An unconventional News Portal.

‘ಬಿಳಿ ಕಾಗೆ’ ನೆಪದಲ್ಲಿ ಭಯಾನಕ ಭವಿಷ್ಯ ಮತ್ತು ಜನರಲ್ಲಿ ಭಯ ಹುಟ್ಟುಹಾಕಿದ ಸ್ವಾಮಿ!

‘ಬಿಳಿ ಕಾಗೆ’ ನೆಪದಲ್ಲಿ ಭಯಾನಕ ಭವಿಷ್ಯ ಮತ್ತು ಜನರಲ್ಲಿ ಭಯ ಹುಟ್ಟುಹಾಕಿದ ಸ್ವಾಮಿ!

‘ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಸ್ಫೋಟಕ ಸುದ್ದಿ. ರಾಜ್ಯದ ಭವಿಷ್ಯ ನುಡಿದ ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ. ಕಳೆದ ಜುಲೈ 4 ರಂದು ಶ್ರೀರಂಗಪಟ್ಟಣದ, ಕಾವೇರಿ ಪುಣ್ಯ ಕ್ಷೇತ್ರದಲ್ಲಿ ಚಂದ್ರಶೇಖರ್ ಸ್ವಾಮೀಜಿಗೆ ಬಿಳಿಕಾಗೆ ದರ್ಶನ. 5 ದಿನಗಳ ಹಿಂದಷ್ಟೇ ತಮಿಳುನಾಡಿನ ಕೊಯಮತ್ತೂರಲ್ಲಿ ಕಾಣಿಸಿಕೊಂಡಿದ್ದ ಬಿಳಿ ಕಾಗೆ…’.

ತಪ್ಪಾಗಿ ಭಾವಿಸಬೇಡಿ; ಮೇಲಿನ 34 ಪದಗಳು ನಮ್ಮವಲ್ಲ. ಮಂಗಳವಾರ ಮಧ್ಯಾಹ್ನದ ವೇಳೆಗೆ ಭಿತ್ತರಗೊಂಡ ಭಯಾನಕ, ಸ್ಫೋಟಕ, ‘ಬೆಚ್ಚಿ ಬೀಳುಸುವಂತಹ’ ಸುದ್ದಿಯೊಂದಕ್ಕೆ ‘ಬಿಟಿವಿ’ ಸುದ್ದಿ ವಾಹಿನಿ ನೀಡಿದ ಟಿಪ್ಪಣಿಯಲ್ಲಿನ ಪದಗಳು ಇವು.

btv-white-crow-1

ಇದನ್ನು ನೋಡುತ್ತಿದ್ದಂತೆ ಜನ ಯಾವ ಒರಿ ಬೆಚ್ಚಿ ಬಿದ್ದರು ಎಂದರೆ, ಈ ಪೋಸ್ಟಿಗೆ ಬಿದ್ದ ಈ ಕಾಮೆಂಟೊಂದು ಸಾಕ್ಷಿ.

btv-white-crow-2

ಇಷ್ಟಕ್ಕೂ ನಡೆದಿದ್ದು ಏನು ಎಂದರೆ, ದಕ್ಷಿಣ ಕನ್ನಡ ಮೂಲದ, ಅಂತರಾಷ್ಟ್ರೀಯ ಖ್ಯಾತ ಜ್ಯೋತಿಷಿ ಎಂದು ಬಿರುದು ಬಾವಲಿಗಳನ್ನು ತಗುಲಿ ಹಾಕಿಕೊಂಡಿರುವ ಚಂದ್ರಶೇಖರ್ ಸ್ವಾಮಿಗೆ ಕಾವೇರಿ ನದಿ ದಡದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಬಿಳಿ ಕಾಗೆಯೊಂದರ ದರ್ಶನವಾಗಿತ್ತಂತೆ. ಈ ಕುರಿತು ಬಿಟಿವಿಗೆ ಮಾತ್ರವೇ ಮಾಹಿತಿ ನೀಡಿದ (ಎಕ್ಸ್ಕ್ಲೂಸಿವ್ ಎಂದುಕೊಳ್ಳಬಹುದು) ಸ್ವಾಮಿ, ರಾಜ್ಯಕ್ಕೆ ಬಂದೆರಗಲಿರುವ ಮಹಾ ಆಪತ್ತು ಎಂದು ಅವಲತ್ತುಕೊಂಡರು. ಬಿಟಿವಿ ಜತೆ ಮಾತನಾಡಿದ ಅವರು, “ಬಿಳಿ ಕಾಗೆ ಅಪರೂಪದಲ್ಲಿ ಅಪರೂಪ. ಅದು ಕಾಣಿಸಿಕೊಂಡಿದೆ ಎಂದರೆ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ. ನೈಸರ್ಗಿಕ ವಿಕೋಪಗಳ ಜತೆಗೆ ದರೋಡೆಗಳು ಹೆಚ್ಚುತ್ತವೆ. ಇದರಿಂದಾಗಿ, ರಾಜ್ಯದ ಚುಕ್ಕಾಣಿ ಹಿಡಿದವರು ತಿರುಪತಿಯ ದರ್ಶನ ಮಾಡಬೇಕು,” ಎಂದು ಭವಿಷ್ಯ ನುಡಿಯುತ್ತಾರೆ. ಅದರ ಜತೆಗೆ, “2013ರಲ್ಲಿ ಇದೇ ರೀತಿಯಲ್ಲಿ ಬಿಳಿ ಕಾಗೆಯೊಂದು ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಏನೇನು ನಡೆಯಿತು ಎಂಬುದು ನಿಮಗೆಲ್ಲಾ ಗೊತ್ತಿದೆ,” ಎಂದು ತಿಳಿಸುತ್ತಾರೆ.

2013ರಲ್ಲಿ ಏನು ನಡೆಯಿತು ಎಂದು ಹುಡುಕಿಕೊಂಡು ಹೊರಟರೆ, ಚಂದ್ರಶೇಖರ್ ಸ್ವಾಮಿ ಬದುಕಿನಲ್ಲಿ ನಡೆದ ‘ವಿಪತ್ತೊಂದ’ರ ಮಾಹಿತಿ ಸಿಗುತ್ತದೆ. ಆ ವರ್ಷದ ಆರಂಭದಲ್ಲಿ ಸ್ವಾಮಿಯ ಬೆಂಗಳೂರು ಮನೆಯ ಮೇಲೆ ಐಟಿ ದಾಳಿ ನಡೆದಿತ್ತು (ಈ ಕುರಿತು ‘ಡೈಜಿ ವರ್ಲ್ಡ್’ ವೆಬ್ ಪೋರ್ಟಲ್ ಪ್ರಕಟಿಸಿದ್ದ ವರದಿ ಇಲ್ಲಿದೆ ನೋಡಿ).  ಸದ್ಯ ಈ ವಿಚಾರವನ್ನು ಪಕ್ಕಕ್ಕಿಟ್ಟು 2016ರ ಆಗಸ್ಟ್ 30ನೇ ತಾರೀಖಿಗೆ ವಾಪಸ್ ಬರೋದಾದ್ರೆ, ಚಂದ್ರಶೇಖರ್ ಸ್ವಾಮಿ, ನೀಡಿದ ಮಾಹಿತಿಯನ್ನು ಹೊಣೆಗಾರಿಕೆ ಹೊಂದಿರುವ ವಾಹಿನಿಯು ಭಿತ್ತರಿಸುತ್ತದೆ. ಜತೆಗೆ, ಬಿಳಿಕಾಗೆಗೆ ಇನ್ನೊಂದಿಷ್ಟು ರೆಕ್ಕೆ ಪುಕ್ಕ ಸೇರಿಸುತ್ತದೆ. ‘ಕಾವೇರಿ ತೀರದಲ್ಲಿ ಚಂದ್ರಶೇಖರ ಸ್ವಾಮೀಜಿಗೆ ಕಾಣಿಸ್ತು ಬಿಳಿ ಕಾಗೆ, ರಾಜ್ಯಕ್ಕೆ ಬಂದೆರಗುತ್ತಂತೆ ನೀವು ಊಹಿಸಲಾಗದ ಮಹಾ ಆಪತ್ತು!. ಭವಿಷ್ಯದಲ್ಲಿ ರಾಜಕೀಯ ಪಕ್ಷಗಳಿಗೂ ಕಾದಿದ್ಯಾ ಬಹುದೊಡ್ಡ ಗಂಡಾಂತರ?’ ಅಂತ ವಾಹಿನಿ ಪ್ರೋಮೊದಲ್ಲಿ ಬರೆದುಕೊಳ್ಳುತ್ತದೆ. ಕಾರ್ಯಕ್ರಮದ ಹೆಸರನ್ನು ಬಿಳಿ ಕಾಗೆ ‘ಭವಿಷ್ಯ’! ಎಂದು ಇಡುವ ವಾಹಿನಿ, ರಾಜ್ಯದ ಮೇಲೆ ಕಾಕ ದೃಷ್ಟಿ ಎಂಬ ಟ್ಯಾಗ್ ಲೈನ್ ಬೇರೆ ಕೊಡುತ್ತದೆ.

ಇದು ಅರ್ಧಗಂಟೆಯ ಪ್ರಾಯೋಜಿತ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಪ್ರಸಾರವಾಗಿದ್ದಿದ್ದರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಬದಲಿಗೆ, ವಾಹಿನಿ ಇದನ್ನೊಂದು ಸ್ಫೋಟಕ ವರದಿ ಎಂಬಂತೆ ಬಿಂಬಿಸುತ್ತದೆ. ಇಷ್ಟಕ್ಕೂ ಬಿಳಿ ಕಾಗೆಗಳು ಕಾಣಿಸುವುದು ಅಪರೂಪನಾ? ಬಿಳಿ ಕಾಗೆಗಳ ಕುರಿತು ಬಂದಿರುವ ವರದಿಗಳು ಏನು ಹೇಳುತ್ತವೆ?.

“ಬಿಳಿ ಕಾಗೆ ಮಾತ್ರವಲ್ಲ, ಬಿಳಿ ಹುಲಿ, ಬಿಳಿ ಇಲಿ, ಬಿಳಿ ಜಿರಲೆಗಳೂ ಇವೆ. ವಂಶವಾಹಿನಿಯನ್ನು ದಾಟಿಸುವ ಡಿಎನ್ಎಯಲ್ಲಿ ಹೆಚ್ಚು ಕಡಿಮೆಯಾದ ಹಿನ್ನೆಲೆಯಲ್ಲಿ ಬಿಳಿ ಬಣ್ಣದ ಕಾಗೆಗಳು ಹುಟ್ಟುತ್ತವೆ. ಅದರಲ್ಲಿ ಅಂತಹ ವಿಶೇಷವೇನಿಲ್ಲ,” ಎನ್ನುತ್ತಾರೆ ಬರ್ಡ್ ವಾಚರ್ಸ್ ಫೀಲ್ಡ್‌ ಕ್ಲಬ್ ಬೆಂಗಳೂರಿನ ಹರೀಶ್ ಕುಮಾರ್. 1970ರಲ್ಲಿ ಸ್ಥಾಪನೆಗೊಂಡ ಹವ್ಯಾಸಿ ಪಕ್ಷಿ ವೀಕ್ಷಕರ ಕ್ಲಬ್ ಬೆಂಗಳೂರಿನ ಸುತ್ತಮುತ್ತ ಹಕ್ಕಿಗಳನ್ನು ಗಣತಿ ಮಾಡಿಕೊಂಡು ಬರುತ್ತಿದೆ. “ನಾಲ್ಕು ವರ್ಷಗಳ ಹಿಂದೆ ಯಲಹಂಕದಿಂದ ಮುಂದಿರುವ ಮದಿರೆ ಕೆರೆ ಬಳಿ ಬಿಳಿ ಕಾಗೆಯೊಂದು ನಮ್ಮ ಕಣ್ಣಿಗೆ ಬಿದ್ದಿತ್ತು. ಅದನ್ನು ನೋಡಿದವರು ಸಾಕಷ್ಟು ಜನ ಇದ್ದಾರೆ,” ಎಂದವರು ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು.

ಇದರಿಂದ ಆಪತ್ತು ಏನಾದರೂ ಇದೆಯಾ ಎಂಬ ಪ್ರಶ್ನೆಗೆ, “ಎಂತಹ ಆಪತ್ತು ಇರಲು ಸಾಧ್ಯ ನೀವೇ ಹೇಳಿ. ಸಾಧ್ಯವಾದರೆ ಗೂಗಲ್ ಮಾಡಿ ನೋಡಿ. ಅದು ಕಾಮನ್ ಸೆನ್ಸ್ ವಿಚಾರ. ಬಿಳಿ ಕಾಗೆಗಳು ಜನೆಟಿಕ್ ಮ್ಯುಟೇಶನ್ ಪ್ರಕ್ರಿಯೆಯಲ್ಲಿ ಹೆಚ್ಚು ಕಡಿಮೆಯಾದ ಹಿನ್ನೆಲೆಯಲ್ಲಿ ಹುಟ್ಟುತ್ತವೆ. ಅವೂ ಎಲ್ಲಾ ಕಾಗೆಗಳಂತೆ ಬದುಕು ಸಾಯುತ್ತವೆ. ಅವುಗಳೇನು ವಿಶೇಷ ಪ್ರಬೇಧಗಳಲ್ಲ,” ಎನ್ನುತ್ತಾರೆ ಹರೀಶ್ ಕುಮಾರ್.

ಈ ಕುರಿತು ಇನ್ನಷ್ಟು ಮಾಹಿತಿ ಹುಡುಕಲು ಹೊರಟರೆ, ಹಿಂದೊಮ್ಮೆ ವ್ಯಾಂಕೋವರ್ನಲ್ಲಿ ವೈಟ್ ರೇವನ್ (ಬಿಳಿ ಕಾಗೆ ತರದ್ದು) ಕಾಣಿಸಿಕೊಂಡ ಬಗ್ಗೆ ಅಲ್ಲಿನ ವಾಹಿನಿಯೊಂದು ವರದಿ ಮಾಡಿದ್ದು ಕಣ್ಣಿಗೆ ಬೀಳುತ್ತದೆ.

ಈ ವರದಿಯಲ್ಲಿ ಗಮನಾರ್ಹ ಸಂಗತಿಯೊಂದನ್ನು ವಾಹಿನಿ ಪ್ರಸ್ತಾಪಿಸುತ್ತದೆ. ಹವ್ಯಾಸಿ ಛಾಯಾಗ್ರಾಹಕರೊಬ್ಬರು ಹೇಳುವ ಪ್ರಕಾರ, ಭಾರತದ ಮೈಥಾಲಜಿಯಲ್ಲಿ ಬಿಳಿ ಕಾಗೆಗಳಿಗೆ ವಿಶೇಷ ಸ್ಥಾನವಿದೆ. ಅವು ಕಾಣಿಸಿಕೊಂಡರೆ, ಜಗತ್ತಿಗೆ ಬೆಳಕು ತರುತ್ತವೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗುತ್ತದೆ. ಇಷ್ಟಕ್ಕೂ ಅಂತರಾಷ್ಟ್ರೀಯ ಖ್ಯಾತ ಜ್ಯೋತಿಷಿ ಎಂದು ಕರೆದುಕೊಳ್ಳುವ ಚಂದ್ರಶೇಖರ್ ಗುರೂಜಿ, ಅದ್ಯಾವ ಭಾರತದ ಮೈಥಾಲಜಿಯನ್ನು ಇಟ್ಟುಕೊಂಡು, ಬಿಳಿ ಕಾಗೆಗಳನ್ನು ಅನಿಷ್ಟ ಎನ್ನುತ್ತಿದ್ದಾರೆ ಎಂಬುದು ಗೊಂದಲ ಸೃಷ್ಟಿಸುತ್ತದೆ.

“ರಾಜ್ಯದಲ್ಲಿ ಮೂಢ ನಂಬಿಕೆ ನಿಷೇಧ ಕಾಯ್ದೆ ಇನ್ನೂ ಅನುಷ್ಠಾನಕ್ಕೆ ಬರಬೇಕಿದೆ. ಮೊದಲು ಇಂತಹ, ಜನರಲ್ಲಿ ಭಯ ಬೀಳಿಸುವ ಜ್ಯೋತಿಷಿಗಳ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು. ಬಿಟಿವಿಯ ವರದಿಯನ್ನು ಗಮನಿಸಿದ್ದೇವೆ. ಜನರಲ್ಲಿ ಭಯವನ್ನು ಹುಟ್ಟುಹಾಕುವ ಇಂತಹ ಸ್ವಾಮಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಕುರಿತು ಸಮಾಲೋಚನೆ ಮಾಡುತ್ತೇವೆ,” ಎನ್ನುತ್ತಾರೆ ಹೈ ಕೋರ್ಟ್ ವಕೀಲರೊಬ್ಬರು.

ಕಾಗೆ ಕೂರುವುದಕ್ಕೂ- ಕೊಂಬೆ ಮುರಿಯುವುದಕ್ಕೂ ಸರಿಯಾಯಿತು ಎಂಬ ಗಾದೆಯೊಂದು ನಮ್ಮಲ್ಲಿ ಪ್ರಚಲಿತದಲ್ಲಿದೆ. ಅದೇ ರೀತಿಯಲ್ಲಿ, ಟಿಆರ್ಪಿ ಬೀಳುವುದಕ್ಕೂ- ಬಿಳಿ ಕಾಗೆ ದರ್ಶನವಾಗುವುದಕ್ಕೂ ಸರಿಯಾಯಿತು ಎಂಬಂತಿದೆ ಬಿಟಿವಿಯ ಈ ವರದಿ.

ಭ್ರಷ್ಟಾಚಾರದಂತಹ ವಿಚಾರಗಳಲ್ಲಿ ಅಗ್ರೆಸಿವ್ ಆಗಿಯೇ ವರದಿಗಳನ್ನು ಪ್ರಸಾರ ಮಾಡುವ ಬಿಟಿವಿ, ಇಂತಹದೊಂದು ಸುದ್ದಿಯನ್ನು ಪ್ರಸಾರ ಮಾಡುವ ಮೊದಲು ಕನಿಷ್ಟ ಹೋಂ ವರ್ಕ್ ಮಾಡಿದ್ದರೆ, ಅದರ ಮೇಲಿಟ್ಟಿರುವ ಜನರ ಭರವಸೆಗೆ ಚ್ಯುತಿ ಬರುತ್ತಿರಲಿಲ್ಲ ಎಂಬುದು ಹಲವರ ಅಭಿಪ್ರಾಯ.

Top