An unconventional News Portal.

‘ಝಂಡಾ’ ಕೈಗೆತ್ತಿಕೊಂಡ ಬಿಎಸ್ವೈ: ಒಗ್ಗಟ್ಟಿನ ಮಂತ್ರಕ್ಕೆ ಸಾಕ್ಷಿಯಾದ ಅರಮನೆ ಮೈದಾನ

‘ಝಂಡಾ’ ಕೈಗೆತ್ತಿಕೊಂಡ ಬಿಎಸ್ವೈ: ಒಗ್ಗಟ್ಟಿನ ಮಂತ್ರಕ್ಕೆ ಸಾಕ್ಷಿಯಾದ ಅರಮನೆ ಮೈದಾನ

ರಾಜ್ಯ ಬಿಜೆಪಿಯ ಉನ್ನತ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇಮಕ ಪ್ರಕ್ರಿಯೆಗೆ ಗುರುವಾರ ಬೆಂಗಳೂರಿನ ಅರಮನೆ ಮೈದಾನ ಸಾಕ್ಷಿಯಾಯಿತು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೊದಲ ಬಾರಿಗೆ ಅಧಿಕಾರದ ಸವಿ ನೀಡಿದ್ದ ಕರ್ನಾಟಕದಲ್ಲಿ ಮತ್ತೆ ಕೇಸರಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಯಡಿಯೂರಪ್ಪ ಆದಿಯಾಗಿ ಪಕ್ಷದ ಹಿರಿಯ ನಾಯಕರು ಜನರ ಸಮ್ಮುಖದಲ್ಲಿ ಶಪಥ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ಕರತಾಡನ, ಘೋಷಣೆಗಳ ನಡುವೆ, ಯಡಿಯೂರಪ್ಪ ಪಕ್ಷದ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಇದನ್ನು ಅನುಮೋದಿಸುವಂತೆ, ಪಕ್ಷದ ಉಳಿದ ನಾಯಕರು ಭಾಷಣ ಮಾಡಿದರು.

ಕೇಂದ್ರ ಸಚಿವ ಅನಂತ್‍ಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನಿಕಟಪೂರ್ವ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಂದಿನ ಚುನಾವಣೆಯನ್ನು ಯಡಿಯೂರಪ್ಪ ನಾಯಕತ್ವದಲ್ಲಿ ಎದುರಿಸಲಾಗುವುದು ಎಂದರು. ಮಾಜಿ ಸಚಿವೆ ಶೋಭ ಕರಂದ್ಲಾಜೆ, ನಮ್ಮ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಈ ಸಮಯದಲ್ಲಿ ಘೋಷಿಸಿದರು.

ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಹಿರಂಗ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, “ಇನ್ನು ಮುಂದೆ ಏಕವ್ಯಕ್ತಿ ನಿರ್ಧಾರಕ್ಕೆ ತಿಲಾಂಜಲಿ ನೀಡುವುದಾಗಿ,” ಹೇಳಿದರು.

ಸಿದ್ದು ವಿರುದ್ಧ ಕಿಡಿ:

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ತಿಂಗಳೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸರಕಾರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರ ಹಗರಣಗಳನ್ನು ಒಂದೊಂದಾಗಿ ಬಯಲಿಗೆ ಎಳೆಯುತ್ತೇನೆ,” ಎಂದರು.  “ಸ್ವಜನ ಪಕ್ಷಪಾತದ ಮೂಲಕ ರಾಜ್ಯದ ಜನರಿಗೆ ವಿಶ್ವಾಸ ದ್ರೋಹ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಂದಿನ ಎರಡು ವರ್ಷಗಳ ಕಾಲ ನಿರಂತರ ಹೋರಾಟ ನಡೆಸುತ್ತೇನೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ,” ಎಂದರು.

ಅದಕ್ಕೆ ಬಿಜೆಪಿಯಲ್ಲಿ ಒಂದೇ ಒಂದು ಒಡಕಿನ ಮಾತು ಬಾರದಂತೆ ತಾವೂ ಸೇರಿದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂಬ ಎಚ್ಚರಿಕೆ ಮಾತುಗಳನ್ನೂ ಈ ಸಮಯದಲ್ಲಿ ಯಡಿಯೂರಪ್ಪ ಹೇಳಿದರು.

“ಡಾ.ಬಿ.ಆರ್.ಅಂಬೇಡ್ಕರ್ 125ನೇ ಜಯಂತಿಯನ್ನು ವರ್ಷಪೂರ್ತಿ ಆಚರಿಸುವ ಮೂಲಕ ಪಕ್ಷದ ಕಾರ್ಯಕರ್ತರು ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು. ರಾಜ್ಯದ ಪ್ರತಿ ದಲಿತ ಮೊಹಲ್ಲಾಗಳಿಗೆ ಸ್ವತಃ ಭೇಟಿ ನೀಡುತ್ತೇನೆ. ಪಕ್ಷದ ಮುಖಂಡರು, ಕಾರ್ಯಕರ್ತರು ಕೂಡ ಶೋಷಿತ ಸಮುದಾಯಗಳ ಭಾವನೆಗಳಿಗೆ ಸ್ಪಂದಿಸಬೇಕು,” ಎಂದರು.

ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಮಾತನಾಡಿ, “ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಪಕ್ಷದ ಹೊಣೆ ವಹಿಸಿಕೊಂಡಿದ್ದು, ಮೂರನೇ ಬಾರಿ ಮುಖ್ಯಮಂತ್ರಿಯಾಗಲಿದ್ದಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ,” ಎಂದರು.

ಬಹಿರಂಗ ಸಭೆಗೂ ಮುನ್ನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರಹ್ಲಾದ್ ಜೋಷಿ ಯಡಿಯೂರಪ್ಪ ಅವರಿಗೆ ಪಕ್ಷದ ಬಾವುಟವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

Top