An unconventional News Portal.

ಶೌಚಾಲಯದಲ್ಲಿ ಕುಕ್ಕರ್ ಬಾಂಬ್: ಸ್ಫೋಟದ ಹಿಂದಿದೆಯಾ ‘ರಾಷ್ಟ್ರೀಯ’ ಆಯಾಮ?

ಶೌಚಾಲಯದಲ್ಲಿ ಕುಕ್ಕರ್ ಬಾಂಬ್: ಸ್ಫೋಟದ ಹಿಂದಿದೆಯಾ ‘ರಾಷ್ಟ್ರೀಯ’ ಆಯಾಮ?

ಮೈಸೂರು ನ್ಯಾಯಾಲಯ ಆವರಣದ ಶೌಚಾಲಯದಲ್ಲಿ ನಡೆದ ಸ್ಪೋಟ ಇದೀಗ ರಾಷ್ಟ್ರೀಯ ಆಯಾಮ ಪಡೆದುಕೊಂಡಿದೆ. ಆದರೆ ಈವರೆಗೆ ಯಾವುದೇ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. ಘಟನೆಯಲ್ಲಿ ಪಳಗಿದ ಸಂಘಟನೆಗಳ ಕೈವಾಡ ಇರುವುದನ್ನು ತನಿಖಾಧಿಕಾರಿಗಳು ಅಲ್ಲಗಳೆದಿದ್ದಾರೆ.

ಮಂಗಳವಾರ ವಿವಿಧ ರಾಜ್ಯದ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ರಾಷ್ಟ್ರೀಯ ತನಿಖಾ ದಳವೂ ತನಿಖೆ ಬೆನ್ನಿಗೆ ಬಿದ್ದಿದ್ದು ಯಾರ ಕೃತ್ಯ ಎಂಬುದು ಮಾತ್ರ ಇಲ್ಲಿವರೆಗೆ ತಿಳಿದು ಬಂದಿಲ್ಲ. ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಕೋರ್ಟ್ ಆವರಣದಲ್ಲಿ ನಡೆಯುತ್ತಿರುವ ಸತತ ನಾಲ್ಕನೇ ಸ್ಫೋಟವಿದು.

ಮಂಗಳವಾರ ಪ್ರಮುಖವಾಗಿ ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪೊಲೀಸರು ಮೈಸೂರಿಗೆ ಬಂದು ಘಟನಾ ಸ್ಥಳ ಪರಿಶೀಲಿಸಿದರು. ಮುಖ್ಯವಾಗಿ ಕೇರಳ ಮತ್ತು ಆಂಧ್ರ ರಾಜ್ಯಗಳಲ್ಲೂ ಇದೇ ರೀತಿ ಕೋರ್ಟ್ ಆವರಣದಲ್ಲಿ ಸ್ಪೋಟವಾಗಿದ್ದು, ಮೈಸೂರು ಸ್ಪೋಟದ ಜೊತೆ ಸಂಬಂಧವಿದೆಯಾ ಎಂಬ ಅನುಮಾನದ ವಾಸನೆ ಹಿಡಿದು ಅವರು ಸಾಂಸ್ಕೃತಿಕ ನಗರಿವರೆಗೆ ಬಂದಿದ್ದರು.

ಕುಕ್ಕರ್ ಬಾಂಬಿನಲ್ಲಿ ಟೈಮರ್ ಬದಲಿಗೆ ಫ್ಯೂಸ್ ಬಳಸಲಾಗಿದೆ. ಇದೊಂದು ಫ್ಯೂಸ್ ಬಾಂಬ್ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ದೃಢಪಡಿಸಿದ್ದಾರೆ. ಫ್ಯೂಸ್ ಒಂದು ನಿಮಿಷ ಉರಿಯುತ್ತದೆ. ಈ ವೇಳೆ ಬಾಂಬ್ ಇಟ್ಟು ಪರಾರಿಯಾಗಿರಬಹುದು ಎಂದು ಅಂದಾಜಿಸಿದ್ದಾರೆ. 200-300 ರೂಪಾಯಿ ಖರ್ಚಿನಲ್ಲಿ ಈ ಬಾಂಬ್ ಸಿದ್ಧಪಡಿಸಲಾಗಿದ್ದು, ಸ್ಥಳೀಯರ ಕೃತ್ಯ ಇದಾಗಿರಬಹುದು ಎಂದು ಶಂಕಿಸಲಾಗಿದೆ.

ಜೂನ್ 25ರಂದು ಕೇರಳದ ಕೊಲ್ಲಂ ಜಿಲ್ಲಾ ನ್ಯಾಯಾಲಯ ಪಾರ್ಕಿಂಗ್ ಆವರಣದಲ್ಲಿ ಮೈಸೂರಿನ ರೀತಿಯದ್ದೇ ಕಡಿಮೆ ತೀವ್ರತೆಯ ಬಾಂಬ್ ಸ್ಪೋಟವಾಗಿತ್ತು. ಇದರಲ್ಲಿ ಒಬ್ಬರು ಗಾಯಗೊಂಡಿದ್ದರು. ಬಳಸದೆ ಬಹಳ ಸಮಯವಾಗಿದ್ದ ಜೀಪಿನ ಅಡಿಯಲ್ಲಿ ‘ಸ್ಟೀಲ್ ಪೈಪಿ’ನಲ್ಲಿ ಬಾಂಬ್ ಇಡಲಾಗಿತ್ತು. ಬೆಳಗ್ಗೆ 10.30ಕ್ಕೆ ಸಂಭವಿಸಿದ ಈ ಸ್ಪೋಟದಲ್ಲಿ ‘ಗನ್ ಪೌಡರ್’ ಬಳಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಸದ್ಯ ಮೈಸೂರಿನ ಸ್ಪೋಟದಲ್ಲೂ ‘ಗನ್ ಪೌಡರ್’ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 13ರಂದು ಬಿಹಾರದ ಸಾಸಾರಾಮ್ ಸಿವಿಲ್ ಕೋರ್ಟ್ ಆವರಣದ ಹೊರಗಡೆ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ಮಾರ್ಚ್ 11ರಂದು ಇದೇ ಕೋರ್ಟಿನಲ್ಲಿ ಬಾಂಬ್ ಸ್ಪೋಟವಾಗಿತ್ತು. ಜುಲೈ 13ರ ಸ್ಪೋಟಕ್ಕೆ ಬಾಂಬನ್ನು ಬೈಕಿನಲ್ಲಿ ಇಡಲಾಗಿತ್ತು.

ಏಪ್ರಿಲ್ 7ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲೂ ಸ್ಪೋಟ ನಡೆದಿತ್ತು. ಘಟನೆಯಲ್ಲಿ ಮೂರು ಜನ ಗಾಯಗೊಂಡಿದ್ದರು. ಪ್ರಮುಖ ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಕೋರ್ಟ್ಗೆ ಕರೆತರುವಾಗ ಈ ಸ್ಪೋಟ ನಡೆದಿತ್ತು. ಇದೇ ಸಂದರ್ಭ ಸ್ಥಳದಲ್ಲಿ ಮತ್ತೊಂದು ಬಾಂಬ್ ಕೂಡಾ ಪತ್ತೆಯಾಗಿತ್ತು.

ಇಲ್ಲಿರುವ ಸರಿ ಸುಮಾರು ಎಲ್ಲಾ ಪ್ರಕರಣಗಳು ಒಂದೇ ರೀತಿಯಾಗಿವೆ. ಎಲ್ಲವೂ ನ್ಯಾಯಾಲಯ ಆವರಣದ್ಲಲೇ, ಅದರಲ್ಲೂ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಯಲ್ಲೇ ನಡೆದಿವೆ. ಜನಜಂಗುಳಿಯ ಪ್ರದೇಶವನ್ನೆಲ್ಲಾ ಬಿಟ್ಟು ಕೇವಲ ಜನರಿಲ್ಲದ ಕೋರ್ಟ್ ಆವರಣದಲ್ಲಿ ಸ್ಪೋಟಿಸಲಾಗಿದೆ. ಎಲ್ಲವೂ ಕಡಿಮೆ ತೀವ್ರತೆಯ ಬಾಂಬುಗಳು ಎನ್ನುವುದು ಇನ್ನೊಂದು ವಿಶೇಷ. ಸದ್ಯ ಈ ಎಲ್ಲಾ ಬಾಂಬ್ ಸ್ಪೋಟಗಳಿಗೂ ಒಂದಕ್ಕೊಂದು ಸಂಬಂಧವಿದೆಯಾ ಎಂಬ ಅನುಮಾನಗಳು ರಾಷ್ಟ್ರೀಯ ತನಿಖಾ ದಳಕ್ಕೂ ಕಾಡುತ್ತಿದ್ದು, ಎನ್ಐಎ ತಂಡವೂ ಸೋಮವಾರ ರಾತ್ರಿಯೇ ಮೈಸೂರಿಗೆ ಹೊರಟು ಮಂಗಳವಾರ ತನಿಖೆ ಆರಂಭಿಸಿದೆ ಎನ್ನಲಾಗಿದೆ.

ಈ ಕುರಿತು ಎನ್ಐಎ ಬೆಂಗಳೂರು ಘಟಕದ ನಿವೃತ್ತ ಅಧಿಕಾರಿಯೊಬ್ಬರನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ಸ್ಥಳದಲ್ಲಿ ಇದ್ದವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ಅವರನ್ನೇ ಕೇಳುವುದು ಉತ್ತಮ,” ಎಂದರು. ಎನ್ಐಎ ತನಿಖೆ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು. ಎನ್ಐಎ ಹೈದ್ರಬಾದ್ ಕಚೇರಿಯಲ್ಲಿಯೂ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಎನ್ಐಎ ಹಿರಿಯ ಅಧಿಕಾರಿ ಪಸ್ವಾನಿ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಜೊತೆಗೆ ಮೈಸೂರಿನ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಯೂ ಸ್ಪೋಟ ಸಂಬಂಧ ಚರ್ಚೆ ನಡೆಸಿದೆ.

ಆಂತರಿಕ ಭದ್ರತೆ ವಿಭಾಗದ ಡಿಜಿಪಿ ನೀಲಮಣಿ ರಾಜು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚರ್ಚ್ ಸ್ಟ್ರೀಟ್ ಸ್ಪೋಟಕ್ಕಿಲ್ಲ ಸಂಬಂಧ, ಜೆಡಿಎಸ್ ಕಚೇರಿ ಸ್ಪೋಟಕ್ಕೆ ಸಾಮ್ಯತೆ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಮತ್ತು ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗ ನಡೆದ ಸ್ಪೋಟಕ್ಕೂ ಇದಕ್ಕೂ ಸಾಮ್ಯತೆಗಳು ಕಂಡು ಬಂದಿಲ್ಲ. ಎರಡೂ ಸ್ಪೋಟಗಳಲ್ಲಿ ಜಿಲೆಟಿನ್ ಕಡ್ಡಿ ಮತ್ತು ಅಮೋನಿಯಂ ನೈಟ್ರೇಟ್ ಹಾಗೂ ಇತರ ರಾಸಾಯನಿಕಗಳ ಬಳಕೆಯಾಗಿತ್ತು. ಆದರೆ ಇಲ್ಲಿ ಅದು ಯಾವುದೂ ಬಳಕೆಯಾಗಿಲ್ಲ.

ಆದರೆ 2005ರಲ್ಲಿ ಜೆಡಿಎಸ್ (ಈಗ ಕಾಂಗ್ರೆಸಿಗೆ ಸೇರಿದೆ) ಕಚೇರಿಯ ಶೌಚಾಲಯದಲ್ಲಿ ಮತ್ತು ಕಾಂಗ್ರೆಸ್ ಕಚೇರಿ ಮೆಟ್ಟಿಲಿನ ಕೆಳಗೆ ಇದೇ ರೀತಿಯ ಬಾಂಬ್ ಸ್ಪೋಟವಾಗಿತ್ತು. ಹೆಚ್ಚು ಜೀವ ಹಾನಿ ಮಾಡದ, ದೊಡ್ಡ ಶಬ್ದ ಉಂಟು ಮಾಡುವ ಬಾಂಬುಗಳನ್ನು ಅಲ್ಲೂ ಸ್ಪೋಟಿಸಲಾಗಿತ್ತು.

ಎಸಿಪಿ ನೇತೃತ್ವದಲ್ಲಿ ತನಿಖೆ

ಬಾಂಬ್ ಬ್ಲಾಸ್ಟ್ ಸಂಬಂಧ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಆರ್ ಉಪ ವಿಭಾಗದ ಎಸಿಪಿ ಸಿ. ಮಲ್ಲಿಕ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನ್ಯಾಯಾಲಯ ಆವರಣದಲ್ಲಿ ಸಿಸಿಟಿವಿ ಇರದೇ ಇರುವುದರಿಂದ ತನಿಖೆಗೆ ತೊಡಕಾಗಿ ಪರಿಣಮಿಸಿದೆ.

ಎನ್ಐಎ, ವಿವಿಧ ರಾಜ್ಯಗಳ ಪೊಲೀಸ್ ಇಲಾಖೆ ಸೇರಿದಂತೆ ರಾಜ್ಯದ ಪೊಲೀಸರು ಭಿನ್ನ ಆಯಾಮಗಳಲ್ಲಿ ಪ್ರಕರಣ ಭೇದಿಸಲು ಹೊರಟಿದ್ದಾರೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top