An unconventional News Portal.

ರಾಜಭವನವನ್ನೇ ನಡುಗಿಸಿದ ಬಿಎಂಟಿಸಿ ಕಂಡಕ್ಟರ್: ಹೀಗೊಬ್ಬ ಮಾದರಿ ‘ಮಾಹಿತಿ ಹಕ್ಕು’ ಕಾರ್ಯಕರ್ತ

ರಾಜಭವನವನ್ನೇ ನಡುಗಿಸಿದ ಬಿಎಂಟಿಸಿ ಕಂಡಕ್ಟರ್: ಹೀಗೊಬ್ಬ ಮಾದರಿ ‘ಮಾಹಿತಿ ಹಕ್ಕು’ ಕಾರ್ಯಕರ್ತ

ಇವತ್ತು ಮಾಹಿತಿ ಹಕ್ಕು ಕಾಯ್ದೆ ಎಂಬುದು ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದೆ; ಅಷ್ಟೇ ಪ್ರಮಾಣದಲ್ಲಿ ದುರುಪಯೋಗವೂ ಆಗುತ್ತಿದೆ. ಇಂತಹ ಸಮಯದಲ್ಲಿಯೇ ಇಲ್ಲೊಬ್ಬರು ಇದೇ ಕಾಯ್ದೆಯನ್ನು ತಾವು ಪಾಲಿಸಿಕೊಂಡು ಬಂದ ಪ್ರಾಮಾಣಿಕತೆಯ ಅಭಿವ್ಯಕ್ತಿಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಬಿಎಂಟಿಸಿ ನಿರ್ವಾಹಕರೊಬ್ಬರ ಕತೆ. ಇದು ಗಡಿನಾಡು ಜಿಲ್ಲೆಯೊಂದರ ಬಡ ಕುಟುಂಬದಲ್ಲಿ ಹುಟ್ಟಿ, ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡವರು, ಮಾಹಿತಿ ಹಕ್ಕು ಕಾಯ್ದೆಯನ್ನು ತಮ್ಮ ಉದ್ಯೋಗದ ಜತೆಗೇ ಹೇಗೆ ಪ್ರಬಲವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾಗಿರುವ ಕಥನ.

ಹೆಸರು ಎನ್. ಶ್ರೀನಿವಾಸ್. ಕಳೆದ ಮೂರು ವರ್ಷಗಳಿಂದ ಅವರು ಮಾಹಿತಿ ಹಕ್ಕು ಆಯೋಗದಲ್ಲಿ ಕರ್ನಾಟಕದ ರಾಜಭವನದ ದಾಖಲೆಗಳಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವಧಿಯಲ್ಲಿ ಅವರು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಹಾಗೂ ರಾಷ್ಟ್ರಪತಿಗಳಿಗೆ ಬರೆದ ಅಷ್ಟೂ ಪತ್ರಗಳ ಪ್ರತಿಯನ್ನು ನೀಡಿ ಎಂದು ಅವರು ಅರ್ಜಿಯೊಂದನ್ನು ಹಾಕಿದ್ದರು. ಆದರೆ, ರಾಜಭವನ ಅವರು ಕೇಳಿದ ಮಾಹಿತಿ ನೀಡಲು ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಅವರು ಮಾಹಿತಿ ಹಕ್ಕು ಆಯೋಗದ ಮೊರೆ ಹೋಗಿದ್ದಾರೆ. ಅಲ್ಲಿ ವಿಚಾರಣೆ ನಡೆಯುತ್ತಿದೆ. ರಾಜಭವನದ ಅಧಿಕಾರಿಗಳು ಬಂದು ಸಮಜಾಯಿಷಿ ನೀಡಿ ಹೋಗುತ್ತಿದ್ದಾರೆ.

ಕರ್ನಾಟಕ ರಾಜಭವನ ಅಧಿಕಾರಿಗಳ ವಿರುದ್ಧ ಶ್ರೀನಿವಾಸ್ ಪರವಾಗಿ ಆದೇಶ ನೀಡಿದ ಮಾಹಿತಿ ಹಕ್ಕು ಆಯೋಗದ ಪ್ರತಿ.

ಕರ್ನಾಟಕ ರಾಜಭವನ ಅಧಿಕಾರಿಗಳ ವಿರುದ್ಧ ಶ್ರೀನಿವಾಸ್ ಪರವಾಗಿ ಆದೇಶ ನೀಡಿದ ಮಾಹಿತಿ ಹಕ್ಕು ಆಯೋಗದ ಪ್ರತಿ.

“ಇದೂ ಸೇರಿದಂತೆ ಈವರೆಗೆ ನಾನು ಸುಮಾರು 500 ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿರಬಹುದು. ಇವುಗಳಿಂದ ನಾನು ಕೆಲಸ ಮಾಡುತ್ತಿರು ಬಿಎಂಟಿಸಿ ಸಂಸ್ಥೆ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಿದೆ,” ಎನ್ನುತ್ತಾರೆ ಶ್ರೀನಿವಾಸ್. ಹೀಗೆ, ಮಾಹಿತಿ ಹಕ್ಕು ಕಾಯ್ದೆಯನ್ನು ಅಸ್ತ್ರವಾಗಿ ಅವರು ಬಳಸಿಕೊಂಡು ಬರುತ್ತಿರುವ ಹಿಂದೆ ಅವರ ಹಿನ್ನೆಲೆಯ ಪ್ರೇರಣೆಯೂ ಇದೆ.

ಶ್ರೀನಿವಾಸ್ ಹುಟ್ಟಿದ್ದು 1972ರಲ್ಲಿ, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೀರಹನುಮಕ್ಕನ ಪಾಳ್ಯದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಮನೆಯಲ್ಲಿ ಬಡತನವಿದ್ದ ಹಿನ್ನೆಲೆಯಲ್ಲಿ, ಪಕ್ಕದೂರಿನ ಸೊಸೈಟಿಯೊಂದರಲ್ಲಿ ಅರೆಕಾಲಿಕ ಉದ್ಯೋಗಕ್ಕೆ ಸೇರಿಸಿಕೊಂಡರು. ಮಂಗಳವಾಡದಲ್ಲಿದ್ದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕೆಲಸ, ಎದುರಿಗಿದ್ದ ಶಾಲೆಯಲ್ಲಿ ಕಲಿಕೆ. “ಈ ಸಮಯದಲ್ಲಿ ಸೊಸೈಟಿಯ ಅಧ್ಯಕ್ಷರಾಗಿದ್ದ ಚಿಕ್ಕನಾಗಪ್ಪ, ಕಾರ್ಯದರ್ಶಿ ವೆಂಕಟರಮಣಪ್ಪ ಮತ್ತು ಮಾರುಕಟ್ಟೆ ನೋಡಿಕೊಳ್ಳುತ್ತಿದ್ದ ಹನುಮಂತರಾಯಪ್ಪನವರು ನನಗೆ ಪ್ರಮಾಣಿಕತೆಯ ಪಾಠ ಹೇಳಿಕೊಟ್ಟರು,” ಎಂದು ನೆನಪಿಸಿಕೊಳ್ಳುತ್ತಾರೆ ಶ್ರೀನಿವಾಸ್.

10ನೇ ತರಗತಿ ಮುಗಿಸಿದ ನಂತರ ಮುಂದೆ ಓದಿಸಲು ಸಾಧ್ಯವಾಗದ ಕಾರಣ, 1988ರಲ್ಲಿ ಬೆಂಗಳೂರಿನ ಅತ್ತೆಯ ಮನೆಗೆ ಬಂದರು. ಜಯನಗರದ ಆ ಪುಟ್ಟ ಮನೆಯಲ್ಲಿ ಇರಲು ಸಾಧ್ಯವಾಗದೇ ಬೇರೆಡೆ ಸ್ಥಳಾಂತರಗೊಂಡರು. ಮಲ್ಲೇಶ್ವರಂನ ಜೆರಾಕ್ಸ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಅದರ ಜತೆಗೆ ಮಲ್ಲೇಶ್ವರಂನಲ್ಲಿಯೇ ಪಿಯುಸಿ ಸೇರಿಕೊಂಡರಾದರೂ, ಓದು ಮುಂದುವರಿಸಲು ಬಡತನ ಬಿಡಲಿಲ್ಲ. ಜೆರಾಜ್ಸ್ ಅಂಗಡಿಯಲ್ಲಿ ಟೈಪಿಂಗ್ ಮಷೀನ್ಗಳಿದ್ದವು. ಬಳಸಿ ಎಸೆದ ಕಾಗದಗಳನ್ನು ಬಳಸಿಕೊಂಡು ಟೈಪಿಂಗ್ ಕಲಿಯಲು ಶುರುಮಾಡಿದರು. ಇದನ್ನು ನೋಡಿದ ಮಾಲೀಕರು ಅವರನ್ನು ಟೈಪಿಂಗ್ ಇನ್ಸ್ಸ್ಟಿಟ್ಯೂಟ್ ಒಂದಕ್ಕೆ ಸೇರಿಸಿದರು. “ಈ ಸಮಯದಲ್ಲಿ ಬೆಳಗ್ಗೆ 5 ಗಂಟೆಗೆ ಎದ್ದು ಟೈಪಿಂಗ್ ಇನ್ಸ್ಸ್ಟಿಟ್ಯೂಟ್ಗೆ ಹೋಗುತ್ತಿದ್ದೆ. ಅಲ್ಲಿ ಮಷೀನ್ಗಳನ್ನು ಒರೆಸಿ, ಕಸ ಹೊಡೆಯುತ್ತಿದ್ದೆ. ಹೀಗಾಗಿ ನನ್ನ ಹತ್ತಿರ ಫೀಸ್ ತೆಗೆದುಕೊಳ್ಳಲಿಲ್ಲ. ಟೈಪಿಂಗ್ ಜ್ಯೂನಿಯರ್, ಸೀನಿಯರ್ ಕೋರ್ಸ್ ಮುಗಿಸಿದೆ,” ಎಂದು ಹಳೆಯ ಕಷ್ಟದ ದಿನಗಳನ್ನು ಮುಂದಿಡುತ್ತಾರೆ ಶ್ರೀನಿವಾಸ್.

ಬಿಎಂಟಿಸಿಗೆ:

ಜೆರಾಕ್ಸ್ ಅಂಗಡಿಯಲ್ಲಿ ಎನ್. ಶ್ರೀನಿವಾಸ್.

ಜೆರಾಕ್ಸ್ ಅಂಗಡಿಯಲ್ಲಿ ಎನ್. ಶ್ರೀನಿವಾಸ್.

ಶ್ರೀನಿವಾಸ್ ಟೈಪಿಂಗ್ ಕಲಿಯುತ್ತಿದ್ದ ಹೊತ್ತಿಗೇ ಸ್ನೇಹಿತರೊಬ್ಬರ ಸಹಾಯದಿಂದ ಕಂಡಕ್ಟರ್ ಲೈಸೆನ್ಸ್ ಮಾಡಿಸಿಕೊಂಡರು. ನಂತರ ಬಿಟಿಎಸ್ ಸೇರಿದರು. “1993ರಲ್ಲಿ ನಾನು ಬಿಟಿಎಸ್ ಸೇರಿದ್ದು. ಅವತ್ತು ಬಿಎಂಟಿಸಿಯನ್ನು ಬಿಟಿಎಸ್ ಎಂದು ಕರೆಯುತ್ತಿದ್ದರು. ಈ ಸಮಯದಲ್ಲಿ ನಮಗೆ ತರಬೇತಿ ನೀಡಿದ ಕೇಂದ್ರದ ಪ್ರಾಂಶುಪಾಲರಾಗಿ ಆಲೂರು ಗೋಪಿನಾಥ್ ಎಂಬುವವರು ಇದ್ದರು. ಅವರು ಬಿಟಿಎಸ್ ಅನ್ನು ಕಾಮದೇನುಗೆ ಹೋಲಿಸುತ್ತಿದ್ದರು. ಅದು ಹಾಲು ನೀಡುವ ಹಸು, ಅದರ ಕೆಚ್ಚಲಿಗೆ ಬಾಯಿ ಹಾಕುವ ಕೆಲಸ ಮಾಡಬೇಡಿ. ಜತೆಗೆ, ಅದನ್ನು ದುರುಪಯೋಗ ಮಾಡಿಕೊಳ್ಳಲು ಬಿಡಬೇಡಿ. ನೀವು ಜಾಗೃತರಾಗಿ ಎನ್ನುತ್ತಿದ್ದರು. ಅವರ ಮಾತುಗಳು ನನ್ನ ಮೇಲೆ ಪರಿಣಾಮ ಬೀರಿದವು,” ಎನ್ನುತ್ತಾರೆ ಶ್ರೀನಿವಾಸ್.

ಮೊದಲ ಬಾರಿಗೆ ಅವರು ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದ್ದು ಕೂಡ ತಮ್ಮ ಸಂಸ್ಥೆಯೊಳಗೆ. ಶ್ರೀನಿವಾಸ್ ಅವರನ್ನು ಹದಿಮೂರುವರೆ ರೂಪಾಯಿಗಳಿಗೆ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಡಿಸ್ಮಿಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಲು ಅವರು ಮಾಹಿತಿ ಹಕ್ಕು ಕಾಯ್ದೆ ಮೂಲಕ ಒಂದಷ್ಟು ಮಾಹಿತಿ ಪಡೆದುಕೊಂಡರು. ಹೀಗೆ ವೈಯಕ್ತಿಕ ಮಟ್ಟದಲ್ಲಿ ಆರಂಭವಾದ ಅವರ ಮಾಹಿತಿ ಹಕ್ಕು ಹೋರಾಟ ನಂತರದ ದಿನಗಳಲ್ಲಿ ಸಾಮಾಜಿಕ ವಿಸ್ತಾರತೆ ಪಡೆದುಕೊಂಡಿತು. “ನನಗೆ ಟೈಪಿಂಗ್ ಗೊತ್ತಿತ್ತು. ಅರ್ಜಿಗಳನ್ನು ಹಾಕುತ್ತಿದ್ದೆ. ಪತ್ರಿಕೆಗಳ ‘ವಾಚಕರ ವಾಣಿ’ಗೆ ಪತ್ರ ಬರೆಯುತ್ತಿದ್ದೆ. ಅದೇ ರೀತಿ ಮಾಹಿತಿ ಹಕ್ಕು ಕಾಯ್ದೆಯ ಬಳಕೆಯನ್ನೂ ರೂಢಿಸಿಕೊಂಡೆ. ಇದರಿಂದ ಉಪಯೋಗ ಇದೆ ಎಂಬುದು ಅರ್ಥವಾಗಿತ್ತು. ಅಧಿಕಾರಿಗಳ ಕಿರುಕುಳವೂ ಶುರುವಾಯಿತು. ಅದು ಹೆಚ್ಚಾದಂತೆ ನಾನೂ ನನ್ನ ಹೋರಾಟವನ್ನು ತೀವ್ರಗೊಳಿಸಿದೆ,” ಎನ್ನುತ್ತಾರೆ ಅವರು.

ಹೀಗೆ, ಕಳೆದ ಒಂದು ದಶಕದ ಅಂತರದಲ್ಲಿ ಶ್ರೀನಿವಾಸ್ ನೂರಾರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇವು ಕರ್ನಾಟಕದ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳಲ್ಲಿಯೂ ಪ್ರಸಾರ ಆಗಿವೆ. ಸಂಸ್ಥೆಯೊಳಗೆ ಸಾಕಷ್ಟು ಬದಲಾವಣೆಗಳು ಬಂದಿವೆ. ಬಿಎಂಟಿಸಿಯ ಮಾಫಿಯಾಗಳನ್ನು ಬಯಲಿಗೆಳೆದಿದ್ದಾರೆ. ವಾಣಿಜ್ಯ ಸಂಕೀರ್ಣಗಳ ಬಾಕಿ ಉಳಿಸಿಕೊಂಡ ಬಾಡಿಗೆದಾರರ ಮಾಹಿತಿ ಹೊರಹಾಕಿದ್ದರು. ಮ್ಯಾಕ್ಸಿ ಕ್ಯಾಬ್ಗಳಿಂದಾಗಿ ಸಂಸ್ಥೆಗೆ ನಷ್ಟವಾಗುತ್ತಿರುವ ಬಗ್ಗೆ ಗಮನ ಸೆಳೆದರು. ಬಿಎಂಟಿಸಿ ಬಸ್ಗಳಲ್ಲಿ ಬ್ಯಾಟೆರಿಗಳು ಕೈಕೊಟ್ಟ ಮಾಹಿತಿಯನ್ನು ಹೊರಗೆ ತಂದವರು ಶ್ರೀನಿವಾಸ್. ಈ ಕಾರಣಕ್ಕೆ ಅವರನ್ನು ಜಿಗಣಿ ಡಿಪೋಗೆ ಎತ್ತಂಗಡಿಯನ್ನೂ ಮಾಡಲಾಗಿತ್ತು. “ನಾನು ನೀಡಿದ ಮಾಹಿತಿ ಟಿವಿಯಲ್ಲಿ ಬಂತು. ನನಗೆ ಶಿಕ್ಷೆ ರೂಪದಲ್ಲಿ ಜಿಗಣಿಗೆ ಎತ್ತಾಕಿದರು. ಆದರೆ, ಬಾಬುರಾವ್ ಎಂಬ ಅಧಿಕಾರಿ ನನ್ನ ಕತೆಯನ್ನು ಕೇಳಿ, ನಿಮ್ಮಂತವರು ಸಂಸ್ಥೆಗೆ ಬೇಕು ಎಂದು ಡಿಪೋ 22ಕ್ಕೆ ವಾಪಾಸ್ ಕರೆಸಿಕೊಂಡರು,” ಎನ್ನುತ್ತಾರೆ ಶ್ರೀನಿವಾಸ್. ಕಳೆದ 4 ವರ್ಷಗಳಿಂದ ಇಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ.

ಇವತ್ತಿಗೂ ಬೆಳಗ್ಗೆ ಎದ್ದು ಬಿಎಂಟಿಸಿ ಬಸ್ ಹತ್ತುತ್ತಾರೆ ಶ್ರೀನಿವಾಸ್. ಜನರಿಗೆ ಟಿಕೆಟ್ ಕೊಡುವ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ. ಸಂಜೆ ಅರೆಕಾಲಿಕ ಕೆಲಸವಾಗಿ ಜೆರಾಕ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾರೆ. ವಾರದ ರಜಾ ದಿನಗಳಲ್ಲಿ ಮಾಹಿತಿ ಆಯೋಗದ ವಿಚಾರಣೆಗಳಿಗೆ ಹಾಜರಾಗುತ್ತಾರೆ. ರಾಜಭವನದ ಅಧಿಕಾರಿಗಳ ವಿರುದ್ಧ ತಮ್ಮ ವಾದಗಳನ್ನು ಮಂಡಿಸುತ್ತಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಅವರ ಬದುಕಿನಲ್ಲಿ ಅಂತಹ ವ್ಯತ್ಯಾಸಗಳೇನೂ ಆಗಿಲ್ಲ. ಅದೇ ಪುಟ್ಟ ಮನೆ, ನಿಯತ್ತಿನಿಂದ ಕೂಡ ಸರಳ ಜೀವನವನ್ನು ಅವರು ನಡೆಸಿಕೊಂಡು ಬರುತ್ತಿದ್ದಾರೆ.

ಜನರಿಗೆ ಅನುಕೂಕವಾಗಲು ರೂಪಿಸಿದ ಕಾಯ್ದೆ ಕಾನೂನುಗಳು ದುರುಪಯೋಗದ ಪರಮಾವಧಿ ತಲುಪಿರುವ ಈ ದಿನಗಳಲ್ಲಿ ಅಪರೂಪದ ಮಾದರಿಯಂತೆ ಶ್ರೀನಿವಾಸ್ ಕಾಣಿಸುತ್ತಿದ್ದಾರೆ.

Leave a comment

Top