅಹ್ಮದ್ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದು, ಇವರಿಂದ 4 ದನ ಹಾಗೂ 2 ಕರುಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಇದು ಮಾಮೂಲು:

ಭಟ್ಕಳವನ್ನು ಬಲ್ಲವರ ಪ್ರಕಾರ, “ಇಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ದನಗಳ ಸಾಗಣೆ, ಅವುಗಳನ್ನು ರಕ್ಷಿಣೆ, ಅದರ ನೆಪದಲ್ಲಿ ನಡೆಯುವ ಸಾರ್ವಜನಿಕ ಹಲ್ಲೆ ಮತ್ತು ಅವರ ಸುತ್ತ ಹುಟ್ಟಿಕೊಂಡಿರುವ ಧಾರ್ಮಿಕ ಚೌಕಟ್ಟುಗಳಿಂದ ಸಾಮಾಜಿಕ ಸ್ವಾಸ್ಥ್ಯ ಇಲ್ಲಿ ಹಳಿ ತಪ್ಪಿ ಹಲವು ದಿನಗಳಾಗಿವೆ. ಇಂತಹ ಘಟನೆಗಳಾದಾಗ ನಾವು ಸಾರ್ವಜನಿಕರು, ಸಂಘಟನೆಗಳು ಹಾಗೂ ಪೊಲೀಸರ ಬಗ್ಗೆ ಆಲೋಚಿಸುತ್ತೇವೆ. ಮತ್ತೆ ಮರೆತು ಹೋಗುತ್ತೇವೆ,” ಎನ್ನುತ್ತಾರೆ ಭಟ್ಕಳದಲ್ಲಿ ಚಿಕ್ಕದೊಂದು ಉದ್ಯಮ ನಡೆಸುತ್ತಿರುವ ಯುವಕರೊಬ್ಬರು.

ಗುರುವಾರ ಸಂಜೆ ವೇಳೆಗೆ, ಮಂಜಯ್ಯ ನಾಯ್ಕ್ ಕಡೆಯಿಂದ ವಶಕ್ಕೆ ಪಡೆದ ಕರು ಠಾಣೆಯ ಆವರಣದಲ್ಲಿಯೇ ಹುಲ್ಲು ತಿನ್ನುತ್ತಿದೆ. ಕಾನೂನಿನ ಪ್ರಕಾರ ಅದನ್ನು ಅದರ ಮಾಲೀಕರಾದ ಮುಸ್ಲಿಂ ಕುಟುಂಬಕ್ಕೆ ಹಸ್ತಾಂರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

bhatkal-cow-2

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top