An unconventional News Portal.

‘ಬರೀ ಓಳು’: ದೇಶದ ಅಭಿವೃದ್ಧಿಗೆ ಬಿಜೆಪಿ ರಾಜ್ಯಗಳ ಮಾನದಂಡ; ಎಷ್ಟು ಸತ್ಯ? ಎಷ್ಟು ಸುಳ್ಳು?

‘ಬರೀ ಓಳು’: ದೇಶದ ಅಭಿವೃದ್ಧಿಗೆ ಬಿಜೆಪಿ ರಾಜ್ಯಗಳ ಮಾನದಂಡ; ಎಷ್ಟು ಸತ್ಯ? ಎಷ್ಟು ಸುಳ್ಳು?

ದೇಶದ ಅಭಿವೃದ್ಧಿ ವಿಚಾರ ಬಂದಾಗ ರಾಜ್ಯಗಳನ್ನೇ ಮಾನದಂಡವಾಗಿ ತೆಗೆದುಕೊಳ್ಳುವ ಪರಿಪಾಠ ಆರಂಭವಾಗಿದ್ದು 2000ನೇ ಇಸವಿಯ ಈಚೆಗೆ. ಅದಕ್ಕೆ ಕಾರಣ, ‘ಗುಜರಾತ್ ಅಭಿವೃದ್ಧಿ ಮಾದರಿ’. ಇವತ್ತು ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ, ಹೀಗೊಂದು ಮಾದರಿಯ ಮಾನದಂಡವನ್ನು ದೇಶಾದ್ಯಂತ ಹರಿಯ ಬಿಡಲಾಗಿತ್ತು.

ಕಳೆದ ಕೆಲವು ದಿನಗಳ ಅಂತರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು, ಎಡಪಕ್ಷಗಳನ್ನು ಟೀಕಿಸಲು ಅವು ಆಡಳಿತದಲ್ಲಿರುವ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಭಿವೃದ್ಧಿಯನ್ನು ವಿಮರ್ಶೆಗೆ ಒಳಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ಟೀಕೆಗಳ ಹಿಂದೆ ರಾಜಕೀಯ ಕಾರಣಗಳು ಏನೇ ಇರಬಹುದು, ಆದರೆ, ನಿಜಕ್ಕೂ ಕರ್ನಾಟಕ ಮತ್ತು ಕೇರಳ ಬಿಜೆಪಿ ಅಧಿಕಾರದಲ್ಲಿರುವ ಇತರೆ ರಾಜ್ಯಗಳಿಗೆ ಹೋಲಿಸಿದರೆ ಅಭಿವೃದ್ಧಿಯ ಮಾನದಂಡಗಳಲ್ಲಿ ಸಾಕಷ್ಟು ಮುಂದಿವೆ ಎನ್ನುತ್ತಿವೆ ಅಂಕಿ ಅಂಶಗಳು.

ಈ ಸದ್ಯ ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಬಿಜೆಪಿ ಸರ್ಕಾರಗಳ ಅಂಕಿ ಅಂಶಗಳನ್ನು ಗಮನಿಸಿದಾಗ ನಿಜಕ್ಕೂ ಅವು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಭಿವೃದ್ಧಿಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗೆ ಹೇಳುತ್ತಿರುವುದಕ್ಕೆ ಕಾರಣ, ಇತ್ತೀಚೆಗೆ ಬಿಜೆಪಿ ಸರ್ಕಾರದ ನಾಯಕರು ಮತ್ತು ಬಹುತೇಕ ವಕ್ತಾರರು ದಕ್ಷಿಣದ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮೇಲೆ ಅಕ್ರಮಣಕ್ಕಿಳಿದ್ದಿದ್ದಾರೆ. ರಾಜಕೀಯ ಕಾರಣಕ್ಕಾಗಿ ಮಾತ್ರವೇ ಬಿಜೆಪಿಯ ನಾಯಕರು ಹೀಗೆ ಹೇಳುತ್ತಿದ್ದಾರೆ ಎಂಬುದನ್ನು ಗುರುತಿಸಬಹುದಾದರೂ, ವಾಸ್ತವ ಅವರಿಗೆ ಪೂರಕವಾಗಿಲ್ಲ ಎಂಬುದು ಗಮನಾರ್ಹ. ಸದ್ಯ, ಕರ್ನಾಟಕ ಮತ್ತು ಕೇರಳದ ಅಭಿವೃದ್ಧಿ ಮಾನದಂಡಗಳ ಪ್ರಮಾಣವನ್ನು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೊಂದಿಗೆ ಮಾಡಿರುವ ಹೋಲಿಕೆ ಇಲ್ಲಿದೆ.

ಇತ್ತೀಚಿಗೆ ಉತ್ತರ ಪ್ರದೇಶದ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಕೇರಳದ ಆರೋಗ್ಯ ವ್ಯವಸ್ಥೆಯನ್ನು ಟೀಕಿಸಿದ್ದರು. ಆದರೆ ಅವರ ಮಾತು ನಿಜಕ್ಕೂ ಹಾಸ್ಯಾಸ್ಪದ. ಕಾರಣ ಕೇರಳವು ಅಭಿವೃದ್ಧಿಯ ಎಲ್ಲಾ ಮಾನದಂಡಗಳಲ್ಲೂ ಕೇವಲ ಭಾರತದ ರಾಜ್ಯಗಳನ್ನು ಮಾತ್ರವಲ್ಲ ವಿಶ್ವದ ಹಲವು ದೇಶಗಳಿಗೇ ಸೆಡ್ಡು ಹೊಡೆಯುವ ರೀತಿಯಲ್ಲಿ ಮುಂದಿದೆ. ಅಲ್ಲದೇ ಅಲ್ಲಿನ ಸ್ಥಿರ ಆರೋಗ್ಯ ಬೆಳವಣಿಗೆಯ ದರವನ್ನು ಇಲ್ಲಿಯವರೆಗೆ ಯಾವ ರಾಜ್ಯಗಳೂ ಸಹ ಮೀರಿಸಲು ಸಾಧ್ಯವಾಗಿಲ್ಲ. ಒಂದು ಪ್ರದೇಶದ ಆರೋಗ್ಯ ಮಟ್ಟವನ್ನು ಸೂಚಿಸುವ ಶಿಶು ಮರಣ ದರ ಪ್ರಮಾಣವನ್ನು ಹೋಲಿಸಿದರೆ, ಕೇರಳ ಮತ್ತು ಉತ್ತರ ಪ್ರದೇಶದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಕೇರಳವು ಕೇವಲ 6 ಶಿಶು ಮರಣ ದರವನ್ನು ಹೊಂದಿದ್ದರೆ, ಉತ್ತರ ಪ್ರದೇಶದ ಶಿಶು ಮರಣ ದರ 64 ಇದ್ದು ಇದು ಇತ್ತೀಚಿಗೆ ಯುದ್ದ ಪೀಡಿತವಾಗಿ ನರಳುತ್ತಿರುವ ದಕ್ಷಿಣ ಸೂಡಾನ್‌ಗಿಂತಲೂ ಹೀನಾಯ ಸ್ಥಿತಿಯಲ್ಲಿದೆ. ಕೇರಳದ ಶಿಶು ಮರಣ ದರದ ಪ್ರಮಾಣವು ಪ್ರಪಂಚದ ಬಹಳಷ್ಟು ಅಭಿವೃದ್ದಿಶೀಲ ದೇಶಗಳಿಗಿಂತಲೂ ಉತ್ತಮವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಪುಟ್ಟ ಮಕ್ಕಳಿಗೆ ಸೂಕ್ತವಾದ ಆರೋಗ್ಯ ಸೌಲಭ್ಯಗಳನ್ನು ಒದಗಿಸದೇ ಅವರ ಸಾವಿಗೆ ಕಾರಣವಾದ ಆದಿತ್ಯನಾಥ್ ಅವರು ಕೇರಳದ ಬಗ್ಗೆ ಆಡುವಂತಹ ಮಾತುಗಳಿಗೆ ನಕ್ಕು ಸುಮ್ಮನಾಗಬೇಕು ಅಷ್ಟೆ.

2015-16 ರ ಸಾಲಿನಲ್ಲಿ ಶಿಶು ಮರಣ ದರ ಮತ್ತು ಗರ್ಭಾವಸ್ಥೆಯಲ್ಲಿ ಶಿಶು ಮರಣ ದರ ಪ್ರಮಾಣ :

ರಾಜ್ಯಗಳು ಮತ್ತು ಅಧಿಕಾರದಲ್ಲಿರುವ ಪಕ್ಷ ಶಿಶು ಮರಣ ದರ ಗರ್ಭಾವಸ್ಥೆಯಲ್ಲಿ ಶಿಶು ಮರಣ ದರ
ಕೇರಳ (ಸಿಪಿಐ)(ಎಂ) 6 7
ಕರ್ನಾಟಕ

(ಕಾಂಗ್ರೆಸ್)

28 32
ಉತ್ತರ ಪ್ರದೇಶ (ಬಿಜೆಪಿ) 64 78

ಅಚ್ಚರಿ ಎಂಬಂತೆ, ಪ್ರಧಾನಿ ಮೋದಿ ಕೂಡ ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆ ಅನುಕರಣೀಯ ಎನ್ನುತ್ತಿದ್ದಾರೆ. ಅಲ್ಲದೇ ಅಭಿವೃದ್ಧಿ ಮಾದರಿಗಳಿಗಾಗಿ ತಮ್ಮ ತವರು ರಾಜ್ಯ ಗುಜರಾತ್, ಬಿಜೆಪಿ ಅಧಿಕಾರದಲ್ಲಿರುವ ಚತ್ತೀಸ್‌ಗಢ, ರಾಜಸ್ತಾನ ರಾಜ್ಯಗಳನ್ನು ಅನುಸರಿಸಲು ಮೋದಿ ಕರೆ ನೀಡಿದ್ದಾರೆ. ಆದರೆ ಗುಜರಾತ್‌ನ ತಲಾ ಆದಾಯವು 1,24,678 ಅಗಿದ್ದು ಕರ್ನಾಟಕದ ತಲಾದಾಯವು 1,32,880ರಷ್ಟಿದೆ. ಅಭಿವೃದ್ಧಿಯ ಪಥದಲ್ಲಿ ಕರ್ನಾಟಕವೇ ಮುಂದಿರುವುದು ಈ ಮೂಲಕವೂ ಸ್ಪಷ್ಟವಾಗುತ್ತದೆ. ಹೀಗಾಗಿ ಮೋದಿ ಮುಂದಿಡುತ್ತಿರುವ ಅಭಿವೃದ್ಧಿಯ ಕಲ್ಪನೆಯಲ್ಲಿ ವಾಸ್ತವಕ್ಕಿಂತ, ರಾಜಕೀಯವೇ ಹೆಚ್ಚು ಕಾಣಿಸುತ್ತಿದೆ.

ಗುಜರಾತ್ ರಾಜ್ಯದ ಅಭಿವೃದ್ಧಿ ಮಾದರಿಯು ಅನುಸರಿಸಲೇಬೇಕಾದ ಸಂಗತಿಯಾಗಿದ್ದರೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರೇಕೆ ಮಧ್ಯಪ್ರದೇಶದ ರಸ್ತೆಗಳು ವಾಷಿಂಗಟನ್ ಡಿಸಿ ರಸ್ತೆಗಳಿಗಿಂತ ಚೆನ್ನಾಗಿವೆ ಎಂದು ಹೇಳಿಕೊಳ್ಳುತ್ತಿದ್ದರು? ಇದರರ್ಥ ಅವರ ಕಣ್ಣ ಮುಂದೆ ಗುಜರಾತ್ ರಾಜ್ಯವು ಅಭಿವೃದ್ಧಿಗೆ ಮಾದರಿಯಾದ ರಾಜ್ಯವಾಗಿ ಉಳಿದಿಲ್ಲ ಎಂಬುದು ಸ್ಪಷ್ಟ. ಇದಕ್ಕೆ ಪೂರಕವಾಗಿ ನೋಡುವುದಾದರೆ ಕರ್ನಾಟಕದಲ್ಲಿ 2008 ರಿಂದ 2013 ರ ಅವಧಿಯ ನಡುವೆ (ಈ ಸಮಯದಲ್ಲಿ ಅಧಿಕಾರದಲ್ಲಿ ಇದ್ದವರು ಯಾರು ಗಮನಿಸಿ) ರಸ್ತೆ ಆಭಿವೃದ್ಧಿಯ ಪ್ರಮಾಣವು 31% ನಷ್ಟು ಹೆಚ್ಚಾಗಿದ್ದು ಗುಜರಾತ್ ನಲ್ಲಿ 8% ಹಾಗೂ ಮಧ್ಯ ಪ್ರದೇಶದಲ್ಲಿ 19% ನಷ್ಟಿರುವುದು ಕರ್ನಾಟಕದ ಅಭಿವೃದ್ಧಿ ಮಾದರಿಗೆ ಸಾಕ್ಷಿಯಾಗಿದೆ.

ಇನ್ನಷ್ಟು ಅಭಿವೃದ್ಧಿ ಮಾದರಿಗಳನ್ನು ಗಮನಿಸುವುದಾದರೆ, ಈಗಾಗಲೇ ಗುಜರಾತ್ ಮತ್ತು ಇನ್ನಿತರೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಪೈಕಿ ಕೇರಳ ಮತ್ತು ಕರ್ನಾಟಕವು ಶಿಶು ಮರಣದರ ದರ ಬಹಳ ಮುಂದಿದೆ ಎಂಬುದು ತಿಳಿದಿದೆ. ಆದರೆ ಇದನ್ನು ಸಾಧಿಸಲು ಯಾವುದೇ ಮ್ಯಾಜಿಕ್‌ಗಳು ನಡೆದಿಲ್ಲ ಬದಲಿಗೆ, ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣವನ್ನು ಹೆಚ್ಚುಗೊಳಿಸಿ, ನೈರ್ಮಲ್ಯವನ್ನು ಕಾಪಾಡಿದ್ದಕ್ಕಾಗಿ ಇದು ಸಾಧ್ಯವಾಗಿದೆ. ಹೀಗಾಗಿ ಸಾಂಸ್ಥಿಕ ಹೆರಿಗೆ ಪ್ರಮಾಣದಲ್ಲೂ ಸಹ ಕೇರಳ, ಕರ್ನಾಟಕಗಳು ಗುಜರಾತ್‌ಗಿಂತ ಬಹಳಷ್ಟು ಮುಂದಿದ್ದು ಅತಿ ಹೆಚ್ಚಿನ ಗರ್ಭಿಣಿ ಮಹಿಳೆಯರ ಸುರಕ್ಷತೆಗೂ ಸಹ ಕಾರಣವಾಗಿದೆ.  ಕರ್ನಾಟಕದಲ್ಲಿ ಒಟ್ಟು 95% ರಷ್ಟು ಹೆರಿಗೆಗಳು ಆಸ್ಪತ್ರೆ ಸೌಲಭ್ಯದಲ್ಲಿ ಜರುಗುತ್ತಿದ್ದು ಗುಜರಾತ್‌ನಲ್ಲಿ ಇದರ ಪ್ರಮಾಣ 88% ರಷ್ಟಿದೆ.  ಗರ್ಭಿಣಿಯರಿಗೆ ಸಾರ್ವಜನಿಕ ಆಹಾರ ಧಾನ್ಯಗಳ ವಿತರಣೆಯ ಮೂಲಕ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರವನ್ನು ಒದಗಿಸುತ್ತಿರುವುದು ಕರ್ನಾಟಕದ ಈ ಸಾಧನೆಗೆ ಕಾರಣವಾಗಿದೆ. ಇದೀಗ ಕರ್ನಾಟಕದಲ್ಲಿ ಮಹಿಳೆಯರ ಬೆಳವಣಿಗೆ ಕ್ಷೀಣತೆ ಪ್ರಮಾಣವು ಗಣನೀಯವಾಗಿ ಇಳಿಕೆ ಕಂಡಿದ್ದು 20% ನಷ್ಟಿದೆ. ಆದರೆ ಅಭಿವೃದ್ಧಿ ಮಾದರಿ ಎಂದು ಹೇಳಲಾಗುತ್ತಿರುವ ಗುಜರಾತ್‌ನಲ್ಲಿ ಇದರ ಪ್ರಮಾಣ 27% ನಷ್ಟಿದೆ.

ಮಹಿಳೆಯರ ಸಾಕ್ಷರತಾ ಪ್ರಮಾಣವು ಸಹ ಕರ್ನಾಟಕದಲ್ಲಿ ಗಣನೀಯವಾಗಿ 45.5% ನಷ್ಟು ಏರಿಕೆ ಕಂಡಿದ್ದು ಗುಜರಾತ್‌ನಲ್ಲಿ ಇದರ ಪ್ರಮಾಣದ ಕೇವಲ 33% ಆಗಿದೆ. ಲಿಂಗ ಸಮಾನತೆ ಸೂಚ್ಯಂಕವೂ ಸಹ ಕರ್ನಾಟಕದಲ್ಲಿ 0.99 ರಷ್ಟಿದ್ದು ಗುಜರಾತ್ ನಲ್ಲಿ ಕೇವಲ 0.8 ರಷ್ಟು ಮಾತ್ರ ಇದೆ. 2005 ರಿಂದ 2014 ರ ಅವಧಿಯಲ್ಲಿ ಗುಜರಾತ್ ನಲ್ಲಿ ಮೋದಿ ಮುಖ್ಯಮಂತ್ರಿ ಆಗಿದ್ದ ವೇಳೆ ವೈದ್ಯರ, ಪ್ರಸೂತಿ ತಜ್ಞರ, ಶಸ್ತ್ರಚಿಕಿತ್ಸಕರ ಕೊರತೆಯ ಪ್ರಮಾಣವು 66% ನಷ್ಟಿದ್ದು ಕರ್ನಾಟಕದಲ್ಲಿ ಈ ಕೊರತೆ ಪ್ರಮಾಣ ಕೇವಲ 1% ನಷ್ಟಿತ್ತು. ಇದೇ ವೇಳೆ ಗುಜರಾತ್ ನಲ್ಲಿ 1000 ಆರೋಗ್ಯ ಕೇಂದ್ರಗಳಲ್ಲಿ ಕೇವಲ 115 ವೈದ್ಯರು ಲಭ್ಯರಿದ್ದು ಕರ್ನಾಟಕದಲ್ಲಿ ಇದರ ಪ್ರಮಾಣವು ಗುಜರಾತ್ ಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.

ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯ ವಿಷಯದಲ್ಲೂ ಕರ್ನಾಟಕವು ಬಹಳಷ್ಟು ಮುಂದಿದ್ದು(ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ) ಒಂದು ಲಕ್ಷ ವಿದ್ಯಾರ್ಥಿಗಳಿಗೆ 50 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಲಭ್ಯವಿದೆ. ಇನ್ನೊಂದೆಡೆ ಗುಜರಾತ್ ನಲ್ಲಿ ಕೇವಲ 28 ಶಿಕ್ಷಣ ಸಂಸ್ಥೆಗಳು ಲಭ್ಯವಿದ್ದು ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಯ ಪ್ರಮಾಣ ಗುಜರಾತ್ ಗಿಂತ ಎರಡು ಪಟ್ಟು ಮುಂದಿದೆ.

ಇಷ್ಟಾದ ಮೇಲೂ ಸಹ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್ ,ಛತ್ತೀಸ್‌ಗಢ ಮತ್ತು ರಾಜಸ್ತಾನದ ಮಾದರಿಯನ್ನು ಅನುಸರಿಸಬೇಕು ಎಂಬ ಮಾತು ತೀರಾ ಹಾಸ್ಯಾಸ್ಪದ. ಹೀಗಾಗಿ ಮೋದಿ ಮತ್ತವರ ಪಕ್ಷದ ಮುಖ್ಯಮಂತ್ರಿಗಳು ಕೇರಳ ಮತ್ತು ಕರ್ನಾಟಕದಿಂದ ಕಲಿಯಬೇಕಾದ ಮತ್ತು ಆ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಬೇಕಾದ ಅಂಶಗಳು ಬಹಳಷ್ಟಿದೆ. ಹೀಗಾಗಿ ಮೋದಿಯವರು ಸುಮ್ಮನೇ ‘ಓಳು ಬಿಡುವ’ ಬದಲು ಕರ್ನಾಟಕದ ಅಭಿವೃದ್ಧಿಯ ಮಾದರಿಯನ್ನು ಒಪ್ಪಿಕೊಂಡು ಅದನ್ನು ಇತರರಿಗೂ ತಿಳಿಸುವುದು ಯೋಗ್ಯವಾದ ಸಂಗತಿಯಾಗಿದೆ.

ಅಂದಹಾಗೆ ಇತ್ತೀಚೆಗೆ ‘ಮೋದಿ ಬರೀ ಓಳು’ ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್ ಆಗಿತ್ತು. ಅದಕ್ಕೆ ಕಾರಣವಾಗಿದ್ದು ಈ ಅಂಕಿ ಅಂಶಗಳು.

ಮಾಹಿತಿ ಮೂಲ: ದಿ ವೈರ್

ಕನ್ನಡಕ್ಕೆ: ರಮೇಶ್ ಎಚ್‌. ಕೆ. 

Top